ಮಲಬಾರ್ ಜೇಡದ ವೈಜ್ಞಾನಿಕ ಹೆಸರು ನೆಫಿಲೆಂಗಿಸ್ ಮಲಬಾರೆನ್ಸಿಸ್ ( Nephilengys malabarensis). ನೆಫಿಲಿಡೇ ಕುಟುಂಬಕ್ಕೆ ಸೇರಿರುವ, ನೆಫಿಲೆಂಗಿಸ್ ಕುಲದ ಒಂದು ಪ್ರಭೇದವಿದು. ದಕ್ಷಿಣ ಭಾರತದ ಮಲಬಾರ್ ಕರಾವಳಿ ತೀರದಲ್ಲಿ ಮೊದಲ ಬಾರಿ ಇದನ್ನು ಪತ್ತೆ ಮಾಡಿದ್ದರಿಂದ ಇದಕ್ಕೆ ಮಲಬಾರೆನ್ಸಿಸ್ ಎಂದು ಹೆಸರಿಸಲಾಯಿತು. ಹಾಗಾಗಿ ಇದನ್ನು ಮಲಬಾರ್ ಜೇಡ ಎಂದು ಕರೆಯುತ್ತಾರೆ. ಇದೊಂದು ದೊಡ್ಡ ಆರ್ಬ್ ವೀವರ್ ಜೇಡ, ಅಂದರೆ ಚಕ್ರಾಕಾರದ ದೊಡ್ಡ ಬಲೆ ಹೆಣೆಯುವ ಜೇಡವಾಗಿದೆ. ಎಲ್ಲಾ ಜೇಡಗಳಂತೆ ಇವುಗಳಲ್ಲೂ ಹೆಣ್ಣು ಗಂಡಿಗಿಂತ ಬಹಳ ದೊಡ್ಡದಾಗಿರುತ್ತದೆ. ಹೆಣ್ಣು ಜೇಡ, ಸುಮಾರು 10.4 ರಿಂದ 18.6 ಮಿ.ಮೀ. ಗಳಷ್ಟು ಉದ್ದವಿದ್ದರೆ ಗಂಡು ಜೇಡ ಕೇವಲ 5 ರಿಂದ 5.9 ಮಿ.ಮೀ. ಗಳಷ್ಟು ಉದ್ದವಿರುತ್ತದೆ. ಹೆಣ್ಣಿನ ದೇಹದ ಮೇಲ್ಭಾಗ ಅಥವಾ ಸೆಫಲೋಥೊರಾಕ್ಸ್ ( ತಲೆ ಮತ್ತು ಎದೆಯ ಸಂಯುಕ್ತ ಭಾಗ) ಕಡು ಕೆಂಪು, ಕಂದು ಬಣ್ಣಗಳಿಂದ ಕೂಡಿದ್ದರೆ ಇದರ ತಳಭಾಗ ಅಥವಾ ಸ್ಟೆರ್ನಂ, ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು ಕಂದು ಚುಕ್ಕೆಗಳಿಂದ ಕೂಡಿದ್ದು, ಇದರ ತಳಭಾಗ, ಕಂದು ಬಣ್ಣವಿದ್ದು ದೊಡ್ಡ ಕಿತ್ತಳೆ ಮಚ್ಚೆಗಳಿರುತ್ಚವೆ. ಹೊಟ್ಟೆಯ ಬಣ್ಣ, ಬೂದು,ಕಪ್ಪು, ಮೊದಲಾದ ಛಾಯೆಗಳಿಂದಲೂ ಕೂಡಿರುತ್ತದೆ. ಇದರ ಕಾಲುಗಳು ಹಳದಿ ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಗಂಡು ಜೇಡದ ಮೇಲ್ಭಾಗ ಕಿತ್ತಳೆ ಬಣ್ಣದಿಂದಲೂ ಹೊಟ್ಟೆಯ ಭಾಗ ಕಂದು ಬಣ್ಣದಿಂದಲೂ ಕೂಡಿದ್ದು, ಇದರ ಮೇಲೆ ತಿಳಿ ಮಚ್ಚೆಗಳೂ ತಳದಲ್ಲಿ ಹಳದಿ ಮಚ್ಚೆಗಳೂ ಇರುತ್ತವೆ.ಕಾಲುಗಳು ಬೂದು, ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಆಗಲೇ ಹೇಳಿದಂತೆ ಗಂಡು ಹೆಣ್ಣಿಗಿಂತ ಬಹಳ ಚಿಕ್ಕದಾಗಿರುತ್ತದೆ.
ಮಲಬಾರ್ ಜೇಡವು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಹಾಗೂ ಪೂರ್ವ ಏಷ್ಯಾಗಳಲ್ಲಿ ಕಂಡುಬರುವುದಾಗಿದ್ದು, ನಮ್ಮ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. ಆದರೆ ಇದು ಮಳೆಕಾಡುಗಳಲ್ಲಿ ಕಡಿಮೆಯಿದ್ದು, ಮಾನವ ವಸತಿಗಳ ಬಳಿ ಹೆಚ್ಚಾಗಿ ಕಂಡುಬರುತ್ತದೆ.
ಈ ಮಲಬಾರ್ ಜೇಡಗಳು ಮುಖ್ಯವಾಗಿ ಪತಂಗ , ನೊಣ, ಜೀರುಂಡೆ, ಮೊದಲಾದ ಕೀಟಗಳನ್ನೂ ಅವುಗಳ ಮರಿಗಳನ್ನೂ ತಿನ್ನುತ್ತವೆ. ಕೆಲವೊಮ್ಮೆ ಹಲ್ಲಿಯಂಥ ದೊಡ್ಡ ಪ್ರಾಣಿಗಳನ್ನೂ ತಿನ್ನುತ್ತವೆ. ವಿಚಿತ್ರವೆಂದರೆ ಕೆಲವೊಮ್ಮೆ ಈ ಜೇಡಗಳು ಮರಿಗಳಾಗಿರುವಾಗ ತಮಗಿಂತ ಸಣ್ಣ ಒಡಹುಟ್ಟಿದವರನ್ನೇ ತಿಂದುಬಿಡುತ್ತವೆ! ಎಲ್ಲಾ ಜೇಡಗಳಂತೆ ಇವು ಬೇಟೆಗೆ ವಿಷವನ್ನು ಚುಚ್ಚಿ ಲಕ್ವವಾಗುವಂತೆ ಮಾಡಿ, ಅನಂತರ ಜೀರ್ಣಗೊಳಿಸುವ ರಸಗಳನ್ನು ಸುರಿದು ಬೇಟೆಯ ಒಳಭಾಗಗಳನ್ನು ಒಂದು ರಸವನ್ನಾಗಿಸಿ ಅದನ್ನು ಹೀರುತ್ತವೆ. ಏಕೆಂದರೆ ಜೇಡಗಳಿಗೆ ಅಗಿಯಲಾಗುವುದಿಲ್ಲ.
ಒಂದು ಸ್ವಾರಸ್ಯವೆಂದರೆ, ಈ ಮಲಬಾರ್ ಜೇಡವು ನಿಶಾಚರಿಯಾಗಿದ್ದು, ಹಗಲಿನಲ್ಲಿ ತನ್ನ ಬಲೆಯಲ್ಲೇ ನಾಳದ ಆಕಾರದ ಒಂದು ಭಾಗ ಮಾಡಿ ಅದರಲ್ಲಿ ಅಡಗಿಕೊಳ್ಳುತ್ತದೆ. ಇದರಿಂದ ಅದು ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಇದನ್ನು ಏಷ್ಯಾದ ಸಂನ್ಯಾಸಿ ಜೇಡ ( Asian hermit spider) ಎಂದು ಕರೆಯುತ್ತಾರೆ. ಗಂಡು ಜೇಡ ಬಲೆ ಹೆಣೆಯದೇ ಹೆಣ್ಣಿನ ಬಲೆಯಲ್ಲೇ ವಾಸ ಮಾಡುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗಂಡುಗಳು ಒಂದು ಹೆಣ್ಣಿನ ಬಲೆಯಲ್ಲಿರಬಹುದು.
ಎಲ್ಲಾ ಜೇಡಗಳಲ್ಲಿರುವಂತೆ, ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು, ಹೆಣ್ಣುಗಳ ಸಂಭೋಗದ ಸಮಯದಲ್ಲಿ ಅಥವಾ ಸಂಭೋಗದ ನಂತರ, ಮಲಬಾರ್ ಜೇಡಗಳಲ್ಲೂ ಹೆಣ್ಣು ಜೇಡ ಗಂಡನ್ನು ಭಕ್ಷಿಸಿಬಿಡುತ್ತದೆ! ಇದು ತನಗೆ ಬೇಕಾದ ಪುಷ್ಟಿ ಮತ್ತು ಶಕ್ತಿಗಾಗಿ ಹೀಗೆ ಮಾಡುತ್ತದೆ. ಹೆಣ್ಣಿನ ಈ ಕ್ರೂರ ವರ್ತನೆಯಿಂದ ತಪ್ಪಿಸಿಕೊಳ್ಳಲು ಗಂಡು ಒಂದು ಉಪಾಯ ಮಾಡುತ್ತದೆ. ಗಂಡು ಜೇಡಗಳಲ್ಲಿ ಬಾಯ ಬಳಿಯಿರುವ ಪಾಲ್ಪ್ ಗಳೆಂಬ ಕಾಲಿನ ಆಕೃತಿಗಳ ತುದಿಗಳಲ್ಲಿ ಪಾಲ್ಟಲ್ ಬಲ್ಬ್ ( Palpal bulbs ) ಗಳೆಂಬ ದುಂಡಾದ ಆಕೃತಿಗಳಿರುತ್ತವೆ. ಇವೇ ಗಂಡಿನ ಜನನಾಂಗಗಳು. ಹೆಣ್ಣಿನ ಹೊಟ್ಟೆಯ ತಳಭಾಗದಲ್ಲಿರುವ ಎಪಿಗೈನಂ ಎಂಬ ಗಟ್ಟಿಯಾದ ಅಂಗವೇ ಅದರ ಹೊರ ಜನನಾಂಗ. ಈಗ ಗಂಡು ಮಾಡುವ ಉಪಾಯವೇನೆಂದರೆ, ಅದು ಹೆಣ್ಣಿನೊಂದಿಗೆ ಸಂಭೋಗಿಸುವಾಗ, ತನ್ನ ಬಾಯಿಯ ಬಳಿಯಿರುವ ಆ ಪಾಲ್ಪಲ್ ಬಲ್ಬ್ ( Palpal bulbs) ಗಳೆಂಬ ಜನನಾಂಗಗಳನ್ನು ಕತ್ತರಿಸಿಕೊಂಡು ಹೆಣ್ಣಿನ ಹೊರ ಜನನಾಂಗದ ದ್ವಾರದಲ್ಲೇ ಬಿಟ್ಟು ತಪ್ಪಿಸಿಕೊಳ್ಳುತ್ತದೆ! ಸ್ವಾರಸ್ಯವೆಂದರೆ, ಹಾಗೆ ಕತ್ತರಿಸಿದ ಬಳಿಕವೂ ಗಂಡಿನ ಆ ಜನನಾಂಗಗಳು ಹೆಣ್ಣಿನ ಜನನಾಂಗದಲ್ಲಿ ವೀರ್ಯಾಣುಗಳನ್ನು ನೀಡುತ್ತಿರುತ್ತದೆ! ಆ ವೀರ್ಯಾಣುಗಳನ್ನು ಹೆಣ್ಣು ತನ್ನ ಒಳಗಿನ ಜನನಾಂಗ ಭಾಗಗಳಾದ ಸ್ಪರ್ಮಥೀಕಾಗಳಲ್ಲಿ ಸಂಗ್ರಹಿಸಿಕೊಳ್ಳುತ್ತದೆ! ಇನ್ನೊಂದು ಸ್ವಾರಸ್ಯವೆಂದರೆ, ಗಂಡಿನ ಜನನಾಂಗಗಳಾದ ಆ ಪಾಲ್ಪಲ್ ಬಲ್ಬ್ ಗಳು ಹೆಣ್ಣಿನ ಜನನಾಂಗದ ದ್ವಾರದಲ್ಲಿ ತಡೆಯುವ ಗೂಟಗಳಂತಾಗಿ ಇತರ ಗಂಡು ಜೇಡಗಳು ಸಂಭೋಗಿಸುವುದನ್ನು ತಪ್ಪಿಸುತ್ತದೆ! ಹೀಗೆ ಮಾಡುವುದರಿಂದ ತನ್ನದೇ ವಂಶವಾಹಿಗಳು ಉಳಿಯಬೇಕೆಂಬ ಪ್ರಾಕೃತಿಕ ಸ್ವಾರ್ಥವನ್ನು ನಡೆಸುತ್ತದೆ!
ಹೀಗೆ ಗಂಡು ಮಲಬಾರ್ ಜೇಡ ತನ್ನ ಜನನಾಂಗಗಳನ್ನು ತ್ಯಾಗ ಮಾಡುವ ವಿಶಿಷ್ಟ ವರ್ತನೆ ತೋರುವುದರಿಂದ ಇದನ್ನು ನಪುಂಸಕ ಜೇಡ ( Eunuch spider) ಎಂದು ಕರೆಯುತ್ತಾರೆ. ಇನ್ನೊಂದು ಸ್ವಾರಸ್ಯವೆಂದರೆ, ಈ ರೀತಿ ಜನನಾಂಗಗಳನ್ನು ತ್ಯಜಿಸಿದ ಬಳಿಕ, ಗಂಡು ಜೇಡಗಳು ತೂಕ ಕಳೆದುಕೊಂಡು, ಹೆಚ್ಚು ವೇಗಶಾಲಿಗಳೂ ಆಕ್ರಮಣಶಾಲಿಗಳೂ ಆಗುತ್ತವೆ. ಆಗ ಅವು ಇತರ ಗಂಡು ಜೇಡಗಳೊಂದಿಗೆ ಸಮರ್ಥವಾಗಿ ಯುದ್ಧ ಮಾಡಿ ತನ್ನದೇ ಆದ ಪಿತೃತ್ವವನ್ನು ಸ್ಥಾಪಿಸಿಕೊಳ್ಳುತ್ತದೆ!
ಹೀಗೆ ಮಲಬಾರ್ ಜೇಡ, ವಿಸ್ಮಯಗಳ ಆಗರವಾಗಿದೆ! ನಾವು ಪ್ರಕೃತಿಯಲ್ಲಿ ನೋಡುವ ಸಣ್ಣ ಸಣ್ಣ ವಿಷಯಗಳಲ್ಲೂ ಅದೆಷ್ಟು ಕೌತುಕಗಳು ತುಂಬಿರುತ್ತವೆಯೆಂದು ತಿಳಿದಾಗ ಆಶ್ಚರ್ಯವಾಗುತ್ತದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ