ಭಾನುವಾರ, ಜೂನ್ 14, 2026

ಸುಂದರೀಶತಕ -೫೧

ಸಂಸ್ಕೃತ ಮೂಲ 

ಪ್ರೇಮಾಸವೋನ್ಮದಿಷ್ಣೋ: ಪ್ರಣಯತನೀಯಾಂಸಿ ತಾನಿ ವಚನಾನಿ /
ಕರಣೀಯಾನಿ ನ ಹೃದಯೇ ದಯಿತೇ ಯದಯಂ ದಯಾವಸರ: // 

ಕನ್ನಡ ಅನುವಾದ 

      ' ಪ್ರಿಯೇ! ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾದ ನಾನು ಪ್ರೇಮೋನ್ಮಾದದಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಡ! ದಯೆ ತೋರಿಸಲು ಇದೇ ಸರಿಯಾದ ಸಮಯ!' 
    ಇಲ್ಲಿ ನಾಯಕನು ತನ್ನ ಪ್ರಿಯತಮೆಯ ಪ್ರೇಮವೆಂಬ ಮದಿರೆಯನ್ನು ಕುಡಿದು ಮತ್ತನಾಗಿ ಅವಳ ಬಳಿ ಏನೋ ಹಗುರವಾದ ಮಾತುಗಳನ್ನಾಡಿದ್ದಾನೆ ಹಾಗೂ ಕೀಟಲೆ ಮಾಡಿದ್ದಾನೆ. ಅಂದರೆ ಪ್ರೇಮದ ಸಲಿಗೆಯಲ್ಲಿ ಅವಳನ್ನು ಅಣಕಿಸಿದ್ದಾನೆ. ಕುಡಿದ ಮತ್ತಿನಲ್ಲಿ ಹಗುರವಾಗಿ ಮಾತನಾಡುವಂತೆ ಪ್ರೇಮಮದ್ಯವನ್ನು ಕುಡಿದ ಮತ್ತಿನಲ್ಲಿ ಇವನು ಅವಳನ್ನು ಅಣಕಿಸಿದ್ದಾನೆ. ಇದರಿಂದ ಅವಳು ಕೋಪಗೊಂಡಿದ್ದಾಳೆ! ಆಗ ಇವನಿಗೆ ತನ್ನ ತಪ್ಪು ಅರಿವಾಗಿ ತಾನು ಪ್ರೇಮಮದಿರೆಯ ಮತ್ತಿನಲ್ಲಿ ಆಡಿದ ಹಗುರವಾದ ಮಾತುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳಬಾರದು, ಅವು ಮೈಮರೆತು ಹೇಳಿದ ಮಾತುಗಳು, ಹಾಗಾಗಿ ಗಣನೆಗೆ ತೆಗೆದುಕೊಳ್ಳಬಾರದು, ಎಂದು ಬೇಡಿಕೊಳ್ಳುತ್ತಾ ದಯೆ ತೋರಿಸಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾನೆ. ತಪ್ಪು ಮಾಡದಿದ್ದಾಗ ದಯೆ ತೋರಿದರೆ ಏನು ಪ್ರಯೋಜನ, ತಪ್ಪು ಮಾಡಿದಾಗ ದಯೆ ತೋರಿದರೆ ಅದು ಹೆಚ್ಚಿನದು ಎಂದು ಅವನ ಅಭಿಪ್ರಾಯ. ಹೀಗೆ ಪ್ರೇಮಿಗಳ ನಡುವೆ ಆಗಾಗ ಪ್ರಮಯಕಲಹ ಇದ್ದರೆ ಚೆನ್ನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ