ಸುಂದರಿ ತವ ಚರಿತಾನಾಂ ಕಥಮಪಿ ಕಥಯಾ ನ ತೃಪ್ಯಾಮಿ ।।
ಕನ್ನಡ ಅನುವಾದ
' ಹೇ ಸುಂದರಿ! ಪುನರುಕ್ತಭೂಷಣಗಳಾದ ನಿನ್ನ ಗುಣವಿಶೇಷಗಳನ್ನು ನನ್ನ ಹೃದಯಕ್ಕೆ ಅಭಿನ್ನನಾದ ನನ್ನ ಮಿತ್ರನಿಗೆ ಎಷ್ಟು ಹೇಳಿದರೂ ನನಗೆ ತೃಪ್ತಿಯೇ ಆಗುವುದಿಲ್ಲ!'
ನಮಗೆ ಇಷ್ಟವಾದ ಯಾವುದೇ ವಿಷಯವಾದರೂ ಅದನ್ನು ಮತ್ತೆ ಮತ್ತೆ ಹೇಳಿದರೆ ಬೇಸರವಾಗುವ ಬದಲು ಭೂಷಣವೆನಿಸುತ್ತದೆ! ನಮಗೆ ಇಷ್ಟವಾದ ಹಾಡು, ಕಥೆ, ಅಥವಾ ಒಬ್ಬ ವ್ಯಕ್ತಿಯ ಗುಣವಿಶೇಷಗಳನ್ನು ಎಷ್ಟು ಬಾರಿ ಹೇಳಿದರೂ ಹೇಳುತ್ತಿರಬೇಕೆನಿಸುತ್ತದೆ! ಅದರಲ್ಲಿ ತೃಪ್ತಿಯೇ ಆಗುವುದಿಲ್ಲ! ಇನ್ನು ನಮಗೆ ಇಷ್ಟವಾದ ಹೆಣ್ಣು ಸಿಕ್ಕಿದರೆ? ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಪರಸ್ಪರ ಆಕರ್ಷಣೆಯಿಂದ ಇಷ್ಟವಾಗೇ ಆಗುತ್ತಾರೆ ನಿಜ! ಆದರೆ ಒಬ್ಬ ಪುರುಷನಿಗೆ ಅವನ ಎಲ್ಲಾ ಅಭಿರುಚಿಗಳಿಗೂ ಸರಿಹೊಂದುವ, ಸುಂದರಿಯೂ ಆದಂಥ ಸ್ತ್ರೀ ಸಿಕ್ಕಿದರೆ ಅವನ ಭಾಗ್ಯ ಎಂಥದ್ದು? ಅವಳನ್ನು ಎಷ್ಟು ವರ್ಣಿಸಿದರೂ ಅವನಿಗೆ ಸಾಕಾಗುವುದಿಲ್ಲ! ಅವಳ ಬಗ್ಗೆ ಹೇಳಿದ್ದನ್ನೇ ಹೇಳಿ ಪುನರುಕ್ತಿ ಮಾಡಿದರೂ ಅದು ಭೂಷಣವೆನಿಸುತ್ತದೆ! ನಿಜಜೀವನದಲ್ಲಿ ಅಂಥ ಪುರುಷ ಅಥವಾ ಸ್ತ್ರೀ ಸಿಗುವುದು ಕಷ್ಟವೇ ಆದರೂ ಸಿಕ್ಕಿರುವವರನ್ನು ಮೆಚ್ಚುವ ಪ್ರಯತ್ನ ಮಾಡಬಹುದು. ಅದಕ್ಕಾಗಿಯೇ ವಾತ್ಸ್ಯಾಯನನು ಕಾಮಸೂತ್ರದಲ್ಲಿ ಅರವತ್ತು ನಾಲ್ಕು ಕಲೆಗಳು, ಹಲವು ಹಬ್ಬಗಳು, ಉತ್ಸವಗಳು, ಸುಸಂಸ್ಕೃತ ಜೀವನಶೈಲಿ, ರತಿಕ್ರೀಡೆಯ ವಿವಿಧ ಬಗೆಗಳು, ಇವೆಲ್ಲವನ್ನೂ ವಿವರಿಸಿ, ಸ್ತ್ರೀ ಪುರುಷರು ಪರಸ್ಪರ ಹೊಂದಿಕೊಂಡು, ಮೆಚ್ಚಿಕೊಂಡು, ಸದಾ ಪ್ರೀತಿಯಿಂದಿರಲು ಮಾರ್ಗೋಪಾಯಗಳನ್ನು ಹೇಳಿದ್ದಾನೆ. ಅಂತೆಯೇ, ಬೇರೆ ಬೇರೆ ವ್ಯಕ್ತಿಗಳಲ್ಲಿ ಏನೇನು ಅಭಿರುಚಿಗಳಿರಬಹುದೆಂಬ ಅರಿವು ಉಂಟಾಗಿ ಅವುಗಳನ್ನು ಮೆಚ್ಚಿ, ಗೌರವಿಸಲು ಸಾಧ್ಯವಾಗುತ್ತದೆ. ಆಗ ಪ್ರೀತಿಯೂ ಬೆಳೆಯುತ್ತದೆ. ಗಂಡ, ಹೆಂಡಿರಲ್ಲಿ ಸ್ಥಿರವಾದ ಪ್ರೀತಿ ಬೆಳೆದರೆ ಅದಕ್ಕಿಂತ ದೊಡ್ಡ ಭಾಗ್ಯ ಇಲ್ಲ! ಆಗ ಇಲ್ಲಿನ ನಾಯಕನಂತೆ, ಪುರುಷನಿಗೆ ಅವನ ಪ್ರಿಯ ಪತ್ನಿಯ ಗುಣವಿಶೇಷಗಳನ್ನು ಎಷ್ಟು ಹೊಗಳಿದರೂ ಸಾಲದಾಗುತ್ತದೆ!