ನಿಷ್ಠುರಪಂಜರಕೋಷೇ ನವಸಂಯಮಿತಸ್ಯ ಖಂಜನಸ್ಯೇವ /
ಗುರುಜನಸಮಕ್ಷಮಕ್ಷಿವ್ಯಾಪಾರೋ ಜಯತಿ ಮುಗ್ಧಾಕ್ಷ್ಯಾ: //
ಕನ್ನಡ ಅನುವಾದ
ಆ ಮುಗ್ಧನಯನೆಯು ಹಿರಿಯರ ಸಮಕ್ಷಮದಲ್ಲಿ ತನ್ನ ಪ್ರಿಯತಮನೊಂದಿಗೆ ನಡೆಸುವ ಕಣ್ಣೋಟದ ವ್ಯಾಪಾರ (ಚಲನವಲನಗಳು), ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಿರುವ ಖಂಜನ ಪಕ್ಷಿಯ ತೀಕ್ಷ್ಣ ಕಣ್ಣೋಟದ ಚಲನವಲನಗಳಂತೆ ವಿಜಯಶಾಲಿಯಾಗುತ್ತದೆ!'
ಇದೊಂದು ಸುಂದರವಾದ, ರಮ್ಯವಾದ ಚಿತ್ರಣ. ಮನೆಗೆ ಹಿರಿಯರು ಬಂದಿದ್ದಾರೆ. ನವವಿವಾಹಿತೆಯಾದ ಮುಗ್ಧ ಕಣ್ಣುಗಳ ಹೆಣ್ಣೊಬ್ಬಳು ತನ್ನ ಪ್ರಿಯಪತಿಯನ್ನು ಅರೆಕ್ಷಣವೂ ಬಿಟ್ಟಿರಲಾರಳು. ಹಿರಿಯರ ನಡುವೆ ಅವಳ ಗಂಡನೂ ಕುಳಿತಿದ್ದಾನೆ. ಅವರು ಅವನೊಂದಿಗೆ ಏನೋ ಮಾತುಕತೆ ನಡೆಸುತ್ತಿದ್ದಾರೆ. ಇವಳು ಸಿಹಿತಿಂಡಿಗಳು, ಪಾನೀಯಗಳು ಇತ್ಯಾದಿಗಳನ್ನು ತಂದುಕೊಡುತ್ತಿದ್ದಾಳೆ ಹಾಗೂ ಅಲ್ಲೇ ಇದ್ದಾಳೆ. ಅವಳಿಗೆ ಅವನನ್ನು ನೋಡಬೇಕೆಂಬ ಆಸೆ. ಆದರೆ ಅವರೆಲ್ಲರೂ ಇರುವಾಗ ಧೈರ್ಯವಾಗಿ ಮುಕ್ತವಾಗಿ ನೋಡಲಾರಳು. ಹಾಗಾಗಿ ತಲೆತಗ್ಗಿಸಿ ವೇಗವಾಗಿ ಅವನ ಕಡೆ ನೋಡುತ್ತಾಳೆ ಮತ್ತು ಹೆದರಿ ಪುನಃ ಬೇಗನೆ ಹಿರಿಯರ ಕಡೆ ನೋಡುತ್ತಾಳೆ. ಅವಳ ಕಣ್ಣೋಟದ ಈ ಚಲನವಲನಗಳು, ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಲಾಗಿರುವ ಖಂಜನ ಪಕ್ಷಿಯ ತೀಕ್ಷ್ಣ ನೋಟಗಳಂತಿವೆ ಎಂದು ಕವಿಯು ಹೋಲಿಸುತ್ತಾನೆ. ಖಂಜನ ಪಕ್ಷಿ ಅಥವಾ ಕದಂಬ ಪಕ್ಷಿಯನ್ನು ಹೊಸದಾಗಿ ಪಂಜರದಲ್ಲಿ ಬಂಧಿಸಿದಾಗ ಅದು ಚಡಪಡಿಸುತ್ತಾ ಅತ್ತಿತ್ತ ಚುರುಕಾಗಿ ಕಣ್ಣುಗಳನ್ನು ಆಡಿಸುತ್ತಿರುತ್ತದೆ. ಅದೇ ರೀತಿ ಈಗ ಮುಗ್ಧೆಯಾದ ಈ ಹೆಣ್ಣೂ ಹಿರಿಯರ ಪಂಜರದಲ್ಲಿ ಸಿಕ್ಕಿಕೊಂಡು ತನ್ನ ಪ್ರಿಯತಮನನ್ನು ಕದ್ದು ನೋಡುತ್ತಾ ಮರುಕ್ಷಣವೇ ಅವರನ್ನೂ ನೋಡುತ್ತಾ ಒಂದು ಆಕರ್ಷಕ ಚಿತ್ರಣವುಂಟುಮಾಡಿದ್ದಾಳೆ! ಇಂಥ ಅವಳ ಕಣ್ಣೋಟ ಅತ್ಯಂತ ಸೊಗಸಾಗಿದ್ದು ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ ಕವಿ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ