ಬುಧವಾರ, ಜೂನ್ 17, 2026

ಸುಂದರೀಶತಕ -೫೨

ಸಂಸ್ಕೃತ ಮೂಲ 

ತವ ವಿರಹಾನಲತಪ್ತಂ ಸ್ನೇಹಕಟಾಹಂ ಮದಂತರಾತ್ಮಾನಮ್ /
ಸುಂದರಿ ಚಂದನಶಾಖೇ ಶೀತಲಯ ಸ್ಪರ್ಶಮಾತ್ರೇಣ //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ವಿರಹಾಗ್ನಿಯಿಂದ ಬೆಂದುಹೋಗಿರುವ, ನಿನ್ನ ಪ್ರೇಮದ ಪಾತ್ರೆಯಾಗಿರುವ ನನ್ನ ಅಂತರಾತ್ಮವನ್ನು ಚಂದನಶಾಖೆಯಾಗಿರುವ ನೀನು ಕೇವಲ ನಿನ್ನ ಸ್ಪರ್ಶಮಾತ್ರದಿಂದ ತಂಪಾಗಿಸು!'
    ಕವಿಯು ಇಲ್ಲಿ ಸುಂದರವಾದ ವಿರಹ ಚಿತ್ರಣವನ್ನು ಕೊಟ್ಟಿದ್ದಾನೆ.‌ ನಾಯಕನು ತನ್ನ ಪ್ರಿಯೆಯ ವಿರಹಾಗ್ನಿಯಿಂದ ಪ್ರೇಮಪಾತ್ರೆಯಂತಿರುವ ಅವನ ಅಂತರಾತ್ಮವು ಬೆಂದುಹೋಗಿದೆ ಎನ್ನುತ್ತಾನೆ. ಸೊಗಸಾದ ಉಪಮೆಗಳು! ವಿರಹಬಾಧೆಯು ಅಗ್ನಿಯಂತೆ ಸುಡುತ್ತಿದೆ! ಅವನ ಅಂತರಾತ್ಮವು ಪ್ರೇಮದ ಪಾತ್ರೆಯಂತಾಗಿ ಆ ಅಗ್ನಿಯಿಂದ ಸುಡುತ್ತಿದೆ! ಹಾಗಾಗಿ ಅವನು ತನ್ನ ಪ್ರಿಯತಮೆಯನ್ನು ಚಂದನಶಾಖೆಗೆ ಹೋಲಿಸಿ ಕೇವಲ ತನ್ನನ್ನು ಸ್ಪರ್ಶಿಸಲು ಕೇಳಿಕೊಳ್ಳುತ್ತಿದ್ದಾನೆ. ಅವಳನ್ನು ಅವಳ ಸ್ಪರ್ಶಮಾತ್ರದಿಂದ ತನ್ನ ಅಂತರಾತ್ಮವನ್ನು ತಂಪಾಗಿಸಲು ಬೇಡಿಕೊಳ್ಳುತ್ತಿದ್ದಾನೆ! 
     ಶೃಂಗಾರ ರಸದಲ್ಲಿ ಎರಡು ವಿಧಗಳಿವೆ.‌ ಒಂದು, ಸಂಭೋಗ ಶೃಂಗಾರ ಹಾಗೂ ಇನ್ನೊಂದು, ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರ, ಪ್ರೇಮಿಗಳು ಒಟ್ಟಿಗಿದ್ದು ಅನುಭವಿಸುವುದಾದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ದೂರವಾಗಿದ್ದು ವಿರಹವನ್ನು ಅನುಭವಿಸುವುದಾಗಿರುತ್ತದೆ. ರಾಧಾಕೃಷ್ಣರ ಶೃಂಗಾರ ಲೀಲೆಗಳು ಸಂಭೋಗ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಯಾದರೆ, ರಾಧೆಯು ಶ್ರೀಕೃಷ್ಣನ ವಿರಹವನ್ನು ಅನುಭವಿಸುವುದು, ಹಾಗೂ ಶ್ರೀರಾಮನು ಸೀತೆಯ ವಿರಹವನ್ನು ಅನುಭವಿಸುವುದು, ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. 
      ಈ ಶ್ಲೋಕದ ಸ್ವಾರಸ್ಯವೆಂದರೆ, ಇದು ವಿಪ್ರಲಂಭ ಶೃಂಗಾರವಾದರೂ ಇಲ್ಲಿ ಪ್ರಿಯತಮೆಯು ನಾಯಕನ ಬಳಿ ಇದ್ದಾಳೆ. ಆದರೆ ಅವನಿನ್ನೂ ವಿರಹದಲ್ಲಿದ್ದು ಅವಳ ಸ್ಪರ್ಶಕ್ಕಾಗಿ, ಜೊತೆಗೂಡುವಿಕೆಗಾಗಿ ಬೇಡುತ್ತಿದ್ದಾನೆ. ಅವನ ವಿರಹದ ಸ್ಥಿತಿಯನ್ನು ಪ್ರಾಯಶಃ ಅವನ ಸಖನಿಂದ ತಿಳಿದು ಹಾಗೂ ನೋಡಿ, ನಾಯಿಕೆಯ ಸಖಿಯು ನಾಯಿಕೆಗೆ ಹೇಳಿ ಅವಳನ್ನು ಕರೆತಂದಿದ್ದಾಳೆ. ಆಗ ನಾಯಕನು ಅವಳನ್ನು ಹೀಗೆ ಬೇಡುತ್ತಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ