ಭಾನುವಾರ, ಜೂನ್ 7, 2026

ಸುಂದರೀಶತಕ -೪೭

ಸಂಸ್ಕೃತ ಮೂಲ 

ಅರವಿಂದದ್ಯುತಿಶೋಣಂ ಲೋಚನಕೋಣಂ ಸರೋಜಾಕ್ಷ್ಯಾ: /
ಪ್ರಣಮತಿ ಮಯ್ಯಥ ಸದಯಂ ಹರಿಹರಿ ಹೃದಯಂ ನ ವಿಸ್ಮರತಿ //

ಕನ್ನಡ ಅನುವಾದ 

     ' ಆ ಸರೋಜಾಕ್ಷಿಯ ಕೋಪವನ್ನು ತಣಿಸಲು ನಾನು ಅವಳ ಕಾಲಿಗೆ ಬಿದ್ದಾಗ, ಕಮಲದ ಕಾಂತಿಯಂತೆ ಕೆಂಪಾಗಿದ್ದ ಅವಳ ಕಣ್ಣುಗಳ ಅಂಚುಗಳಲ್ಲಿ ದಯೆಯು ಕಾಣಿಸಿತು! ಹರಿ ಹರಿ! ಇದನ್ನು ನನ್ನ ಹೃದಯವು ಮರೆಯುವುದಿಲ್ಲ!' 
    ಇಲ್ಲಿ ಪತಿಯು ತನ್ನ ಪ್ರಿಯ ಪತ್ನಿಯ ವಿಷಯದಲ್ಲಿ ಏನೋ ತಪ್ಪು ಮಾಡಿದ್ದಾನೆ. ಅದರಿಂದ ಅವಳು ಕೋಪಗೊಂಡಿದ್ದಾಳೆ.‌ ಆದರೆ ಅವಳು ಅವನು ಎಷ್ಟೇ ಸಮಾಧಾನಪಡಿಸಿದರೂ ಕೋಪ ಬಿಡುತ್ತಿಲ್ಲ.‌ ಕೊನೆಗೆ ಅವನು ಅವಳ ಕಾಲಿಗೆ ಬಿದ್ದಾಗ ಅವಳ ಕೋಪ ಕರಗಿ ಕಮಲದಂತೆ ಕೆಂಪಾದ ಅವಳ ಕಣ್ತುದಿಯಲ್ಲಿ ದಯೆಯು ಮೂಡಿದೆ! ಇದನ್ನು ಕವಿ ಅಥವಾ ಆ ಪತಿಯು ನೆನಪಿಸಿಕೊಂಡು ಎಂದಿಗೂ ಮರೆಯಲಾರೆ ಎನ್ನುತ್ತಿದ್ದಾನೆ! ಹೆಂಡತಿಯು ಗಂಡನ ಕಾಲಿಗೆ ಬೀಳುವುದು ಸಾಮಾನ್ಯ. ಆದರೆ ಪ್ರಾಚೀನ ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ತಪ್ಪು ಮಾಡಿದಾಗ ಗಂಡನೂ ಹೆಂಡತಿಯನ್ನು ಸಮಾಧಾನಗೊಳಿಸಲು ಅವಳ ಕಾಲಿಗೆ ಬೀಳುವುದನ್ನು ಕಾಣುತ್ತೇವೆ! ಕೃಷ್ಣನೂ ಕೋಪಗೊಂಡ ಸತ್ಯಭಾಮೆಯ ಪಾದಗಳಿಗೆ ನಮಸ್ಕಾರ ಮಾಡಿ ಅವನ್ನು ಒತ್ತುವುದನ್ನು ಕಾಣುತ್ತೇವೆ! ಗಂಡನು ಏಷ್ಟೇ ಅನುನಯಗೊಳಿಸಿದರೂ ಸಮಾಧಾನಗೊಳ್ಳದ ಹೆಂಡತಿ, ಅವನು ಅವಳ ಕಾಲಿಗೆ ಬಿದ್ದಾಗ ಥಟ್ಟನೆ ಸಮಾಧಾನಗೊಳ್ಳುತ್ತಾಳೆ! ಅವಳಿಗಿಂತ ದೊಡ್ಡವನಾದ ಅವನು ತನ್ನ ಅಭಿಮಾನ ಬಿಟ್ಟು ಅವಳ ಕಾಲಿಗೆ ಬೀಳುವುದು ಸುಲಭದ ಮಾತಲ್ಲ ಅಲ್ಲವೇ? ಆದರೆ ಅವನು ಪ್ರೇಮಕ್ಕಾಗಿ ಹಾಗೆ ಮಾಡಿದಾಗ ಅವಳು ಕರಗಿಹೋಗುತ್ತಾಳೆ! ಅಂಥ ಒಂದು ಸುಂದರ ಸನ್ನಿವೇಶವನ್ನು ಕವಿ ಇಲ್ಲಿ ಚಿತ್ರಿಸಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ