ಸ್ವಾರಸ್ಯವೆಂದರೆ ನಮ್ಮ ಮಹಾಭಾರತದಲ್ಲೂ ಈ ಮೈದಾಸನಂಥ ಒಬ್ಬ ರಾಜನ ಕಥೆ ಬರುತ್ತದೆ! ಇದು ದ್ರೋಣಪರ್ವದಲ್ಲಿ ಬರುವ ಒಂದು ಉಪಕಥೆ. ಶೈಬ್ಯನೆಂಬ ರಾಜನಿಗೆ ಸೃಂಜಯನೆಂಬ ಮಗನಿದ್ದ. ಈ ಸೃಂಜಯನಿಗೆ ಮೈದಾಸನಂತೆಯೇ ಒಂದು ವಿಚಿತ್ರ ಆಸೆಯಿತ್ತು. ಅದೇನೆಂದರೆ, ತನ್ನ ಮಗನ ಮಲಮೂತ್ರಗಳೂ ಉಗುಳು,ಕಫಗಳೂ ಬೆವರೂ ಚಿನ್ನವಾಗಬೇಕೆಂಬ ಆಸೆ! ಇಂಥ ಮಗನನ್ನು ಪಡೆಯಲೆಂದು ಅವನು ಬ್ರಾಹ್ಮಣರಿಗೆ ಭೋಜನ, ವಸ್ತ್ರಾದಿಗಳನ್ನು ದಾನ ಮಾಡಿ ಅವರ ಪ್ರೀತಿಗೆ ಪಾತ್ರನಾದ. ಅವರೆಲ್ಲರೂ ನಾರದ ಮುನಿಗಳ ಬಳಿಗೆ ಹೋಗಿ ಸೃಂಜಯನಿಗೆ ಇಷ್ಟವಾದ ಪುತ್ರನನ್ನು ನೀಡುವಂತೆ ಕೇಳಿಕೊಂಡರು. ನಾರದರೂ ಅವರ ಮಾವನಾದ ಪರ್ವತರೂ ಸೃಂಜಯನ ತಂದೆ ಶೈಬ್ಯನನ್ನು ಬಲ್ಲವರಾಗಿದ್ದರು. ಹಾಗಾಗಿ ಅವರು ಸೃಂಜಯನ ಬಳಿ ಹೋಗಿ ಅವನಿಗೆ ವರ ಬೇಡುವಂತೆ ಹೇಳಿದರು. ಅವನು ಅದೇ ವರವನ್ನೇ ಬೇಡಿದ. ತನಗೆ ಯಶಸ್ವಿಯೂ ಕೀರ್ತಿಶಾಲಿಯೂ ತೇಜಸ್ವಿಯೂ ಅರಿಂದಮನೂ ಆದ ಮಗನು ಬೇಕೆಂದೂ ಜೊತೆಗೆ ಅವನ ಮಲಮೂತ್ರಕಫಬೆವರುಗಳೆಲ್ಲವೂ ಚಿನ್ನವಾಗಬೇಕೆಂದೂ ಅವನು ವರ ಬೇಡಿದ. ನಾರದ, ಪರ್ವತರು ಅನುಗ್ರಹಿಸಲು, ಅವನಿಗೆ ಅಂಥ ವಿಚಿತ್ರ ಮಗನೇ ಹುಟ್ಟಿದ! ಸುವರ್ಣವನ್ನೇ ಸೀನುತ್ತಿದ್ದ ಅವನಿಗೆ ಸುವರ್ಮಷ್ಠೀವಿ ಎಂದು ಹೆಸರಿಡಲಾಯಿತು. ಅವನಿಂದ ಸಾಕಷ್ಟು ಸಂಪತ್ತನ್ನು ಪಡೆದು ರಾಜನು ಸಂತೋಷಭರಿತನಾದ!
ಆದರೆ ಅತಿಯಾದ ಆಡಂಬರದ ಹಿಂದೆಯೇ ವಿಪತ್ತು ಕೂಡ ಬರುವುದೆಂದು ಆ ರಾಜನಿಗೆ ತಿಳಿದಿರಲಿಲ್ಲ! ಆ ದಿನವೂ ಬಂದಿತು! ಅವನ ಈ ವಿಚಿತ್ರ ಪುತ್ರನ ವಿಷಯ ಒಬ್ಬರಿಂದೊಬ್ಬರಿಗೆ ಹರಡುತ್ತಾ ಕೊನೆಗೆ ಅದನ್ನು ತಿಳಿದ ಕಳ್ಳ, ಕಾಕರು ಆ ಸಂಪತ್ತನ್ನು ಪಡೆಯಲು ಆ ಪುತ್ರನನ್ನು ಅಪಹರಿಸಿದರು! ಪ್ರತಿದಿನವೂ ಅವನ ದೇಹದ ವಿವಿಧ ಸ್ರವಿಕೆಗಳಿಂದ ಚಿನ್ನವನ್ನು ಪಡೆದರು! ಆದರೆ ಹೀಗೆ ದಿನವೂ ಕಾಯಲು ಅವರಿಗೆ ಸಹನೆಯಿರಲಿಲ್ಲ! ಈಸೋಪನ ಚಿನ್ನದ ಮೊಟ್ಟೆಯಿಡುವ ಕೋಳಿಯ ಕಥೆಯ ರೈತನಂತೆ, ಅವರೂ ಈ ಹುಡುಗನ ದೇಹದೊಳಗೆ ಚಿನ್ನದ ಗಣಿಯೇ ಇದೆಯೆಂದು ಭಾವಿಸಿ ಅವನನ್ನು ಕೊಂದು ಅವನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೋಡಿದರೂ ಏನೂ ಸಿಗದೆ, ಕೊನೆಗೆ ಆ ಕೋಪದಲ್ಲಿ ತಮ್ಮತಮ್ಮಲ್ಲೇ ಕಚ್ಚಾಡಿ ಪರಸ್ಪರರನ್ನು ಕೊಂದುಕೊಂಡರು! ಮಗನ ದುರ್ದೈವದ ಬಗ್ಗೆ ತಿಳಿದ ಸೃಂಜಯ ರಾಜನು ಶೋಕಾವಿಷ್ಟನಾಗಲು, ನಾರದರು ಬಂದು ದುಃಖವನ್ನು ತ್ಯಜಿಸಲು ಹೇಳಿ ಅವನನ್ನು ಸಮಾಧಾನಪಡಿಸಲು ಸುಪ್ರಸಿದ್ಧ ಷೋಡಶ ರಾಜರ ಕಥೆಗಳನ್ನು ಹೇಳಿ, ಕೊನೆಗೆ ಮಗುವನ್ನೂ ಬದುಕಿಸಿಕೊಟ್ಟರು.
ಇದೇ ಕಥೆಯ ಇನ್ನೊಂದು ರೂಪಾಂತರ, ಮಹಾಭಾರತದ ಶಾಂತಿಪರ್ವದಲ್ಲಿ ಬರುತ್ತದೆ. ಅಲ್ಲಿ, ಸೃಂಜಯನು ನಾರದ, ಪರ್ವತರ ಸೇವೆ ಮಾಡಿ, ಇಂದ್ರನನ್ನು ಮೀರಿಸುವ ಮಗ ತನಗೆ ಹುಟ್ಟಬೇಕೆಂದು ಕೇಳಿಕೊಳ್ಳುತ್ತಾನೆ. ನಾರದರೇ ಅವನಿಗೆ ಚಿನ್ನವನ್ನು ಸೀನುವ ಮಗನನ್ನು ಅನುಗ್ರಹಿಸಿದರೂ ಅವನು ಇಂದ್ರನನ್ನು ಮೀರಿಸುವ ಮಗನಾಗಬೇಕೆಂದರೆ ಇಂದ್ರನಿಂದ ತೊಂದರೆಯಾಗುವ ಸಾಧ್ಯತೆಯಿದ್ದು ಅಲ್ಪಾಯುವಾಗುವನೆಂದು ಭವಿಷ್ಯ ನುಡಿಯುತ್ತಾರೆ. ಅವನು ದೀರ್ಘಾಯುವಾಗಲೆಂದು ರಾಜನು ಬೇಡಲು, ಆಪತ್ತು ಬಂದಾಗ ತನ್ನನ್ನು ಸ್ಮರಿಸಿಕೊಳ್ಳಲು ಹೇಳುತ್ತಾರೆ. ಸುವರ್ಣವನ್ಞು ಸೀನುತ್ತಿದ್ದ ಆ ಮಗನನ್ನು ಒಮ್ಮೆ ದಾಸಿಯು ಆಡಿಸಲು ಗಂಗಾತೀರಕ್ಕೆ ಕರೆದೊಯ್ಯಲು, ಇಂದ್ರನು ಒಂದು ಹುಲಿಯನ್ನು ಸೃಷ್ಟಿಸಿ ಮಗುವನ್ನು ಕೊಲ್ಲಿಸಿಬಿಟ್ಟನು! ಆಗ ರಾಜನು ದುಃಖಿತನಾಗಿ ನಾರದರನ್ನು ಸ್ಮರಿಸಲು, ಅವರು ಬಂದು ಮಗುವನ್ನು ತಾವು ಬದುಕಿಸಿದರೂ ಅವನು ಇಂದ್ರನನ್ನು ಮೀರಿಸುನ ಬದಲು ಅವನ ಅನುವರ್ತಿಯಾಗಿರುವನೆಂದರು. ಇದಕ್ಕೆ ರಾಜನು ಒಪ್ಪಲು, ನಾರದರು ಅವನನ್ನು ಬದುಕಿಸಿದರು. ಮುಂದೆ, ಸುವರ್ಣಷ್ಠೀವಿಯು ಯಶೋವಂತನೂ ತೇಜೋವಂತನೂ ಆಗಿ ಬಾಳಿದನು.
ಹೀಗೆ ಗ್ರೀಕ್ ಪುರಾಣದ ಮೈದಾಸನಂತೆ ಸೃಂಜಯನು ತಾನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ ಎಂದು ಕೇಳದೇ, ತನ್ನ ಪುತ್ರನ ಸ್ರವಿಕೆಗಳೆಲ್ಲಾ ಚಿನ್ನವಾಗಲಿ ಎಂದು ಸ್ವಲ್ಪ ಯುಕ್ತವಾಗಿ ವರ ಕೇಳಿದನು. ಜೊತೆಗೆ ತನ್ನ ಮಗನು ಇಂದ್ರನನ್ನೂ ಮೀರಿಸಬೇಕೆಂದೂ ಕೇಳಿದನು. ಮೈದಾಸನು ತನ್ನ ವಿಚಿತ್ರವಾದ ಅತಿಯಾಸೆಯಿಂದ ಮಗಳನ್ನು ಕಳೆದುಕೊಂಡರೆ, ಸೃಂಜಯನು ತನ್ನ ವಿಚಿತ್ರವಾದ ಅತಿಯಾಸೆಯಿಂದ ಮಗನನ್ನು ಕಳೆದುಕೊಂಡನು. ಇಬ್ಬರೂ ಕೊನೆಗೆ ತಮ್ಮ ಮಕ್ಕಳನ್ನು ಮತ್ತೆ ಪಡೆದರೂ ಸ್ವಲ್ಪ ಕಾಲ ಹೇಳತೀರದ ತೊಂದರೆಯನ್ನಂತೂ ಅನುಭವಿಸಿದರು. ಇದರಿಂದ ತಿಳಿಯುವ ಪಾಠವೆಂದರೆ, ನಮಗೆಲ್ಲರಿಗೂ ಹಣವು ಅತ್ಯಗತ್ಯವಾದರೂ ಅದನ್ನು ಪಡೆಯಲು ಪ್ರಕೃತಿಗೆ ವಿರುದ್ಧವಾದ, ಅಸಹಜ ಮಾರ್ಗಗಳನ್ನು ಅನುಸರಿಸಬಾರದು. ಹಾಗೆ ಮಾಡಿದರೆ ಅನಾಹುತ ಕಾದಿರುತ್ತದೆ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ