ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ