ಸೋಮವಾರ, ಡಿಸೆಂಬರ್ 29, 2025

ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯ

   

ಭಾರತವು ದೇವಾಲಯಗಳ ನಾಡು. ಭಾರತೀಯರ ಧರ್ಮ, ಸಂಸ್ಕೃತಿಗಳ ಅಭಿವ್ಯಕ್ತತೆ ದೇವಾಲಯಗಳ ಮೂಲಕ ಆಗುತ್ತಾ ಬಂದಿದೆ. ಇವುಗಳೊಂದಿಗೆ, ದೇವಾಲಯಗಳ ಮೂಲಕ, ಕಲೆಯೂ ಸೊಗಸಾಗಿ ಬೆಳೆದುಬಂದಿದೆ. ಹಲವಾರು ಪಂಥಗಳು ತಮ್ಮ ವಿಭಿನ್ನ, ವಿಶಿಷ್ಟ, ತತ್ವ, ಸಂಸ್ಕೃತಿಗಳನ್ನು ದೇವಾಲಯಗಳ ಮೂಲಕ ವ್ಯಕ್ತಪಡಿಸಿವೆ. ಶಿವ, ವಿಷ್ಣು, ಗಣೇಶ, ಆಂಜನೇಯ, ದುರ್ಗೆ, ಲಕ್ಷ್ಮಿ, ಮೊದಲಾದ ದೇವಿ,ದೇವಿಯರ ದೇವಾಲಯಗಳಿರುವಂತೆಯೇ ಕೋಟಿ ಚೆನ್ನಯ, ಭೂತರಾಜ, ಅಣ್ಣಪ್ಪ, ಮೊದಲಾದ ಭೂತ ಅಥವಾ ದೈವಸ್ಥಾನಗಳೂ ಇವೆ. ಅಂತೆಯೇ ತಾಂತ್ರಿಕ ಪಂಥದವರ ದೇವಾಲಯಗಳೂ ಹಲವಾರಿವೆ. ಈ ಸಾಲಿಞಲ್ಲೇ ಯೋಗಿನೀ ದೇವಾಲಯಗಳೆಂಬ ವಿಶಿಷ್ಟ ದೇವಾಲಯಗಳೂ ಸೇರುತ್ತವೆ. ಇಂಥ ಒಂದು ಚೌಷಟ್ ಯೋಗಿನೀ ದೇವಾಲಯವನ್ನು ಮಧ್ಯಪ್ರದೇಶದ ಜಬಲ್ ಪುರದ ಪ್ರವಾಸದ ವೇಳೆ ನೋಡುವ ಅವಕಾಶ ನನಗಾಯಿತು.
ಜಬಲ್ ಪುರ್ ನಗರದಿಂದ ಸುಮಾರು ಇಪ್ಪತ್ತೆರಡು ಕಿ.ಮೀ. ದೂರದಲ್ಲಿರುವ ಭೇಡಾಘಾಟ್ ನ ಬಳಿ ಈ ದೇವಾಲಯವಿದೆ. ನರ್ಮದಾ ಮತ್ತು ಬಾಣಗಂಗಾ ನದಿಗಳ ಸಂಗಮಸ್ಥಾನವಾದ ಭೇಡಾಘಾಟ್ ಒಂದು ಅದ್ಭುತ ತಾಣ. ಮೈನವಿರೇಳಿಸುವ ಅಮೃತಶಿಲೆಯ ಬೃಹತ್ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿ, ಹಾಗೂ ಇದು ನಿರ್ಮಿಸಿರುವ ಧುವಾಂಧರ್ ಜಲಪಾತ ನೋಡಲು ಅತ್ಯಂತ ರಮಣೀಯ! ಅನೇಕ ಶತಮಾನಗಳ ಕಾಲ, ಭೇಡಾಘಾಟ್ ಗ್ರಾಮ ಒಂದು ತಾಂತ್ರಿಕ ಪೀಠವಾಗಿದ್ದು, ಮೂಲತಃ ಇದರ ಹೆಸರು ಭೈರವ ಘಾಟ್ ಆಗಿತ್ತೆಂದು ಹೇಳುತ್ತಾರೆ. ಕೆಲವರು ಭೇಡಾ ಎಂದರೆ ಸಂಗಮವೆಂದೂ ಹೇಳುತ್ತಾರೆ. ಇಲ್ಲಿ ಶಿವನನ್ನು ಮೆಚ್ಚಿಸಲು ಭೃಗು ಮಹರ್ಷಿಗಳು ಆತ್ಮಾರ್ಪಣೆ ಮಾಡಿಕೊಂಡರೆಂದು ಹೇಳುತ್ತಾರೆ. ಜಬಲ್ ಪುರ್ ಎಂಬ ಹೆಸರು ಬರಲು ಒಂದು ಐತಿಹ್ಯವಿದೆ. ನರ್ಮದಾ ನದಿಯ ದಂಡೆಯ ಮೇಲೆ ತಪಸ್ಸು ಮಾಡಿದ ಜಾಬಾಲಿ ಮಹರ್ಷಿಗಳಿಂದ ಜಾಬಾಲಿಪುರವೆಂಬ ಹೆಸರು ಬಂದು, ಅನಂತರ ಅದು ಜಬಲ್ ಪುರ್ ಆಯಿತಂತೆ. ಹಾಗಾಗಿ ಜಬಲ್ ಪುರ್, ಋಷಿಮುನಿಗಳ ತಪೋಭೂಮಿ.
ಚೌಷಟ್ ಯೋಗಿನೀ ದೇವಾಲಯ, ಒಂದು ಬೆಟ್ಟದ ಮೇಲಿದ್ದು, ಪ್ರಕೃತಿ ಸೌಂದರ್ಯದ ಮಧ್ಯೆ ಮೆಟ್ಟಿಲುಗಳನ್ನು ಹತ್ತುತ್ತಾ ತಲುಪಬೇಕು. 


ಈ ದೇವಾಲಯ ಒಂದು ರೀತಿಯ ಬಯಲು ದೇವಾಲಯವಾಗಿದ್ದು ಗೋಳಾಕೃತಿಯಲ್ಲಿದೆ, ಹಾಗೂ ಎಂಬತ್ತೊಂದು ಪ್ರತ್ಯೇಕ ಪ್ರತ್ಯೇಕ ಕೋಣೆಗಳನ್ನು ಹೊಂದಿದೆ. ಮುಖ್ಯವಾಗಿ ಒಂದು ಗೋಳಾಕೃತಿಯ ಗೋಡೆಯಿದ್ದು, ನಿಯಮಿತ ಅಂತರಗಳಲ್ಲಿ ಕಂಬಗಳನ್ನು ನಿರ್ಮಿಸಿ ಎಂಬತ್ತೊಂದು ಕೋಣೆಗಳನ್ನು ಕಟ್ಟಲಾಗಿದೆ. ಪ್ರತಿ ಕೋಣೆಯಲ್ಲೂ ಅತ್ಯಂತ ಸುಂದರವಾದ, ಕೆಂಪು ಮರಳುಗಲ್ಲಿನಲ್ಲಿ ಕೆತ್ತಿದ ದೇವಿಯರ ಮೂರ್ತಿಗಳಿವೆ. ಸುಂದರವಾದ ಅಂಗಸೌಷ್ಠವದಿಂದ ಕೂಡಿದ್ದು, ಆಭರಣಗಳಿಂದ ಭೂಷಿತವಾಗಿ ಕುಳಿತ ಭಂಗಿಯಲ್ಲಿರುವ ಈ ದೇವಿಯರ ವಿಗ್ರಹಗಳಲ್ಲಿ, ಅರವತ್ತು ನಾಲ್ಕು ಯೋಗಿನಿಯರದ್ದಾದರೆ, ಮಿಕ್ಕವು, ಸಪ್ತಮಾತೃಕೆಯರ ಹಾಗೂ ಇತರ ದೇವತೆಗಳದ್ದಾಗಿವೆ. ಒಂದು ಗಣೇಶನ ಮೂರ್ತಿಯೂ ಇದೆ. ಚೌಷಟ್ ಎಂದರೆ ಅರವತ್ತು ನಾಲ್ಕು ಎಂದು ಅರ್ಥ. ಆದರೆ ಇಲ್ಲಿ ಎಂಬತ್ತೊಂದು ವಿಗ್ರಹಗಳಿವೆ. ವಿಗ್ರಹಗಳ ಸುತ್ತಲಿನ ಅಲಂಕಾರ ಬಹಳ ಶ್ರೀಮಂತವಾಗಿದ್ದು ಅನೇಕ ತಾಂತ್ರಿಕ ಚಿಹ್ನೆಗಳಿಂದ ಕೂಡಿವೆ.‌ ಪೀಠಗಳಲ್ಲಿ ಪ್ರಾಣಿಗಳ ಕೆತ್ತನೆಗಳೂ ಇವೆ. ಕೆಲವು ವಿಗ್ರಹಗಳು ನರ್ತಿಸುವ ಭಂಗಿಯಲ್ಲೂ ಇವೆ. ಆದರೆ ದುರದೃಷ್ಟಕರ ವಿಚಾರವೆಂದರೆ, ಬಹುತೇಕ ವಿಗ್ರಹಗಳು ಮುಸ್ಲಿಂ ದಾಳಿಕೋರರಿಂದ ದಾಳಿಗೊಳಗಾಗಿ ಮುರಿದು ಹಾಳಾಗಿವೆ. ಈ ದೇವಾಲಯವನ್ನು ಹತ್ತನೆಯ ಶತಮಾನದಲ್ಲಿ ಕಳಚೂರಿಗಳ ರಾಜನಾದ ಮೊದಲನೆಯ ಯುವರಾಜದೇವನು ನಿರ್ಮಿಸಿದನೆಂದು ತಿಳಿದುಬಂದಿದೆ.‌ ಹಾಗಾಗಿ ಇದು ಕಳಚೂರಿಗಳ ಕಲೆಯನ್ನು ತೋರಿಸುತ್ತದೆ. ಈ ದೇವಾಲಯ ಗೋಳಾಕೃತಿಯಲ್ಲಿರುವುದರಿಂದ ಇದನ್ನು ಗೋಳಕೀಮಠವೆಂದು ಕರೆಯಲಾಗಿದೆ. ಇದು ಶೈವ ತಾಂತ್ರಿಕ ಪಂಥಕ್ಕೆ ಸೇರಿದ್ದು, ಶ್ರೀಚಕ್ರ ಪೂಜೆ, ಮೊದಲಾದ ತಾಂತ್ರಿಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ.


 
ಈ ಚಕ್ರಾಕಾರದ ಮಂದಿರದ ಆವರಣದಲ್ಲಿ ಗೌರೀಶಂಕರ ದೇವಾಲಯವೆಂಬ ಇನ್ನೊಂದು ಕಲಾತ್ಮಕ ದೇವಾಲಯವಿದೆ. ಇದನ್ನು ಅಲ್ಹಣದೇವಿಯೆಂಬ ಕಳಚೂರಿ ರಾಣಿಯು ಕಟ್ಟಿಸಿದ್ದೆಂದೂ ಅನಂತರದ್ದೆಂದೂ ತಿಳಿದುಬಂದಿದೆ. ಈ ದೇವಾಲಯವು ನಾಗರಶೈಲಿಯ ಶಿಖರವನ್ನು ಹೊಂದಿದ್ದು, ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಗರ್ಭಗುಡಿಯ ಹೊರಗೆ ಬೇರೆ ಬೇರೆ ಗಾತ್ರದ ಶಿವಲಿಂಗಗಳೂ ಒಂದು ಗಂಟೆಯೂ ಇದೆ. ಗರ್ಭಗೃಹದಲ್ಲಿ ತ್ರಿಶೂಲಧಾರಿ ಶಿವ ಮತ್ತು ಕನ್ನಡಿ ಹಿಡಿದಿರುವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹಗಳಿವೆ. ಇವಲ್ಲದೆ, ಗಣೇಶ, ಷಣ್ಮುಖ, ಲಕ್ಷ್ಮೀನಾರಾಯಣರು ತಮ್ಮ ವಾಹನಗಳ ಮೇಲೆ ಕುಳಿತಿರುವ ವಿಗ್ರಹಗಳೂ ಇಲ್ಲಿವೆ. ಈ ದೇವಾಲಯ ನಾಶಗೊಂಡಿಲ್ಲ. ಹಾಗಾಗಿ ಇಲ್ಲಿ ಈಗಲೂ ಪೂಜೆಯಿದೆ. ಆದರೆ ಮುರಿದಿರುವ ಯೋಗಿನೀ ವಿಗ್ರಹಗಳಿಗೆ ಪೂಜೆಯಿಲ್ಲ.

 
ದೇವಾಲಯಗಳಿರುವ ಬೆಟ್ಟದ ಮೇಲೆ ಬೀಸುವ ತಂಗಾಳಿ ಹಾಗೂ ಹಸಿರು ಪ್ರಕೃತಿ ಆಹ್ಲಾದವುಂಟುಮಾಡುತ್ತವೆ. ಅಂತೆಯೇ ಇಲ್ಲಿಂದ, ಅಮೃತಶಿಲೆಯ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿಯ ನೋಟ ಮನೋಹರವಾಗಿ ರುತ್ತದೆ! ಇಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕಲ್ಲುಬೆಂಚುಗಳನ್ನೂ ಹಾಕಲಾಗಿದೆ.‌ಸ್ಥಳೀಯರು ಹೇಳುವಂತೆ, ಇಲ್ಲಿ ಒಂದು ಸುರಂಗಮಾರ್ಗವಿದ್ದು, ಅದು ಜಬಲ್ಪುರವನ್ನಾಳುತ್ತಿದ್ದ ಗೊಂಡರ ರಾಣಿ ದುರ್ಗಾವತಿಯ ಅರಮನೆಗೆ ಸೇರಿಕೊಳ್ಳುವುದಂತೆ! ಈಗ ಈ ಇಡೀ ತಾಣ, ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ.

 

ಯೋಗಿನಿಯರು ಮತ್ತು ಯೋಗಿನೀ ದೇವಾಲಯಗಳು
ಯೋಗಿನಿಯರು ಒಟ್ಟು ಅರವತ್ತು ನಾಲ್ಕು ಇದ್ದು, ಇವರು ತಂತ್ರಕ್ಕೆ ಸಂಬಂಧಿಸಿದ ಸ್ತ್ರೀ ದೇವತೆಗಳು. ಇವರನ್ನು ಉಪಾಸಿಸುವ ತಂತ್ರ ಸಾಧಕರಿಗೆ ಇವರು ನೆರವಾಗುತ್ತಾರೆ ಎಂದು ಹೇಳಲಾಗುತ್ತದೆ. ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು, ಪ್ರಾಯಶಃ ತಂತ್ರ ಪದ್ಧತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದೆಂದು ಹೇಳಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತು ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ. ಕೆಲವು ಕಥೆಗಳ ಪ್ರಕಾರ, ಈ ಯೋಗಿನಿಯರು ದುರ್ಗಾದೇವಿಯ ವಿಸ್ತರಣೆಗಳು ಹಾಗೂ ಸಹಾಯಕರಾಗಿದ್ದು ರಾಕ್ಷಸರೊಂದಿಗಿನ ಅವಳ ಯುದ್ಧದಲ್ಲಿ ಸಹಾಯ ಮಾಡುತ್ತಾರೆ. ಅವರು ಯೋಗೇಶ್ವರಿಯು ಸೇರಿದಂತೆ ಅಷ್ಟಮಾತೃಕೆಯರ ವಿಸ್ತರಣೆಯರೆಂದೂ ಹೇಳುತ್ತಾರೆ. ಕೆಲವು ಯೋಗಿನಿಯರಿಗೆ ಸ್ತ್ರೀ ದೇಹ ಹಾಗೂ ಪ್ರಾಣಿಯ ಮುಖವೂ ಇರುತ್ತದೆ! ಭಾರತದಲ್ಲಿ ಒಡಿಶಾದ ಹೀರಾಪುರ, ರಾಣೀಪುರ, ಝರಿಯಲ್, ಮಧ್ಯಪ್ರದೇಶದ ಭೇಡಾಘಾಟ್, ಖಜುರಾಹೋ, ದುಧಾಯ್, ಮಿತಾವ್ಲಿ ಶಾಡೋಲ್, ಬಾದೋ, ನರೇಶಾರ್, ಲೋಖಾರಿ, ರಿಖಿಯಾರ್, ದೆಹಲಿಯ ಯೋಗಿನೀಪುರ, ಉತ್ತರ ಪ್ರದೇಶದ ವಾರಾಣಸೀ, ಅಸ್ಸಾಂನ ಗೌಹಾತಿ, ನೇಪಾಳದ ಕಠ್ಮಂಡು, ಮೊದಲಾದ ಹಲವೆಡೆಗಳಲ್ಲಿ ಈ ಯೋಗಿನೀ ದೇವಾಲಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ ಕೆಲವು ದುಸ್ಥಿತಿಯಲ್ಲಿವೆ. ಕೆಲವು ದೇವಾಲಯಗಳಲ್ಲಿ ಅರವತ್ತು ನಾಲ್ಕು ಯೋಗಿನಿಯರಿರದೇ, ನಲವತ್ತೆರಡು, ಅರವತ್ತೇಳು, ಅರವತ್ತೈದು, ಹಾಗೂ ಈಗ ನೋಡಿದಂತೆ ಎಂಬತ್ತೊಂದು ಯೋಗಿನಿಯರ ವಿಗ್ರಹಗಳಿವೆ.
ಯೋಗಿನಿಯರ ಹಾಗೂ ಯೋಗಿನೀ ದೇವಾಲಯಗಳ ಬಗ್ಗೆ ತಿಳಿಯಲು ನಿದ್ಯಾ ದೆಹೇಜಾ ಅವರ ' ಯೋಗಿನೀ ಕಲ್ಟ್ ಅಂಡ್ ಟೆಂಪಲ್ಸ್ ಹಾಗೂ ಸ್ಟೆಲ್ಲಾ ಡ್ಯುಪಿಸ್ ಅವರ ' ದಿ ಯೋಗಿನೀ ಟೆಂಪಲ್ಸ್ ಆಫ್ ಇಂಡಿಯಾ ' ಮೊದಲಾದ ಪುಸ್ತಕಗಳು ಸಹಾಯಕಾರಿ.
ಒಟ್ಟಿನಲ್ಲಿ ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯದ ಭೇಟಿ, ಯೋಗಿನಿಯರೆಂಬ ವಿಸ್ಮಯಕರ ದೇವತೆಗಳ ಹಾಗೂ ಅವರ ದೇವಾಲಯಗಳ ಬಗ್ಗೆ ಕುತೂಹಲ ಮೂಡಿಸುತ್ತದೆ. ಪ್ರವಾಸ ಮಾಡುವಾಗ ಇಂಥ ಅನೇಕ ವಿಚಾರಗಳು ತಿಳಿದುಬರುತ್ತವೆ.



ಚಿತ್ರಲೇಖನ: ಡಾ.ಬಿ.ಆರ್.ಸುಹಾಸ್
ಬೆಂಗಳೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ