ಅದ್ಭುತ ರಾಮಾಯಣ, ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಾಗಿದೆ. ಸಂಸ್ಕೃತದಲ್ಲಿ ಮೂಲ ವಾಲ್ಮೀಕಿ ರಾಮಾಯಣವಲ್ಲದೇ ಅದ್ಭುತ, ಆನಂದ, ಮತ್ತು ಅಧ್ಯಾತ್ಮ ರಾಮಾಯಣಗಳೆಂಬ ಮೂರು ಬೇರೆಯ ರಾಮಾಯಣಗಳಿವೆ. ಇವೂ ಕೂಡ ವಾಲ್ಮೀಕಿ ಮಹರ್ಷಿಗಳೇ ರಚಿಸಿದರೆಂಬ ಪ್ರತೀತಿಯಿದ್ದು ಅವುಗಳಲ್ಲೂ ಹಾಗೆಯೇ ಹೇಳಲಾಗಿದೆ. ಆದರೆ ಮೂಲ ವಾಲ್ಮೀಕಿ ರಾಮಾಯಣಕ್ಕಿಂತ ಇವು ಬಹಳ ವಿಭಿನ್ನವಾಗಿದ್ದು ಹಲವಾರು ವಿಚಿತ್ರ ಹಾಗೂ ಸ್ವಾರಸ್ಯಕರ ಕಥೆಗಳನ್ನೊಳಗೊಂಡಿವೆ. ಅಲ್ಲದೇ ಅನೇಕ ಆಧ್ಯಾತ್ಮಿಕ ವಿಚಾರಗಳೂ ಇವುಗಳಲ್ಲಿವೆ. ಇವುಗಳಲ್ಲಿ ಶ್ರೀರಾಮನನ್ನು ಮುಖ್ಯವಾಗಿ ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದು ಭಗವಂತನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಶ್ರೀರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದರೂ ಬಹುತೇಕ ಮಾನವನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಹಾಗಾಗಿ ವಾಲ್ಮೀಕಿ ರಾಮಾಯಣದಲ್ಲಿ ರಸಪೋಷಣೆ ಹೆಚ್ಚಾಗಿದೆ. ಈ ರಾಮಾಯಣಗಳನ್ನು ಇತರರು ಯಾರೋ ರಚಿಸಿ ವಾಲ್ಮೀಕಿಗಳ ಹೆಸರಿನಲ್ಲಿ ಪ್ರಚುರಪಡಿಸಿರಬೇಕು. ಮಹಾನ್ ಸಂಸ್ಕೃತ ವಿದ್ವಾಂಸರಾದ ವಿ.ರಾಘವನ್ ಅವರು ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳನ್ನು ಕುರಿತು ಆಂಗ್ಲ ಭಾಷೆಯಲ್ಲಿ ಒಂದು ಸೊಗಸಾದ ಚಿಕ್ಕ ಗ್ರಂಥವನ್ನು ಬರೆದಿದ್ದಾರೆ.
ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳಲ್ಲಿ ಅದ್ಭುತ ರಾಮಾಯಣ ಅತ್ಯಂತ ಚಿಕ್ಕದಾಗಿದ್ದು ಕೇವಲ ಇಪ್ಪತ್ತೇಳು ಸರ್ಗಗಳನ್ನು ಹೊಂದಿದೆ. ಸರಳವಾದ ಸಂಸ್ಕೃತದಲ್ಲಿ ರಚಿತವಾಗಿರುವ ಈ ರಾಮಾಯಣದಲ್ಲಿ ಮೂಲ ರಾಮಾಯಣದ ಕಥೆ ಬಹಳ ಸಂಕ್ಷಿಪ್ತವಾಗಿ ಬಂದಿದೆ. ಇತರ ವಿಚಾರಗಳೇ ಹೆಚ್ಚಾಗಿವೆ. ಮೊದಲಿಗೆ, ವಾಲ್ಮೀಕಿ ಮಹರ್ಷಿ ಮತ್ತು ಅವರ ಶಿಷ್ಯ ಭರದ್ವಾಜರ ಸಂವಾದ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲೂ ಇವರಿಬ್ಬರೂ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಭಾರದ್ವಾಜರು, ವಾಲ್ಮೀಕಿ ಮಹರ್ಷಿಗಳು ಶತಕೋಟಿ ಶ್ಲೋಕಗಳನ್ನುಳ್ಳ ರಾಮಾಯಣವನ್ನು ರಚಿಸಿರುವರೆಂದೂ ಅದು ಬ್ರಹ್ಮಲೋಕದಲ್ಲಿ ಪ್ರಸಿದ್ಧವಾಗಿರುವುದೆಂದೂ ಅದರಲ್ಲಿರುವ ಗುಪ್ತ ವಿಚಾರಗಳನ್ನು ಹೇಳಬೇಕೆಂದು ಕೇಳುತ್ತಾರೆ. ಆಗ ಸಂತೋಷಗೊಂಡ ವಾಲ್ಮೀಕಿಗಳು, ಸೀತಾರಾಮರು ಮೂಲತಃ ಪ್ರಕೃತಿ, ಪುರುಷರೆಂದು ಆಧ್ಯಾತ್ಮಿಕವಾಗಿ ಆರಂಭಿಸಿ ಈ ಅದ್ಭುತ ರಾಮಾಯಣವನ್ನು ಹೇಳುತ್ತಾರೆ
ಇಲ್ಲಿ ವಿಷ್ಣು, ಲಕ್ಷ್ಮಿಯರು ನಾರದರ ಶಾಪದಿಂದ ರಾಮ,ಸೀತೆಯರಾಗಿ ಹುಟ್ಟಿದರೆಂಬ ಸ್ವಾರಸ್ಯಕರ ಕಥೆಯಿದೆ. ನಾರದ ಮತ್ತು ಪರ್ವತ ಋಷಿಗಳು ಅಂಬರೀಷ ರಾಜನ ಮಗಳಾದ ಶ್ರೀಮತಿಯನ್ನು ಮದುವೆಯಾಗಬಯಸಿ ವಿಷ್ಣುವಿನ ಮೂಲಕ ಪರಸ್ಪರರ ಮುಖಗಳನ್ನು ಕಪಿಮುಖಗಳಂತೆ ಮಾಡಿಸಲು, ಶ್ರೀಮತಿಯು ಅವರನ್ನು ಬಿಟ್ಟು ಸ್ವಯಂವರಕ್ಕೆ ಆಗಮಿಸಿದ ವಿಷ್ಣುವನ್ನೇ ಮದುವೆಯಾಗುತ್ತಾಳೆ! ಇದರಿಂದ ಕುಪಿತಗೊಂಡ ಅವರಿಬ್ಬರೂ ವಿಷ್ಣುವಿಗೆ ಮನುಷ್ಯನಾಗಿ ಹುಟ್ಟುವಂತೆ ಶಪಿಸುತ್ತಾರೆ! ಇದೇ ವಿಷ್ಣುವು ರಾಮನಾಗಿ ಅವತರಿಸಲು ಕಾರಣ. ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ. ಅಂತೆಯೇ ಲಕ್ಷ್ಮಿಯ ದಾಸಿಯರು ಒಂದು ಸಮಾರಂಭದಲ್ಲಿ ನಾರದರನ್ನು ಓಡಿಸಿ ತುಂಬುರುವನ್ನು ಸನ್ಮಾನಿಸಲು ಅವರು ಕುಪಿತರಾಗಿ ಲಕ್ಷ್ಮಿಗೆ ರಾಕ್ಷಸ ಗರ್ಭದಲ್ಲಿ ಜನಿಸುವಂತೆ ಶಪಿಸುತ್ತಾರೆ! ಹಾಗಾಗಿ ಲಕ್ಷ್ಮಿಯು ಸ್ವಾರಸ್ಯಕರ ತಿರುವುಗಳಿಂದ ರಾವಣನ ಪತ್ನಿ ಮಂದೋದರಿಯ ಉದರದಲ್ಲಿ ಜನಿಸುತ್ತಾಳೆ! ಸೀತೆಯು ರಾವಣನ ಮಗಳೆಂಬ ಜನಜನಿತ ಕಥೆಗೆ ಇಲ್ಲಿದೆ ಮೂಲ. ತುಂಬುರುವನ್ನು ಸನ್ಮಾನಿಸಲು ಅವನು ಸಂಗೀತಜ್ಞನಾದುದೇ ಕಾರಣವೆಂದು ತಿಳಿದ ನಾರದರು ಗಾನಬಂಧು ಎಂಬ ಗೂಬೆಯಿಂದ ಬಹಳ ಕಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಇದೊಂದು ಬಹಳ ಸ್ವಾರಸ್ಯಕರ ಕಥೆ! ಇದೇ ಸಂದರ್ಭದಲ್ಲಿ ಹರಿಭಕ್ತ ಹರಿಮಿತ್ರನ ಕಥೆಯೂ ಬರುತ್ತದೆ
ಇಲ್ಲಿ ಶ್ರೀರಾಮನು ಹನುಮಂತನಿಗೆ ತನ್ನ ನಾರಾಯಣ ಸ್ವರೂಪವನ್ನು ತೋರಿಸಿ ಜ್ಞಾನೋಪದೇಶ ಮಾಡುವ ಒಂದು ವಿಶೇಷ ಅಧ್ಯಾಯವಿದೆ.
ಅನಂತರ ಬರುವುದೇ ಅದ್ಭುತ ರಾಮಾಯಣದ ಮುಖ್ಯ ಕಥೆ. ಋಷಿಮುನಿಗಳು ಅಯೋಧ್ಯೆಗೆ ಬಂದು ಶ್ರೀ ರಾಮನನ್ನು ರಾವಣನನ್ನು ಕೊಂದುದಕ್ಕಾಗಿ ಪ್ರಶಂಸಿಸಲು, ಸೀತೆಯು ನಕ್ಕು ದಶಮುಖ ರಾವಣನ ಅಣ್ಣನಾದ ಸಹಸ್ರಮುಖ ರಾವಣನು ಪುಷ್ಕರ ದ್ವೀಪವನ್ನು ಆಳುತ್ತಿರುವನೆಂದೂ ಅವನನ್ನು ಕೊಂದರೆ ಅದು ನಿಜವಾದ ಸಾಹಸವೆಂದೂ ಹೇಳಲು ರಾಮನು ವಾನರ, ರಾಕ್ಷಸ ಸೈನ್ಯಗಳೊಂದಿಗೆ ಪುಷ್ಕರ ದ್ವೀಪಕ್ಕೆ ಹೋಗಿ ಮುತ್ತಿಗೆ ಹಾಕಿ ಸಹಸ್ರಮುಖ ರಾವಣನೊಂದಿಗೆ ಯುದ್ಧ ಮಾಡಲು, ಅವನು ವಾನರ, ರಾಕ್ಷಸ ಸೈನ್ಯಗಳನ್ನು ತನ್ನ ಬಾಣಗಳಿಂದ ಅವರವರ ರಾಜ್ಯಗಳಿಗೇ ದೂಡಿ, ರಾಮನನ್ನೂ ಮೂರ್ಛೆಗೊಳಿಸಿಬಿಡುತ್ತಾನೆ! ಆಗ ಸೀತೆಯು ಮಹಾಕಾಳಿಯಾಗಿ ಸಹಸ್ರಮುಖ ರಾವಣನನ್ನು ಕೊಲ್ಲುತ್ತಾಳೆ! ಅನಂತರ ರಾಮನು ಎಚ್ಚೆತ್ತು ಸೀತೆಯನ್ನು ಸಹಸ್ರನಾಮ ಸ್ತೋತ್ರದಿಂದ ಸ್ತುತಿಸುತ್ತಾನೆ! ಅನಂತರ ಅವರು ಅಯೋಧ್ಯೆಗೆ ಹಿಂದಿರುಗುತ್ತಾರೆ.
ಹೀಗೆ ಅದ್ಭುತ ಕಥೆಗಳನ್ನೊಳಗೊಂಡ ಅದ್ಭುತ ರಾಮಾಯಣ, ಸೀತಾಪರವಾದ ರಾಮಾಯಣ. ನಮ್ಮಲ್ಲಿ ಪರಸಸ್ತುವನ್ನು ಪ್ರಕೃತಿ ಮತ್ತು ಪುರುಷ, ಎರಡೂ ರೂಪಗಳಲ್ಲಿ ಆರಾಧಿಸುವ ಕ್ರಮವಿದೆ. ನಾರಾಯಣ ಪುರುಷನಾದರೆ ಲಕ್ಷ್ಮಿಯು ಪ್ರಕೃತಿ. ಶಿವನು ಪುರುಷನಾದರೆ ಪಾರ್ವತಿ ಶಕ್ತಿ. ಹೀಗೆ ಪುರುಷ, ಪ್ರಕೃತಿ, ಎರಡೂ ರೂಪಗಳಿಗೂ ಆರಾಧನೆಯಿದೆ. ವಿಷ್ಣುಪರವಾದ ಭಾಗವತ ಪುರಾಣವಿರುವಂತೆಯೇ ದೇವಿಯ ಪರವಾದ ದೇವೀಭಾಗವತ ಪುರಾಣವೂ ಇದೆ. ಶಕ್ತಿಯ ಆರಾಧನೆ ಮೊದಲಿನಿಂದಲೂ ನಮ್ಮಲ್ಲಿ ಇದೆ. ಶಾಕ್ತೇಯರ ಪಂಥವೇ ಇದೆ. ಶಾಕ್ತಪರವಾದ ತಂತ್ರಗಳೂ ಇವೆ. ಅದ್ಭುತ ರಾಮಾಯಣ ಪ್ರಾಯಶಃ ಶಕ್ತಿ ಪೂಜೆಯ ಉಚ್ಛ್ರಾಯ ಕಾಲದಲ್ಲಿ ರಚಿತವಾಗಿರಬಹುದು. ಹಾಗಾಗಿ ಇಲ್ಲಿ ಸೀತೆ ಆದಿಶಕ್ತಿ ಮಹಾಕಾಳಿಯಾಗಿ ವಿಜೃಂಭಿಸುವ ಕಥೆಯಿದೆ.
ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ವಿಭಿನ್ನ ರಾಮಾಯಣ. ಎಲ್ಲರೂ ತಿಳಿದಿರಬೇಕಾದುದಾಗಿದೆ. ಇದನ್ನೇ ಹಿಂದೆ ಕನ್ನಡದ ಮಹಾಕವಿ ಮುದ್ದಣನು ಹಳೆಗನ್ನಡದಲ್ಲಿ ರಚಿಸಿದ್ದ. ನಾನು ಇದನ್ನು ಸಂಸ್ಕೃತದಿಂದ ಹೊಸಗನ್ನಡದಲ್ಲಿ ಅನುವಾದಿಸಿದ್ದೇನೆ. ಇದಕ್ಕೆ ನಾನು ವಾರಾಣಸಿಯ ಚೌಖಂಬ ಪ್ರಕಾಶನದ ಹಿಂದೀ ಅನುವಾದಸಹಿತವಾದ ಮೂಲ ಗ್ರಂಥವನ್ನು ಬಳಸಿಕೊಂಡಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ