ಭಾನುವಾರ, ಮಾರ್ಚ್ 22, 2026

ಸಂಸ್ಕೃತ ಪ್ರಹೇಳಿಕೆಗಳು -೨


ಉಚ್ಚಿಷ್ಟಂ ಶಿವನಿರ್ಮಾಲ್ಯಂ ವಮನಂ ಶವಕರ್ಪಟಮ್ /
ಕಾಕವಿಷ್ಠಾಸಮುತ್ಪನ್ನ:  ಪಂಚೈತೇsತಿಪವಿತ್ರಕಾ: //
     ' ಉಚ್ಚಿಷ್ಟ ( ಎಂಜಲು),:ಶಿವನಿರ್ಮಾಲ್ಯ ( ಶಿವನ ತಲೆಯಿಂದ ಬಿದ್ದುದು), ವಾಂತಿ, ಶವದ ಮೇಲಿನ ಬಟ್ಟೆ, ಮತ್ತು ಕಾಗೆಯ ಮಲದಿಂದ ಹುಟ್ಟಿದುದು - ಈ ಐದೂ ಅತಿ ಪವಿತ್ರವಾದ ವಸ್ತುಗಳು!'
   ಮೇಲ್ನೋಟಕ್ಕೆ ಇಲ್ಲಿ ಹೇಳಿರುವುದೆಲ್ಲವೂ ಅಪವಿತ್ರವಾದ ವಸ್ತುಗಳೆಂದು ಕಾಣುತ್ತವೆ. ಆದರೆ ಇದೊಂದು ಒಗಟು.‌ಹಾಗಾಗಿ ಬೇರೇನೋ ಇರಬೇಕೆಂದು ಯೋಚಿಸಬೇಕು. ಮೊದಲನೆಯದಾಗಿ ಉಚ್ಚಿಷ್ಟ ಅಥವಾ ಎಂಜಲೆಂದರೆ ಕರುವು ಹಸುವಿನ ಕೆಚ್ಚಲಿನಿಂದ ಕುಡಿದ ಬಳಿಕ ಕರೆದುಕೊಳ್ಳುವ ಹಾಲು.‌ಅದು ಎಂಜಲಾದರೂ ಪವಿತ್ರವಲ್ಲವೇ? ಶಿವನಿರ್ಮಾಲ್ಯ ಅಥವಾ ಶಿವನ ತಲೆಯಿಂದ ಬಿದ್ದುದು ಗಂಗೆ. ಅದು ಪವಿತ್ರವಲ್ಲವೇ? ವಾಂತಿ ಎಂದರೆ ಜೇನುತುಪ್ಪ.‌ ಹಲವು ಹೂವುಗಳಿಂದ ಮಕರಂದವನ್ನು ಹೀರಿ ಗೂಡಿಗೆ ಬಂದು, ಹೊಟ್ಟೆಯಲ್ಲಿ ಜೇನಾಗಿ ಪರಿವರ್ತಿತವಾಗುವ ರಸವನ್ನು ಜೇನ್ನೊಣಗಳು ಬಾಯಿಂದ ಹೊರಹಾಕಿ ಸಂಗ್ರಹಿಸುವ ಜೇನುತುಪ್ಪ ವಾಂತಿಯಲ್ಲದೇ ಇನ್ನೇನು? ಆದರೆ ಎಲ್ಲಾ ದೇವಕಾರ್ಯ, ಅಭಿಷೇಕಗಳಿಗೆ ಅದನ್ನು ಪವಿತ್ರವೆಂದು ಬಳಸುವುದಿಲ್ಲವೇ? ಶವದ ಮೇಲಿನ ಬಟ್ಟೆ ಎಂದರೆ ರೇಶ್ಮೆ ವಸ್ತ್ರ. ರೇಶ್ಮೆ ಹುಳು ಪತಂಗವಾಗಲೆಂದು ತನ್ನ ಸುತ್ತಲೂ ಗೂಡು ಕಟ್ಟಿಕೊಳ್ಳಲು, ಆ ಗೂಡನ್ನು ಬಿಸಿನೀರಿನಲ್ಲಿ ಹಾಕಿ ಎಳೆಯುವ ರೇಶ್ಮೆ ದಾರ ಶವದ ಮೇಲಿನ ಬಟ್ಟೆಯಲ್ಲದೇ ಇನ್ನೇನು? ಆದರೆ ಆ ರೇಶ್ಮೆ ವಸ್ತ್ರವನ್ನು ಸಕಲ ದೇವಪೂಜೆಗಳಲ್ಲಿ ಪವಿತ್ರವೆಂಬಂತೆ ಬಳಸುತ್ತಾರೆ. ಇನ್ನು ಕಾಗೆಯ ಮಲದಿಂದ ಹುಟ್ಟಿದುದು ಎಂದರೆ ಅರಳೀಮರ. ಕಾಗೆಯು ಅರಳೀಮರದ ಹಣ್ಣುಗಳನ್ನು ತಿಂದು ಅದರ ಬೀಜಗಳನ್ನು ಮಲದಲ್ಲಿ ವಿಸರ್ಜಿಸಲು, ಆ ಬೀಜಗಳಿಂದ ಹುಟ್ಟುವ ಅರಳೀಮರ, ಕಾಗೆಯ ಮಲದಿಂದ ಹುಟ್ಟಿದಂತೆಯೇ ಆಯಿತಲ್ಲವೇ? ಆದರೆ ಆ ಅರಳೀಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ಎಲ್ಲರೂ ಅದರ ಪ್ರದಕ್ಷಿಣೆ ಮಾಡುತ್ತಾರೆ. ಹೀಗೆ ಅದು ಬಹಳ ಪವಿತ್ರ.
      ಹೀಗೆ ಮೇಲ್ನೋಟಕ್ಕೆ ಪವಿತ್ರ ಎನಿಸುವ ಎಷ್ಟೋ ವಸ್ತುಗಳು ಅಪವಿತ್ರದ ಮೂಲದ್ದೆನಿಸಬಹುದು. ಹಾಗಾಗಿ ನಾವು ವಸ್ತುಗಳ ಉಪಯುಕ್ತತೆ ನೋಡುವಾಗ ಅವುಗಳ ಮೂಲದ ಬಗ್ಗೆ ಬೇಸರಿಸಿಕೊಳ್ಳಬಾರದು.
     

ಶನಿವಾರ, ಮಾರ್ಚ್ 21, 2026

ಸಂಸ್ಕೃತ ಪ್ರಹೇಳಿಕೆಗಳು

ಸಂಸ್ಕೃತದಲ್ಲಿ ಪ್ರಹೇಲಿಕಾ ಎಂದರೆ ಒಗಟು. ಈ ಸಂಸ್ಕೃತ ಪದದಿಂದಲೇ ಹಿಂದಿಯ ಪಹೇಲಿ ಎಂಬ ಪದ ಬಂದಿರಬಹುದು. ಮೇಲ್ನೋಟಕ್ಕೆ ಬೇರೇನೋ ಹೇಳುವ, ಒಳಗೆ ಬೇರೆಯೇ ಗೂಢಾರ್ಥವಿರುವ ವಾಕ್ಯಗಳು ಅಥವಾ ಪ್ರಶ್ನೆಗಳೇ ಒಗಟುಗಳು. ಪ್ರಾಚೀನ ಕಾಲದಿಂದಲೂ ಜನರಲ್ಲಿ ಒಗಟು ಕೇಳುವ, ಅದನ್ನು ಬಿಡಿಸುವ ವಿನೋದದ ಆಟ ಜನರಲ್ಲಿ ನಡೆದು ಬಂದಿದೆ. ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ಕೊಡುವ ಅರವತ್ತು ನಾಲ್ಕು ಕಲೆಗಳ ಪಟ್ಟಿಯಲ್ಲಿ ಪ್ರಹೇಲಿಕಾ ಕೂಡ ಸೇರಿದೆ. ಕನ್ನಡದಲ್ಲೂ ಅನೇಕ ಒಗಟುಗಳಿವೆ. ಈಗ ಸಂಸ್ಕೃತದ ಒಂದು ಜನಪ್ರಿಯ ಪ್ರಹೇಳಿಕೆಯನ್ನು ನೋಡೋಣ.

   ತರುಣ್ಯಾಲಿಂಗಿತ: ಕಂಠೇ ನಿತಂಬಸ್ಥಲಮಾಶ್ರಿತ: /
   ಗುರೂಣಾಂ ಸನ್ನಿಧಾನೇsಪಿ ಕ: ಕೂಜತಿ ಮುಹುರ್ಮುಹು: //

       ' ತರುಣಿಯಿಂದ ಕಂಠವು ಆಲಂಗಿಸಲ್ಪಟ್ಟು, ಅವಳ ನಿತಂಬ ಸ್ಥಳವನ್ನು ಆಶ್ರಯಿಸಿ, ಹಿರಿಯರ ಮುಂದೆಯೂ ಯಾರು ಮತ್ತೆ ಮತ್ತೆ ಕೂಗುತ್ತಾರೆ?'

      ಈ ಒಗಟನ್ನು ಕೇಳಿದರೆ ಮೇಲ್ನೋಟಕ್ಕೆ ರತಿಕ್ರೀಡೆಯ ವರ್ಣನೆಯಂತಿದೆ. ರತಿಕ್ರೀಡೆಯಾಡುವವನು ಹಿರಿಯರ ಮುಂದೆಯೂ ಮತ್ತೆ ಮತ್ತೆ ಕೂಗುವುದು ಎಂದರೆ ಅದು ಅಸಂಬದ್ಧವಲ್ಲವೇ? ಹಾಗಾಗಿ ಬೇರೆ ಏನೋ ಉತ್ತರವಿರಬೇಕೆಂದು ಅನಿಸುತ್ತದೆ.
    ಉತ್ತರ ಏನು ಗೊತ್ತೇ? ಅದು ಕೊಡ ಅಥವಾ ಬಿಂದಿಗೆ! ತರುಣಿಯೊಬ್ಬಳು ನೀರು ತುಂಬಿದ ಕೊಡ ಹೊತ್ತು ಬರುವ ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ! ಅವಳು ಆ ಬಿಂದಿಗೆಯ ಕಂಠವನ್ನು ಆಲಂಗಿಸಿರುತ್ತಾಳೆ ಹಾಗೂ ಅದು ಅವಳ ಸೊಂಟವನ್ನು ಆಶ್ರಯಿಸಿರುತ್ತದೆ. ಮತ್ತೆ ಮತ್ತೆ ನೀರು ತುಳುಕುವುದೇ ಅದು ಕೂಗುವ ಶಬ್ದ! ತರುಣಿಯು ಹಿರಿಯರ ಮುಂದೆ ಹೋದಾಗಲೂ ಅದು ಹಾಗೆ ಕೂಗುವುದಲ್ಲವೇ?
     ಅಲ್ಲಿಗೆ ಕೊಡ ಅಥವಾ ಬಿಂದಿಗೆ ಎಂಬ ಉತ್ತರ ಸರಿಯಾಯಿತು!


ಶುಕ್ರವಾರ, ಮಾರ್ಚ್ 20, 2026

ಸುಂದರೀಶತಕ -೮

ಸಂಸ್ಕೃತ ಮೂಲ 

ವಲಿಭಿರ್ಬಂಧಮಕಸ್ಮಾದುಪೇತ್ಯ ಮಧ್ಯಸ್ತನೂಭವತ್ಯಸ್ಯಾ: /
ಆನಂದೀತಿ ನಿತಂಬ: ಸಮುನ್ನತಿಂ ನಿರ್ಭರಂ ಧತ್ತೇ //

ಕನ್ನಡ ಅನುವಾದ 

     ' ಈ ಸುಂದರಿಯ ನಡುವು ಅಕಸ್ಮಾತ್ತಾಗಿ ತ್ರಿವಳಿಗಳ ಬಂಧನವನ್ನು ಪಡೆದು ಸಣ್ಣಗಾಗಿದೆ! ಅದರಿಂದ ಅವಳ ನಿತಂಬವು ಆನಂದಗೊಂಡು ಉನ್ನತಿ ಹೊಂದಿ ತುಂಬಿಕೊಂಡಿದೆ!'

    ಸುಂದರ ಹೆಣ್ಣಿನ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಗೆರೆಗಳಿರುವುದು ಸೌಂದರ್ಯದ ಒಂದು ಲಕ್ಷಣ. ಆ ತ್ರಿವಳಿಗಳಿಂದ ಅವಳ ನಡುವು ಅಕಸ್ಮಾತ್ತಾಗಿ ಬಂಧನಕ್ಕೊಳಗಾಗಿ ಸಣ್ಣಗಾಯಿತೆಂದೂ ಅದರಿಂದ ಅವಳ ನಿತಂಬವು ಸಂತೋಷಗೊಂಡು ಉಬ್ಬಿಕೊಂಡಿತೆಂದೂ ಸಹಜವಾಗಿರುವ ಅಂಗಾಂಗಗಳಿಗೆ ಉತ್ಪ್ರೇಕ್ಷಿತ ಕಾರಣಗಳನ್ನು ಕೊಡುತ್ತಾ ಕವಿಯು ಸುಂದರಿಯ ತ್ರಿವಳಿಗಳು, ನಡು, ನಿತಂಬಗಳನ್ನು ಸೊಗಸಾಗಿ ವರ್ಣಿಸುತ್ತಾನೆ.

ಬುಧವಾರ, ಮಾರ್ಚ್ 18, 2026

ಯುಗಾದಿ ಹಬ್ಬದ ವೈಶಿಷ್ಟ್ಯಗಳು

ಚೈತ್ರ ಮಾಸ, ಭಾರತೀಯ ಪಂಚಾಂಗದ ಪ್ರಕಾರ, ಹೊಸ ವರ್ಷದ ಆರಂಭ. ವಸಂತಮಾಸ ಆರಂಭವಾಗಿ ಮರಗಿಡಗಳೆಲ್ಲವೂ ಹೂಬಿಟ್ಟು ಎಲ್ಲೆಲ್ಲೂ ಹಸಿರು, ಮತ್ತು ವರ್ಣವೈವಿಧ್ಯದ ಸೌಂದರ್ಯ ನಮಗೆ ಆನಂದೋಲ್ಲಾಸಗಳನ್ನು ತರುತ್ತವೆ. ತೀರಾ ಸುಡುವ ಬಿಸಿಲೂ ಇಲ್ಲದೇ ತೀರಾ ಚಳಿಯೂ ಇಲ್ಲದೇ, ಸಮಶೀತೋಷ್ಣವಾದ, ಹಿತವಾದ, ರಮಣೀಯ ವಾತಾವರಣ ನಮ್ಮನ್ನು ಮುದಗೊಳಿಸುತ್ತದೆ. ಈ ಚೈತ್ರ ಮಾಸದಲ್ಲಿ ಅನೇಕ ಹಬ್ಬಗಳನ್ನೂ ವಿಶೇಷ ದಿನಗಳನ್ನೂ ಆಚರಿಸಿ ಸಂತೋಷಪಡುತ್ತೇವೆ.  ಆ ಹಬ್ಬಗಳಲ್ಲಿ ಮುಖ್ಯವಾದ, ಭಾರತೀಯರಾದ ನಮಗೆ ಹೊಸವರ್ಷದ ಆರಂಭದ ದಿನವೇ ಆಗಿರುವ ಯುಗಾದಿ ಹಬ್ಬದ ವೈಶಿಷ್ಟ್ಯಗಳನ್ನು ಈಗ ನೋಡೋಣ.
     ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿವಸ, ಬಹುತೇಕ ಹಿಂದೂಗಳಿಗೆ ವರ್ಷಾರಂಭದ ದಿನ. ಚಾಂದ್ರಮಾನ ಪಂಚಾಂಗವನ್ನನುಸರಿಸುವವರಿಗೆ ಅಂದು ಚಾಂದ್ರಮಾನ ಯುಗಾದಿ. ಅಂದು ಸೂರ್ಯೋದಯದ ಸಮಯದಲ್ಲಿ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು ಹೇಮಾದ್ರಿಯ ಚತುರ್ವರ್ಗಚಿಂತಾಮಣಿಯಲ್ಲಿ ಒಂದು ಕಥೆಯಿದೆ. ಹೀಗೆ ಯುಗದ ಆದಿಯಾದುದರಿಂದ ಈ ಹಬ್ಬದ ದಿನವನ್ನು ಯುಗಾದಿ ಎನ್ನುತ್ತಾರೆ. ವರ್ಷಕ್ಕೆ ಸಂವತ್ಸರ ಎನ್ನುತ್ತಾರೆ. ಒಟ್ಟು ಅರವತ್ತು ಸಂವತ್ಸರಗಳು ಇದ್ದು ಅವು ಮುಗಿದ ಬಳಿಕ, ಪುನಃ ಮೊದಲಿನಿಂದ ಆರಂಭವಾಗುತ್ತವೆ. ಪ್ರಭವ, ವಿಭವ ಎಂದು ಆರಂಭವಾಗುವ ಈ ಅರವತ್ತು ಸಂವತ್ಸರಗಳು ನಾರದರ ಮಕ್ಕಳ ಹೆಸರುಗಳೆಂದು ಹೇಳುತ್ತಾರೆ. 
   ಭವಿಷ್ಯ ಪುರಾಣ ಮತ್ತು ದೇವೀಭಾಗವತ ಪುರಾಣಗಳ ಪ್ರಕಾರ, ನಾರದರು ಒಮ್ಮೆ ಮಹಾವಿಷ್ಣುವನ್ನು ಮಾಯೆಯ ಸ್ವರೂಪದ ಬಗ್ಗೆ ವಿಚಾರಿಸಲು, ಅವನು ಅವರನ್ನು ಒಂದು ಸರೋವರದ ಬಳಿ ಕರೆದುಕೊಂಡು ಹೋಗಿ ಅದರಲ್ಲಿ ಸ್ನಾನ ಮಾಡಲು ಹೇಳುತ್ತಾನೆ.‌ ಅಂತೆಯೇ ಅವರು ಸ್ನಾನ ಮಾಡಿ ಮೇಲೇಳಲು ಸುಂದರ ಸ್ತ್ರೀಯಾಗಿಬಿಡುತ್ತಾರೆ! ತನ್ನ ಪೂರ್ವವನ್ನೆಲ್ಲಾ ಮರೆತ ಆ ನಾರದಿಯನ್ನು ತಾಲಧ್ವಜನೆಂಬ ರಾಜನು ನೋಡಿ ಮೆಚ್ಚಿ ಮದುವೆಯಾಗಲು ಅವರಿಗೆ ಅರವತ್ತು ಪುತ್ರರು ಹುಟ್ಟುತ್ತಾರೆ!! ಅವರೆಲ್ಲರೂ ಒಂದು ಯುದ್ಧದಲ್ಲಿ ಸಾಯಲು, ನಾರದಿಯು ಅತ್ತು ಗೋಳಾಡುತ್ತಾಳೆ! ಆಗ ವಿಷ್ಣುವು ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಸಮಾಧಾನಪಡಿಸಿ ಪುನಃ ಆ ಸರೋವರದಲ್ಲಿ ಸ್ನಾನ ಮಾಡಿಸಲು, ನಾರದಿಯು ನಾರದರಾಗಿ ಪರಿವರ್ತಿತಳಾಗುತ್ತಾಳೆ! ಇದೇ ಮಾಯೆಯ ಸ್ವರೂಪ ಎಂದು ಹೇಳುತ್ತಾ ಮಹಾವಿಷ್ಣುವು ಅರವತ್ತು ಸಂವತ್ಸರಗಳಿಗೆ ನಾರದರ ಆ ಮಕ್ಕಳ ಹೆಸರುಗಳನ್ನಿಡುತ್ತಾನೆ. ಈ ಸಂವತ್ಸರಗಳು, ಪ್ರಭವ, ವಿಭವ, ಶುಕ್ಲ, ಪ್ರಮೋದೂತ ( ಪ್ರಮೋದ), ಪ್ರಜೋತ್ಪತ್ತಿ( ಪ್ರಜಾಪತಿ), ಆಂಗಿರಸ , ಶ್ರೀಮುಖ , ಭಾವ, ಯುವಾ, ಧಾತಾ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ , ಚಿತ್ರಭಾನು, ಸುಭಾನು , ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತಿ, ಖರ, ನಂದನ,ವಿಜಯ , ಜಯ, ಮನ್ಮಥ, ದುರ್ಮುಖ, ಹೇಮಲಂಬಿ, ವಿಲಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭನ (ಶೋಭಕೃತ್), ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಕೃತ್, ಪರೀಧಾವಿ, ಪ್ರಮಾದಿ, ಆನಂದ, ರಾಕ್ಷಸ, ನಲ( ಅನಲ), ಪಿಂಗಲ, ಕಾಲಯುಕ್ತ, ಸಿದ್ಧಾರ್ಥಿ, ರೌದ್ರ, ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಮತ್ತು ಕ್ಷಯ( ಅಕ್ಷಯ). ಪುನರಾವರ್ತಿತವಾಗುವ ಈ ಸಂವತ್ಸರಗಳಲ್ಲಿ ಈ ಬಾರಿ ಬಂದಿರುವುದು ಪರಾಭವ ಸಂವತ್ಸರ.
     ಮಹಾವಿಷ್ಣುವು ಮತ್ಸ್ಯಾವತಾರ ತಾಳಿದ್ದು ಈ ದಿನವೇ ಎಂದು ಹೇಳುತ್ತಾರೆ. ಶ್ರೀ ರಾಮನು ವನವಾಸದಿಂದ ಹಿಂದಿರುಗಿದ್ದೂ ಅಯೋಧ್ಯೆಯ ಜನರು ರಾವಣವಧೆಯ ಕೊಂಡಾಟದ ಉತ್ಸವ ಆರಂಭಿಸಿದ್ದೂ ಈ ದಿನದಂದೇ ಎಂದೂ ಹೇಳುತ್ತಾರೆ. 
     ಸಾಮಾನ್ಯವಾಗಿ ಮಾರ್ಚ್ -ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವು ಬರುವುದಾಗಿದ್ದು ಆಗ ವಸಂತ ಋತುವಿನ ಆರಂಭವಾಗುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು,' ಋತೂನಾಂ ಕುಸುಮಾಕರ:' ( ಋತುಗಳಲ್ಲಿ ನಾನು ವಸಂತನಾಗಿದ್ದೇನೆ) ಎಂದು ಹೇಳುವಂತೆ, ವಸಂತವು ಋತುಗಳ ರಾಜನೆಂದು ಪ್ರಸಿದ್ಧವಾಗಿದೆ! ಈ ಕಾಲದಲ್ಲಿ ನಿಧಾನವಾಗಿ ಸೂರ್ಯನ ಶಾಖ ಹೆಚ್ಚಿ, ಎಲ್ಲೆಲ್ಲೂ ಉತ್ಸಾಹ, ಲವಲವಿಕೆಗಳನ್ನು ತರುತ್ತದೆ! ಯುಗಾದಿಯ ದಿನ, ವಿಜಯದಶಮಿ, ಬಲಿಪಾಡ್ಯಮಿ, ಮತ್ತು ಅಕ್ಷಯ ತೃತೀಯಾಗಳು ಸೇರಿದಂತೆ , ಹಿಂದೂಗಳಿಗೆ ಪವಿತ್ರ ಮೂರೂವರೆ ದಿನಗಳಲ್ಲಿ ಒಂದಾಗಿದೆ. ಈ ದಿನ, ಶಾಲಿವಾಹನ ರಾಜನು ಪಟ್ಟಾಭಿಷಿಕ್ತನಾಗಿ ಶಾಲಿವಾಹನ ಶಕೆಯೂ ಆರಂಭವಾಯಿತೆಂದು ಹೇಳುತ್ತಾರೆ. ಈ ದಿನದಂದು ಆರಂಭವಾಗಿ, ದುರ್ಗಾದೇವಿಯ ಪೂಜೆ ಮಾಡುತ್ತಾ ಒಂಬತ್ತು ದಿನಗಳ ಕಾಲ ವಸಂತ ನವರಾತ್ರಿ ಎಂದು ಆಚರಿಸಲಾಗುತ್ತದೆ. ಶರತ್ಕಾಲದಲ್ಲಿ ಬರುವ ಬರುವ ಇನ್ನೊಂದು ನವರಾತ್ರಿಯಾದ ಶರನ್ನವರಾತ್ರಿ ಅಥವಾ ದಸರಾ ಸೇರಿ, ಎರಡು ನವರಾತ್ರಿಗಳಿವೆ.  ಈಗ ಶರನ್ನವರಾತ್ರಿ ಪ್ರಸಿದ್ಧವಾಗಿರುವಷ್ಟು ವಸಂತನವರಾತ್ರಿ ಪ್ರಸಿದ್ಧವಾಗಿಲ್ಲದಿದ್ದರೂ ಇನ್ನೂ ಆಚರಣೆಯಲ್ಲಿದೆ. ಹಿಂದೆ ಇದು ಬಹಳ ಜನಪ್ರಿಯವಾಗಿದ್ದಿರಬಹುದು. ಚೈತ್ರ ಶುಕ್ಲದ ಪ್ರಥಮ ದಿವಸ, ಪ್ರಾಚೀನ ಭಾರತದಲ್ಲಿ ಇಂದ್ರಧ್ವಜೋತ್ಸವ ಎಂಬ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತಿತ್ತೆಂದು ಧರ್ಮನಿಬಂಧಗಳಿಂದ ತಿಳಿದುಬರುತ್ತದೆ. ಇದು ಶರತ್ಕಾಲದಲ್ಲೂ ಆಚರಣೆಯಲ್ಲಿತ್ತೆಂದು ಭೋಜರಾಜನ ಸಮರಾಂಗಣಸೂತ್ರಧಾರ, ಮತ್ತು ಇತರ ಅನೇಕ ಗ್ರಂಥಗಳಿಂದ ತಿಳಿದುಬರುತ್ತದೆ. ಉಪರಿಚರ ವಸುವೆಂಬ ರಾಜನು ಇಂದ್ರನನ್ನು ಮೆಚ್ಚಿಸಿ ಅವನಿಂದ ಒಂದು ವಿಮಾನವನ್ನೂ ಅವನನ್ನು ಸಂಕೇತಿಸುವ ಒಂದು ಕೋಲನ್ನೂ ಪಡೆದು, ಆ ಕೋಲನ್ನು ಪೂಜಿಸುವ ಮೂಲಕ ಈ ಹಬ್ಬವನ್ನು ಆರಂಭಿಸಿದ ಎಂದು ಮಹಾಭಾರತ ಹೇಳುತ್ತದೆ. ಪ್ರಾಚೀನ ಭಾರತೀಯರು ಬಿದಿರಿನ ಕೋಲನ್ನು ನೆಟ್ಟು ಬಾವುಟ ಹಾರಿಸಿ ಇಂದ್ರನನ್ನು ಪೂಜಿಸಿ ಹೋಮ ಮಾಡಿ ರಾತ್ರಿಯೆಲ್ಲಾ ಸಂಗೀತ,ನರ್ತನಗಳಿಂದ ಉತ್ಸವ ಆಚರಿಸುತ್ತಿದ್ದರೆಂದು ತಿಳಿದುಬರುತ್ತದೆ. ಇದೇ ಈಗ ಮಹಾರಾಷ್ಟ್ರದಲ್ಲಿ ಗುಢಿಪಡ್ವದ ರೀತಿಯಲ್ಲಿ ಆಚರಿಸಲಾಗುತ್ತಿದೆ.
    ಈ ಸಮಯದಲ್ಲಿ ವಸಂತೋತ್ಸವವೆಂದು ವಸಂತದ ಆಗಮನವನ್ನು ಸಂಭ್ರಮಿಸಿ ಆಚರಿಸುವ ಹಲವಾರು ಕ್ರೀಡೋತ್ಸವಗಳಿದ್ದವೆಂದು ಭೋಜರಾಜನ ಶೃಂಗಾರಪ್ರಕಾಶ, ಸರಸ್ವತೀಕಂಠಾಭರಣ, ವಾತ್ಸ್ಯಾಯನನ ಕಾಮಸೂತ್ರ, ಮೊದಲಾದ ಗ್ರಂಥಗಳಿಂದ ತಿಳಿದುಬರುತ್ತದೆ. ಅಂಥ ಕೆಲವೆಂದರೆ, ಅಶೋಕಾಷ್ಟಮಿ ( ಅಶೋಕ ವೃಕ್ಷವನ್ನು ಪ್ರಾರ್ಥಿಸಿ ಅದರ ಎಂಟು ಮೊಗ್ಗುಗಳನ್ನು ಸೇವಿಸುವುದು), ಅಷ್ಟಮೀಚಂದ್ರಿಕಾ( ಪ್ರೇಮದಲ್ಲಿರುವ ಸ್ತ್ರೀಯರು ಚಂದ್ರನನ್ನು ಪೂಜಿಸುವುದು), ಸುವಸಂತಕ ( ವಸಂತದ ಆಗಮನವನ್ನು ಸಂಗೀತ, ಚರ್ಚರೀ ತಾಳಗೀತನೃತ್ಯಗಳಿಂದ ಸ್ವಾಗತಿಸುವ ವಸಂತೋತ್ಸವ), ಸಹಕಾರಭಂಜಿಕೋತ್ಸವ ( ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮಾವಿನ ಮರಗಳಿಂದ ಹೊಸ ಹಣ್ಣು, ಕಾಯಿಗಳನ್ನು ಕೀಳುವ ಉತ್ಸವ), ಮದನತ್ರಯೋದಶಿ ( ಮನ್ಮಥನ ಪೂಜೆ,ಮದನೋತ್ಸವ), ಏಕಶಾಲ್ಮಲೀ ( ಸ್ತ್ರೀ ಪುರುಷರು ಒಟ್ಟಾಗಿ ಶಾಲ್ಮಲೀ ವೃಕ್ಷದ ಬಳಿ ನೆರೆದು ಹೂ ಮುಡಿದು ಆಡುವುದು), ಅಶೋಕೋತ್ತಂಸಿಕಾ ( ಅಶೋಕ ವೃಕ್ಷ ಹೂ ಬಿಡಲೆಂದು ಸುಂದರ ಸ್ತ್ರೀಯರು ವಸ್ತ್ರಾಲಂಕಾರಭೂಷಿತರಾಗಿ ಕಾಲಿಗೆ ಅಲಕ್ತಕ ರಸ ಸವರಿಕೊಂಡು ಅದಕ್ಕೆ ಒದೆಯುವುದು - ಇದಕ್ಕೆ ದೋಹದ ಕ್ರಿಯೆ ಎನ್ನುತ್ತಾರೆ; ಮರಗಳಿಗೆ ಇಂಥ ಬಯಕೆ ಇರುತ್ತದೆ ಎಂಬ ನಂಬಿಕೆ), ಚೂತಭಂಜಿಕಾ ( ಮಾವಿನ ಹೊಸ ಹೂಗಳನ್ನು ವಸಂತದ ಆರಂಭದಲ್ಲಿ ಯುವತಿಯರು ಆರಿಸಿ, ಮನ್ಮಥನಿಗೆ ಬಾಣಗಳಂತೆ ಅರ್ಪಿಸುವುದು), ಆಂದೋಲನ ಕ್ರೀಡಾ ( ಉಯ್ಯಾಲೆಯಾಟ), ಪುಷ್ಪವಾಚಯಿಕಾ ಅಥವಾ ವಕುಲಪುಷ್ಪವಾಚಯಿಕಾ ( ಸುಂದರ ಸ್ತ್ರೀಯು ಮಧುಪಾನ ಮಾಡಿ ಅದರ ಅರ್ಧವನ್ನು ಬಕುಳ ವೃಕ್ಷಕ್ಕೆ ಉಗುಳಿ ಅದರ ದೋಹದ ಕ್ರಿಯೆ ನಡೆಸುವುದು ಹಾಗೂ ಅದರ ಹೂಗಳನ್ನು ಸಂಗ್ರಹಿಸುವುದು), ಯವ ಚತುರ್ಥಿ ( ಯವೆಯ ಕಡ್ಡಿ, ಹೂಗಳನ್ನು ಉಪವನಗಳಲ್ಲಿ ಹಾಸಿ ಅವುಗಳ ಮೇಲೆ ಸ್ತ್ರೀಯರು ಉರುಳುವುದು), ಉದಕಕ್ಷ್ವೇಡಿಕಾ ( ಪರಸ್ಪರರ ಮೇಲೆ ಸ್ತ್ರೀ ಪುರುಷರು ಬಣ್ಣದ ನೀರನ್ನು ಎರಚುವುದು - ಇದೇ ಹೋಳಿಯಲ್ಲೂ ಸೇರಿಕೊಂಡಿದೆ), ಚೂತಲತಿಕಾ ಅಥವಾ ಆಮ್ರಲತಿಕಾ ( ಸ್ತ್ರೀಯರು ಮಾವಿನ ಕಡ್ಡಿಗಳನ್ನು ಹಿಡಿದು ತಮ್ಮ ಪ್ರೇಮಿಗಳನ್ನು ಗುರುತಿಸಿ ಖುಷಿ ಪಡುವುದು), ಪಾಂಚಾಲಾನುಯಾನ ( ಬೊಂಬೆಗಳ ಮೆರವಣಿಗೆ, ಉತ್ಸವ), ಈ ಮೊದಲಾದ ಆಚರಣೆಗಳು.
      ಇದನ್ನು ನೋಡಿದರೆ ಪ್ರಾಚೀನ ಭಾರತೀಯರು ಎಂದೂ ಕೇವಲ ಗೊಡ್ಡು ಧಾರ್ಮಿಕರಾಗಿರದೇ ಜೀವನದ ಎಲ್ಲಾ ಮುಖಗಳಿಗೂ ಗೌರವಾದರಗಳನ್ನು ತೋರುತ್ತಿದ್ದರೆಂದು ತಿಳಿಯುತ್ತದೆ. ಉತ್ಸವಪ್ರಿಯತೆ, ಜೀವನೋಲ್ಲಾಸಗಳಿಗೆ ಅವರು ಬಹಳ ಮಹತ್ವ ಕೊಡುತ್ತಿದ್ದರು. ಹಾಗಾಗಿಯೇ ಕಾಳಿದಾಸನು, ' ಉತ್ಸವಪ್ರಿಯಾ ಖಲು ಮನುಷ್ಯಾ:' ಎಂದು ಹೇಳಿದ್ದಾನೆ. 
     ಈಗಲೂ ವಸಂತಾರಂಭವಾದ, ವರ್ಷಾರಂಭವಾದ ಯುಗಾದಿ, ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಸೃಷ್ಟಿಕರ್ತ ಬ್ರಹ್ಮನ ಹಾಗೂ ವರ್ಷಾಧಿಪತಿ ದೇವತೆಯ ಪೂಜೆ, ಪಂಚಾಂಗ ಶ್ರವಣ ಹಾಗೂ ಕಾಲದ ವಿಭಾಗಗಳ ಮತ್ತು ನಕ್ಷತ್ರಗಳ ಪೂಜೆ, ಮತ್ತು ಕೊನೆಯಲ್ಲಿ ವಿಷ್ಣುವಿನ ಪೂಜೆ, ಇವು ಹಬ್ಬದ ಪೂಜಾಭಾಗದ ಆಚರಣೆಗಳು. ವರ್ಷಾಧಿಪತಿ ದೇವತೆಯೆಂದರೆ, ಯುಗಾದಿಯು ಯಾವ ವಾರ ಬರುವುದೋ, ಆ ವಾರದ ಅಧಿಪತಿ ಆ ವರ್ಷದ ರಾಜ ಅಥವಾ ಅಧಿಪತಿಯಾಗಿರುತ್ತಾನೆ. ಉದಾಹರಣೆಗೆ, ಯುಗಾದಿ ಸೋಮವಾರ ಬಂದರೆ, ಚಂದ್ರ, ಹಾಗೂ ಗುರುವಾರ ಬಂದರೆ ಗುರು, ಹೀಗೆ.
      ಅಭ್ಯಂಜನ ಸ್ನಾನ, ಹೊಸ ವಸ್ತ್ರಧಾರಣೆ, ತಳಿರು ತೋರಣಗಳಿಂದ, ಮುಖ್ಯವಾಗಿ ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಿ ಮನೆಯನ್ನು ಅಲಂಕರಿಸುವುದು, ಮೇಲೆ ಹೇಳಿದ ಪೂಜೆ, ಮತ್ತು ಹಿಂದಿನ ವರ್ಷ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ ಪ್ರಾರ್ಥಿಸುವುದು, ಮತ್ತು ಬೇವಿನ ಸೊಪ್ಪು ಮತ್ತು ಬೆಲ್ಲದ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವುದು, ಪುಷ್ಕಳ ಭೋಜನ, ಆಳುಗಳಿಗೂ ಆಶ್ರಿತರಿಗೂ ಉಡುಗೊರೆಗಳನ್ನು ಕೊಡುವುದು, ಇವು ಹಬ್ಬದ ಮುಖ್ಯ ಆಚರಣೆಗಳು. ಇವುಗಳಲ್ಲಿ ಬೇವು -ಬೆಲ್ಲ ಮಿಶ್ರಣ ಸೇವಿಸುವುದು ಅತ್ಯಂತ ಪ್ರಮುಖವಾಗಿದೆ. ಬೇವಿನಲ್ಲಿ ಆರೋಗ್ಯಕರ ಅಂಶಗಳಿದ್ದು, ಈ ಮಿಶ್ರಣವನ್ನು ಸೇವಿಸುವಾಗ ಈ ಒಂದು ಶ್ಲೋಕವನ್ನೂ ಪಡಿಸಲಾಗುತ್ತದೆ -
    ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ /
    ಸರ್ವಾರಿಷ್ಟವಿನಾಶಾಯ ನಿಂಬಕಂ ದಲಭಕ್ಷಣಮ್ //
    ' ನೂರು ವರ್ಷಗಳ ಆಯುಷ್ಯಕ್ಕಾಗಿ, ವಜ್ರದಂತೆ ಗಟ್ಟಿಯಾದ ದೇಹಕ್ಕಾಗಿ, ಸರ್ವಸಂಪತ್ತುಗಳನ್ನೂ ಪಡೆಯುವುದಕ್ಕಾಗಿ, ಸಕಲ ಅನಿಷ್ಟಗಳ ವಿನಾಶಕ್ಕಾಗಿ, ನಿಂಬಕದಳದ ( ಬೇವಿನೆಲೆಯ) ಭಕ್ಷಣ ಮಾಡಬೇಕು.' 
     ಬೇವಿನ ಎಲೆ ಕಹಿಯಾಗಿರುವುದರಿಂದ ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನಲಾಗುತ್ತದೆ. ಜೀವನದಲ್ಲಿ ಕಷ್ಟ,ಸುಖಗಳೆರಡೂ ಇದ್ದು ಅವುಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ತತ್ತ್ವದ ಸಂಕೇತವೇ ಈ ಬೇವು,ಬೆಲ್ಲ ಮಿಶ್ರಣದ ಸೇವನೆ ಎಂದು ಹೇಳಲಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವ,' ಸುಖೇ ದುಃಖೇ ಸಮಂ ಕೃತ್ವಾ ಲಾಭಾಲಾಭೌ ಜಯಾಜಯೌ ( ಸುಖದುಃಖಗಳನ್ನು, ಲಾಭ ನಷ್ಟಗಳನ್ನು, ಜಯ- ಅಪಜಯಗಳನ್ನು ಸಮದೃಷ್ಟಿಯಿಂದ ನೋಡಬೇಕು)' ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು.
      ಯುಗಾದಿಯ ಭೋಜನದ ಸೊಗಸೇ ಸೊಗಸು! ಈ ಹಬ್ಬದಲ್ಲಿ ಮುಖ್ಯವಾದ ಸಿಹಿತಿಂಡಿಯೆಂದರೆ ಹೋಳಿಗೆ ( ಬೇಳೆ ಇಲ್ಲವೇ ಕಾಯಿ ಹೋಳಿಗೆ) ಮತ್ತು ಪಾಯಸಗಳು! ಆಂಧ್ರಪ್ರದೇಶದಲ್ಲಿ ಹೋಳಿಗೆಯನ್ನೇ ಪೂರಣ್ ಪೋಳಿ ಎಂದು ಮಾಡುತ್ತಾರೆ. ಮಾವು ಮತ್ತು ಹಲಸಿನ ಹಣ್ಣಿನ ಕಾಲವಿದಾದ್ದರಿಂದ, ಮಾವಿನಕಾಯಿ ಚಟ್ನಿ ಮತ್ತು ಚಿತ್ರಾನ್ನ, ಮಾವಿನ ಹಣ್ಣಿನ ರಸಾಯನ, ಮತ್ತು ಸೀಕರಣೆ, ಹಾಗೂ ಮಲೆನಾಡಿನ ಕಡೆ, ಹಲಸಿನ ಹಣ್ಣಿನ ಕಡುಬು ಹಾಗೂ ಪಾಯಸ ಕೂಡಾ ಸಾಮಾನ್ಯ. ಯುಗಾದಿಯ ಮರುದಿನ, ಹೊಸತೊಡಕು ಅಥವಾ ವರ್ಷತೊಡಕು ಎಂದು ಆಚರಿಸುತ್ತಾ, ಮಾಂಸಾಹಾರಿಗಳು ಮಾಂಸದ ಸೇವನೆ ಮಾಡುತ್ತಾರೆ. ಇದು ಹೊಸತೊಡಗು ಅಥವಾ ವರ್ಷತೊಡಗು ಎಂಬುದರ ಅಪಭ್ರಂಶ. ಹೊಸವರ್ಷದಲ್ಲಿ ತೊಡಗು ಎಂದು ಇದರ ಅರ್ಥವಷ್ಟೇ! 
     ಚಾಂದ್ರಮಾನ ಯುಗಾದಿಯನ್ನು ವರ್ಷಾರಂಭದ ದಿನವನ್ನಾಗಿ ಕರ್ನಾಟಕ, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಆಗಲೇ ಹೇಳಿದಂತೆ, ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಡ್ವ ಎಂದು ಆಚರಿಸುತ್ತಾರೆ. ಅಂದು ಬೆಳಿಗ್ಗೆ, ಒಂದು ಉದ್ದನೆಯ ಬಿದಿರಿನ ಬೊಂಬನ್ನು ರೇಷ್ಮೆ ವಸ್ತ್ರದಿಂದ ಅಲಂಕರಿಸಿ, ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಪಾತ್ರೆಯೊಂದನ್ನಿಟ್ಟು ಮಿಠಾಯಿಗಳ ಮತ್ತು ಬೇವಿನೆಲೆಗಳ ಮಾಲೆಯನ್ನು ಅದರ ಕಂಠಕ್ಕೇರಿಸಿ ಪೂಜಿಸಿ, ಮನೆಯ ಮಾಳಿಗೆಯ ಮೇಲೆ ನೆಡುತ್ತಾರೆ. ಇದೇ ಗುಢಿ. ಸೂರ್ಯಾಸ್ತದ ನಂತರ, ಅದನ್ನು ಕೆಳಗಿಳಿಸಿ, ಮನೆಯವರೆಲ್ಲರೂ ಬೇವಿನ ಎಲೆಗಳನ್ನೂ ಮಿಠಾಯಿಗಳನ್ನೂ ಸೇವಿಸುತ್ತಾರೆ. ಪಡ್ವ ಅಥವಾ ಪ್ರತಿಪದ್ ( ಮೊದಲ) ದಿನ, ಗುಢಿಯನ್ನು ನೆಡುವುದರಿಂದ ಇದನ್ನು ಗುಢಿಪಡ್ವ ಎನ್ನುತ್ತಾರೆ. ಅಂದು ಶ್ರೀರಾಮನು ವಾಲಿಯನ್ನು ಕೊಂದ ದಿನವೆಂದೂ ಅದರ ಸ್ಮರಣಾರ್ಥವಾಗಿ ಧ್ವಜಾರೋಹಣ ಮಾಡುವ ಆಚರಣೆಯಿದೆಂದೂ ಹೇಳುತ್ತಾರೆ. ಆದರೆ ಇದು ಪ್ರಾಚೀನ ಭಾರತದ ಇಂದ್ರಧ್ವಜೋತ್ಸವದ ಮಾರ್ಪಾಡೇ ಇರಬಹುದು. 
   ಹೊಸವರ್ಷದ ಆರಂಭ, ಭಾರತದ ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಾಗಿರುತ್ತದೆ. ಸೌರಮಾನ ಪಂಚಾಂವನ್ನು ಅನುಸರಿಸುವ ತಮಿಳುನಾಡು ಮತ್ತು ಕೇರಳದ ಜನರಿಗೆ, ಸೌರಮಾನ ಯುಗಾದಿ ವರ್ಷಾರಂಭದ ದಿನವಾಗಿರುತ್ತದೆ. ಅದು, ಚಿತ್ತಿರೈ ಮಾಸದ ಮೊದಲ ದಿನವಾಗಿದ್ದು, ಮಧ್ಯ ಏಪ್ರಿಲ್ ನಲ್ಲಿ ಬರುತ್ತದೆ. ಕೇರಳದಲ್ಲಿ ಇದು ವಿಷು ಎಂಬುದಾಗಿ ಆಚರಿಸಲ್ಪಡುತ್ತದೆ. ಕೇರಳಿಗರಿಗೆ ಇದು ಬಹಳ ಸಂಭ್ರಮದ ಹಬ್ಬವಾಗಿರುತ್ತದೆ. ಬಂಗಾಳದಲ್ಲಿ ವೈಶಾಖ ಮಾಸದ ಮೊದಲ ದಿನವಾದ ಪಹಲಾ ವೈಶಾಖ್ ಅಥವಾ ವೈಶಾಖೀ ಹಬ್ಬ, ವರ್ಷಾರಂಭದ ದಿನ. ಸಿಖ್ಖರಿಗೂ ಇದೇ ವರ್ಷಾರಂಭದ ದಿನವಾಗಿರುತ್ತದೆ. ಗುಜರಾತಿನಲ್ಲಿ ವರ್ಷಾರಂಭವು, ಕಾರ್ತಿಕ ಮಾಸದ ಶುಕ್ಲ ಪ್ರತಿಪದ್ ದಿನದಂದು, ಅಂದರೆ ಬಲಿಪಾಡ್ಯಮಿಯಂದು ಇರುತ್ತದೆ. ಅಸ್ಸಾಂನಲ್ಲಿ ವೈಶಾಖ ಮಾಸದಲ್ಲಿ ಹೊಸ ವರ್ಷವನ್ನು 'ಬಿಹು'  ಎಂದು ಆಚರಿಸುತ್ತಾರೆ.
     ಹೀಗೆ ಭಾರತೀಯರಾದ ನಮಗೆ, ಯುಗಾದಿ ಹಬ್ಬವು ಹೊಸ ವರ್ಷದ ಆರಂಭದೊಂದಿಗೆ, ಉತ್ಸಾಹ, ಸಂಭ್ರಮಗಳ ದಿನವಾಗಿದ್ದು ವೈವಿಧ್ಯಮಯವಾದ ಆಚರಣೆಗಳಿಂದ ಕೂಡಿರುತ್ತದೆ.
                                       ಡಾ.ಬಿ.ಆರ್.ಸುಹಾಸ್
                                       ಬೆಂಗಳೂರು 

ಸುಂದರೀಶತಕ -೭

ವಿಪರೀತರತಸಮುದ್ಯಮಪುಲಕಪ್ರಥಮಾನಮಾಂಸಲಾಭೋಗಮ್/
ಸುರತಸುಖೈಕನಿಧಾನಂ ಸುಂದರಿ ಜಘನಸ್ಥಲಂ ಜಯತಿ//

     ' ಎಲೈ ಸುಂದರಿ! ವಿಪರೀತ ರತಯಲ್ಲಿ ನಿನಗಾದ ಪ್ರಯಾಸದಿಂದ ಉಂಟಾದ ಪುಳಕದಿಂದ ವಿಸ್ತರಿಸಿದ ಹಾಗೂ ಮಾಂಸಲವಾದ, ತುಂಬಿಕೊಂಡ, ‌ಸುರತಸುಖಕ್ಕೆ ಏಕೈಕ ನಿಧಿಯಾಗಿರುವ ನಿನ್ನ ಜಘನಸ್ಥಲವು ವಿಜಯಶಾಲಿಯಾಗುತ್ತದೆ!'

    ವಿಪರೀತ ರತಿಯೆಂದರೆ ಸ್ತ್ರೀಯು ಪುರುಷನ ಮೇಲಿದ್ದು ಕ್ರೀಡಿಸುವ ಭಂಗಿ. ಇದನ್ನು ಪುರುಷಾಯಿತ ಎಂದೂ ಕರೆಯುತ್ತಾರೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿ ಇದರ ವಿವರಣೆ ಇದೆ ಹಾಗೂ ಸಂಸ್ಕೃತದ ಅನೇಕ ಶೃಂಗಾರ ಪದ್ಯಗಳಲ್ಲಿ ಪುರುಷಾಯಿತದ ವರ್ಣನೆಯಿದೆ. ಅನೇಕ ದೇವಾಲಯ ಶಿಲ್ಪಗಳಲ್ಲೂ ನಾವು ಪುರುಷಾಯಿತದ ಚಿತ್ರಣ ಕಾಣಬಹುದು. ಪ್ರಾಚೀನ ಭಾರತೀಯರಿಗೆ ಪುರುಷಾಯಿತದ ಆಚರಣೆ ಹಾಗೂ ವರ್ಣನೆಗಳ ವಿಷಯದಲ್ಲಿ ಮುಜುಗರವಿರಲಿಲ್ಲ. ರತಿಕ್ರೀಡೆ ಹಾಗೂ ಪ್ರೇಮಕಲಾಪಗಳಲ್ಲಿ ಪುರುಷರಿಗಿದ್ದಷ್ಟೇ ಸ್ವಾತಂತ್ರ್ಯ ಸ್ತ್ರೀಯರಿಗೂ ಇತ್ತು.
      ಈ ಭಂಗಿಯಲ್ಲಿ ಸುಂದರಿಗೆ ಆಗುವ ಪ್ರಯಾಸ, ಪುಳಕಗಳಿಂದ ಅವಳ ಜಘನವು ವಿಸ್ತರಿಸಿ, ಮಾಂಸಲವಾಗಿ, ತುಂಬಿಕೊಂಡಂತೆ ಬಹು ಸುಂದರವಾಗಿ ಕಾಣುತ್ತಿದೆ, ಹಾಗೂ ಅದು ಸುರತಸುಖಕ್ಕೆ ಏಕೈಕ ನಿಧಿಯಾಗಿದೆ ಎಂದು ಕವಿಯು ವರ್ಣಿಸುತ್ತಾ ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ.

ಸೋಮವಾರ, ಮಾರ್ಚ್ 16, 2026

ಸುಂದರೀಶತಕ -೬

ಸುಂದರಿ ಕಾಂಚನಕದಲೀ ಕರ್ಪೂರೋತ್ಪತ್ತಿಶಾಲಿನೀತ್ಯನಯಾ /
ಚಂದ್ರೋದ್ವರ್ತನಸುರಭಿಸ್ತವೋರುರುಪಮೀಯತೇ ಕವಿಭಿ: //

    ' ಎಲೈ ಸುಂದರಿ! ಚಂದ್ರನ ಲೇಪನ ಅಥವಾ ಚಂದನಲೇಪನದಿಂದ ಸುಗಂಧಿತವಾಗಿರುವ ನಿನ್ನ ಸುಂದರ ತೊಡೆಯನ್ನು ಕವಿಗಳು ಹೊಂಬಣ್ಣದ ಬಾಳೆ ದಿಂಡು, ಶುದ್ಧವಾದ ಕರ್ಪೂರವು ಉತ್ಪತ್ತಿಯಾಗುವ ಸ್ಥಾನ, ಇವುಗಳಿಗೆ ಹೋಲಿಸುತ್ತಾರೆ!' 
     ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಹೆಣ್ಣಿನ ಸೌಂದರ್ಯದ ಬಗ್ಗೆ, ಮತ್ತು ರತಿಸುಖದ ಬಗ್ಗೆ ಇಷ್ಟೊಂದು ವರ್ಣನೆಗಳಿರುವುದನ್ನು ನೋಡಿ ಇಂದಿನ ಜನರಿಗೆ ಆಶ್ಚರ್ಯವಾಗಬಹುದು. ಕೆಲವರು ಇದರ ಬಗ್ಗೆ ತಪ್ಪು ತಿಳಿದು ಮೂಗು ಮುರಿಯಬಹುದು ಕೂಡ! ಆದರೆ ನಮ್ಮ ಹಿಂದಿನವರಿಗೆ ಸುಂದರವಾಗಿರುವುದನ್ನು ಹೊಗಳುವುದರಲ್ಲಿ, ಹಾಗೂ ಸುಖಪಡುವ ವಿಷಯದಲ್ಲಿ ಮುಜುಗರ, ಅಥವಾ ತಪ್ಪಿತಸ್ಥ ಭಾವನೆ ಇರಲಿಲ್ಲ. ಪ್ರಕೃತಿ, ಮತ್ತು ಪ್ರಾಪಂಚಿಕ ಸೌಂದರ್ಯಗಳನ್ನು ಯಥೇಚ್ಛವಾಗಿ ಅನುಭವಿಸಿ ಕ್ರಮೇಣ ಅವುಗಳಲ್ಲಿ ವೈರಾಗ್ಯ ತಾಳುವುದು ಅವರ ರೀತಿಯಾಗಿತ್ತು. ಆದರೆ ಈಗ ಮೇಲ್ನೋಟಕ್ಕೆ ಜನರು ತಾವು ವೈರಾಗ್ಯಶಾಲಿಗಳೆಂದು ತೋರಿಸಿಕೊಳ್ಳುತ್ತಾ ಕದ್ದು ಮುಚ್ಚಿ ತಪ್ಪಿತಸ್ಥ ಭಾವನೆಯಿಂದ ಸುಖಪಡಲು ಪ್ರಯತ್ನಿಸುತ್ತಾ ಅದನ್ನೂ ಸರಿಯಾಗಿ ಮಾಡಲಾಗುವುದಿಲ್ಲ. 
        ಸೌಂದರ್ಯ, ಶೃಂಗಾರಗಳ ಶುದ್ಧವಾದ ದೃಷ್ಟಿಯಿಂದ ನೋಡಿದರೆ ಎಲ್ಲವೂ ಚೆನ್ನ. ಹಾಗಾಗಿ ಇಲ್ಲಿ ಕವಿಯು ಹೆಣ್ಣಿನ ತೊಡೆಗಳನ್ನು ಹೊಂಬಣ್ಣದ ಬಾಳೆ ದಿಂಡುಗಳಿಗೂ ಶುದ್ಧವಾದ ಕರ್ಪೂರೋತ್ಪತ್ತಿ ಸ್ಥಾನಗಳಿಗೂ ಕವಿಗಳು ಹೋಲಿಸುತ್ತಾರೆ ಎನ್ನುತ್ತಾನೆ. ಅಲ್ಲದೇ ಚಂದನಲೇಪನದಿಂದ ಅವು ಸುಗಂಧಿತವಾಗಿವೆ ಕೂಡ! 

ಭಾನುವಾರ, ಮಾರ್ಚ್ 15, 2026

ಸುಂದರೀಶತಕ -೫

ಸುಂದರಿ ಜಂಘಾಯುಗಮಿದಮುಪಾಸನಸ್ತಂಭವಿಭ್ರಮಂ ಧತ್ತೇ /
ಇಷುಭಿರತನೋರ್ಮನೋ ಮೇ ವಿದ್ಧಂ ಯಲ್ಲಗ್ನಮಾತ್ರಮಿಹ //

     ' ಎಲೈ ಸುಂದರಿ! ನಿನ್ನ ಜೋಡಿ ತೊಡೆಗಳು ಕಾಮದೇವನ ಮಂದಿರದ ಉಪಾಸನಸ್ತಂಭಗಳೆಂಬಂತೆ ಸೌಂದರ್ಯ ಹೊಂದಿವೆ! ಅವುಗಳಲ್ಲಿ ನನ್ನ ಮನಸ್ಸನ್ನಿರಿಸಿದ ಕೂಡಲೇ ಅನಂಗನ ಅಂಬುಗಳಿಂದ ಅದು ಭೇದಿಸಲ್ಪಟ್ಟಿತು!'

       ಸುಂದರಿಯ ತೊಡೆಗಳು ಎಷ್ಟು ಸುಂದರವಾಗಿವೆಯೆಂದರೆ, ಅವು ಕಾಮದೇವನ ಮಂದಿರದ ಉಪಾಸನಸ್ತಂಭಗಳಂತಿವೆ ಎನ್ನುತ್ತಾನೆ ಅವನ ರಸಿಕ ಪ್ರೇಮಿ. ಆದರೆ ವಿಪರ್ಯಾಸವೆಂದರೆ ಉಪಾಸನಸ್ತಂಭಗಳಾದ ಅವುಗಳಲ್ಲಿ ಅವನು ತನ್ನ ಮನಸ್ಸನ್ನಿಟ್ಟ ಕೂಡಲೇ ಕಾಮದೇವನ ಬಾಣಗಳಿಂದ ಅವನ ಮನಸ್ಸಿಗೆ ಏಟು ಬಿದ್ದು ಗಾಯಗೊಂಡಿತು! ಅಥವಾ ಅವುಗಳಲ್ಲಿ ಮನಸ್ಸನ್ನಿಟ್ಟ ಕೂಡಲೇ ಕಾಮದೇವನ ಬಾಣಗಳಿಂದ ಹೊಡೆಯಲ್ಪಟ್ಟು ಸಿಗಬೇಕಾದ ಫಲ ಸಿಕ್ಕಿತು!
   ಕಾಮದೇವನು ಶಿವನ ಮೂರನೆಯ ಕಣ್ಣಿನಿಂದ ಸುಡಲ್ಪಟ್ಟ ಬಳಿಕ, ಅವನ ದಯೆಯಿಂದ ಪುನಃ ಬದುಕದರೂ ಅವನು ದೇಹವಿಲ್ಲದವನಾಗಿ ಅನಂಗನೆನಿಸಿದನು. ಹಾಗಾಗಿಯೇ ಇಲ್ಲಿ ಕಾಮದೇವನನ್ನು ಕವಿಯು ಅತನು, ಅಂದರೆ ತನುವಿಲ್ಲದವನು ಎಂದು ಕರೆದಿದ್ದಾನೆ. ಕಾಮದೇವನ ಇನ್ನಿತರ ಹೆಸರುಗಳು, ಮನೋಭವ ಹಾಗೂ ಮನೋಜ. ಅಂದರೆ ಮನಸ್ಸಿನಲ್ಲೇ ಉದಿಸುವವನು.

ಶುಕ್ರವಾರ, ಮಾರ್ಚ್ 13, 2026

ಸುಂದರೀಶತಕ -೪

ವರವರ್ಣಿನಿ ತವ ಚರಣೌ ಕಸ್ಯ ನ ಹೃದಯಾನುರಂಜನಂ ಕುರುತ: /
ಪರಮೇಷ್ಠಿನೋsತಿನಿಷ್ಠುರಪಾಣಿತಲಸ್ಪರ್ಶತಸ್ತಾಮ್ರೌ //

    ' ಎಲೈ ವರವರ್ಣಿನಿ! ನಿನ್ನ ಚರಣಗಳು ಯಾರ ಹೃದಯವನ್ನು ರಂಜಿಸುವುದಿಲ್ಲ?! ಸಾಕ್ಷಾತ್ ಸೃಷ್ಟಿಕರ್ತನೇ ನಿನ್ನನ್ನು ಸೃಷ್ಟಿಸುವಾಗ ತನ್ನ ಅತಿ ನಿಷ್ಠುರವಾದ ಹಸ್ತದಿಂದ ಅವನ್ನು ಸ್ಪರ್ಶಿಸಿದ ಕಾರಣ, ಅವು ತಾಮ್ರವರ್ಣವಾಗಿವೆ!' 

     ಸುಂದರಿಯ ಪಾದಗಳು ಸಹಜವಾಗಿಯೇ ಕೋಮಲವಾಗಿಯೂ ಕೆಂಪಾಗಿಯೂ ಇರಲು, ಅದಕ್ಕೆ ಕಾರಣ, ಸೃಷ್ಟಿಕರ್ತ ಬ್ರಹ್ಮನು ಅವನ್ನು ತನ್ನ ಗಟ್ಟಿಯಾದ ಹಸ್ತಗಳಿಂದ ಹಿಡಿದದ್ದು ಎಂದು ಚಮತ್ಕಾರವಾಗಿ ಹೇಳುತ್ತಾ ಕವಿಯು ಸುಂದರಿಯ ಚರಣಗಳನ್ನು ವರ್ಣಿಸುತ್ತಾನೆ.

ಬುಧವಾರ, ಮಾರ್ಚ್ 11, 2026

ಸುಂದರೀಶತಕ -೩

ಚಂದ್ರಾಧಿಕರುಚಯೋsಪಿ ಕ್ಷಾಲನಶುಚಯೋsಪಿ ಚಂದ್ರಕಾಂತೇನ /
ಸುಂದರಿ ತವ ನಖಮಣಯೋ ನ ನಯೋ ಯತ್ತಾಪಯತಿ ಮನ: //

    'ಎಲೈ ಸುಂದರಿ! ಚಂದ್ರನಿಗಿಂತಲೂ ಅಧಿಕ ಕಾಂತಿಯಿದ್ದರೂ, ಚಂದ್ರಕಾಂತ ಶಿಲೆಯಿಂದ ತೊಳೆದು ಶುಚಿಯಾಗಿದ್ದರೂ, ನಿನ್ನ ನಖಮಣಿಗಳು ನಮ್ಮ ಮನಸ್ಸಿಗೆ ತಾಪವುಂಟುಮಾಡುತ್ತವೆ! ಇದು ನ್ಯಾಯವಲ್ಲ!' 

     ಸುಂದರಿಯ ನಖಗಳು ( ಉಗುರುಗಳು) ಮಣಿಗಳಂತೆ ಸುಂದರವಾಗಿವೆ! ಅವು ಚಂದ್ರನಿಗಿಂತಲೂ ಅಧಿಕ ಕಾಂತಿ ಹೊಂದಿವೆ! ಚಂದ್ರಕಾಂತ ಶಿಲೆಯಿಂದ ತೊಳೆಯಲಾಗಿ ಶುಚಿಯಾಗಿವೆ! ಹಾಗಾಗಿ ಇವು ತಂಪುಂಟುಮಾಡಬೇಕು. ಆದರೆ ಇವು ತಮ್ಮ ಸೌಂದರ್ಯದಿಂದ ನಮ್ಮ ಮನಸ್ಸಿನಲ್ಲಿ ಕಾಮದ ತಾಪವುಂಟುಮಾಡುತ್ತಿವೆ, ಇದು ನ್ಯಾಯವಲ್ಲ ಎಂದು ರಸಿಕನೊಬ್ಬನು ಹೇಳುವಂತೆ ಕವಿಯು ಇಲ್ಲಿ ಸುಂದರಿಯ ನಖಗಳನ್ನು ಸೊಗಸಾಗಿ ವರ್ಣಿಸಿದ್ದಾನೆ.

ಭಾನುವಾರ, ಮಾರ್ಚ್ 8, 2026

ಹೋಳಿ ಹಬ್ಬದ ಕಥೆಗಳು

ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಸ್ವಾರಸ್ಯಕರ ಪೌರಾಣಿಕ, ಹಾಗೂ ಜಾನಪದ ಕಥೆಗಳಿವೆ. ಅಂತೆಯೇ ಹೋಳಿ ಹಬ್ಬದ ವಿಷಯದಲ್ಲೂ ಅನೇಕ ಕಥೆಗಳಿವೆ ಈಗ ಹೋಳಿ ಹಬ್ಬದ ಕಥೆಗಳನ್ನು ನೋಡೋಣ.
      ಹೋಳಿ, ಹೋಲಾಕಾ, ಹೋಲಿಕಾ, ಹೂಲಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬವು, ಸಂಭ್ರಮದಿಂದ ಜನರು ಮಾಡುವ ಹಾ ಹಾ ಹೂ ಹೂ ಹೋ ಹೋ ಎಂಬೆಲ್ಲಾ ಉದ್ಗಾರಗಳಿಂದ ಈ ಪದಗಳು ಬಂದಿವೆಯೆಂದು ಹೇಳುತ್ತಾರೆ. 
        ಭವಿಷ್ಯೋತ್ತರ ಪುರಾಣದ ಕಥೆಯೊಂದರ ಪ್ರಕಾರ, ಮಾಲಿ ಎಂಬ ರಾಕ್ಷಸನಿಗೆ ಢೋಂಡಾ ಅಥವಾ ಢೂಂಡಾ ಎಂಬ ಮಗಳಿದ್ದಳು. ಅವಳು ಶಿವನನ್ನು ಕುರಿತು ತಪಸ್ಸು ಮಾಡಿ ತಾನು ಮನುಷ್ಯರಿಂದಲೂ ರಾಕ್ಷಸರಿಂದಲೂ ದೇವತೆಗಳಿಂದಲೂ ಯಾವುದೇ ಆಯುಧಗಳಿಂದಲೂ ಯಾವುದೇ ಋತುವಿನಲ್ಲೂ ಹಗಲು ಅಥವಾ ರಾತ್ರಿಯಲ್ಲೂ ಮನೆಯ ಒಳಗೂ ಅಥವಾ ಹೊರಗೂ ಸಾಯಬಾರದೆಂದು ವರ ಪಡೆದಳು. ಶಿವನು ಅವಳಿಗೆ ಆ ವರವನ್ನು ನೀಡಿ ಒಂದು ಎಚ್ಚರಿಕೆ ಕೊಟ್ಟನು. ಅದೇನೆಂದರೆ, ಜನರು ಸಂಭ್ರಮದಿಂದ ಅವಳಿಗೆ ಕೆಟ್ಟ, ಅಶ್ಲೀಲ ಮಾತುಗಳನ್ನು ಆಡಿ ನಿಂದಿಸಿದರೆ ಅವಳು ಕುಗ್ಗಿ ಸತ್ತುಹೋಗುವಳೆಂಬುದು! 
     ಶಿವನ ವರದಿಂದ ಕೊಬ್ಬಿದ ಆ ರಾಕ್ಷಸಿಯು ಜನರನ್ನು, ಮುಖ್ಯವಾಗಿ ಮಕ್ಕಳನ್ನೂ ಯುವಕರನ್ನೂ ಪೀಡಿಸತೊಡಗಿದಳು! ಅವಳು ' ಅಡಾಡಾ ' ಎಂದು ಕಿರುಚುತ್ತಾ ಜನರ ಮೇಲೆ ದಾಳಿ ಮಾಡುತ್ತಿದ್ದಳು! ಆ ಸಮಯದಲ್ಲಿ ರಘು ಎಂಬ ರಾಜನು ಆಳುತ್ತಿದ್ದನು.‌ಅವನು ಅವಳನ್ನು ಆಯುಧಗಳಿಂದಾಗಲೀ ಮಂತ್ರಗಳಿಂದಾಗಲೀ ಯಾರಿಂದಲೂ ಕೊಲ್ಲಲಾಗದೆಂದು ಮನಗಂಡು ಇದಕ್ಕೆ ಪರಿಹಾರವೇನೆಂದು ಕುಲಗುರುಗಳಾದ ವಸಿಷ್ಠರನ್ನು ಕೇಳಿದನು. ಆಗ ವಸಿಷ್ಠರು ಅವಳ ರಹಸ್ಯವನ್ನು ಬಿಚ್ಚಿಟ್ಟು ," ಫಾಲ್ಗುಣ ಮಾಸದ ಶುಕ್ಲಪಕ್ಷದ ಪೂರ್ಣಿಮೆಯ ದಿನದಂದು ಒಣಗಿದ ಕಟ್ಟಿಗೆಗಳನ್ನೂ ಒಣ ಹುಲ್ಲನ್ನೂ ಪೇರಿಸಿ ಬೆಂಕಿ ಹಾಕಿ, ಎಲ್ಲಾ ಕಿರಿಯರೂ ಯುವಕರೂ ಸೇರಿ ರಕ್ಷೋಘ್ನ ಮಂತ್ರಗಳನ್ನು ಪಠಿಸಿ ಆ ಅಗ್ನಿಯನ್ನು ಸುತ್ತುತ್ತಾ ನಗುತ್ತಾ ಚಪ್ಪಾಳೆ ತಟ್ಟುತ್ತಾ ಗ್ರಾಮ್ಯ ಭಾಷೆಯಲ್ಲಿ ಅಶ್ಲೀಲ ಹಾಡುಗಳನ್ನು ಹಾಡಬೇಕು! ಅದರಿಂದ ಆ ರಾಕ್ಷಸಿ ದುರ್ಬಲಗೊಂಡು ಸಾಯುತ್ತಾಳೆ!" ಎಂದರು.
       ಜನರು ಅದರಂತೆ ಮಾಡಲು ಆ ರಾಕ್ಷಸಿ ದುರ್ಬಲಗೊಂಡು ಸತ್ತಳು! 
     ಇದನ್ನು ನೆನಪಿಸಿಕೊಳ್ಳಲು ಹುಣ್ಣಿಮೆಯ ರಾತ್ರಿ ಬೆಂಕಿ ಹಾಕಿ ಹಾಡಿ, ಕುಣಿದು, ಮರುದಿನ ಬಣ್ಣದ ಓಕುಳಿಯಾಡುತ್ತಾರೆ. ಹೋಳಿಯ ಹಬ್ಬದಂದು ಅತಿಶೃಂಗಾರದ, ಅಶ್ಲೀಲವೂ ಆಗಿರುವ ಗೀತೆಗಳನ್ನು ಹಾಡಲು ಇದೇ ಕಾರಣ. ಇಡೀ ವರ್ಷ ಸಂಯಮದಿಂದ ಇದ್ದುದಕ್ಕಾಗಿ ಇದೊಂದು ಮನಸ್ಸನ್ನು ಹಗುರಗೊಳಿಸುವ ಆಚರಣೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿಯ ಆಚರಣೆಗಳು ಕಾಣುತ್ತವೆ. ಉದಾಹರಣೆಗೆ ದೀಪಾವಳಿಯ ರಾತ್ರಿ ಜೂಜಾಡಬೇಕೆಂಬ ಪದ್ಧತಿಯಿದೆ. ಹಾಗೆಯೇ ಎಲ್ಲಾ ಹಬ್ಬಗಳಲ್ಲೂ ಸಿಹಿತಿಂಡಿಗಳನ್ನು ಸೇವಿಸುವ ಪರಿಪಾಠ ಇದೆ. ಹೀಗೆ ಯಾವುದನ್ನು ಸದಾ ಮಾಡಿದರೆ ತೊಂದರೆಯೋ ಅದಕ್ಕೂ ಒಂದು ದಿನ ಅವಕಾಶವಿತ್ತರೆ ಅದು ಮನಸ್ಸಿನಿಂದ ಹೋಗಿ ಅನಂತರ ಸಂಯಮದಿಂದ ಇರಬಹುದೆಂಬುದು ನಮ್ಮ ಹಿರಿಯರ ಆಲೋಚನೆಯಾಗಿತ್ತು. ಅಲ್ಲದೇ ಇವನ್ನು ಹಬ್ಬದ ಸಂದರ್ಭದಲ್ಲಿ ಮಾಡುವುದರಿಂದ ಇತಿ ಮಿತಿಯಲ್ಲಿರುತ್ತದೆ ಹಾಗೂ ವಿನೋದಕ್ಕಾಗಿ ಮತ್ತು ಸ್ನೇಹವರ್ಧನೆಗಾಗಿ ಇರುತ್ತದೆಯೇ ಹೊರತು ದುರುದ್ದೇಶಪೂರಿತವಾಗಿರುವುದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಇತಿಮಿತಿಯಲ್ಲಿ ವಿನೋದಕ್ಕಾಗಿ ಜೂಜಾಡುವುದರಿಂದ, ಹಾಗೂ ಹೋಳಿ ಹಬ್ಬದಲ್ಲಿ ಗೆಳೆಯ, ಗೆಳತಿಯರು, ಸ್ತ್ರೀ, ಪುರುಷರು ಒಟ್ಟಿಗೆ ಸ್ವಲ್ಪ ಹೊತ್ತು ಬಣ್ಣ ಎರಚಿಕೊಂಡು, ಹಾಡಿ,ಕುಣಿಯುವುದರಿಂದ ಸ್ನೇಹ, ಬಾಂಧವ್ಯಗಳು ಹೆಚ್ಚುತ್ತವೆ. 
     ಹೋಳಿ ಹಬ್ಬ ವಸಂತಕಾಲದ ಆಗಮನವನ್ನೂ ಸೂಚಿಸುತ್ತದೆ. ಹುಣ್ಣಿಮೆಯ ಮರುದಿನದಂದು ಕಾಮನ ಪೂಜೆಯನ್ನೂ ಮಾಡುವುದರಿಂದ ಪ್ರೇಮ, ಸಂತಾನ, ಸೃಷ್ಟಿಗಳ ಸಂಭ್ರಮಾಚರಣೆಯೂ ಇರುತ್ತದೆ. ಒಬ್ಬರ ಮೇಲೆ ಒಬ್ಬರು ಬಣ್ಣವನ್ನು ಎರಚುವುದು ಮರಗಳಲ್ಲಿ ಹೊಸ ಪುಷ್ಪಗಳು ಅರಳಿರುವುದನ್ನು ಸೂಚಿಸುತ್ತದೆ.
     ಇನ್ನೊಂದು ಕಥೆಯ ಪ್ರಕಾರ, ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾ ಎಂಬ ರಾಕ್ಷಸಿಯಿದ್ದಳು. ಅವಳು ಅಗ್ನಿಯಿಂದ ಸುಡಬಾರದೆಂದು ಅವನಿಂದಲೇ ವರ ಪಡೆದಿದ್ದಳು. ಹಿರಣ್ಯಕಶಿಪುವು ಹರಿದ್ವೇಷಿಯಾಗಿದ್ದರೆ, ಅವನ ಮಗ ಪ್ರಹ್ಲಾದನು ಹರಿಭಕ್ತನಾಗಿದ್ದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ಬಹಳ ಪ್ರಯತ್ನಪಟ್ಟನು. ಆದರೆ ಶ್ರೀನ್ನಾರಾಯಣನ ದಯೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹಿರಣ್ಯಕಶಿಪುವು ತನ್ನ ತಂಗಿ ಹೋಲಿಕಾಳಿಗೆ ಪ್ರಹ್ಲಾದನನ್ನು ಬೆಂಕಿಯಲ್ಲಿ ಕೂರಿಸಿಕೊಂಡು ಅವನನ್ನು ಸುಡಿಸಲು ಹೇಳಿದನು. ಅವಳು ಅದರಂತೆ ಬಾಲಕ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಚಿತೆಯೇರಿದಳು. ಆದರೆ ಪುನಃ ವಿಷ್ಣುವಿನ ಕೃಪೆಯಿಂದ ಪ್ರಹ್ಲಾದನು ಕೂದಲೂ ಕೊಂಕದೇ ಪಾರಾದರೆ, ಹೋಲಿಕಾಳೇ ಅಗ್ನಿಯಲ್ಲಿ ಸುಟ್ಟುಹೋದಳು! ಅವಳ ವರ ಅವಳಿಗೇ ತಿರುಗಿಬಿತ್ತು! ಇದರದೇ ಇನ್ನೊಂದು ಕಥೆಯ ಪ್ರಕಾರ, ಹೋಲಿಕಾ ಒಂದು ಮಾಯಾ ಹೊದಿಕೆಯನ್ನು ಹೊದ್ದುಕೊಂಡಿದ್ದಳು. ಅದು ಅವಳನ್ನು ಬೆಂಕಿಯು ಸುಡದಂತೆ ರಕ್ಷಿಸುತ್ತಿತ್ತು. ಆಗ ಗಾಳಿಯು ಬೀಸಿ, ಅವಳ ಹೊದಿಕೆ ಹಾರಿ ಪ್ರಹ್ಲಾದನ ಮೇಲೆ ಬಿದ್ದಿತು. ಅದರಿಂದ ಅವನು ಸುಡದೇ ಅವಳೇ ಸುಟ್ಟುಹೋದಳು! ಈ ಘಟನೆಯನ್ನು ನೆನಪಿಸಿಕೊಳ್ಳಲು ಹೋಲಿಕಾದಹನ ಎಂಬ ಆಚರಣೆಯಲ್ಲಿ ಹಳೆಯ ಕಟ್ಟಿಗೆ, ಎಲೆಗಳು ಇತ್ಯಾದಿಗಳನ್ನು ಹಾಕಿ ಬೆಂಕಿ ಹಾಕುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಹೋಲಿಕಾಳ ಬೊಂಬೆ ಮಾಡಿ ದಹಿಸುತ್ತಾರೆ ಮತ್ತು ಅನಂತರ, ಹೋಲಿಕಾಳನ್ನು ಪೂಜಿಸುತ್ತಾರೆ ಕೂಡ. ಇದಕ್ಕೆ ಕಾರಣವೆಂದರೆ,  ದುಷ್ಟರು ಸಾಧುಗಳ ಸಂಪರ್ಕಕ್ಕೆ ಬಂದಮೇಲೆ ಅವರೂ ಸಾಧುಗಳಾಗುತ್ತಾರೆ. ಹೋಲಿಕಾಳು ಪ್ರಹ್ಲಾದನ ಸಂಪರ್ಕಕ್ಕೆ ಬಂದು ಸುಟ್ಟು ಸತ್ತ ಬಳಿಕ, ಅವಳಿಗೂ ಮುಕ್ತಿ ಸಿಕ್ಕಿತು. ಹಾಗಾಗಿ ಅವಳನ್ನು ಸುಟ್ಟು ಪುನಃ ಪೂಜಿಸುವ ಅರ್ಥ, ದುಷ್ಟತನ ದಮನವಾಗಿ ಒಳ್ಳೆಯದು ಉಳಿಯಲಿ ಎಂಬುದು.ಅಂತೆಯೇ ಇದು, ಹಳೆಯ, ಜೀರ್ಣವಾದುದೆಲ್ಲಾ ಹೋಗಿ ಹೊಸದು ಬರಲಿ ಎಂಬ ಸೃಷ್ಟಿ, ಸ್ಥಿತಿ, ಲಯಗಳ ತತ್ವವೇ ಆಗಿರುತ್ತದೆ.
     ಈ ದಿನವೇ ಶಿವನು ಕಾಮದೇವನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟನೆಂಬ ಕಥೆಯಿದೆ. ಶಿವನ ಪುತ್ರನಿಂದಲೇ ತನಗೆ ಮರಣ ಬರಬೇಕೆಂದು ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ವರ ಪಡೆದು ಲೋಕಕಂಟಕನಾಗಿದ್ದನು. ಶಿವನ ಪತ್ನಿ ಸತಿಯು ತನ್ನ ತಂದೆ ದಕ್ಷನಿಂದ ಶಿವನಿಗೆ ಅವಮಾನವಾಯಿತೆಂದು ಯೋಗಾಗ್ನಿಯಿಂದ ಭಸ್ಮಗೊಂಡಿದ್ದಳು. ಹೆಂಡತಿಯಿಲ್ಲದೇ ಮಗನು ಹೇಗೆ ಹುಟ್ಟುವನೆಂಬ ತರ್ಕದಿಂದ ತಾರಕಾಸುರನು ಶಿವನ ಮಗನಿಂದಲೇ ಮರಣ ಬರಲೆಂದು ವರ ಪಡೆದಿದ್ದನು. ಇದರಿಂದ ತನಗೆ ಮರಣವೇ ಇಲ್ಲವೆಂದು ಅವನು ಬಗೆದಿದ್ದನು. ಈಗ ಸತಿಯು ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಅವನ ಮೇಲಿನ ಪ್ರೇಮದಿಂದ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಶಿವನಾದರೋ ಪ್ರೀತಿ, ಪ್ರೇಮಗಳಿಂದ ದೂರವಾಗಿ ತಪಸ್ಸಿನಲ್ಲಿ ಮುಳುಗಿದ್ದನು. ಹಾಗಾಗಿ ಅವನನ್ನು ತಪೋವಿಮುಖನನ್ನಾಗಿಸಿ ಪಾರ್ವತಿಯಲ್ಲಿ ಪ್ರೇಮವುಂಟಾಗಿ ಅವಳನ್ನು ವರಿಸಿದರೆ, ಅವನಿಗೆ ಮಗನು ಹುಟ್ಟಿ ಅವನು ತಾರಕಾಸುರನನ್ನು ಸಂಹರಿಸುತ್ತಾನೆಂದು ದೇವತೆಗಳು ಬ್ರಹ್ಮನೊಂದಿಗೆ ಸಮಾಲೋಚಿಸಿ, ಅವನ ಆಣತಿಯಂತೆ ಶಿವನನ್ನು ತಪೋವಿಮುಖನನ್ನಾಗಿಸಲು ಕಾಮದೇವನನ್ನು ಕಳಿಸಿದರು. ದೇವಕಾರ್ಯಕ್ಕಾಗಿ ಕಾಮದೇವನು ಹೋಗಿ ಶಿವನ ಮೇಲೆ ಹೂಬಾಣ ಬಿಡಲು, ಒಂದು ಕ್ಷಣ ವಿಚಲಿತನಾದ ಶಿವನು ಕಾಮದೇವನ ಮೇಲೆ ಕುಪಿತಗೊಂಡು ತನ್ನ ಮೂರನೆಯ ಕಣ್ಣಿನ ಅಗ್ನಿಯಿಂದ ಕಾಮನನ್ನು ಸುಟ್ಟು ಹೊರಟುಹೋದನು! ಆಗ ಕಾಮನ ಪತ್ನಿ ರತಿಯು ಸಾಯಲೆಂದು ಹೊರಡಲು, ಶಿವನು ಪಾರ್ವತಿಯನ್ನು ವರಿಸಿದಾಗ ಕಾಮನು ಪುನಃ ಜೀವಂತನಾಗುತ್ತಾನೆ ಎಂಬ ಅಶರೀರವಾಣಿಯಾಯಿತು! ಅನಂತರ, ಪಾರ್ವತಿಯು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ವರಿಸಲು, ಕಾಮನು ಶಿವನ ದಯೆಯಿಂದ ಜೀವಂತಗೊಂಡನು. ಆದರೆ ಅವನು ದೇಹವಿಲ್ಲದೇ ಅನಂಗನೆನಿಸಿದನು ಹಾಗೂ ರತಿಯು ಬಯಸಿದಾಗ ಅವಳಿಗೆ ಮಾತ್ರ ಕಾಣುವಂತಾದನು. ಇದರ ಒಂದು ಸಂದೇಶವೇನೆಂದರೆ, ಕಾಮವು ಆಂತರ್ಯದಲ್ಲಿರಬೇಕು, ನಮ್ಮ ಬಯಕೆ ಅಥವಾ ರತಿಯನ್ನು ತೀರಿಸುವಂತಿದ್ದರೆ ಸಾಕು, ಎಲ್ಲರಿಗೂ ಕಾಣಬೇಕಿಲ್ಲ ಎಂಬುದು. ಎಲ್ಲರಿಗೂ ಕಾಮವು ಕಾಣಬೇಕೆಂದಾಗ ಅದು ಕಲೆಯಾಗಿರಬೇಕು. ಈ ಕಥೆಯನ್ನು ನೆನಪಿಸಿಕೊಳ್ಳಲು ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡುತ್ತಾರೆ, ಹಾಗೂ ಮರುದಿನ, ಕಾಮನ ಪೂಜೆ ಮಾಡುತ್ತಾರೆ. ಇದರ ತಾತ್ಪರ್ಯವೆಂದರೆ, ಕೆಟ್ಟ ಆಸೆಗಳೆಲ್ಲವೂ ಹೋಗಿ ಒಳ್ಳೆಯ ಆಸೆಗಳು ಉಳಿಯಲಿ ಎಂಬುದು.
      ಸಾಮಾನ್ಯವಾಗಿ ಕೃಷ್ಣನು ರಾಧೆ ಮತ್ತು ಇತರ ಗೋಪಿಕಾಸ್ತ್ರೀಯರೊಂದಿಗೆ ಓಕುಳಿಯಾಡುವ ಚಿತ್ರಗಳನ್ನು ನೋಡುತ್ತೇವೆ. ಈ ವಿಷಯದಲ್ಲಿ ಒಂದು ಸ್ವಾರಸ್ಯಕರ ಕಥೆ ಮತ್ತು ಆಚರಣೆಯಿದೆ. ಕೃಷ್ಣನು ನಂದಗಾಂವ್ ಅಥವಾ ವೃಂದಾವನದಲ್ಲಿ ವಾಸಿಸುತ್ತಿದ್ದನು. ರಾಧೆಯು ನಂದಗಾಂವ್ ಗೆ ಸನಿಹವೇ ಇರುವ ಬರ್ಸಾನಾ ಎಂಬ ಹಳ್ಳಿಯಲ್ಲಿದ್ದಳು.‌ ಕೃಷ್ಣನು ಹೋಳಿಯ ದಿನ, ಬರ್ಸಾನಾಗೆ ಹೋಗಿ ರಾಧೆ ಮತ್ತು ಅವಳ ಸಖಿಯರ ಮೇಲೆ ಬಣ್ಣ ಎರಚಿ ತುಂಟಾಟವಾಡಲು, ಅವಳೂ ಅವಳ ಸಖಿಯರೂ ಅವನಿಗೆ ಕೋಲುಗಳಲ್ಲಿ ಹೊಡೆದು ಅವನನ್ನು ಓಡಿಸುತ್ತಿದ್ದರು! ಇದನ್ನು ಲಾಠ್ ಮಾರ್ ಹೋಲಿ ಎಂದು ಈಗಲೂ ಆಚರಿಸುತ್ತಾರೆ. ನಂದಗಾಂವ್ ನ ಹುಡುಗರು ಕೃಷ್ಣನಂತೆ ಬರ್ಸಾನಾಗೆ ಹೋಗಿ ಅಲ್ಲಿನ ಹುಡುಗಿಯರೊಂದಿಗೆ ಓಕುಳಿಯಡುತ್ತಾರೆ. ಆ ಹುಡುಗಿಯರು, ರಾಧೆ ಮತ್ತು ಅವಳ ಸಖಿಯರಂತೆ ಅವರನ್ನು ಕೋಲುಗಳಿಂದ ಹೊಡೆಯುತ್ತಾರೆ. ಆ ಹುಡುಗರು ತಮ್ಮನ್ನು ರಕ್ಷಿಸಿಕೊಳ್ಳಲು ಗುರಾಣಿಗಳನ್ನು ಒಡ್ಡುತ್ತಾರೆ. ಹೀಗೆ ಇದೊಂದು ವಿನೋದೋತ್ಸವ. 
      ಶ್ರೀ ಕೃಷ್ಣನ ಮಹಾಭಕ್ತರಾದ ಚೈತನ್ಯ ಮಹಾಪ್ರಭುಗಳು ಜನಿಸಿದ್ದು ಹೋಳಿ ಹುಣ್ಣಿಮೆಯಂದು. ಬಂಗಾರ ವರ್ಣದಿಂದ ಕೂಡಿದ್ದ ಚೈತನ್ಯರನ್ನು ಗೌರಾಂಗ ಎಂದೂ ಕರೆಯುತ್ತಾರೆ. ಹಾಗಾಗಿ ಹೋಳಿ ಹುಣ್ಣಿಮೆಯಂದು ಗೌರಪೂರ್ಣಿಮಾ ಎಂದೂ ಕರೆಯುತ್ತಾರೆ. ಬಂಗಾಳದಲ್ಲಿ ಹರಿನಾಮ ಸಂಕೀರ್ತನೆಯನ್ನು ಪ್ರಚುರಗೊಳಿಸಿದ ಚೈತನ್ಯರನ್ನು ರಾಧಾ, ಕೃಷ್ಣ ತತ್ವಗಳೆರಡೂ ಸೇರಿ ಆಗಿರುವ ಅವತಾರ ಎಂದು ಬಂಗಾಳಿಗರು ಪರಿಗಣಿಸುತ್ತಾರೆ. 
      ಅಂತೆಯೇ, ಹೋಳಿ ಹಬ್ಬದಂದು, ರಾಧಾ ಕೃಷ್ಣರ ದಿವ್ಯ ಪ್ರೇಮವನ್ನು ಆಚರಿಸಲು ಅವರಿಬ್ಬರ ವಿಗ್ರಹಗಳನ್ನು ಸುಂದರವಾದ ಉಯ್ಯಾಲೆಯಲ್ಲಿ ಇರಿಸಿ ತೂಗುತ್ತಾರೆ. ಇದನ್ನು ಡೋಲೋತ್ಸವ ಎಂದು ಕರೆಯುತ್ತಾರೆ, ಹಾಗೂ ಇದು ಬಂಗಾಳ, ಅಸ್ಸಾಂ, ಒಡಿಶಾ, ಮೊದಲಾದ ರಾಜ್ಯಗಳಲ್ಲಿ, ವೈಷ್ಣವ ಸಂಪ್ರದಾಯಗಳಲ್ಲಿ ಪ್ರಚಲಿತವಿದೆ.
       ಹಿಂದೆ, ಪ್ರಾಚೀನ ಭಾರತದಲ್ಲಿ ವಸಂತಕಾಲದ ಆಗಮನವನ್ನು ಸಂಭ್ರಮಿಸಲು, ವಸಂತೋತ್ಸವ ಎಂದು ಅನೇಕ ದಿನಗಳ ಕಾಲ, ಸಾಹಿತ್ಯ, ಸಂಗೀತ, ನಾಟಕ, ಮೊದಲಾದ ಅನೇಕ ಕಲೆಗಳನ್ನುಳ್ಳ, ತಿಂಡಿತಿನಿಸುಗಳು, ಪ್ರೀತಿ ಪ್ರೇಮಗಳ ವೈಭವೀಕರಣಗಳನ್ನುಳ್ಳ  ಹಲವಾರು ಸ್ವಾರಸ್ಯಕರ ಹಬ್ಬ, ಆಚರಣೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಈಗ ಹೋಳಿಯೊಂದೇ ಉಳಿದಿದೆ.
      ಹೀಗೆ ಹೋಳಿಯ ವಿಷಯದಲ್ಲಿ ಅನೇಕ ಸ್ವಾರಸ್ಯಕರ ಕಥೆಗಳಿವೆ, ಹಾಗೂ ವಿವಿಧ ಆಚರಣೆಗಳು ಬೆಸೆದುಕೊಂಡಿವೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿ ಅನೇಕ ವೈವಿಧ್ಯಮಯ ಕಥೆಗಳನ್ನೂ ಆಚರಣೆಗಳನ್ನೂ ನೋಡಬಹುದು.
     


ಗುರುವಾರ, ಮಾರ್ಚ್ 5, 2026

ಸುಂದರೀಶತಕ -೨

ಸಹೃದಯಹೃದಯಗ್ರಾಹ್ಯಂ ಮದನಮಹೀಪಾಲಶಾಸನಾದೇವ /
ವಿರಚಯತಿ ಸುಂದರೀಶತಮುತ್ಪ್ರೇಕ್ಷಾವಲ್ಲಭ: ಸುಕವಿ: //
    
      ಸಹೃದಯ ರಸಿಕರಿಗೆ ಹೃದಯಗ್ರಾಹ್ಯವಾದ ಈ ಸುಂದರೀಶತಕವನ್ನು ಸುಕವಿ ಉತ್ಪ್ರೇಕ್ಷಾವಲ್ಲಭನು ಮಹಾರಾಜ ಮದನನ ಆದೇಶದಿಂದಲೇ ರಚಿಸುತ್ತಿದ್ದಾನೆ.

     ಸುಕವಿ ಉತ್ಪ್ರೇಕ್ಷಾವಲ್ಲಭನು ಈ ಸುಂದರೀಶತಕವನ್ನು ಸಾಕ್ಷಾತ್ ಮನ್ಮಥನ ಆದೇಶದಿಂದಲೇ ರಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆ ಮನ್ಮಥನನ್ನು ಮಹೀಪಾಲ, ಅಂದರೆ ಭೂಪಾಲ, ಮಹಾರಾಜನೆಂದು ಕರೆದಿದ್ದಾನೆ. ತನ್ನ ಪಂಚ ಹೂಬಾಣಗಳಾದ ಅರವಿಂದ ( ಕಮಲ ಪುಷ್ಪ), ಅಶೋಕ, ಚೂತ (ಮಾವಿನ ಹೂವು), ನವಮಲ್ಲಿಕಾ (ಮಲ್ಲಿಗೆ ಹೂವು), ನೀಲೋತ್ಪಲ ( ಕನ್ನೈದಿಲೆ) ಗಳನ್ನು ಬಿಟ್ಟು ಸ್ತ್ರೀ, ಪುರುಷರನ್ನು ಪ್ರೇಮದಲ್ಲಿ ಬೀಳಿಸಿ ಇಡೀ ಭೂಮಿಯನ್ನು ಪ್ರೇಮಮಯವನ್ನಾಗಿ ಮಾಡುವ ಮನ್ಮಥನು ಭೂಮಿಯನ್ನೇ ಗೆದ್ದ ಮಹಾರಾಜನಲ್ಲದೇ ಇನ್ನೇನು?

ಬುಧವಾರ, ಮಾರ್ಚ್ 4, 2026

ಪೌರಾಣಿಕ ಸ್ವಾರಸ್ಯಗಳು - ಭಂಗಾಸ್ವನನ ಕಥೆ

ಪೌರಾಣಿಕ ಸ್ವಾರಸ್ಯಗಳು 


ಸ್ತ್ರೀ,ಪುರುಷರ ಸಮಾಗಮದಲ್ಲಿ ಯಾರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ? 

ಭಂಗಾಸ್ವನನ ಕಥೆ 

     ಸ್ತ್ರೀ ಪುರುಷರು ಸಮಾಗಮ ಮಾಡಿದಾಗ ಹೆಚ್ಚು ಸುಖ ಯಾರಿಗೆ ಸಿಗುತ್ತದೆ? ಈ ಪ್ರಶ್ನೆಯನ್ನು ಕೇಳಿದ್ದು ಯುಧಿಷ್ಠಿರ. ಪ್ರಶ್ನೆ ಕೇಳಿದ್ದು ಶರಶಯ್ಯೆಯಲ್ಲಿದ್ದ ಭೀಷ್ಮರನ್ನು. ಮರಣವನ್ನು ಎದುರುನೋಡುತ್ತಾ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಹೋಗಿಬಿಟ್ಟರೆ ಅವರ ಅಪಾರ ಜ್ಞಾನರಾಶಿ ಅವರೊಂದಿಗೇ ಹೊರಟುಹೋಗುತ್ತದೆಯಲ್ಲಾ ಎಂದು ಯೋಚಿಸಿ ಶ್ರೀಕೃಷ್ಣನು ಅವರಿಂದ ಜ್ಞಾನೋಪದೇಶ ಪಡೆಯಲೆಂದು ಪಾಂಡವರನ್ನು ಅವರ ಬಳಿಗೆ ಕರೆದೊಯ್ಯುತ್ತಾನೆ. ಆಗ ಯುಧಿಷ್ಠಿರನು ಕೇಳಿದ ಹಲವಾರು ಪ್ರಶ್ನೆಗಳನ್ನು ಭೀಷ್ಮರು ಉತ್ತರಿಸುತ್ತಾರೆ. ಆಗ ರಾಜನೀತಿ, ಆಧ್ಯಾತ್ಮಿಕ ವಿಚಾರಗಳು, ತತ್ವ, ಭಕ್ತಿ, ದಾನದ ಮಹತ್ವ, ಮೊದಲಾದ ಹಲವಾರು ವಿಚಾರಗಳು ಬರುತ್ತವೆ. ಈ ವಿಷಯಗಳು ಶಾಂತಿಪರ್ವ ಮತ್ತು ಅನುಶಾಸನ ಪರ್ವಗಳಲ್ಲಿ ತುಂಬಿಕೊಂಡಿವೆ. ಶಾಂತಿಪರ್ವ ಇಂಥ ವಿಚಾರಗಳು ಹಾಗೂ ಹಲವಾರು ಕಥೆಗಳಿರುವ ಬಹು ದೊಡ್ಡ ಪರ್ವ. ಆದರೆ ಮಹಾಭಾರತದಂಥ ಗ್ರಂಥದಲ್ಲಿ ಮೇಲೆ ಹೇಳಿದ ವಿಷಯವೂ ಇದೆಯೆಂದು ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ಮಹಾಭಾರತವು ಆರಂಭದಲ್ಲೇ ಹೇಳುತ್ತದೆ -

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
   ' ಎಲೈ ಭರತರ್ಷಭ! ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಲ್ಲಿ ಈ ಗ್ರಂಥದಲ್ಲಿರುವುದೇ ಇತರ ಕಡೆಗಳಲ್ಲಿದೆ. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ!' 
      ಹಾಗಾಗಿ ಮಹಾಭಾರತದಲ್ಲಿ ಕಾಮದ ವಿಷಯವೂ ಚರ್ಚಿತವಾಗಿದೆ. ಭೀಷ್ಮರಂಥ ಆಜನ್ಮ ಬ್ರಹ್ಮಚಾರಿಗಳಿಗೆ ಇದೇನು ಗೊತ್ತಿರುತ್ತದೆ ಎಂದು ಕೇಳಬಹುದು. ಆದರೆ ಪ್ರಾಚೀನ ಭಾರತದಲ್ಲಿ ಒಂದು ವೃತ್ತಿ ಅಥವಾ ಒಂದು ಬದುಕಿನ ರೀತಿಯಲ್ಲಿ ಇರುವವರಿಗೆ ಇತರ ವಿಚಾರಗಳ ಬಗ್ಗೆ ತಿಳಿದಿರಬಾರದೆಂದೇನೂ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರಾದ ದ್ರೋಣಾಚಾರ್ಯರು ಕ್ಷಾತ್ರವಿದ್ಯೆಯನ್ನು ತಿಳಿದಿದ್ದರಲ್ಲದೇ ಅದನ್ನು ಪಾಂಡವ, ಕೌರವರಿಗೆ ಕಲಿಸಿದರು ಹಾಗೂ ಸ್ವಯಂ ಮಹಾವೀರರಾಗಿದ್ದರು ಮತ್ತು ಯುದ್ಧ ಮಾಡಿದರು ಕೂಡ! ಕಾಮಸೂತ್ರ ಬರೆದ ವಾತ್ಸ್ಯಾಯನ ಕೂಡ ತಾನು ಬ್ರಹ್ಮಚರ್ಯೆಯಲ್ಲಿರುವಾಗ ಈ ಗ್ರಂಥವನ್ನು ರಚಿಸಿದೆ ಎಂದು ಹೇಳಿಕೊಂಡಿದ್ದಾನೆ. ಪ್ರಹ್ಲಾದನು ಬಾಲ್ಯದಲ್ಲೇ ಮಹಾಭಕ್ತನೂ ಜ್ಞಾನಿಯೂ ಆಗಿದ್ದ! ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ.
     ಸ್ತ್ರೀ, ಪುರುಷರು ಸಂಭೋಗಿಸಿದಾಗ ಯಾರಿಗೆ ಹೆಚ್ಚು ಸುಖ ಸಿಗುತ್ತದೆ? ಇದೊಂದು ಚರ್ಚಾಸ್ಪದ ವಿಷಯ. ಇದನ್ನು ಭೀಷ್ಮರು ಒಂದು ಕಥೆಯ ಮೂಲಕ ಉತ್ತರಿಸುತ್ತಾರೆ. ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುತ್ತದೆ. ಈಗ ಈ ಸ್ವಾರಸ್ಯಕರ ಕಥೆಯನ್ನು ನೋಡೋಣ.
      ಹಿಂದೆ, ಭಂಗಾಸ್ವನನೆಂಬ ರಾಜನಿದ್ದನು. ಪರಮಧಾರ್ಮಿಕನಾಗಿದ್ದ ಅವನಿಗೆ ಅನೇಕ ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಹಾಗಾಗಿ ಅವನು ಪಂಡಿತರಲ್ಲಿ ಸಮಾಲೋಚಿಸಿ, ಪುತ್ರ ಪ್ರಾಪ್ತಿಗಾಗಿ ಅಗ್ನಿಷ್ಟುತವೆಂಬ ಯಜ್ಞವನ್ನು ಮಾಡಿದನು. ಅದರ ಪ್ರಭಾವದಿಂದ ಅವನಿಗೆ ನೂರು ಪುತ್ರರು ಜನಿಸಿದರು. ಆದರೆ ಈ ಯಜ್ಞದ ಒಂದು ವೈಶಿಷ್ಟ್ಯವೆಂದರೆ ಇದರಲ್ಲಿ ಇಂದ್ರನಿಗೆ ಆಹ್ವಾನವಿರಲಿಲ್ಲ! ಇದರಿಂದ ಇಂದ್ರನು ಈ ಯಜ್ಞವನ್ನು ದ್ವೇಷಿಸುತ್ತಿದ್ದನು. ತನಗೆ ಅಪ್ರಿಯವಾದ ಯಜ್ಞ ಮಾಡಿದ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಿದನು. ಅದಕ್ಕಾಗಿ ಅವನು ಭಂಗಾಸ್ವನನಲ್ಲಿ ಏನಾದರೂ ದೋಷವನ್ನು ಹುಡುಕಿದನು. ಆದರೆ ಅವನಿಗೆ ಯಾವ ದೋಷವೂ ಕಾಣಲಿಲ್ಲ. 
     ಹೀಗಿರಲು, ಒಂದು ದಿನ ಭಂಗಾಸ್ವನನು ಬೇಟೆಯಾಡಲು ಕಾಡಿಗೆ ಹೋದನು. ಆಗ ಇಂದ್ರನು ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ರಾಜನ ಮನಸ್ಸಿಗೆ ಭ್ರಮೆಯಾವರಿಸಿದನು! ಭ್ರಮೆಗೊಳಗಾದ ರಾಜನು ಕುದುರೆಯ ಮೇಲೆ ದೌಡಾಯಿಸುತ್ತಾ ತನ್ನ ಪರಿವಾರದಿಂದ ಬೇರೆಯಾಗಿ ಎಲ್ಲೆಲ್ಲೋ ಸುತ್ತಿ ದಟ್ಟ ಅರಣ್ಯದ ಮಧ್ಯೆ ಸಿಲುಕಿಕೊಂಡನು! ಅವನೂ ಅವನ ಕುದುರೆಯೂ ಹಸಿವು, ಬಾಯಾರಿಕೆಗಳಿಂದ ಬಳಲಿದರು! ಆಗ ಇಂದ್ರನು ಸ್ವಲ್ಪ ದೂರದಲ್ಲೇ ಒಂದು ಮಾಯಾ ಸರೋವರವನ್ನು ನಿರ್ಮಿಸಿದನು! ಭಂಗಾಸ್ವನನು ಸುತ್ತಲೂ ಕಣ್ಣಾಡಿಸುತ್ತಾ ಆ ಸರೋವರವನ್ನು ನೋಡಿ ಸಂತೋಷಗೊಂಡನು! ಕೂಡಲೇ ಆ ಸರೋವರದ ಬಳಿಗೆ ಹೋಗಿ ಸ್ವಲ್ಪ ನೀರು ಕುಡಿದು ಕುದುರೆಗೂ ಕುಡಿಸಿ ಅದರ ಮೈ ತೊಳೆದು ಅದನ್ನು ಒಂದು ಮರಕ್ಕೆ ಕಟ್ಟಿ ತಾನು ಆ ಸರೋವರದಲ್ಲಿ ಮುಳುಗಿದನು. ಆದರೆ ಅವನು ಮೇಲೆದ್ದಾಗ ಅವನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಇದ್ದಕ್ಕಿದ್ದಂತೆ ಅವನು ಹೆಣ್ಣಾಗಿಬಿಟ್ಟಿದ್ದನು! 
    ಆಶ್ಚರ್ಯ, ದು:ಖಗಳಿಗೊಳಗಾದ ರಾಜನು," ಅಯ್ಯೋ! ಇದೇನು ನನ್ನ ದುರವಸ್ಥೆ! ನಾನೇಕೆ ಹೀಗೆ ಸ್ತ್ರೀಯಾದೆ? ಈಗ ಈ ಕುದುರೆಯನ್ನು ಹೇಗೆ ಹತ್ತಲಿ? ಮೃದುತ್ವ, ಕೃಶತ್ವ, ವ್ಯಾಕುಲತೆಗಳು ಹೆಣ್ಣಿನ ಗುಣಗಳೆಂದೂ ಕಾಠಿಣ್ಯ, ಪರಾಕ್ರಮಗಳು ಗಂಡಿನ ಗುಣಗಳೆಂದೂ ಶಾಸ್ತ್ರಜ್ಞರು ಹೇಳುತ್ತಾರೆ! ಹೀಗಿರುವಾಗ, ಪುರುಷತ್ವವನ್ನೇ ಕಳೆದುಕೊಂಡಿರುವ ನಾನು ರಾಜ್ಯವನ್ನು ಹೇಗೆ ಆಳಲಿ? ನಾನಿನ್ನು ರಾಜ್ಯವನ್ನು ಆಳಲಾರೆ ಎಂದು ಎಲ್ಲರಿಗೂ ಹೇಳಿ ಕಾಡಿಗೆ ಹಿಂದಿರುಗಿ ತಪಸ್ಸು ಮಾಡುತ್ತೇನೆ!" ಎಂದು ಯೋಚಿಸಿ ಕಷ್ಟಪಟ್ಟು ಕುದುರೆ ಹತ್ತಿ ತನ್ನ ರಾಜ್ಯಕ್ಕೆ ಹೋದನು. ತನ್ನ ಪತ್ನೀಪುತ್ರರಿಗೂ ಮಂತ್ರಿಗಳಿಗೂ ತಾನು ಭಂಗಾಸ್ವನ ರಾಜನೆಂದು ಹೇಳಿದರೂ ಅವರಾರೂ ನಂಬಲಿಲ್ಲ. ಆಗ ಅವನು ತನ್ನ ಕುಲ,ಗೋತ್ರಾದಿ ಗುರುತುಗಳನ್ನು ನಿಖರವಾಗಿ ಹೇಳಲು ಅವರು ನಂಬಿ ಅವನ ದು:ಸ್ಥಿತಿಗಾಗಿ ಮರುಗಿದರು. ಆಗ ಅವನು ತನ್ನ ನೂರು ಪುತ್ರರಿಗೆ ರಾಜ್ಯವನ್ನೊಪ್ಪಿಸಿ, ಪ್ರೀತಿ,ಸೌಹಾರ್ದತೆಗಳಿಂದ ಸುಖವಾಗಿ ಬಾಳಲು ಹೇಳಿ ಕಾಡಿಗೆ ಹೊರಟುಹೋದನು.
      ಈಗ ಭಂಗಾಸ್ವನಿಯು ಕಾಡಿನಲ್ಲಿ ತಪಸ್ಸು ಮಾಡಲು ಪ್ರಯತ್ನಿಸಿದಳು. ಆದರೆ ಸ್ತ್ರೀಯಾದ ಅವಳ ಅಂತ:ಕರಣ ಬದಲಾಗಿದ್ದು ಅವಳಿಗೆ ಆಗಲಿಲ್ಲ. 
       ಹೀಗಿರಲು, ಅವಳು ಒಂದು ಆಶ್ರಮವನ್ನು ಕಂಡು ಅಲ್ಲೊಬ್ಬ ಋಷಿಯನ್ನು ನೋಡಿದಳು. ಅವನಿಗೆ ತನ್ನ ಪೂರ್ವ ಕಥೆಯನ್ನು ಹೇಳಿ ಅವನ ಸೇವೆ ಮಾಡಲು ಅನುಮತಿ ಬೇಡಿದಳು. ಅದಕ್ಕೆ ಅವನು ಒಪ್ಪಲು, ಅವನ ಸೇವೆ ಮಾಡುತ್ತಾ ಅವಳು ತಾನೂ ಅವನೊಂದಿಗೆ ತಪಸ್ಸು ಮಾಡತೊಡಗಿದಳು. ಕ್ರಮೇಣ ಅವರಿಬ್ಬರಿಗೂ ಪ್ರೀತಿ ಬೆಳೆದು ಅವರು ಸಮಾಗಮ ಮಾಡಿದರು! ಇದರಿಂದ ಅವಳು ಗರ್ಭಿಣಿಯಾಗಿ ನೂರು ಪುತ್ರರಿಗೆ ಜನ್ಮವಿತ್ತಳು! 
       ಭಂಗಾಸ್ವನಿಯ ಮಕ್ಕಳು ದೊಡ್ಡವರಾಗಲು ಅವಳು ಅವರನ್ನು ತನ್ನ ಹಿಂದಿನ ರಾಜ್ಯಕ್ಕೆ ಕರೆದೊಯ್ದು ತನ್ನ ಹಿಂದಿನ ಮಕ್ಕಳಿಗೆ ಪರಿಚಯಿಸುತ್ತಾ," ಮಕ್ಕಳೇ! ಇವರೆಲ್ಲರೂ ನನ್ನ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳು! ಹಾಗಾಗಿ ನಿಮ್ಮ ತಮ್ಮಂದಿರಾಗುತ್ತಾರೆ! ನೀವು ಇವರೊಂದಿಗೆ ರಾಜ್ಯವನ್ನು ಹಂಚಿಕೊಂಡು ಶಾಂತಿ, ಸೌಹಾರ್ದತೆಗಳಿಂದ ಸುಖವಾಗಿ ಬಾಳಿ!" ಎಂದು ಹೇಳಿ ಹೊರಟಳು.ಅದಕ್ಕೆ ಆ ಮೊದಲಿನ ಮಕ್ಕಳು ಒಪ್ಪಿ ತಮ್ಮ ತಮ್ಮಂದಿರೊಡನೆ ರಾಜ್ಯವನ್ನು ಹಂಚಿಕೊಂಡು ಸುಖವಾಗಿರತೊಡಗಿದರು.
    ಇದರಿಂದ ಇಂದ್ರನಿಗೆ ಕಸಿವಿಸಿಯಾಯಿತು! ಅವನು ಯೋಚಿಸಿದನು," ನಾನು ಈ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳಲು ಅವನನ್ನು ಸ್ತ್ರೀಯಾಗಿ ಪರಿವರ್ತಿಸಿದರೆ ಅದು ಅವನಿಗೆ ಅನುಕೂಲವೇ ಆಯಿತು! ಅವನಿಗೆ ಇನ್ನೂ ನೂರು ಮಕ್ಕಳಾದರು! ಈಗ ಅವನಿಗೆ ದುಃಖವಾಗುವ ಹಾಗೆ ಏನಾದರೂ ಕಾರ್ಯ ಮಾಡಬೇಕು!" 
     ಹೀಗೆ ಯೋಚಿಸಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಂಗಾಸ್ವನನ ಮೊದಲ ನೂರು ಮಕ್ಕಳ ಬಳಿಗೆ ಹೋಗಿ ಹೇಳಿದ," ರಾಜಪುತ್ರರೇ! ನೀವು ಭಂಗಾಸ್ವನ ರಾಜನ ಮಕ್ಕಳು! ಆದರೆ ಆ ಇನ್ನೊಂದು ಗುಂಪಿನ ನೂರು ಯಾರೋ ತಪಸ್ವಿಯ ಪುತ್ರರು! ಒಬ್ಬನೇ ಕಶ್ಯಪನ ಮಕ್ಕಳಾದರೂ ದೇವತೆಗಳೂ ರಾಕ್ಷಸರೂ ಸದಾ ಸ್ವರ್ಗಕ್ಕಾಗಿ ಕಾದಾಡುತ್ತಲೇ ಇರುತ್ತಾರೆ! ಇನ್ನು ನೀವೇಕೆ ಪಿತೃಸಂಬಂಧವಾದ ಈ ರಾಜ್ಯವನ್ನು ಆ ಇತರರೊಂದಿಗೆ ಹಂಚಿಕೊಳ್ಳಬೇಕು? ನಾಳೆ ಅವರು ಈ ರಾಜ್ಯಕ್ಕೆ ತಾವೇ ವಾರಸುದಾರರೆಂದು ನಿಮ್ಮನ್ನು ಹೊರಗಟ್ಟಿದರೆ? ಅದಕ್ಕೆ ಮೊದಲು ನೀವೇ ಅವರನ್ನು ಹೊರಗಟ್ಟಿ!" 
     ಇಂದ್ರನ ದುರ್ಬೋಧೆ ಅವರ ಮನಸ್ಸಿಗೆ ನಾಟಿತು! ಅವರು ತಮ್ಮ ತಮ್ಮಂದಿರೊಡನೆ ಯುದ್ಧ ಮಾಡಲು ಎರಡೂ ಗುಂಪುಗಳು ಪರಸ್ಪರ ಕಾದಾಡಿ ನಾಶಗೊಂಡವು! 
    ಈ ವಿಷಯ ಭಂಗಾಸ್ವನಿಗೆ ದೂತನೊಬ್ಬನಿಂದ ತಿಳಿದು ಅವಳು ದು:ಖಿತಳಾಗಿ ಅತ್ತು ಗೋಳಾಡತೊಡಗಿದಳು! ಆಗ ಇಂದ್ರನು ಸಮಾಧಾನಗೊಂಡು ಪುನಃ ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಏಕೆ ಗೋಳಾಡುತ್ತಿರುವೆಯೆಂದು ಕೇಳಿದನು. ಆಗ ಅವಳು ತನ್ನ ಕಥೆಯನ್ನು ಹೇಳಿಕೊಂಡಳು. ಆಗ ಇಂದ್ರನು ತನ್ನ ನಿಜರೂಪಿನಲ್ಲಿ ಕಾಣಿಸಿಕೊಂಡು ನಗುತ್ತಾ," ಭದ್ರೆ! ಈ ನಿನ್ನ ಶೋಕಕ್ಕೆ ನಾನೇ ಕಾರಣ! ಮೂರ್ಖ ರಾಜನೇ! ಹಿಂದೆ ನೀನು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಒಂದು ಯಜ್ಞ ಮಾಡಿ ಅವನಿಗೆ ಅಸಮಾಧಾನವುಂಟುಮಾಡಿದೆ! ಆ ಇಂದ್ರನು ನಾನೇ ಆಗಿದ್ದೇನೆ! ನನಗೆ ಅಪ್ರಿಯವಾದ ಯಜ್ಞ ಮಾಡಿದ ಕಾರಣ ನಿನ್ನ ಮೇಲಿನ ದ್ವೇಷದಿಂದ ನಿನಗೆ ಇಂಥ ದುರವಸ್ಥೆ ತಂದೆ!" 
      ತನ್ನ ಮುಂದೆ ನಿಂತಿರುವವನು ಇಂದ್ರನೆಂದು ತಿಳಿಯುತ್ತಲೇ ಭಂಗಾಸ್ವನಿಯು ಅವನ ಕಾಲಿಗೆ ಬಿದ್ದು ಹೇಳಿದಳು," ದೇವೇಂದ್ರ! ಆ ಯಜ್ಞವು ನಿನಗೆ ಅಪ್ರಿಯವಾದುದೆಂದು ನನಗೆ ತಿಳಿದಿರಲಿಲ್ಲ! ನಾನು ಪುತ್ರಾಪೇಕ್ಷೆಯಿಂದಷ್ಟೇ ಯಜ್ಞ ಮಾಡಿದೆ. ಆ ಯಜ್ಞದ ನಿಯಮಾನುಸಾರವಾಗಿ ಅದರಲ್ಲಿ ನಿನಗೆ ಆಹ್ವಾನವಿರಲಿಲ್ಲ ಅಷ್ಟೇ! ಆದ್ದರಿಂದ ದಯವಿಟ್ಟು ಪ್ರಸನ್ನನಾಗು! ಇದರಲ್ಲಿ ನನ್ನ ತಪ್ಪೇನೂ ಇಲ್ಲ! ತಪ್ಪೆನಿಸಿದರೆ ಮನ್ನಿಸು!" 
    ಇದನ್ನು ಕೇಳಿ ಇಂದ್ರನಿಗೆ ಕನಿಕರವುಂಟಾಯಿತು. ಆಗ ಅವನು ಹೇಳಿದನು," ಸರಿ! ಒಪ್ಪಿದೆ! ಒಂದು ವರವನ್ನು ನೀಡುತ್ತೇನೆ! ನಿನ್ನ ಒಂದು ನೂರು ಮಕ್ಕಳನ್ನು ಬದುಕಿಸುತ್ತೇನೆ! ನೀನು ಪುರುಷನಾಗಿದ್ದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ ಇಲ್ಲವೇ ಸ್ತ್ರೀಯಾದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ? ಹೇಳು!" 
    ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಸ್ತ್ರೀಯಾದಾಗ ಹುಟ್ಟಿದ ಮಕ್ಕಳೇ ಬದುಕಲಿ!" 
    "ಅದೇಕೆ?" ವಿಸ್ಮಯದಿಂದ ಕೇಳಿದ ಇಂದ್ರ.
     ಭಂಗಾಸ್ವನಿಯು ಹೇಳಿದಳು," ಸ್ತ್ರೀಯರಿಗೆ ಸಹಜವಾಗಿಯೇ ಮಕ್ಕಳೆಂದರೆ ಪ್ರೀತಿಯಿರುತ್ತದೆ! ಅದು ಅವರ ಮಕ್ಕಳೇ ಆಗಿರಬೇಕೆಂದಿಲ್ಲ! ಆದರೆ ಪುರುಷರಿಗೆ ಮಕ್ಕಳೆಂದರೆ ಅಷ್ಟು ಗಾಢ ಪ್ರೀತಿಯಿರುವುದಿಲ್ಲ! ಹೀಗಿರುವಾಗ ತಮ್ಮ ಮಕ್ಕಳೇ ಆದರೆ ಸ್ತ್ರೀಯರಿಗೆ ಇನ್ನೆಷ್ಟು ಪ್ರೀತಿಯಿರಬೇಡ? ತಾಯ್ತನದ ಸವಿಯನ್ನುಂಡಿರುವ ನನಗೆ ಅದು ಗೊತ್ತು! ಹಾಗಾಗಿ ನನಗೆ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ!" 
     ಇಂದ್ರನು ಅವಳ ಉತ್ತರದಿಂದ ಸಂತುಷ್ಟನಾಗಿ ಹೇಳಿದ," ಭದ್ರೆ! ಸತ್ಯವನ್ನೇ ಹೇಳಿದೆ! ನಿನ್ನ ಎಲ್ಲಾ ಮಕ್ಕಳನ್ನೂ ಬದುಕಿಸುತ್ತೇನೆ! ಈಗ ಇನ್ನೊಂದು ವರವನ್ನು ನೀಡುತ್ತೇನೆ! ನೀನು ಪುನಃ ಪುರುಷನಾಗಲು ಬಯಸುವೆಯಾ? ಅಥವಾ ಹೆಣ್ಣಾಗಿಯೇ ಇರಲು ಬಯಸುವೆಯಾ? ಹೇಳು!" 
    " ನಾನು ಹೆಣ್ಣಾಗಿಯೇ ಇರಲು ಬಯಸುತ್ತೇನೆ!" ಭಂಗಾಸ್ವನಿಯು ಹೇಳಿದಳು.
    " ಅದೇಕೆ?" ಆಶ್ಚರ್ಯದಿಂದ ಕೇಳಿದ ಇಂದ್ರ. 
 ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಪುರುಷನಾಗಿದ್ದಾಗ ಹಾಗೂ ಸ್ತ್ರೀಯಾಗಿದ್ದಾಗ, ಈ ಎರಡೂ ಸಂದರ್ಭಗಳಲ್ಲಿ ರತಿಸುಖವನ್ನು ಅನುಭವಿಸಿದ್ದೇನೆ! ಈ ಎರಡು ಅನುಭವಗಳಲ್ಲಿ ಸ್ತ್ರೀಯಾದಾಗ ಪಡೆದ ಅನುಭವವೇ ಹೆಚ್ಚು ಸುಖದಾಯಕವೆಂದು ಅರಿವಾಗಿದೆ! ಹಾಗಾಗಿ ನಾನು ಸ್ತ್ರೀಯಾಗಿಯೇ ಇರಲು ಇಚ್ಛಿಸುತ್ತೇನೆ!" 
     "ಭಲೆ! ಪುನಃ ನೀನು ಸತ್ಯವನ್ನೇ ಹೇಳಿರುವೆ! ಹಾಗೆಯೇ ಆಗಲಿ! ನಾನಿನ್ನು ಬರುತ್ತೇನೆ!" ಇಂದ್ರನು ಹೇಳಿ ಅದೃಶ್ಯನಾದನು.
      ಭೀಷ್ಮರು ಹೀಗೆ ಕಥೆ ಹೇಳಿ," ಹೀಗೆ ಸ್ತ್ರೀ ಪುರುಷರ ಸಮಾಗಮದಲ್ಲಿ ಸ್ತ್ರೀಗೇ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ!" ಎಂದರು.
     ಹೀಗೆ ಸ್ತ್ರೀಪುರುಷರ ಸಮಾಗಮದಲ್ಲಿ ಪುರುಷರಿಗಿಂತ ಸ್ತ್ರೀಯರಿಗೇ ಹೆಚ್ಚು ಸುಖಪ್ರಾಪ್ತಿಯಾಗುತ್ತದೆಯೆಂಬುದು ಮಹಾಭಾರತದ ಅಂಬೋಣ. ಚಾಣಕ್ಯ ನೀತಿಯ ಒಂದು ಶ್ಲೋಕ ಹೀಗಿದೆ -
    ಆಹಾರೋ ದ್ವಿಗುಣಸ್ತ್ರೀಣಾಂ ಬುದ್ಧಿಸ್ತಾಸಾಂ ಚತುರ್ಗುಣಾ /
    ಷಡ್ಗುಣೋ ವ್ಯವಸಾಯಶ್ಚ ಕಾಮಶ್ಚಾಷ್ಟಗುಣ: ಸ್ಮೃತ: // 
     ' ಸ್ತ್ರೀಯರಿಗೆ ಪುರುಷರಿಗಿಂತ ಎರಡು ಪಟ್ಟು ಆಹಾರ ಸೇವನೆ ಹೆಚ್ಚು! ಅವರ ಬುದ್ಧಿ, ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು! ಅವರ ಸಾಹಸ ಅಥವಾ ಕಾರ್ಯಕುಶಲತೆ ಆರು ಪಟ್ಟು ಹೆಚ್ಚು! ಅವರ ಕಾಮ ಎಂಟು ಪಟ್ಟು ಹೆಚ್ಚು!" 
     ಇದು ಸ್ವಲ್ಪ ಮಟ್ಟಿಗೆ ನಿಜವೆಂದು ಹೇಳಬಹುದು. ಹೆಚ್ಚು ಕೆಲಸ ಮಾಡುವುದರಿಂದ ಹಾಗೂ ಗರ್ಭಧಾರಣೆಯ ಸಮಯದಲ್ಲಿ ಹಾಗೂ ಮಕ್ಕಳಿಗೆ ಹಾಲೂಡಿಸುವ ಸಮಯದಲ್ಲಿ ಹಾಗೂ ನಿತ್ಯ ಜೀವನದಲ್ಲೂ ರಜಸ್ವಲೆಯಾದಾಗ ರಕ್ತದ ಮೂಲಕ ಹೆಚ್ಚು ಕಬ್ಬಿಣದ ಅಂಶ ಕಳೆದುಕೊಳ್ಳುವುದರಿಂದ ಸ್ತ್ರೀಯರಿಗೆ ಹೆಚ್ಚಿನ ಆಹಾರ ಸೇವನೆ ಬೇಕಾಗುತ್ತದೆ. ಪುರುಷರು ದೈಹಿಕವಾಗಿ ಹೆಚ್ಚು ಬಲಶಾಲಿಗಳಾದರೆ ಸ್ತ್ರೀಯರು ಮಾನಸಿಕವಾಗಿ ತಾಳ್ಮೆ, ಸಹನೆಗಳಿಂದ ಬಲಶಾಲಿಗಳು ಹಾಗೂ ಬುದ್ಧಿ, ಚಾತುರ್ಯಗಳನ್ನು ಹೆಚ್ಚಾಗಿ ಉಳ್ಳವರು. ಸಾಹಸ ಕಾರ್ಯಗಳಲ್ಲಿ ಹಾಗೂ ನಾಜೂಕಾಗಿ ಕೌಶಲ್ಯದಿಂದ ಕೆಲಸ ಮಾಡುವುದರಲ್ಲಿ ಸ್ತ್ರೀಯರು ಹೆಚ್ಚೇ! ಇನ್ನು ಕಾಮ, ಬಯಕೆಗಳೂ ಅವರಿಗೆ ಹೆಚ್ಚು. ಪುರುಷರಿಗಿಂತ ಚೆನ್ನಾಗಿ ಜೀವನವನ್ನು ಕಲಾತ್ಮಕವಾಗಿ ಅನುಭವಿಸಲು ಅವರಿಗೆ ಬರುತ್ತದೆ. ವೈಜ್ಞಾನಿಕವಾಗಿ ಪುರುಷರಿಗೆ ಬೇಗನೆ ಕಾಮಪ್ರಚೋದನೆಯಾಗಿ ಬೇಗನೆ ಮುಗಿದುಹೋದರೆ ಸ್ತ್ರೀಯರಿಗೆ ಅದು ನಿಧಾನವಾಗಿ ಆಗುತ್ತದೆ ಹಾಗೂ ಹೆಚ್ಚಿನ ಹೊತ್ತು ಇರುತ್ತದೆ. ಪುರುಷರಿಗಿಂತ ಸ್ತ್ರೀಯರಿಗೆ ಮಿಲನದ ಸಮಯದಲ್ಲಿ ಹೆಚ್ಚು ಬಾರಿ ಭಾವಪ್ರಾಪ್ತಿಯಾಗುತ್ತದೆ. ಹಾಗಾಗಿ ಪುರುಷರು ಸ್ತ್ರೀಯರನ್ನು ತಾಳ್ಮೆಯಿಂದ, ಪ್ರೀತಿಯಿಂದ ರಮಿಸುತ್ತಾ ನಿಧಾನವಾಗಿ ಸಂಭೋಗಿಸಿದರೆ ಆಗ ಸ್ತ್ರೀಯರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ನಿಜ. ಸ್ತ್ರೀಯರೊಂದಿಗೆ ಕೋಮಲವಾಗಿ ಶೃಂಗಾರಾತ್ಮಕವಾಗಿ ರತಿಕಲಾಪಗಳನ್ನು ನಡೆಸಿ ಅವರನ್ನು ಸುಖಗೊಳಿಸಲು ಪುರುಷರು ಪ್ರಯತ್ನಿಸಿ ಆ ಸುಖದಿಂದ ಪುರುಷರೂ ಸುಖಿಸಬೇಕು. ಅಂಥ ಪುರುಷರನ್ನು ಸ್ತ್ರೀಯರು ಮನಸಾರೆ ಪ್ರೀತಿಸುತ್ತಾರೆ. ಇದನ್ನು ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ವಿಶದವಾಗಿ ವಿವರಿಸಿದ್ದಾನೆ. ಹೀಗೆ ನಮ್ಮ ಪ್ರಾಚೀನ ಗ್ರಂಥಗಳಿಂದ ಇಂದಿನ ಜೀವನಕ್ಕೆ ಬಹಳಷ್ಟು ಪ್ರೇರಣೆ ಪಡೆಯಬಹುದು.

ಭಾನುವಾರ, ಮಾರ್ಚ್ 1, 2026

ಸುಂದರೀಶತಕ -೧

ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ವರ್ಣನೆಗಳಿಗೆ ಪ್ರಮುಖ ಸ್ಥಾನವಿದೆ. ಹಾಗಾಗಿ ಸಂಸ್ಕೃತದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಸುಕವಿ ಉತ್ಪ್ರೇಕ್ಷಾವಲ್ಲಭನು ರಚಿಸಿರುವ ಸುಂದರೀಶತಕ ಅಂಥ ಒಂದು ಶೃಂಗಾರ ಕಾವ್ಯ.

೧. ಜಯತಿ ವಿಲಾಸವತೀನಾಂ ನೇತ್ರಪ್ರಾಪ್ತಾವಲೋಕನಪ್ರಾಣ; /
ವದನೇಂದುದ್ಯುತಿಸದನ: ಸ್ಮಿತಮಾಧ್ವೀಮೇದುರೋ ಮದನ: //

ವಿಲಾಸವತಿ ಸ್ತ್ರೀಯರ ಕಟಾಕ್ಷಗಳೇ ಪ್ರಾಣವಾಗಿರುವ, ಅವರ ಮುಖಚಂದ್ರದ ( ಮುಖವೆಂಬ ಚಂದ್ರದ) ಕಾಂತಿಯೇ ಮನೆಯಾಗಿರುವ, ಅವರ ನಗುವೆಂಬ ಮಧುವಿನಿಂದ ಪ್ರವರ್ಧಿಸಿರುವ ಮದನನು ವಿಜಯಶಾಲಿಯಾಗುತ್ತಾನೆ! 
      ಮನ್ಮಥನಿಗೆ ವಿಲಾಸವತಿ ಸ್ತ್ರೀಯರ ಕಣ್ಣೋಟಗಳೇ ಪ್ರಾಣ! ಅವರ ಮುಖಚಂದ್ರದ ಕಾಂತಿಯೇ ಅವನು ವಾಸಿಸುವ ಮನೆ! ಅವರ ನಗುವೆಂಬ ಮಧುವಿನಿಂದಲೇ ಅವನು ಪ್ರವರ್ಧಿಸುತ್ತಾನೆ! ಹೀಗೆ ಸ್ತ್ರೀಯರ ಸೌಂದರ್ಯದಿಂದಲೇ ಎಲ್ಲವೂ ಆಗಿರುವ ಇಂಥ ಮನ್ಮಥನು ವಿಜಯಶಾಲಿಯಾಗುತ್ತಾನೆ ಎಂದು ಕವಿಯು ತನ್ನ ಸುಂದರೀಶತಕದ ಆರಂಭ ಶ್ಲೋಕದಲ್ಲಿ ಮನ್ಮಥನನ್ನು ಸ್ತುತಿಸಿದ್ದಾನೆ.


ಶನಿವಾರ, ಫೆಬ್ರವರಿ 21, 2026

ಪೌರಾಣಿಕ ಸ್ವಾರಸ್ಯಗಳು - ತನ್ನ ಶವವನ್ನೇ ತಾನು ತಿನ್ನುತ್ತಿದ್ದ ಶ್ವೇತ ರಾಜನ ಕಥೆ

ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು! 
    ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
      ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು! 
    ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆತ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು! 
     ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
     ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ! 
      ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!" 
        ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
       ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು! 
     ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
      ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.
     

ಶನಿವಾರ, ಫೆಬ್ರವರಿ 7, 2026

ಅದ್ಭುತ ರಾಮಾಯಣ

     ಅದ್ಭುತ ರಾಮಾಯಣ, ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಾಗಿದೆ. ಸಂಸ್ಕೃತದಲ್ಲಿ ಮೂಲ ವಾಲ್ಮೀಕಿ ರಾಮಾಯಣವಲ್ಲದೇ ಅದ್ಭುತ, ಆನಂದ, ಮತ್ತು ಅಧ್ಯಾತ್ಮ ರಾಮಾಯಣಗಳೆಂಬ ಮೂರು ಬೇರೆಯ ರಾಮಾಯಣಗಳಿವೆ. ಇವೂ ಕೂಡ ವಾಲ್ಮೀಕಿ ಮಹರ್ಷಿಗಳೇ ರಚಿಸಿದರೆಂಬ ಪ್ರತೀತಿಯಿದ್ದು ಅವುಗಳಲ್ಲೂ ಹಾಗೆಯೇ ಹೇಳಲಾಗಿದೆ. ಆದರೆ ಮೂಲ ವಾಲ್ಮೀಕಿ ರಾಮಾಯಣಕ್ಕಿಂತ ಇವು ಬಹಳ ವಿಭಿನ್ನವಾಗಿದ್ದು ಹಲವಾರು ವಿಚಿತ್ರ ಹಾಗೂ ಸ್ವಾರಸ್ಯಕರ ಕಥೆಗಳನ್ನೊಳಗೊಂಡಿವೆ. ಅಲ್ಲದೇ ಅನೇಕ ಆಧ್ಯಾತ್ಮಿಕ ವಿಚಾರಗಳೂ ಇವುಗಳಲ್ಲಿವೆ. ಇವುಗಳಲ್ಲಿ ಶ್ರೀರಾಮನನ್ನು ಮುಖ್ಯವಾಗಿ ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದು ಭಗವಂತನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಶ್ರೀರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದರೂ ಬಹುತೇಕ ಮಾನವನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಹಾಗಾಗಿ ವಾಲ್ಮೀಕಿ ರಾಮಾಯಣದಲ್ಲಿ ರಸಪೋಷಣೆ ಹೆಚ್ಚಾಗಿದೆ. ಈ ರಾಮಾಯಣಗಳನ್ನು ಇತರರು ಯಾರೋ ರಚಿಸಿ ವಾಲ್ಮೀಕಿಗಳ ಹೆಸರಿನಲ್ಲಿ ಪ್ರಚುರಪಡಿಸಿರಬೇಕು. ಮಹಾನ್ ಸಂಸ್ಕೃತ ವಿದ್ವಾಂಸರಾದ ವಿ.ರಾಘವನ್ ಅವರು ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳನ್ನು ಕುರಿತು ಆಂಗ್ಲ ಭಾಷೆಯಲ್ಲಿ ಒಂದು ಸೊಗಸಾದ ಚಿಕ್ಕ ಗ್ರಂಥವನ್ನು ಬರೆದಿದ್ದಾರೆ.
    ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳಲ್ಲಿ ಅದ್ಭುತ ರಾಮಾಯಣ ಅತ್ಯಂತ ಚಿಕ್ಕದಾಗಿದ್ದು ಕೇವಲ ಇಪ್ಪತ್ತೇಳು ಸರ್ಗಗಳನ್ನು ಹೊಂದಿದೆ. ಸರಳವಾದ ಸಂಸ್ಕೃತದಲ್ಲಿ ರಚಿತವಾಗಿರುವ ಈ ರಾಮಾಯಣದಲ್ಲಿ ಮೂಲ ರಾಮಾಯಣದ ಕಥೆ ಬಹಳ ಸಂಕ್ಷಿಪ್ತವಾಗಿ ಬಂದಿದೆ. ಇತರ ವಿಚಾರಗಳೇ ಹೆಚ್ಚಾಗಿವೆ. ಮೊದಲಿಗೆ, ವಾಲ್ಮೀಕಿ ಮಹರ್ಷಿ ಮತ್ತು ಅವರ ಶಿಷ್ಯ ಭರದ್ವಾಜರ ಸಂವಾದ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲೂ ಇವರಿಬ್ಬರೂ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಭಾರದ್ವಾಜರು, ವಾಲ್ಮೀಕಿ ಮಹರ್ಷಿಗಳು ಶತಕೋಟಿ ಶ್ಲೋಕಗಳನ್ನುಳ್ಳ ರಾಮಾಯಣವನ್ನು ರಚಿಸಿರುವರೆಂದೂ ಅದು ಬ್ರಹ್ಮಲೋಕದಲ್ಲಿ ಪ್ರಸಿದ್ಧವಾಗಿರುವುದೆಂದೂ ಅದರಲ್ಲಿರುವ ಗುಪ್ತ ವಿಚಾರಗಳನ್ನು ಹೇಳಬೇಕೆಂದು ಕೇಳುತ್ತಾರೆ. ಆಗ ಸಂತೋಷಗೊಂಡ ವಾಲ್ಮೀಕಿಗಳು, ಸೀತಾರಾಮರು ಮೂಲತಃ ಪ್ರಕೃತಿ, ಪುರುಷರೆಂದು ಆಧ್ಯಾತ್ಮಿಕವಾಗಿ ಆರಂಭಿಸಿ ಈ ಅದ್ಭುತ ರಾಮಾಯಣವನ್ನು ಹೇಳುತ್ತಾರೆ ‌
     ಇಲ್ಲಿ ವಿಷ್ಣು, ಲಕ್ಷ್ಮಿಯರು ನಾರದರ ಶಾಪದಿಂದ ರಾಮ,ಸೀತೆಯರಾಗಿ ಹುಟ್ಟಿದರೆಂಬ ಸ್ವಾರಸ್ಯಕರ ಕಥೆಯಿದೆ.‌ ನಾರದ ಮತ್ತು ಪರ್ವತ ಋಷಿಗಳು ಅಂಬರೀಷ ರಾಜನ ಮಗಳಾದ ಶ್ರೀಮತಿಯನ್ನು ಮದುವೆಯಾಗಬಯಸಿ ವಿಷ್ಣುವಿನ ಮೂಲಕ ಪರಸ್ಪರರ ಮುಖಗಳನ್ನು ಕಪಿಮುಖಗಳಂತೆ ಮಾಡಿಸಲು, ಶ್ರೀಮತಿಯು ಅವರನ್ನು ಬಿಟ್ಟು ಸ್ವಯಂವರಕ್ಕೆ ಆಗಮಿಸಿದ ವಿಷ್ಣುವನ್ನೇ ಮದುವೆಯಾಗುತ್ತಾಳೆ! ಇದರಿಂದ ಕುಪಿತಗೊಂಡ ಅವರಿಬ್ಬರೂ ವಿಷ್ಣುವಿಗೆ ಮನುಷ್ಯನಾಗಿ ಹುಟ್ಟುವಂತೆ ಶಪಿಸುತ್ತಾರೆ! ಇದೇ ವಿಷ್ಣುವು ರಾಮನಾಗಿ ಅವತರಿಸಲು ಕಾರಣ. ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ. ಅಂತೆಯೇ ಲಕ್ಷ್ಮಿಯ ದಾಸಿಯರು ಒಂದು ಸಮಾರಂಭದಲ್ಲಿ ನಾರದರನ್ನು ಓಡಿಸಿ ತುಂಬುರುವನ್ನು ಸನ್ಮಾನಿಸಲು ಅವರು ಕುಪಿತರಾಗಿ ಲಕ್ಷ್ಮಿಗೆ ರಾಕ್ಷಸ ಗರ್ಭದಲ್ಲಿ ಜನಿಸುವಂತೆ ಶಪಿಸುತ್ತಾರೆ! ಹಾಗಾಗಿ ಲಕ್ಷ್ಮಿಯು ಸ್ವಾರಸ್ಯಕರ ತಿರುವುಗಳಿಂದ ರಾವಣನ ಪತ್ನಿ ಮಂದೋದರಿಯ ಉದರದಲ್ಲಿ ಜನಿಸುತ್ತಾಳೆ! ಸೀತೆಯು ರಾವಣನ ಮಗಳೆಂಬ ಜನಜನಿತ ಕಥೆಗೆ ಇಲ್ಲಿದೆ ಮೂಲ. ತುಂಬುರುವನ್ನು ಸನ್ಮಾನಿಸಲು ಅವನು ಸಂಗೀತಜ್ಞನಾದುದೇ ಕಾರಣವೆಂದು ತಿಳಿದ ನಾರದರು ಗಾನಬಂಧು ಎಂಬ ಗೂಬೆಯಿಂದ ಬಹಳ ಕಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಇದೊಂದು ಬಹಳ ಸ್ವಾರಸ್ಯಕರ ಕಥೆ! ಇದೇ ಸಂದರ್ಭದಲ್ಲಿ ಹರಿಭಕ್ತ ಹರಿಮಿತ್ರನ ಕಥೆಯೂ ಬರುತ್ತದೆ ‌
          ಇಲ್ಲಿ ಶ್ರೀರಾಮನು ಹನುಮಂತನಿಗೆ ತನ್ನ ನಾರಾಯಣ ಸ್ವರೂಪವನ್ನು ತೋರಿಸಿ ಜ್ಞಾನೋಪದೇಶ ಮಾಡುವ ಒಂದು ವಿಶೇಷ ಅಧ್ಯಾಯವಿದೆ.
         ಅನಂತರ ಬರುವುದೇ ಅದ್ಭುತ ರಾಮಾಯಣದ ಮುಖ್ಯ ಕಥೆ. ಋಷಿಮುನಿಗಳು ಅಯೋಧ್ಯೆಗೆ ಬಂದು ಶ್ರೀ ರಾಮನನ್ನು ರಾವಣನನ್ನು ಕೊಂದುದಕ್ಕಾಗಿ ಪ್ರಶಂಸಿಸಲು, ಸೀತೆಯು ನಕ್ಕು ದಶಮುಖ ರಾವಣನ ಅಣ್ಣನಾದ ಸಹಸ್ರಮುಖ ರಾವಣನು ಪುಷ್ಕರ ದ್ವೀಪವನ್ನು ಆಳುತ್ತಿರುವನೆಂದೂ ಅವನನ್ನು ಕೊಂದರೆ ಅದು ನಿಜವಾದ ಸಾಹಸವೆಂದೂ ಹೇಳಲು ರಾಮನು ವಾನರ, ರಾಕ್ಷಸ ಸೈನ್ಯಗಳೊಂದಿಗೆ ಪುಷ್ಕರ ದ್ವೀಪಕ್ಕೆ ಹೋಗಿ ಮುತ್ತಿಗೆ ಹಾಕಿ ಸಹಸ್ರಮುಖ ರಾವಣನೊಂದಿಗೆ ಯುದ್ಧ ಮಾಡಲು, ಅವನು ವಾನರ, ರಾಕ್ಷಸ ಸೈನ್ಯಗಳನ್ನು ತನ್ನ ಬಾಣಗಳಿಂದ ಅವರವರ ರಾಜ್ಯಗಳಿಗೇ ದೂಡಿ, ರಾಮನನ್ನೂ ಮೂರ್ಛೆಗೊಳಿಸಿಬಿಡುತ್ತಾನೆ! ಆಗ ಸೀತೆಯು ಮಹಾಕಾಳಿಯಾಗಿ ಸಹಸ್ರಮುಖ ರಾವಣನನ್ನು ಕೊಲ್ಲುತ್ತಾಳೆ! ಅನಂತರ ರಾಮನು ಎಚ್ಚೆತ್ತು ಸೀತೆಯನ್ನು ಸಹಸ್ರನಾಮ ಸ್ತೋತ್ರದಿಂದ ಸ್ತುತಿಸುತ್ತಾನೆ! ಅನಂತರ ಅವರು ಅಯೋಧ್ಯೆಗೆ ಹಿಂದಿರುಗುತ್ತಾರೆ.
        ಹೀಗೆ ಅದ್ಭುತ ಕಥೆಗಳನ್ನೊಳಗೊಂಡ ಅದ್ಭುತ ರಾಮಾಯಣ, ಸೀತಾಪರವಾದ ರಾಮಾಯಣ. ನಮ್ಮಲ್ಲಿ ಪರಸಸ್ತುವನ್ನು ಪ್ರಕೃತಿ ಮತ್ತು ಪುರುಷ, ಎರಡೂ ರೂಪಗಳಲ್ಲಿ ಆರಾಧಿಸುವ ಕ್ರಮವಿದೆ. ನಾರಾಯಣ ಪುರುಷನಾದರೆ ಲಕ್ಷ್ಮಿಯು ಪ್ರಕೃತಿ. ಶಿವನು ಪುರುಷನಾದರೆ ಪಾರ್ವತಿ ಶಕ್ತಿ. ಹೀಗೆ ಪುರುಷ, ಪ್ರಕೃತಿ, ಎರಡೂ ರೂಪಗಳಿಗೂ ಆರಾಧನೆಯಿದೆ. ವಿಷ್ಣುಪರವಾದ ಭಾಗವತ ಪುರಾಣವಿರುವಂತೆಯೇ ದೇವಿಯ ಪರವಾದ ದೇವೀಭಾಗವತ ಪುರಾಣವೂ ಇದೆ. ಶಕ್ತಿಯ ಆರಾಧನೆ ಮೊದಲಿನಿಂದಲೂ ನಮ್ಮಲ್ಲಿ ಇದೆ. ಶಾಕ್ತೇಯರ ಪಂಥವೇ ಇದೆ. ಶಾಕ್ತಪರವಾದ ತಂತ್ರಗಳೂ ಇವೆ. ಅದ್ಭುತ ರಾಮಾಯಣ ಪ್ರಾಯಶಃ ಶಕ್ತಿ ಪೂಜೆಯ ಉಚ್ಛ್ರಾಯ ಕಾಲದಲ್ಲಿ ರಚಿತವಾಗಿರಬಹುದು. ಹಾಗಾಗಿ ಇಲ್ಲಿ ಸೀತೆ ಆದಿಶಕ್ತಿ ಮಹಾಕಾಳಿಯಾಗಿ ವಿಜೃಂಭಿಸುವ ಕಥೆಯಿದೆ. 
      ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ವಿಭಿನ್ನ ರಾಮಾಯಣ. ಎಲ್ಲರೂ ತಿಳಿದಿರಬೇಕಾದುದಾಗಿದೆ. ಇದನ್ನೇ ಹಿಂದೆ ಕನ್ನಡದ ಮಹಾಕವಿ ಮುದ್ದಣನು ಹಳೆಗನ್ನಡದಲ್ಲಿ ರಚಿಸಿದ್ದ.  ನಾನು ಇದನ್ನು ಸಂಸ್ಕೃತದಿಂದ ಹೊಸಗನ್ನಡದಲ್ಲಿ ಅನುವಾದಿಸಿದ್ದೇನೆ. ಇದಕ್ಕೆ ನಾನು ವಾರಾಣಸಿಯ ಚೌಖಂಬ ಪ್ರಕಾಶನದ ಹಿಂದೀ ಅನುವಾದಸಹಿತವಾದ ಮೂಲ ಗ್ರಂಥವನ್ನು ಬಳಸಿಕೊಂಡಿದ್ದೇನೆ.
      

ಶುಕ್ರವಾರ, ಫೆಬ್ರವರಿ 6, 2026

ಕೆರೆಯುವಂತೆ ಮಾಡುವ ಅರ್ಟಿಕೇರಿಯ

ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರಚೋದನಾತ್ಮಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಇವರಲ್ಲಿ IgE ಎಂಬ ಆಂಟಿಬಾಡಿಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವು ರಕ್ತದಲ್ಲಿರುವ ಬೇಸೋಫಿಲ್ ಗಳೆಂಬ ಬಿಳಿರಕ್ತಕಣಗಳನ್ನೂ ಚರ್ಮ, ಶ್ವಾಸಾಂಗಗಳು, ಜೀರ್ಣಾಂಗಗಳು, ಮೊದಲಾದ ಅಂಗಾಂಗಗಳಲ್ಲಿರುವ ಮಾಸ್ಟ್ ಸೆಲ್ ಗಳೆಂಬ ಜೀವಕೋಶಗಳನ್ನೂ ಬಡಿದು ಅವುಗಳಿಂದ ಹಿಸ್ಟಮಿನ್, ಲ್ಯುಕೋಟ್ರಿನ್ ಮೊದಲಾದ ರಾಸಾಯನಿಕಗಳು ಬಿಡುಗಡೆಯಾಗಿ ರಕ್ತನಾಳಗಳನ್ನು ಹಿಗ್ಗಿಸುತ್ತವೆ ಹಾಗೂ ನರಗಳನ್ನು ಪ್ರಚೋದಿಸುತ್ತವೆ. ಇದರಿಂದ ರಕ್ತ ಹೆಚ್ಚಾಗಿ ಹರಿದು, ಅದರಲ್ಲಿನ ನೀರಿನಂಶ ಹೊರಚೆಲ್ಲಿ ಕೆಂಪು ಬಣ್ಣ, ಹಾಗೂ ಊತಗಳಾಗುತ್ತವೆ. ನರಗಳ ಪ್ರಚೋದನೆಯಿಂದ ಕೆಂಪು ಬಣ್ಣ ಸುತ್ತಲೂ ಹರಡಿ, ಬಹಳ ತುರಿಕೆಯುಂಟಾಗುತ್ತದೆ. ಈ ಖಾತೆಗಳಿಗೆ ವೀಲ್ ಗಳೆಂದು ಕರೆಯುತ್ತಾರೆ.‌ಕನ್ನಡದಲ್ಲಿ ಇವನ್ನು ಗಂಧೆಗಳು ಅಥವಾ ದದ್ದುಗಳು ಎನ್ನುತ್ತಾರೆ. ಈ ಗಂಧೆಗಳು ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ನಾಲ್ಕು ಗಂಟೆಗಳೊಳಗೆ ಹೊರಟುಹೋಗುತ್ತವೆ. ಅನಂತರ ಮತ್ತೆ ಮತ್ತೆ ಬರುತ್ತಿರುತ್ತವೆ.
     ಈ ಅರ್ಟಿಕೇರಿಯಾಗೆ ಕಾರಣವಾಗುವ ಪ್ರಚೋದನಾತ್ಮಕ ವಸ್ತುಗಳು ಹಲವಾರಿರುತ್ತವೆ. ಅವು ಆಹಾರ ಪದಾರ್ಥಗಳಿರಬಹುದು ( ಸಾಮಾನ್ಯವಾಗಿ ಮೊಟ್ಟೆ, ಮೀನು, ಬೀಜಗಳು ಇತ್ಯಾದಿ), ಉಸಿರಿನಲ್ಲಿ ತೆಗೆದುಕೊಳ್ಳುವಂಥವು ( ಧೂಳು, ಮನೆ ಧೂಳಿನಲ್ಲಿರುವ ನುಸಿ ಎಂಬ ಕೀಟ, ಹೂವಿನ ಪರಾಗ, ಅನಿಲಗಳು ಇತ್ಯಾದಿ), ಔಷಧಿಗಳು, ಮೊದಲಾದವು. ಕೀಟಗಳ ಕಚ್ಚುವಿಕೆ, ಕರುಳಿನಲ್ಲಿ ವಾಸಿಸುವ ಜಂತು ಹುಳು, ಕೊಕ್ಕೆ ಹುಳು, ಮೊದಲಾದ ಹುಳುಗಳು, ಸೋಂಕು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮುಂತಾದವುಗಳೂ ಅಲರ್ಜಿಯನ್ನು ಪ್ರಚೋದಿಸುತ್ತವೆ. ಇವಲ್ಲದೇ, ಚರ್ಮದ ಸ್ಪರ್ಶಕ್ಕೆ ಬರುವ ಕೂದಲ ಬಣ್ಣ, ಸೌಂದರ್ಯ ವರ್ಧಕಗಳು, ಅಂಗರಾಗ ದ್ರವ್ಯಗಳು, ಪ್ರಾಣಿಗಳ ಕೂದಲು ಮತ್ತು ಹೊಟ್ಟು, ಇವೆಲ್ಲವೂ ಸ್ಥಳೀಯವಾಗಿ ಅರ್ಟಿಕೇರಿಯ ಉಂಟುಮಾಡುತ್ತವೆ. ಇವಲ್ಲದೇ ಭೌತಿಕ ಅಂಶಗಳಾದ ಚಳಿ, ಸೆಖೆ, ಬಿಸಿಲು, ನೀರು, ಮೈ ಮೇಲಿನ ಒತ್ತಡ, ಶ್ರಮ ಮತ್ತು ವ್ಯಾಯಾಮ, ಇವೂ ಕೂಡ ಕೆಲವೊಮ್ಮೆ ಅರ್ಟಿಕೇರಿಯಾವನ್ನು ಪ್ರಚೋದಿಸಬಹುದು. ಕೆಲವರಿಗೆ ವ್ಯಾಯಾಮ, ಶ್ರಮಗಳಾದಾಗ ಹಾಗೂ ಅತಿ ಖಾರ ಪದಾರ್ಥಗಳನ್ನು ಸೇವಿಸಿದಾಗ ಮೈಯಲ್ಲಿ ಬಿಸಿಯೇರಿ ನರಗಳ ತುದಿಗಳಿಂದ ಒಸರುವ ಅಸಿಟೈಲ್ ಕೋಲೀನ್ ದ್ರವ ಹೆಚ್ಚಿ ಅದೂ ಇದನ್ನು ಪ್ರಚೋದಿಸುತ್ತದೆ. ಇದನ್ನು ಕೋಲಿನರ್ಜಿಕ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಕೆಲವರಿಗೆ ಆಟೋ ಆಂಟಿಬಾಡಿಗಳು ಉತ್ಪತ್ತಿಯಾಗಿ ಇವು ಅವರ IgE ಆಂಟಿಬಾಡಿಗಳನ್ನೂ ಮಾಸ್ಟ್ ಸೆಲ್ ಗಳನ್ನೂ ಬೇಸೋಫಿಲ್ ಗಳನ್ನೂ ಪ್ರಚೋದಿಸಿ ಅರ್ಟಿಕೇರಿಯ ಉಂಟಾಗುತ್ತದೆ. ಇದನ್ನು ಆಟೋ ಇಮ್ಯೂನ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಮಾಸ್ಟ್ ಸೆಲ್ ಗಳು ತುಂಬಾ ಹೆಚ್ಚಾಗಿ ಅರ್ಟಿಕೇರಿಯ ಉಂಟಾಗುತ್ತದೆ. ಈ ಬಗೆಯಲ್ಲಿ ಗಂಧೆಗಳು ಹೋದ ಬಳಿಕ ಬಣ್ಣದ ಕಲೆಗಳು ಉಳಿಯುತ್ತವೆ. ಇದನ್ನು ಅರ್ಟಿಕೇರಿಯ ಪಿಗ್ಮೆಂಟೋಸ ಎನ್ನುತ್ತಾರೆ. ಹೀಗೆ ಅರ್ಟಿಕೇರಿಯ ಹಲವು ಕಾರಣಾಂಶಗಳಿಂದ ಆಗುತ್ತದೆ.
    ಅರ್ಟಿಕೇರಿಯಾವನ್ನು ತೀವ್ರ ( ಅಕ್ಯೂಟ್) ಮತ್ತು ದೀರ್ಘಕಾಲದ ( ಕ್ರಾನಿಕ್) ಎಂದು ವಿಂಗಡಿಸಲಾಗುತ್ತದೆ. ಅರ್ಟಿಕೇರಿಯ ಆರಂಭವಾಗಿ ಆರು ವಾರಗಳ ಒಳಗಿದ್ದರೆ ಅದನ್ನು ತೀವ್ರ ಎನ್ನಲಾಗುತ್ತದೆ, ಹಾಗೂ ಆರು ವಾರಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ದೀರ್ಘ ಕಾಲದ್ದೆನ್ನಲಾಗುತ್ತದೆ. ತೀವ್ರ ಅರ್ಟಿಕೇರಿಯದಲ್ಲಿ ಕಾರಣ ಸುಲಭವಾಗಿ ತಿಳಿಯುತ್ತದೆ ಹಾಗೂ ಅದು ಚಿಕಿತ್ಸೆಗೆ ಬೇಗನೆ ಸ್ಪಂದಿಸುತ್ತದೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕಾರಣ ತಿಳಿಯುವುದು ಬಹಳ ಕಷ್ಟ ಹಾಗೂ ಅದು ಚಿಕಿತ್ಸೆಗೆ ಸ್ಪಂದಿಸುವುದು ಬಹಳ ನಿಧಾನ.‌ ಎಷ್ಟೋ ದೀರ್ಘಾವಧಿಯ ಅರ್ಟಿಕೇರಿಯಾಗಳಲ್ಲಿ ಕಾರಣವೇ ಪತ್ತೆಯಾಗುವುದಿಲ್ಲ.
     ಅರ್ಟಿಕೇರಿಯವನ್ನು ಹೋಗಲಾಡಿಸಲು ಹಾಗೂ ಅದು ಬಾರದಂತೆ ನಿವಾರಿಸಲು, ಪ್ರಚೋದನಾತ್ಮಕ ಅಂಶಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದು ಬಹಳ ಮುಖ್ಯ. ವೈದ್ಯರು ರೋಗಿಯ ಸುದೀರ್ಘ ಚರಿತ್ರೆಯನ್ನು ತೆಗೆದುಕೊಂಡು ಅವನಿಗೆ ಪ್ರಚೋದನಾತ್ಮಕ ಅಂಶಗಳು ಯಾವುವಿರಬಹುದೆಂದು ತಿಳಿಯಲು ಸಹಾಯ ಮಾಡುತ್ತಾರೆ. ಅರ್ಟಿಕೇರಿಯ ಲಕ್ಷಣಗಳನ್ನು ಹೋಗಲಾಡಿಸಲು ಆಂಟಿಹಿಸ್ಟಮಿನ್ ಔಷಧಿಗಳನ್ನು ನೀಡಲಾಗುತ್ತದೆ. ಇವು ಹಿಸ್ಟಮಿನ್ ಅನ್ನು ವಿರೋಧಿಸಿ ಗಂಧೆಗಳನ್ನೂ ಕೆರೆತವನ್ನೂ ಹೋಗಲಾಡಿಸುತ್ತವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಎರಡು ಬಗೆಯ ಆಂಟಿಹಿಸ್ಟಮಿನ್ ಮಾತ್ರೆಗಳನ್ನು ದೀರ್ಘಕಾಲ ಸೇವಿಸಬೇಕಾಗುತ್ತದೆ. ನಿದ್ರೆ ಬರಿಸುವ, ಬಾಯಿ ಒಣಗಿಸುವ, ಮೊದಲಾದ ಕೆಲವು ಅಡ್ಡಪರಿಣಾಮಗಳನ್ನು ಬಿಟ್ಟರೆ ಇವು ಬಹುತೇಕ ಸುರಕ್ಷಿತ. ಆದರೆ ಇವುಗಳನ್ನು ವೈದ್ಯರ ನಿರ್ದೇಶನದಂತೆ ಬಳಸಬೇಕು. ತೀವ್ರವಾದ ಅರ್ಟಿಕೇರಿಯಾಗೆ ಕೆಲವೊಮ್ಮೆ ಸ್ಟಿರಾಯ್ಡ್ ಮಾತ್ರೆ ಅಥವಾ ಚುಚ್ಚುಮದ್ದು ಬೇಕಾಗಬಹುದು. ಇದನ್ನೂ ವೈದ್ಯರ ನಿರ್ದೇಶನದಂತೆ ತೆಗೆದುಕೊಳ್ಳಬೇಕು. ಅರ್ಟಿಕೇರಿಯಾದ ನವೆಯನ್ನು ಹೋಗಲಾಡಿಸುವಲ್ಲಿ ಕ್ಯಾಲಮಿನ್, ಆಲೋ ವೀರಾ, ತೇವಾಂಶ ಹೆಚ್ಚಿಸುವ ದ್ರಾವಣಗಳು ಸಹಾಯ ಮಾಡುತ್ತವೆ. ಜಂತು ಹುಳು ಮೊದಲಾದ ಹುಳುಗಳ ಬಾಧೆಗೆ ಹುಳು ನಿರೋಧಕ ಔಷಧಿ ನೀಡಲಾಗುತ್ತದೆ.
     ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕೆಲವಾರು ರಕ್ತ ಪರೀಕ್ಷೆಗಳನ್ನು ಮಾಡಿ ಕಾರಣವನ್ನು ತಿಳಿಯಲು ಪ್ರಯತ್ನಿಸಿ ಚಿಕಿತ್ಸೆ ಮಾಡಲಾಗುತ್ತದೆ. ಆಟೋ ಇಮ್ಯೂನ್ ಅರ್ಟಿಕೇರಿಯದಲ್ಲಿ ವ್ಯಕ್ತಿಯ ರಕ್ತವನ್ನು ತೆಗೆದುಕೊಂಡು ಸೆಂಟ್ರಿಫ್ಯೂಜ್ ಯಂತ್ರದಿಂದ ನೀರಿನಂಶವಾದ ಪ್ಲಾಸ್ಮಾವನ್ನು ಬೇರ್ಪಡಿಸಿ ಅವನಿಗೇ ಚುಚ್ಚುಮದ್ದು ನೀಡಲಾಗುತ್ತದೆ. ಹೀಗೆ ಅರ್ಟಿಕೇರಿಯಾಗೆ ಅನೇಕ ಬಗೆಯ ಚಿಕಿತ್ಸೆಗಳಿವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ವ್ಯಕ್ತಿಗೆ ಮಾನಸಿಕವಾಗಿ ಕಷ್ಟವಾಗಬಹುದು ಹಾಗೂ ಕೆಲಸ ಮಾಡಲು, ಸುಖವಾಗಿ ಜೀವನ ನಡೆಸಲು ಕಷ್ಟವಾಗಬಹುದು. ಆದರೆ ಭರವಸೆ ಕಳೆದುಕೊಳ್ಳದೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮನಸ್ಸನ್ನು ಹಲವಾರು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನವೆಯನ್ನು ಮರೆಯಲು ಪ್ರಯತ್ನಿಸಿದರೆ ಸುಧಾರಣೆ ಕಂಡುಬಂದು ಬೇಗನೆ ಗುಣವಾಗುತ್ತದೆ. 
                                    ಡಾ.ಬಿ.ಆರ್.ಸುಹಾಸ್ 
   

ಸೋಮವಾರ, ಜನವರಿ 19, 2026

ಬಿಷ್ಣುಪುರದ ಅದ್ಭುತ ಕೃಷ್ಣ ಮಂದಿರಗಳು


ಭಾರತವು ಪುಣ್ಯಭೂಮಿ ಎಂದು ಹೆಸರಾಗಿದೆ. ಹಾಗಾಗಿಯೇ ಭಾರತದ ಪ್ರವಾಸೀ ತಾಣಗಳಲ್ಲಿ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳು ಪ್ರಧಾನವಾಗಿವೆ. ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳಿವೆ. ಅವುಗಳಲ್ಲಿ ಈಗ ನಾನು ಹೇಳಹೊರಟಿರುವ ಬಿಷ್ಣುಪುರದ ಅದ್ಭುತ ದೇವಾಲಯಗಳ ಗುಂಪೂ ಒಂದು.
     ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ ಸುಮಾರು 150 ಕಿ.ಮೀ.ಗಳಷ್ಟು ದೂರದಲ್ಲಿರುವ ಬಿಷ್ಣುಪುರ ( ವಿಷ್ಣುಪುರ) ಬಾಂಕುರ ಜಿಲ್ಲೆಯಲ್ಲಿನ ಪುಟ್ಟ ಊರಾಗಿದ್ದು, ಕಲಾತ್ಮಕವಾದ ಟೆರ್ರಕೋಟ ಅಥವಾ ಮಣ್ಣಿನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಂಥ ಅದ್ಭುತ ದೇವಾಲಯಗಳನ್ನು ಇನ್ನೆಲ್ಲೂ ಕಾಣಲಾಗದು! ಎತ್ತರವಾಗಿಯೂ ಭವ್ಯವಾಗಿಯೂ ಇರುವ ಈ ದೇವಾಲಯಗಳು ತಮ್ಮ ವಿಶಿಷ್ಟ ಕೆತ್ತನೆಗಳಿಂದ ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ! ಕೋಲ್ಕತಾಗೆ ಹೋದಾಗ ಈ ಸ್ಥಳವನ್ನು ತಪ್ಪದೇ ನೋಡಬೇಕು. 
     ಈಗ ಒಂದು ಸಾಧಾರಣ ಹಳ್ಳಿಯಂತೆ ಕಾಣುವ ಬಿಷ್ಣುಪುರ, ಹಿಂದೆ, ಕ್ರಿ.ಶ. 997 ರ ಕಾಲದಲ್ಲಿ ಮಲ್ಲ ರಾಜರ ಸಾಮ್ರಾಜ್ಯವಾಗಿ ವಿಜೃಂಭಿಸಿತ್ತು! ಆದಿಮಲ್ಲನಿಂದ ಸ್ಥಾಪಿತವಾದ ಮಲ್ಲ ಸಾಮ್ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ರಾಜರು ಆಳಿದರು. ಮೊದಲಿಗೆ ಈ ಮಲ್ಲ ಸಾಮ್ರಾಜ್ಯಕ್ಕೆ ಪ್ರದ್ಯುಮ್ನಪುರ ಎಂಬ ಸ್ಥಳ ರಾಜಧಾನಿಯಾಗಿತ್ತು.‌ ಮುನ್ನೂರು ವರ್ಷಗಳ ನಂತರ ಆಳ್ವಿಕೆಗೆ ಬಂದ ಜಗತ್ ಮಲ್ಲನೆಂಬ ರಾಜನು ಇಲ್ಲಿನ ಕಾಡಿನಲ್ಲಿ ಬೇಟೆಯಾಡುವಾಗ, ತನ್ನ ಹದ್ದುವನ್ನು ಒಂದು ಕೊಕ್ಕರೆಯು ಸೋಲಿಸಿ ಓಡಿಸುವುದನ್ನು ಕಂಡು ವಿಸ್ಮಯಗೊಂಡು, ಈ ಸ್ಥಳದಲ್ಲಿ ಏನೋ ವಿಶೇಷ ಶಕ್ತಿಯಿರಬೇಕೆಂದು ಭಾವಿಸಿ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿದನು. ಆಗಲೇ ಆದಂಥ ಮೃಣ್ಮಯೀದೇವಿಯ ( ದುರ್ಗೆಯ) ಆಜ್ಞೆಯಂತೆ, ಮಣ್ಣಿನಲ್ಲಿ ಹುದುಗಿದ್ದ ಅವಳ ವಿಗ್ರಹವನ್ನು ಅಗೆದು ತೆಗೆಸಿ ಅದರೊಂದಿಗೆ ಅವಳ ದೇವಾಲಯವನ್ನು ನಿರ್ಮಿಸಿದನು ಎಂದು ಐತಿಹ್ಯಗಳು ಹೇಳುತ್ತವೆ. ಹೀಗೆ ಮೃಣ್ಮಯೀದೇವಿಯ ಭಕ್ತರಾಗಿದ್ದ ಮಲ್ಲರು, ಬೀರ್ ಹಂಬೀರ್ ರಾಜನಿಂದ ವೈಷ್ಣವರಾಗಿ ಸೊಗಸಾದ ಅನೇಕ ಕೃಷ್ಣ ಮಂದಿರಗಳನ್ನು ನಿರ್ಮಿಸಿದರು. ಇವನ ಕಾಲದಲ್ಲಿ ಮೊಘಲರಿಗೂ ಪಠಾಣರಿಗೂ ಯುದ್ಧವಾಗಿ, ಇವನು ಮೊಘಲರ ಪರವಾಗಿ ನಿಂತು ಪಠಾಣರ ನಾಯಕ ದಾವೂದ್ ಖಾನನನ್ನು ಸೋಲಿಸಲು, ಅಕ್ಬರನು ಇವನ ಶೌರ್ಯಕ್ಕೆ ಮೆಚ್ಚಿ ಇವನಿಗೆ ಬೀರ್ ( ವೀರ) ಎಂಬ ಬಿರುದನ್ನಿತ್ತನೆಂದು ಹೇಳುತ್ತಾರೆ. ದಾವೂದ್ ಖಾನನನ್ನು ಸೋಲಿಸಿದರೂ ಅವನನ್ನು ಕೊಲ್ಲದೇ ಬಿಟ್ಟುದಕ್ಕಾಗಿ ಅವನೇ ಇವನಿಗೆ ಈ ಬಿರುದು ಕೊಟ್ಟನೆಂದೂ ಹೇಳುತ್ತಾರೆ. ಇವನು ವೈಷ್ಣವನಾದುದಕ್ಕೆ ಒಂದು ಕಥೆಯಿದೆ. ಒಮ್ಮೆ, ಚೈತನ್ಯ ಪರಂಪರೆಯ ಜೀವಗೋಸ್ವಾಮಿಗಳು, ಹರಿಭಕ್ತಿವಿಲಾಸ, ಚೈತನ್ಯ ಚರಿತಾಮೃತ, ಉಜ್ವಲ ನೀಲಮಣಿ, ಭಕ್ತಿರಸಾಮೃತಸಿಂಧು, ಲಲಿತಮಾಧವ, ವಿದಗ್ಧ ಮಾಧವ, ಮೊದಲಾದ ಇಪ್ಪತ್ತೊಂದು ಅಪರೂಪದ ಭಕ್ತಿಸಾಹಿತ್ಯ ಕೃತಿಗಳನ್ನು ಗೌರಮಠಕ್ಕೆ ಶ್ರೀನಿವಾಸಾಚಾರ್ಯರ ಮೂಲಕ ಕಳಿಸಿದರು. ಅವರು ಅವನ್ನು ಪೆಟ್ಟಿಗೆಗಳ ಮೂಲಕ ಸಾಗಿಸುತ್ತಾ ರಾತ್ರಿ ಒಂದು ಕಡೆ ವಿಶ್ರಾಂತಿ ಪಡೆಯುತ್ತಿದ್ದಾಗ, ರಾಜನ ಸೈನಿಕರು ಅವನ್ನು ಹಣದ ಪೆಟ್ಟಿಗೆಗಳೆಂದು ತಪ್ಪು ತಿಳಿದು ವಶಪಡಿಸಿಕೊಂಡು ಹೋದರು! ರಾಜನು ಅವನ್ನು ತೆಗೆಸಿ, ಪುಸ್ತಕಗಳನ್ನು ಕಂಡು ಆಶ್ಚರ್ಯಗೊಂಡು ಪಂಡಿತರಿಂದ ಅವನ್ನು ಓದಿಸಿ ವಿವರಣೆ ಪಡೆಯತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಾಚಾರ್ಯರು, ಆ ಪಂಡಿತರು ತಪ್ಪು ವಿವರಣೆ ಕೊಡುತ್ತಿದ್ದುದನ್ನು ಕೇಳಿ ದುಃಖಗೊಂಡು ಕಿವಿ ಮುಚ್ಚಿಕೊಂಡರು! ಆಗ ರಾಜನು ಅವರನ್ನು ವಿಚಾರಿಸಲು, ಅವರು ಸರಿಯಾದ ವಿವರಣೆಗಳನ್ನು ಕೊಟ್ಟರು. ಇದರಿಂದ ರಾಜನ ಮನ ಕರಗಿ ಅವನು ಕೂಡಲೇ ಶ್ರೀನಿವಾಸಾಚಾರ್ಯರ ಶಿಷ್ಯನಾಗಿ ವೈಷ್ಣವನಾದನು. ಅವರಿಗೆ ಅವನು ಮದುವೆಯನ್ನೂ ಮಾಡಿಸಿ ಅಲ್ಲಿಯೇ ವಸತಿಯನ್ನು ಕಲ್ಪಿಸಿಕೊಟ್ಟನು. ಅಲ್ಲಿಂದ ಮುಂದೆ ಬಿಷ್ಣುಪುರವು ಒಂದು ವೈಷ್ಣವಧಾಮವಾಯಿತು! ಮೃಣ್ಮಯೀದೇವಿಯ ಪೂಜೆ ಮುಂದುವರೆದರೂ ಅನೇಕ ಕೃಷ್ಣ ದೇಗುಲಗಳ ನಿರ್ಮಾಣವಾಯಿತು! ಬೀರ್ ಹಂಬೀರನು ರಾಸಮಂಚ ಎಂಬ ಮಂದಿರವನ್ನು ಶ್ರೀಕೃಷ್ಣನ ರಾಸಲೀಲೆಯನ್ನು ಆಚರಿಸಲೆಂದು ನಿರ್ಮಿಸಿ, ಶ್ಯಾಮಬಂಧ್, ಜಮುನಾಬಂಧ್, ರಾಧಾಕುಂಡ, ಕಾಲಿಂದೀ ಘಾಟ್, ಮೊದಲಾದ ಅನೇಕ ಕೆರೆಗಳನ್ನು ನಿರ್ಮಿಸಿದನು. ಅವನಿಗೆ ಒಬ್ಬ ನವಾಬನು ದೇವ್ ಎಂಬ ಬಿರುದನ್ನೂ ಕೊಟ್ಟನು. ಅವನ ನಂತರ ಬಂದ ಮಲ್ಲರಾಜರು ಅನೇಕ ಕೃಷ್ಣ ದೇಗುಲಗಳನ್ನು ನಿರ್ಮಿಸಿದರು. ಈಗ ಅಂಥ ಕೆಲವು ಸುಂದರ ದೇವಾಲಯಗಳ ಪರಿಚಯ ಮಾಡಿಕೊಳ್ಳೋಣ.

ರಾಸಮಂಚ 
   ಈ ಮಂದಿರವನ್ನು ನೋಡುವುದರೊಂದಿಗೆ ಬಿಷ್ಣುಪುರದ ಪ್ರವಾಸವನ್ನು ಆರಂಭಿಸುವುದು ಒಳ್ಳೆಯದು. ಏಕೆಂದರೆ ಎಲ್ಲಾ ದೇವಾಲಯಗಳನ್ನು ನೋಡಲು ನಮಗೆ ಪ್ರವೇಶ ಚೀಟಿ ದೊರೆಯುವುದು ಇಲ್ಲಿಯೇ. ಹಾಗೆಯೇ ಇಲ್ಲಿ ಮಾರ್ಗದರ್ಶಿಗಳು ಅಥವಾ ಗೈಡ್ ಗಳು ಸಿಗುತ್ತಾರೆ. ದೇವಾಲಯಗಳ ವಿವರಣೆ ಪಡೆಯಲು ನಮಗೆ ಮಾರ್ಗದರ್ಶಿ ಅತ್ಯವಶ್ಯಕ. ಒಂದೊಂದು ದೇವಾಲಯವೂ ದೂರವಿರುವುದರಿಂದ, ಮಾರ್ಗದರ್ಶಿಯನ್ನೂ ನಮ್ಮ ಖಾಸಗಿ ವಾಹನದಲ್ಲಿ ಜೊತೆಗೆ ಕರೆದೊಯ್ಯುವುದು ಒಳ್ಳೆಯದು. 
     ಮಲ್ಲ ಸಾಮ್ರಾಜ್ಯದ ಕೀರ್ತಿ, ವೈಭವಗಳನ್ನು ಸಾರಿ ಹೇಳುವ ರಾಸಮಂಚ ಎಂಬ ಈ ಬೃಹತ್ ಮಂದಿರವನ್ನು ಬೀರ್ ಹಂಬೀರನು ಕ್ರಿ.ಶ.1587 ರಲ್ಲಿ ನಿರ್ಮಿಸಿದನು.

 ಮೂರು ಅಂಗಣಗಳನ್ನುಳ್ಳ ಚೌಕಾಕಾರದ ಮಂದಿರ, ಅದರ ಮೇಲೆ ಮೊಘಲ್ ಶೈಲಿಯ ಕಮಾನುಗಳು, ಮತ್ತು ಅವುಗಳ ಮೇಲೆ ತ್ರಿಕೋಣಾಕೃತಿಯ ಗೋಪುರ, ಹೀಗೆ ಮೂರು ಅಂತಸ್ತುಗಳ ವಿಶಿಷ್ಟ ರಚನೆಯ ಈ ಕಟ್ಟಡ, ಲ್ಯಾಟರೈಟ್ ( ಕೆಂಪು ಜೇಡಿಮಣ್ಣಿನ) ತಳದ ಮೇಲೆ ನಿಂತಿದ್ದು, ಒಂದೊಂದು ಬದಿಯಲ್ಲೂ ಹತ್ತು ದ್ವಾರಗಳನ್ನು ಹೊಂದಿದೆ. ಇವು ಬಂಗಾಳಿ ಶೈಲಿಯ ಛಾವಣಿಗಳನ್ನೂ ಸೊಗಸಾದ ಭಾರವಾದ ಕಂಬಗಳನ್ನೂ ಹೊಂದಿವೆ. ಈ ರಾಸಮಂಚವು ರಾಸೋತ್ಸವವನ್ನು ಆಚರಿಸುವ ಮಂದಿರವಾಗಿದ್ದು, ಆ ಉತ್ಸವದ ಸಮಯದಲ್ಲಿ ಇತರ ಎಲ್ಲಾ ದೇವಾಲಯಗಳ ವಿಗ್ರಹಗಳನ್ನು ತಂದು ಇಲ್ಲಿರಿಸುತ್ತಿದ್ದರು. 

ಶ್ಯಾಮರಾಯ್ ಮಂದಿರ 
        ಅತ್ಯಂತ ಸೊಗಸಾದ ಟೆರ್ರಕೋಟ ಶಿಲ್ಪಕಲೆಯನ್ನು ಹೊಂದಿರುವ ಈ ಬೃಹತ್ ಮಂದಿರವನ್ನು ಕ್ರಿ.ಶ. 1643 ರಲ್ಲಿ ಮಲ್ಲರಾಜ ರಘುನಾಥ ಸಿಂಘನು ನಿರ್ಮಿಸಿದನು. ಬಂಗಾಳೀ ಶೈಲಿಯ ಕಮಾನಿನ ಛಾವಣಿ ಮತ್ತು ಮೇಲೆ ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯ, ಪಂಚರತ್ನ ಮಾದರಿಯ ದೇವಾಲಯಗಳಿಗೆ ಅತ್ಯುತ್ತಮ ಉದಾಹರಣೆ. ಈ ಮಂದಿರದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಮತ್ತು ಕೃಷ್ಣಲೀಲೆಗಳಿಗೆ ಸಂಬಂಧಿಸಿದ ಸುಂದರ ಕೆತ್ತನೆಗಳಿವೆ. ಅಂತೆಯೇ ಜಿಂಕೆ, ಆನೆ, ಗಂಡಭೇರುಂಡ,ಮೊದಲಾದ ಪ್ರಾಣಿಪಕ್ಷಿಗಳ ಹಾಗೂ ಸುಂದರ ವಿನ್ಯಾಸಗಳ ಕೆತ್ತನೆಗಳಿವೆ. ಆದರೆ ಮಂದಿರದಲ್ಲಿ ವಿಗ್ರಹವಿಲ್ಲದಿರುವುದರಿಂದ ಪೂಜೆಯಿಲ್ಲ.

ಜೋರ್ ಬಂಗ್ಲ ಮಂದಿರ 
      ಕ್ರಿ.ಶ. 1655 ರಲ್ಲಿ ರಘುನಾಥ ಸಿಂಘ ರಾಜನು ನಿರ್ಮಿಸಿದ ಈ ಅದ್ಭುತ ಮಂದಿರವು ಎರಡು ಬಂಗಾಳೀ ಗುಡಿಸಲುಗಳ ಮಾದರಿಯಲ್ಲಿದ್ದು, ಅವುಗಳ ಜಾರುವ ಛಾವಣಿಗಳನ್ನು ಒಟ್ಟಿಗೆ ಸೇರಿಸಿ, ಮೇಲೆ ಒಂದು ಶಿಖರವಿರುವಂತೆ ನಿರ್ಮಿಸಲಾಗಿದೆ! ಗೋಡೆಗಳ ಮೇಲಿನ ಶ್ರೀಕೃಷ್ಣನ ರಾಸಲೀಲೆ ಹಾಗೂ ದಶಾವತಾರ, ರಾಮಾಯಣ, ಮಹಾಭಾರತಗಳ ಅದ್ಭುತ ಕೆತ್ತನೆಗಳು ಮನಸೆಳೆಯುತ್ತವೆ! ಇಲ್ಲಿಯೂ ವಿಗ್ರಹ ಮತ್ತು ಪೂಜೆಗಳಿಲ್ಲ.

ರಾಧಾಶ್ಯಾಮ ಮಂದಿರ 
     ಕ್ರಿ.ಶ. 1758 ರಲ್ಲಿ ರಾಜಾ ಚೈತನ್ಯ ಸಿಂಘನು ನಿರ್ಮಿಸಿದ ಈ ಲ್ಯಾಟರೈಟ್ ( ಕೆಂಪು ಜೇಡಿಮಣ್ಣು); ಮಂದಿರವು, ಒಂದು ಏಕರತ್ನ, ಅಂದರೆ ಒಂದೇ ಶಿಖರವುಳ್ಳ ಮಂದಿರವಾಗಿದ್ದು, ಎತ್ತರದ ಗೋಡೆಗಳುಳ್ಳ ವಿಶಾಲ ಆವರಣದಲ್ಲಿದೆ. ರಾಜಾ ಚೈತನ್ಯ ಸಿಂಘನ ಕಾಲದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಅವನ ಮೇಲೆ ಆರ್ಥಿಕ ಒತ್ತಡವನ್ನು ತಂದಿತ್ತು! ಆದರೂ ಅವನು ಮನೆತನದ ಸಂಪ್ರದಾಯವಾದ ದೇವಾಲಯ ನಿರ್ಮಾಣವನ್ನು ಬಿಡಲಿಲ್ಲ. ಅವನ ಅಚ್ಚಳಿಯದ ಪ್ರಯತ್ನದ ಫಲವೇ ಈ ಅದ್ಭುತ ಮಂದಿರ! ಇಲ್ಲಿನ ಕೃಷ್ಣಲೀಲೆಯ ಸುಂದರ ಭಿತ್ತಿ ಕೆತ್ತನೆಗಳೊಂದಿಗೆ ಗರ್ಭಗುಡಿಯಲ್ಲಿ ಶ್ರೀ ರಾಧಾಕೃಷ್ಣರ ಸುಂದರ ವಿಗ್ರಹಗಳಿದ್ದು ನಿತ್ಯ ಪೂಜೆ ನಡೆಯುತ್ತದೆ.

ಮದನಮೋಹನ ಮಂದಿರ 
      ಕ್ರಿ.ಶ. 1694 ರಲ್ಲಿ ದುರ್ಜನ ಸಿಂಘ್ ರಾಜನು ನಿರ್ಮಿಸಿದ ಈ ಮಂದಿರ, ಕಮಾನಿನ ಆಕೃತಿಯ ಬಾಂಗ್ಲಾ ಛಾವಣಿಯ ಮೇಲೆ ಒಂದೇ ಶಿಖರವನ್ನು ಹೊಂದಿದ್ದು, ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಲಾಗಿರುವ, ಈ ಮಾದರಿಯ ಅತ್ಯದ್ಭುತ ಮಂದಿರವಾಗಿದೆ. ಗೋಡೆಗಳ ಮೇಲೆ ಕೃಷ್ಣಲೀಲೆ, ದಶಾವತಾರ, ಮೊದಲಾದ ಸುಂದರ ಕೆತ್ತನೆಗಳಿದ್ದು, ಗರ್ಭಗುಡಿಯಲ್ಲಿ ಶ್ರೀ ರಾಧಾಮನೋಹರರ ಸುಂದರ ವಿಗ್ರಹಗಳಿವೆ. ಈಗಲೂ ಇಲ್ಲಿ ನಿತ್ಯ ಪೂಜೆ ನಡೆಯುವುದಾಗಿದ್ದು, ರಾಸೋತ್ಸವ, ಮತ್ತು ದೋಲಾಯಾತ್ರೆ ( ಹೋಳಿ) ಗಳು ಇಲ್ಲಿ ನಡೆಯುವ ಆಕರ್ಷಕ ಉತ್ಸವಗಳಾಗಿವೆ! ಇಲ್ಲಿನ ಅರ್ಚಾವಿಗ್ರಹವಾದ ಮದನಮೋಹನನ ಬಗ್ಗೆ ಒಂದು ಕಥೆ ಹೇಳುತ್ತಾರೆ. ಗೋಪಾಲಸಿಂಘನೆಂಬ ರಾಜನು ಬಿಷ್ಣುಪುರವನ್ನು ಆಳುತ್ತಿದ್ದಾಗ, ಮರಾಠಾ ಲೂಟಿಕೋರರು ದಾಳಿ ಮಾಡಲು, ಅವನು ಎದುರಿಸಲಾಗದೇ ಮದನಮೋಹನ ದೇವರಿಗೆ ಶರಣಾದನಂತೆ. ಆಗ ಮದನಮೋಹನನು ನೀಲಿ ವಸ್ತ್ರವನ್ನು ಧರಿಸಿದ ಒಬ್ಬ ಯುವಕನ ರೂಪದಲ್ಲಿ ಬಂದು, ದಲ್ ಮದಲ್ ಎಂಬ ಫಿರಂಗಿಯನ್ನು ಸಿಡಿಸಿ ಅನೇಕ ಲೂಟಿಕೋರರನ್ನು ಕೊಂದು ಬಿಷ್ಣುಪುರವನ್ನು ರಕ್ಷಿಸಿದುದನ್ನು ಅನೇಕರು ನೋಡಿದರಂತೆ! 
      ಈ ದೇವಾಲಯ, ದೊಡ್ಡ ಗೋಡೆಗಳ ವಿಶಾಲ ಆವರಣದಲ್ಲಿದ್ದು, ಇಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಪಾಕಶಾಲಾ ಕಟ್ಟಡವೂ ಇದೆ.

ಇತರ ಮಂದಿರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು 
      ಬಿಷ್ಣುಪುರದಲ್ಲಿ ಈ ಮಂದಿರಗಳಲ್ಲದೇ, ಲಾಲ್ ಜಿ ಮಂದಿರ, ಮದನಗೋಪಾಲ ಮಂದಿರ, ನಂದಲಾಲ್ ಮಂದಿರ, ಕೃಷ್ಣ ಬಲರಾಮ ಮಂದಿರ, ಮೃಣ್ಮಯೀದೇವಿಯ ಮಂದಿರ, ಛಿನ್ನಮಸ್ತಾದೇವಿಯ ಮಂದಿರ, ಮೊದಲಾದ ಅನೇಕ ಮಂದಿರಗಳಿವೆ. ಇವಲ್ಲದೇ, ದಲ್ ಮದಲ್ ಫಿರಂಗಿ, ಕೋಟೆಯ ಹೆಬ್ಬಾಗಿಲು, ಗುಮ್ ಗಢ ಎಂಬ ಅಪರಾಧಿಗಳ ಶಿಕ್ಷಾಸ್ಥಾನ, ಕಲ್ಲಿನ ರಥ, ವಸ್ತುಸಂಗ್ರಹಾಲಯ, ರಘುನಾಥ ಸಿಂಘನು ನಿರ್ಮಿಸಿದ ಲಾಲ್ ಬಂಧ್ ಕೆರೆ, ಮೊದಲಾದ ಅನೇಕ ಪ್ರೇಕ್ಷಣೀಯ ತಾಣಗಳಿವೆ ಇಲ್ಲಿ. ಇಲ್ಲಿ ಲಾಲ್ ಬಂಧ್ ಕೆರೆಯ ಬಗೆಗಿನ ಒಂದು ಕಥೆಯನ್ನು ಹೇಳಲೇ ಬೇಕು. ರಘುನಾಥ ಸಿಂಘನು ದೆಹಲಿಯಿಂದ ಬಹಾದುರ್ ಖಾನ್ ಎಂಬ ಸಂಗೀತಗಾರನನ್ನು ಇಲ್ಲಿಗೆ ಕರೆತಂದು ಹಿಂದೂಸ್ತಾನಿ ಘರಾನಾ ಸಂಗೀತವನ್ನು ಇಲ್ಲಿ ಪರಿಚಯಿಸಿದಾಗ, ಅವನೊಂದಿಗೆ ಬಂದ ಪರ್ಷಿಯಾ ನರ್ತಕಿ ಲಾಲ್ ಬಾಯಿಗೂ ಇವನಿಗೂ ಪ್ರೇಮವಾಗಿ, ಅವಳಿಗಾಗಿ ಲಾಲ್ ಬಂಧ್ ಕೆರೆಯನ್ನು ಇವನು ನಿರ್ಮಿಸಿದನೆಂದು ಹೇಳುತ್ತಾರೆ. ಆದರೆ ಅವರ ಪ್ರೇಮವನ್ನು ಸಹಿಸದ ಅವನ ರಾಣಿ ಚಂದ್ರಪ್ರಭೆಯು ಅವನನ್ನೂ ಲಾಲ್ ಬಾಯಿಯನ್ನೂ ಈ ಕೆರೆಯಲ್ಲಿ ದೋಣಿವಿಹಾರ ಮಾಡಿಸುತ್ತಾ ಕೆರೆಯಲ್ಲಿ ಮುಳುಗಿಸಿ ಕೊಂದು, ಅನಂತರ ತಾನೂ ಸಹಗಮನ ಮಾಡಿದಳೆಂಬ ಒಂದು ರೋಚಕ ಕಥೆಯಿದೆ. ಇನ್ನೊಂದು ಕಥೆಯ ಪ್ರಕಾರ, ಜನರು ಲಾಲ್ ಬಾಯಿ ಮತ್ತು ಅವಳಿಗೆ ರಾಜನಿಂದ ಹುಟ್ಟಿದ ಮಗುವನ್ನು ದೋಣಿಗೆ ಕಟ್ಟಿ ಮುಳುಗಿಸಿದರೆಂದು ಹೇಳುತ್ತಾರೆ. ಈ ಕೆರೆ ಭೂತಾವೇಶಿತವಾಗಿದೆಯೆಂದೂ ಅಮಾವಾಸ್ಯೆಯ ರಾತ್ರಿ ಇಲ್ಲಿ ಬಂದರೆ ಒಂದು ಹೆಣ್ಣಿನ ಆರ್ತನಾದ ಕೇಳುವುದೆಂದೂ ಇಲ್ಲಿನ ಜನರು ಹೇಳುತ್ತಾರೆ. 
      ಬಿಷ್ಣುಪುರ ಘರಾನಾ ಇಂದಿಗೂ ಪ್ರಸಿದ್ಧವಾಗಿದೆ.

ಇತರ ಆಕರ್ಷಣೆಗಳು 
        ಬಿಷ್ಣುಪುರವು ಹಲವಾರು ಕರಕುಶಲ ಕಲೆಗಳಿಗೆ ಪ್ರಸಿದ್ಧವಾಗಿದೆ. ಕೃಷ್ಣಲೀಲೆ ಹಾಗೂ ಪೌರಾಣಿಕ ಚಿತ್ರಗಳ ಅಂಚುಗಳಿರುವ ಬಾಲುಚಾರಿ ಎಂಬ ಬಗೆಯ ಸೀರೆ ಇಲ್ಲಿನ ಒಂದು ಮುಖ್ಯ ಕೊಡುಗೆಯಾಗಿದೆ. ಅಂತೆಯೇ ಇದು ಟೆರ್ರಕೋಟಾ ತಾಣವಾಗಿದ್ದು, ಅದ್ಭುತವಾದ ಟೆರ್ರಕೋಟ ಕಲಾತ್ಮಕ ವಸ್ತುಗಳು ಇಲ್ಲಿ ಸುಲಭ ಬೆಲೆಗೆ ದೊರೆಯುತ್ತವೆ. ಟೆರ್ರಕೋಟ ಶಂಖಗಳೂ ಇಲ್ಲಿನ ಒಂದು ಆಕರ್ಷಣೆ. ಹಿತ್ತಾಳೆಯ ಪಾತ್ರೆಗಳೂ ಕಲಾತ್ಮಕ ವಸ್ತುಗಳೂ ಇಲ್ಲಿನ ಇನ್ನೊಂದು ಆಕರ್ಷಣೆ. ಅಂತೆಯೇ ದಶಾವತಾರ ಕಾರ್ಡ್ ಗಳು ಹಾಗೂ ಒಡಿಶಾದ ಪಟಚಿತ್ರಗಳು ಇಲ್ಲಿನ ಇನ್ನಿತರ ಪ್ರಮುಖ ಆಕರ್ಷಣೆಗಳು. ಪರ್ಷಿಯಾ ಮೂಲದ ಗಂಜೀಫಾ ಚಿತ್ರಕಲೆಯ ಕಾರ್ಡ್ ಗಳ ಕ್ರೀಡೆ ಭಾರತದ ಹಲವೆಡೆಗಳಲ್ಲಿ ಬೆಳೆದು ಪ್ರಸಿದ್ಧವಾಗಿದ್ದು, ಚಿತ್ರಕಲೆಗೂ ಕ್ರೀಡೆಗೂ ತನ್ನದೇ ಆದ ಕಾಣ್ಕೆ ಕೊಟ್ಟಿದೆ. ಬಿಷ್ಣುಪುರದಲ್ಲೂ ಮಲ್ಲರಾಜರು ದಶಾವತಾರದ ಕಾರ್ಡ್ ಗಳ ಆಟ ಆಡುತ್ತಿದ್ದು ಈಗಲೂ ಇದು ಉಳಿದುಬಂದಿದೆ. ಫೌಜ್ ದಾರ್ ವಂಶದವರು ಪರಂಪರೆಯಿಂದ ಈ ಗಂಜೀಫಾ ಕಾರ್ಡ್ ಗಳನ್ನು ರಚಿಸುತ್ತಿದ್ದು, ಈಗ ಶೀತಲ್ ಫೌಜ್ ದಾರ್ ಎಂಬ ಕಲಾವಿದರು ಇದನ್ನು ಮಾಡುತ್ತಿದ್ದಾರೆ. ಮಾರ್ಗದರ್ಶಿಯೊಂದಿಗೆ ನಾನು ಅವರ ಕಫೇರಿಗೆ ಹೋಗಿ ಅವರನ್ನು ಮಾತನಾಡಿಸಿ ದಶಾವತಾರ ಕಾರ್ಡ್ ಗಳನ್ನು ಖರೀದಿಸಿದೆ. ವಿಷ್ಣುವಿನ ದಶಾವತಾರದ ಚಿತ್ರಗಳಿರುವ ಈ ಕಾರ್ಡ್ ಗಳನ್ನು ಬಟ್ಟೆಯನ್ನು ಬೇಲದ ಹಣ್ಣಿನ ರಸದಿಂದ ಗಟ್ಟಿಗೊಳಿಸಿ, ಸಸ್ಯವರ್ಣಗಳಿಂದ ಚಿತ್ರಗಳನ್ನು ರಚಿಸಿ ಮಾಡಲಾಗುತ್ತದೆ. ಇವನ್ನು ನಾವು ಕ್ರೀಡೆ ಇಲ್ಲವೇ ಸಂಗ್ರಹಕ್ಕಾಗಿ ಖರೀದಿಸಬಹುದು. ಇಲ್ಲಿ ನಾವು ನಮ್ಮಲ್ಲೂ ಇರುವ ಗಂಜೀಫಾ ರಘುಪತಿ ಭಟ್ ಎಂಬ ಗಂಜೀಫಾ ಕಲಾವಿದರನ್ನು ಸ್ಮರಿಸಬಹುದು. ಅವರ ಬಗ್ಗೆ ನಾನು ಶೀತಲ್ ಫೌಜ್ ದಾರ್ ಅವರ ಬಳಿ ಹೇಳಿದಾಗ ಅವರು ತಮಗೆ ಗೊತ್ತೆಂದರು. 
       ಬಿಷ್ಣುಪುರದಲ್ಲಿ ಉಳಿದುಕೊಳ್ಳಲು ಕೆಲವು ಹೋಟೆಲ್ ಗಳಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಒಂದೆರಡು ದಿನಗಳು ಇಲ್ಲಿರಬಹುದು, ಇಲ್ಲವೇ ಕೋಲ್ಕತಾದಿಂದ ಖಾಸಗಿ ವಾಹನದಲ್ಲಿ ಬೆಳಿಗ್ಗೆ ಬೇಗನೆ ಹೊರಟು, ಸಾಕಷ್ಟು ನೋಡಿ, ರಾತ್ರಿಯ‌ ಹೊತ್ತಿಗೆ ಹಿಂದಿರುಗಬಹುದು. ಬಿಷ್ಣುಪುರಕ್ಕೆ ಹೋಗುವ ದಾರಿಯಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶಾರದಾದೇವಿಯರ ಜನ್ಮಸ್ಥಳಗಳಾದ ಕಾಮಾರ್ಪುಕೂರ್, ಜಯರಾಂಬಾಟಿಗಳನ್ನೂ ನೋಡಬಹುದು. ಊಟ, ತಿಂಡಿಗಳು ಅಷ್ಟಾಗಿ ದೊರೆಯದಿರುವುದರಿಂದ, ಕೋಲ್ಕತಾದಿಂದಲೇ ಏನಾದರೂ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.



ಭಾನುವಾರ, ಜನವರಿ 18, 2026

ನೆನಪಿಗೆ ಬಂದ ರಾಮಾಯಣಗಳು

ನೆನಪಿಗೆ ಬಂದ ರಾಮಾಯಣಗಳು,ರಾಮಕಥೆಗಳು

ವಾಲ್ಮೀಕಿ ರಾಮಾಯಣ(ಸಂಸ್ಕೃತ)
ಅದ್ಭುತ ರಾಮಾಯಣ(ಸಂಸ್ಕೃತ)
ಆನಂದ ರಾಮಾಯಣ(ಸಂಸ್ಕೃತ)
ಅಧ್ಯಾತ್ಮ ರಾಮಾಯಣ(ಸಂಸ್ಕೃತ)
ತತ್ವಸಂಗ್ರಹ ರಾಮಾಯಣ(ಸಂಸ್ಕೃತ)
ಕಾಳಿದಾಸನ ರಘುವಂಶ(ಸಂಸ್ಕೃತ)
ಕುಮಾರದಾಸನ ಜಾನಕೀರಹಣ(ಸಂಸ್ಕೃತ,ಶ್ರೀಲಂಕಾ)
ಭಾಸನ ಪ್ರತಿಮಾನಾಟಕ(ಸಂಸ್ಕೃತ ನಾಟಕ)
ಭಾಸನ ಅಭಿಷೇಕ ನಾಟಕ(ಸಂಸ್ಕೃತ ನಾಟಕ)
ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿ(ಸಂಸ್ಕೃತ ನಾಟಕ)
ಭವಭೂತಿಯ ಮಹಾವೀರಚರಿತ(ಸಂಸ್ಕೃತ ನಾಟಕ)
ಭವಭೂತಿಯ ಉತ್ತರರಾಮಚರಿತ(ಸಂಸ್ಕೃತ ನಾಟಕ)
ಹನುಮಂತನ ಹನೂಮನ್ನಾಟಕ(ಸಂಸ್ಕೃತ ನಾಟಕ)
ಭಾಸ್ಕರಭಟ್ಟನ ಉನ್ಮತ್ತರಾಘವ(ಸಂಸ್ಕೃತ ನಾಟಕ)
ಜಯದೇವನ ಪ್ರಸನ್ನರಾಘವ(ಸಂಸ್ಕೃತ ನಾಟಕ)
ಮುರಾರಿಯ ಅನರ್ಘರಾಘವ(ಸಂಸ್ಕೃತ ನಾಟಕ)
ರಾಜಶೇಖರನ ಬಾಲರಾಮಾಯಣ(ಸಂಸ್ಕೃತ ನಾಟಕ)
ಮಾಯುರಾಜನ ಉದಾತ್ತರಾಘವ(ಸಂಸ್ಕೃತ ನಾಟಕ)
ರಾಮಭದ್ರದೀಕ್ಷಿತನ ಜಾನಕೀಪರಿಣಯ(ಸಂಸ್ಕೃತ ನಾಟಕ)
ಅದ್ಭುತದರ್ಪಣ(ಸಂಸ್ಕೃತ ನಾಟಕ)
ಕೃತ್ಯಾರಾವಣ(ಸಂಸ್ಕೃತ ನಾಟಕ)
ಸೇತುಬಂಧ(ಪ್ರಾಕೃತ)
ದಶರಥ ಜಾತಕ(ಪಾಲೀ ಬೌದ್ಧ ರಾಮಕಥೆ)
ವಿಮಲಸೂರಿಯ ಪಉಮಚರಿಯ ಅಥವಾ ಪದ್ಮಚರಿತ ಅಥವಾ ಪದ್ಮಪುರಾಣ(ಪ್ರಾಕೃತ ಜೈನರಾಮಾಯಣ)
ತುಳಸೀದಾಸರ ರಾಮಚರಿತಮಾನಸ(ಅವಧೀ-ಹಳೇಹಿಂದೀ)
ಕುಮಾರವಾಲ್ಮೀಕಿಯ ತೊರವೆ ರಾಮಾಯಣ(ಕನ್ನಡ)
ಬತ್ತಲೇಶ್ವರ ರಾಮಾಯಣ(ಕನ್ನಡ)
ಮುದ್ದಣನ ಅದ್ಭುತರಾಮಾಯಣ(ಕನ್ನಡ)
ಮುದ್ದಣನ ರಾಮಾಶ್ವಮೇಧ ನಾಟಕ(ಕನ್ನಡ)
ಕುವೆಂಪುರವರ ರಾಮಾಯಣದರ್ಶನಂ(ಕನ್ನಡ)
ನಾಗಚಂದ್ರಅಥವಾ ಅಭಿನವ ಪಂಪನ ರಾಮಚಂದ್ರಚರಿತಪುರಾಣ(ಕನ್ನಡ)
ಗಿರಿಧರ ರಾಮಾಯಣ(ಗುಜರಾತೀ)
ಮಾಧವಕಂದಲೀಯ ರಾಮಾಯಣ(ಅಸ್ಸಾಮೀ)
ಸರಳಾದಾಸ್ ರ ವಿಲಂಕರಾಮಾಯಣ(ಒಡಿಸ್ಸೀ)
ರಂಗನಾಥ ರಾಮಾಯಣ(ತೆಲುಗು)
ಭಾವಾರ್ಥ ರಾಮಾಯಣ(ಮರಾಠೀ)
ಕಂಬರಾಮಾಯಣ(ತಮಿಳು)
ಏಳುತಚ್ಚನ್ ನ ಅಧ್ಯಾತ್ಮರಾಮಾಯಣ(ಮಲಯಾಳಂ)
ಕೃತ್ತಿವಾಸ ರಾಮಾಯಣ(ಬಂಗಾಳಿ)
ರಾಮಾವತಾರಚರಿತ್ರ(ಕಾಶ್ಮೀರಿ)
ಗೋವಿಂದರಾಮಾಯಣ(ಪಂಜಾಬಿ)
ರಾಧೇಶ್ಯಾಂ ರಾಮಾಯಣ(ನೇಪಾಳೀ)
ರಾಮಕೀನ್(ಥೈಲ್ಯಾಂಡ್)
ಕಕವಿನ್ ರಾಮಾಯಣ(ಇಂಡೋನೇಷ್ಯಾ)
ಮಹಾರಾಡಿಯಾ ಲವಾನಾ(ಫಿಲಿಪೈನ್ಸ್)
ಫ್ರಾಲಂ ಫ್ರಾಲಕ್(ಲಾವೋಸ್)
ರೀಮ್ ಕೇರ್(ಕಾಂಬೋಡಿಯಾ)
ಹಿಕಾಯತ್ ಸೆರಿ ರಾಮಾಯಣ(ಮಲೇಶಿಯಾ)
ರಾಮ ವತ್ತು,ತಿರಿ ರಾಮ(ಬರ್ಮ)

ಗುರುವಾರ, ಜನವರಿ 15, 2026

ರಾಮಾಯಣದ ಉಪಕಥೆಗಳು

ಇತ್ತೀಚೆಗಷ್ಟೇ ರಾಮಾಯಣದ ಉಪಕಥೆಗಳು ಎಂಬ ನನ್ನ ಹೊಸ ಪುಸ್ತಕ, ಸಪ್ನ ಬುಕ್ ಹೌಸ್ ನಿಂದ ಬಿಡುಗಡೆಯಾಗಿದೆ. ಇದು ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ, ಅಂತೆಯೇ ನವಕರ್ನಾಟಕ, ಅಂಕಿತ, ರಾಷ್ಟ್ರೋತ್ಥಾನ ಸಾಹಿತ್ಯ, ಹರಿವು ಬುಕ್ಸ್ ಮೊದಲಾದ ಸುಪ್ರಸಿದ್ಧ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ. ಈ ಕಥಾಸಂಕಲನದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಉಪಕಥೆಗಳನ್ನೂ ಸಂಗ್ರಹಿಸಿ ಸರಳ ಕನ್ನಡದಲ್ಲಿ ನಿರೂಪಿಸಿದ್ದೇನೆ. 
      ನಮ್ಮ ಆರ್ಷ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ, ಮುಖ್ಯವಾಗಿ ಶ್ರೀ ರಾಮನ ಕಥೆ ಹಾಗೂ ಕೌರವ, ಪಾಂಡವರ ಕಥೆಗಳನ್ನು ಹೇಳಿದರೂ ಇವುಗಳಲ್ಲಿ ಬಹಳಷ್ಟು ಉಪಕಥೆಗಳು ಬರುತ್ತವೆ. ಉಪಕಥೆ ಅಥವಾ ಉಪಾಖ್ಯಾನ ಎಂದರೆ, ಮುಖ್ಯಕಥೆಯ ಮಧ್ಯೆ ಬರುವ ಇತರ ಕಥೆಗಳು. ಈ ಕಥೆಗಳನ್ನು ಮುಖ್ಯ ಕಥೆಯ ಪಾತ್ರಗಳೇ ಸಂದರ್ಭೋಚಿತವಾಗಿ ಹೇಳುತ್ತವೆ. ರಾಮಾಯಣದಲ್ಲಿ, ವಿಶ್ವಾಮಿತ್ರರು ತಮ್ಮ ಯಜ್ಞ ಸಂರಕ್ಷಣೆಗಾಗಿ ರಾಮ, ಲಕ್ಷ್ಮಣರನ್ನು ಕರೆದೊಯ್ದಾಗ ದಾರಿಯಲ್ಲಿ ತಾಟಕಿ ಎಂಬ ರಾಕ್ಷಸಿ ಸಿಕ್ಕಾಗ ಅವಳ ಪೂರ್ವಕಥೆಯನ್ನು ಹೇಳುತ್ತಾರೆ. ಅನಂತರ, ಅವರು ಸಿದ್ಧಾಶ್ರಮ ಎಂಬ ಆಶ್ರಮದ ಬಳಿ ಬಂದಾಗ, ಆ ಆಶ್ರಮದಲ್ಲೇ ಮಹಾವಿಷ್ಣುವಿನ ವಾಮನಾವತಾರ ನಡೆದಿತ್ತೆಂದು ಹೇಳುತ್ತಾ ಆ ಕಥೆಯನ್ನು ಹೇಳುತ್ತಾರೆ. ಹೀಗೆಯೇ ಗಂಗಾನದಿಯ ಬಳಿ ಬಂದಾಗ, ಗಂಗಾನದಿ ಹೇಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು, ಅದಕ್ಕಾಗಿ ಭಗೀರಥನು ಎಷ್ಟು ಕಷ್ಟಪಟ್ಟ ಎಂಬ ಗಂಗಾವತರಣದ ದೀರ್ಘ ಕಥೆ ಹೇಳುತ್ತಾರೆ.ಈ ಸಂದರ್ಭದಲ್ಲೇ ಗಂಗೆಯ ಹಿರಿಯ ಸಹೋದರಿಯಾದ ಪಾರ್ವತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಯಿತು ಎನ್ನುತ್ತಾ ಅವರಿಗೆ ಕಾರ್ತಿಕೇಯನು ಹೇಗೆ ಹುಟ್ಟಿದ ಎಂಬ ಕಥೆ ಹೇಳುತ್ತಾರೆ. ಮುಂದೆ ಅವರು ವಿಶಾಲಾ ಎಂಬ ನಗರಿಗೆ ಬರಲು, ಆ ನಗರಿ ಇದ್ದ ಸ್ಥಳದಲ್ಲಿ ಹಿಂದೆ ಕಶ್ಯಪರ ಪತ್ನಿ ದಿತಿ ತಪಸ್ಸು ಮಾಡಿ ಮರುತ್ತರೆಂಬ ದೇವತೆಗಳನ್ನು ಮಕ್ಕಳಾಗಿ ಪಡೆದುಕೊಂಡ ಕಥೆ, ಅವಳು ಏಕೆ ತಪಸ್ಸು ಮಾಡಿದಳು ಎನ್ನುವುದಕ್ಕೆ ಪೂರ್ವಕಥೆಯಾಗಿ ಸಮುದ್ರಮಥನದ ಕಥೆ, ಇವನ್ನು ವಿಶ್ವಾಮಿತ್ರರು ಹೇಳುತ್ತಾರೆ. ಅನಂತರ ಗೌತಮರ ಆಶ್ರಮಕ್ಕೆ ಬರಲು, ಇಂದ್ರ ಮತ್ತು ಅಹಲ್ಯೆಯ ಕಥೆ ಹೇಳುತ್ತಾರೆ. ಮುಂದೆ ಅವರು ಮಿಥಿಲೆಗೆ ಹೋದಾಗ, ಅಲ್ಲಿ ಜನಕನ ಪುರೋಹಿತರಾಗಿದ್ದ ಗೌತಮರ ಪುತ್ರರಾದ ಶತಾನಂದರು ವಿಶ್ವಾಮಿತ್ರರ ಕಥೆಯನ್ನೇ ರಾಮ, ಲಕ್ಷ್ಮಣರಿಗೆ ಹೇಳುತ್ತಾರೆ. ರಾಜರಾಗಿದ್ದ ವಿಶ್ವಾಮಿತ್ರರು ಹೇಗೆ ಬ್ರಹ್ಮರ್ಷಿಗಳಾದರು ಎನ್ನುವುದು ಒಂದು ಸುದೀರ್ಘ ಹಾಗೂ ರೋಚಕ ಕಥಾನಕ. ಈ ದೊಡ್ಡ ಕಥೆಯ ಮಧ್ಯೆ, ತ್ರಿಶಂಕುವಿನ ಕಥೆ, ಮೇನಕೆಯ ಕಥೆ, ಶುನಶ್ಶೇಫನ ಕಥೆ, ಮೊದಲಾದ ಉಪೋಪಕಥೆಗಳೂ ಬರುತ್ತವೆ. ರಾಮಾಯಣದ ಕಥೆ ಮುಂದುವರೆದಂತೆ, ಜಟಾಯು, ಸಂಪಾತಿಗಳ ಕಥೆ, ವಾಲಿ, ಸುಗ್ರೀವರ ಪೂರ್ವಕಥೆಗಳು ಬರುತ್ತವೆ. ರಾಮಾಯಣದಲ್ಲಿ ಮುಖ್ಯವಾಗಿ ಉಪಕಥೆಗಳು ಇರುವುದು ಬಾಲಕಾಂಡದಲ್ಲಿ. ಅನಂತರ ನಮಗೆ ಉಪಕಥೆಗಳು ಹೆಚ್ಚಾಗಿ ಸಿಗುವುದು ಉತ್ತರಕಾಂಡದಲ್ಲಿ. ಶ್ರೀ ರಾಮನು ಅಯೋಧ್ಯೆಗೆ ಹಿಂದಿರುಗಿ ಸಿಂಹಾಸನಾರೂಢನಾದಾಗ, ಅಗಸ್ತ್ಯಾದಿ ಮುನಿಗಳು ಬಂದು ಮಹಾಪರಾಕ್ರಮಿಯೂ ಲೋಕಕಂಟಕನೂ ಆಗಿದ್ದ ರಾವಣನನ್ನು ಕೊಂದುದಕ್ಕಾಗಿ ಅವನನ್ನು ಅಭಿನಂದಿಸುತ್ತಾರೆ. ಆದರೆ ಅವನು ರಾವಣನನ್ನು ಕೊಂದುದಕ್ಕಿಂತಲೂ ಅವನ ತಮ್ಮ ಲಕ್ಷ್ಮಣನು ರಾವಣನ ಪುತ್ರ ಇಂದ್ರಜಿತುವನ್ನು ಕೊಂದುದು ದೊಡ್ಡ ವಿಷಯ ಎನ್ನಲು ಅಚ್ಚರಿಗೊಂಡ ರಾಮನು ಅದು ಹೇಗೆ ಎನ್ನಲು ಅಗಸ್ತ್ಯರು ಇಂದ್ರಜಿತುವಿನ ಕಥೆಯನ್ನು ಹೇಳುವ ಮೊದಲು ರಾವಣನ ಸಮಗ್ರ ಪೂರ್ವ ಕಥೆಗಳನ್ನು ಹೇಳುತ್ತಾರೆ. ಈ ಭಾಗವಂತೂ ಅತ್ಯಂತ ರೋಚಕವಾಗಿದೆ. ಸಾಮಾನ್ಯವಾಗಿ ಯಾರಾದರೂ ರಾಮಾಯಣದ ಸ್ಥೂಲ ಕಥೆಯನ್ನು ತಿಳಿದಿರುತ್ತಾರಾದರೂ ರಾವಣನ ಮೂಲ ಇತಿಹಾಸ, ಅವನು ಯಾರ ಮಗ, ಅವನೇಕೆ ಅಷ್ಟು ದುಷ್ಟನಾದ, ಅವನಿಗೆ ಬ್ರಹ್ಮನಿಂದ ಬಂದ ವರ, ಅವನ ದಿಗ್ವಿಜಯಗಳು, ಸಾಕ್ಷಾತ್ ಯಮನೊಂದಿಗೇ ಅವನು ಮಾಡಿದ ರೋಚಕ ಯುದ್ಧ, ಅವನ ಸ್ತ್ರೀ ವ್ಯಾಮೋಹ, ಲೋಕಕಂಟಕತೆ, ಅವನಿಗೆ ಬಂದ ಶಾಪಗಳು, ಕೊನೆಗೆ ಅಂಥ ಮಹಾಪರಾಕ್ರಮಿಯಾದ ಅವನಿಗೂ ಆದ ಕೆಲವು ಪರಾಭವಗಳು, ಇವೆಲ್ಲವೂ ಬಹುತೇಕರಿಗೆ ಗೊತ್ತಿರದ ವಿವರಗಳು. ಇಂದಿಗೂ ಎಷ್ಟೋ ಮುಗ್ಧ ಜನರು ರಾವಣನು ಸೀತಾಪಹರಣವನ್ನು ಬಿಟ್ಟರೆ ಬೇರೇನೂ ತಪ್ಪೇ ಮಾಡಿಲ್ಲವೆಂದೂ ಸೀತೆಯನ್ನೂ ಅವನು ಬಲಾತ್ಕರಿಸದೇ ತನ್ನ ತಂಗಿ ಶೂರ್ಪನಖಿಗೆ ರಾಮ, ಲಕ್ಷ್ಮಣರು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಸೀತಾಪಹರಣ ಮಾಡಿದನೆಂದೂ ವಾದಿಸುತ್ತಾರೆ. ಆದರೆ ಸ್ವಾರಸ್ಯವೆಂದರೆ, ರಾವಣನು ತನ್ನ ಸ್ವಂತ ತಂಗಿ ಶೂರ್ಪನಖಿಯ ಗಂಡನನ್ನೇ ಕೊಂದ ದುಷ್ಟ ಎನ್ನುವುದು! ಸೀತೆಯನ್ನು ಬಲಾತ್ಕರಿಸದಿದ್ದುದರ ಕಾರಣ, ಅವನಿಗಿದ್ದ ಶಾಪದ ಭಯ! ಈ ಅದ್ಭುತ ವಿಚಾರಗಳು ಇಲ್ಲಿ ಸಿಗುತ್ತವೆ. ಆದರೂ ಕೆಲವರು ಉತ್ತರಕಾಂಡವು ವಾಲ್ಮೀಕಿಕೃತವಲ್ಲ, ಹಾಗಾಗಿ ರಾವಣನ ಕುರಿತಾದ ಈ ಕಥೆಗಳೆಲ್ಲಾ ಸುಳ್ಳು ಎಂದು ವಾದಿಸುತ್ತಾರೆ. ಆದರೆ ರಾವಣನು ಸತ್ತಾಗ ಅವನ ಪಟ್ಟದ ರಾಣಿ ಮಂದೋದರಿಯೇ ರೋದಿಸುತ್ತಾ ಅವನು ಮಾಡಿದ ಪಾಪಕಾರ್ಯಗಳನ್ನೆಲ್ಲ ಹೇಳುತ್ತಾಳೆ. ಅಲ್ಲದೇ ಕೆ.ಎಸ್.ನಾರಾಯಣಾಚಾರ್ಯರೇ ಮೊದಲಾದ ವಿದ್ವಾಂಸರು ಉತ್ತರಕಾಂಡವೂ ವಾಲ್ಮೀಕಿ ಕೃತವೆಂದೇ ತೋರಿಸಿದ್ದಾರೆ. ಇಷ್ಟು ಪರಾಕ್ರಮಿಯಾದರೂ ರಾವಣನು ಇಂದ್ರನಿಗೆ ಸಿಕ್ಕುಬಿದ್ದಾಗ ಅವನ ಮಗ ಮೇಘನಾದನು ಅವನನ್ನು ಬಿಡಿಸಿ ಇಂದ್ರಜಿತ್ ಎಂಬ ಹೆಸರು ಪಡೆಯುತ್ತಾನೆ. ಹೀಗಾಗಿ ಅವನು ರಾವಣನಿಗಿಂತ ಹೆಚ್ಚಿನ ಪರಾಕ್ರಮಿಯಾಗಿರುತ್ತಾನೆ. ಶ್ರೀ ರಾಮನು ರಾವಣ, ಇಂದ್ರಜಿತ್ ಇಬ್ಬರ ಕಥೆಗಳನ್ನೂ ಕೇಳಿ ಇವರಿಬ್ಬರಿಗಿಂತಲೂ ಹನುಮಂತನು ಹೆಚ್ಚಿನ ಪರಾಕ್ರಮಿಯೆಂದು ಅಭಿಪ್ರಾಯ ಪಡುತ್ತಾ ಇಷ್ಟಾದರೂ ವಾಲಿ, ಸುಗ್ರೀವರಿಗೆ ವಿರೋಧವಾದಾಗ ಅವನೇಕೆ ಸುಮ್ಮನಿದ್ದನು ಎಂದು ಕೇಳಲು, ಅಗಸ್ತ್ಯರು ಹನುಮಂತನ ಬಾಲ್ಯದ ಕಥೆಯನ್ನು ಹೇಳಿ ಅವನಿಗೆ ಬಂದ ಶಾಪದ ಬಗ್ಗೆ ಹೇಳುತ್ತಾರೆ. ಅನಂತರ, ದಂಡಕಾರಣ್ಯದ ಕಥೆ, ತನ್ನ ಹೆಣವನ್ನು ತಾನೇ ತಿನ್ನಬೇಕಾದ ಶ್ವೇತನೆಂಬ ರಾಜನ ವಿಚಿತ್ರ ಕಥೆ, ಗೋಸುಂಬೆಯಾಗಿ ಹುಟ್ಟುವ ನೃಗ ಮಹಾರಾಜನ ಕಥೆ, ಪುರುಷನಾಗಿದ್ದು ಸ್ತ್ರೀಯಾಗುವ ಇಲರಾಜನ ಕಥೆ, ವೃದ್ಧಾಪ್ಯದ ಶಾಪ ಪಡೆಯುವ ಯಯಾತಿಯ ಕಥೆ, ಹೀಗೆ ಹಲವಾರು ರೋಚಕ ಕಥೆಗಳು ಬರುತ್ತವೆ. ಕೆಲವು ಕಥೆಗಳನ್ನು ರಾಮ, ಲಕ್ಷ್ಮಣರು ಪರಸ್ಪರ ಹೇಳಿಕೊಳ್ಳುತ್ತಾರೆ. 
      ಕಥೆಗಳ ಬೃಹತ್ ಗಣಿಯಾದ ಮಹಾಭಾರತದಲ್ಲಿ ಬರುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇಲ್ಲವಾದರೂ ಒಂದು ಒಳ್ಳೆಯ ಕಥಾಸಂಕಲನಕ್ಕೆ ಆಗುವಷ್ಟು ಉಪಕಥೆಗಳು ರಾಮಾಯಣದಲ್ಲಿ ಇವೆ. ಈ ಕಥೆಗಳನ್ನು ಸಂಗ್ರಹಿಸಿ ನಿರೂಪಿಸುವಾಗ, ಅವುಗಳನ್ನು ಯಾರು, ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂಬುದನ್ನು ಸೂಚಿಸಿದ್ದೇನೆ. ಇದರಿಂದ, ರಾಮಾಯಣದ ಒಂದು ಪುಟ್ಟ ಪಯಣವನ್ನು ಮಾಡಿದಂತೆಯೂ ಆಗುತ್ತದೆ. 
      ಕಥೆಗಳು ಅಥವಾ ಪುಸ್ತಕಗಳು ಎಂದರೆ ಈಗ ಕೇವಲ ಸಾಮಾಜಿಕ ಕಥೆ ಕಾದಂಬರಿಗಳಷ್ಟೇ ಎಂಬ ಭಾವನೆ ಬಂದುಬಿಟ್ಟಿದೆ. ಇವು ಶ್ರೇಷ್ಠವೇ, ಇಲ್ಲವೆಂದೇನಿಲ್ಲ. ಆದರೆ ಯುರೋಪಿನ ಮೂಲದಿಂದ ಬಂದ ಈ ಸಾಹಿತ್ಯ ಪ್ರಕಾರ ಹೇಗೆ ಚೆನ್ನಾಗಿರುವುದೋ, ಹಾಗೆಯೇ ಭಾರತೀಯ ಮೂಲದ ಕಥಾಪರಂಪರೆಯನ್ನೂ ನಾವು ಗೌರವಿಸಬೇಕು ಹಾಗೂ ಆಸ್ವಾದಿಸಬೇಕು. ನಮ್ಮ ಕಥಾಪರಂಪರೆ ಬಹಳ ದೊಡ್ಡದು. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಸ್ಥಳಪುರಾಣಗಳು, ಬೃಹತ್ಕಥೆ ಆಧರಿತ ಕಥಾಸರಿತ್ಸಾಗರ, ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಂಶತಿ, ಪುರುಷಪರೀಕ್ಷಾ, ಶುಕಸಪ್ತತಿ, ಬೌದ್ಧ ಜಾತಕ ಕಥೆಗಳು, ಬೌದ್ಧ ಅವದಾನ ಕಥೆಗಳು, ಬೃಹತ್ ಕಥಾಕೋಶ, ವಡ್ಡಾರಾಧನೆ, ಪುಣ್ಯಾಸ್ರವ, ಧರ್ಮಾಮೃತ, ಮೊದಲಾದ ಬಹಳಷ್ಟು ಜೈನ ಕಥಾ ಕೋಶಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ! ಈ ಎಲ್ಲಾ ಗ್ರಂಥಗಳಲ್ಲಿ ವಿಪುಲ ಕಥಾಸಾಮಗ್ರಿ ಇದೆ. ಇವನ್ನೆಲ್ಲಾ ಓದಿದರೆ, ಕಾಂತಾರ, ಬಾಹುಬಲಿಗಳಂಥ ಇನ್ನಷ್ಟು ಮತ್ತಷ್ಟು ಅದ್ಭುತ ಫ್ಯಾಂಟಸಿ ಚಿತ್ರಗಳನ್ನು ನಿರ್ಮಿಸಬಹುದು.
     ಇಂಥ ಕೆಲವು ಕಥಾಸಂಕಲನಗಳನ್ನು ನಾನು ಸಂಸ್ಕೃತದಿಂದ ಕನ್ನಡಕ್ಕೆ ತಂದಿದ್ದೇನೆ. ಇನ್ನೂ ತರುತ್ತಿದ್ದೇನೆ. ಇದೀಗ ರಾಮಾಯಣದ ಉಪಕಥೆಗಳು ಬಂದಿದೆ. ಮಹಾಭಾರತದ ಉಪಕಥೆಗಳು ಸಿದ್ಧವಾಗುತ್ತಿದೆ. ನನ್ನ ಈ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ನನ್ನನ್ನು ಪ್ರೋತ್ಸಾಹಿಸಿ ಎಂದು ಕೋರುತ್ತೇನೆ.
      ಈ ಪುಸ್ತಕವನ್ನು ಸುವಿಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಅತ್ಯಂತ ಸೊಗಸಾಗಿ ಪ್ರಕಟಿಸಿದೆ. ಹಾಗೆಯೇ ಮುಖಪುಟದ ಚಿತ್ರ ಮತ್ತು ಒಳಪುಟಗಳ ಚಿತ್ರಗಳನ್ನು ಕಲಾವಿದರಾದ ಮೋನಪ್ಪ ಅವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಮುದ್ರಕರು ಸೊಗಸಾಗಿ ಮುದ್ರಿಸಿದ್ದಾರೆ. ಇದು ಕಿರಿಯರಿಗೆ, ಹಾಗೂ ಹಿರಿಯರಿಗೆ ಇಬ್ಬರಿಗೂ ಬಹಳ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಈ ನನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ ಪ್ರಕಟಿಸಿದ ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ದೊಡ್ಡೆಗೌಡರಿಗೆ, ಪ್ರಧಾನ ಮುಖ್ಯಸ್ಥರಾದ ಶ್ರೀ ನಿತಿನ್ ಷಾ ಅವರಿಗೆ, ಕಲಾವಿದ ಮೋನಪ್ಪ ಅವರಿಗೆ, ದಿವ್ಯ ಪ್ರಿಂಟ್ರಾನಿಕ್ಸ್ ಡಿ ಟಿ ಪಿ ಆಪರೇಟರ್ ರಾಮಕೃಷ್ಣರಿಗೆ, ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.