ಶನಿವಾರ, ಸೆಪ್ಟೆಂಬರ್ 20, 2025

ನಿಸರ್ಗವನ್ನು ಆಸ್ವಾದಿಸಿ ಪಕ್ಷಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಿ

ಮಳೆಗಾಲ ಕಳೆಯುತ್ತಿದೆ.ಪ್ರವಾಸ ಮಾಡಲು ಈಗ ಸೂಕ್ತ ಸಮಯ.ಬಿಸಿಲಿನ ಬೇಗೆ ಇಲ್ಲದೇ, ಧಾರಾಕಾರ ಮಳೆಯೂ ಇಲ್ಲದೇ, ತಿಳಿಯಾದ ತಂಪಾದ ಈ ವಾತಾವರಣದಲ್ಲಿ ಮಳೆಯ ಪ್ರಭಾವದಿಂದ ಎಲ್ಲೆಲ್ಲೂ ಹಚ್ಚ ಹಸುರಿನ ರಮ್ಯ ಪ್ರಕೃತಿ ಕೈಬೀಸಿ ಕರೆಯುತ್ತಿದೆ. ಇಂಥ ವಾತಾವರಣದಲ್ಲಿ ಪ್ರಕೃತಿ ರಮ್ಯ ತಾಣಗಳಿಗೆ ಭೇಟಿ ಇತ್ತರೆ ಮನಸ್ಸು ಮೈಗಳಿಗೆ ಹಿತವೂ ಆಹ್ಲಾದವೂ ಉಂಟಾಗುತ್ತದೆ.
     ನಡೆದು ನೋಡು ಕೊಡಗಿನ ಸೊಬಗು ಎನ್ನುತ್ತಾರೆ. ಏಕೆಂದರೆ ಕೊಡಗಿನಲ್ಲಿ ಎಲ್ಲೆಲ್ಲೂ ಪ್ರಕೃತಿ ಸೌಂದರ್ಯವೇ ತುಂಬಿರುತ್ತದೆ! ಹಾಗಾಗಿ ಇಲ್ಲಿ ಎಲ್ಲಿಗೆ ಹೋದರೂ ಕಣ್ಮನಗಳಿಗೆ ಹಸಿರು ವನರಾಜಿ, ಬೆಳಗಿನ ಚುಮು ಚುಮು ಮಂಜಿನ ತಂಪು, ಸಂಜೆಯ ಚಳಿ, ನಮಗೆ ಮುದವುಂಟುಮಾಡುತ್ತದೆ! ಕೊಡಗಿನ ಹಲವಾರು ಪ್ರೇಕ್ಷಣೀಯ ತಾಣಗಳಲ್ಲಿ ಕಾವೇರಿ ನಿಸರ್ಗಧಾಮವೂ ಒಂದು. ಕೊಡಗಿನ ಮುಖ್ಯ ನಗರವಾದ ಮಡಿಕೇರಿಯಿಂದ ಇಪ್ಪತ್ತೆಂಟು ಕಿ.ಮೀ. ದೂರವಿರುವ ಈ ತಾಣ, ಮೈಸೂರಿನಿಂದ ತೊಂಬತ್ತೈದು ಕಿ.ಮೀ. ದೂರವಿದೆ. ಕುಶಾಲನಗರದ ಸಮೀಪವಿರುವ ಇದು, ಅಲ್ಲಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ.
      ಕಾವೇರಿ ನಿಸರ್ಗಧಾಮ, ಕಾವೇರಿ ನದಿಯಲ್ಲಿನ ಒಂದು ಪುಟ್ಟ ದ್ವೀಪ. ಒಂದು ತೂಗು ಸೇತುವೆಯನ್ನು ದಾಟಿ ಈ ದ್ವೀಪವನ್ನು ತಲುಪಬೇಕು. ಒಂದು ಪುಟ್ಟ ಪ್ರವೇಶ ಶುಲ್ಕದೊಂದಿಗೆ ನಾವು ಕಾವೇರಿ ನಿಸರ್ಗಧಾಮವನ್ನ ಪ್ರವೇಶಿಸಿ ತೂಗು ಸೇತುವೆಯ‌ ಮೂಲಕ ಈ ದ್ವೀಪವನ್ನು ಸೇರಬೇಕು. ಕಾವೇರಿ ನದಿಯ ಮೇಲಿನ ಈ ತೂಗು ಸೇತುವೆಯನ್ನು ದಾಟುವುದೇ ಒಂದು ರೋಮಾಂಚನ ನೀಡುತ್ತದೆ! ತೂಗುಸೇತುವೆಯ ಮೇಲೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವುದು ಎಲ್ಲರಿಗೂ ಬಹಳ ಪ್ರಿಯ! ಕಾವೇರಿ ನಿಸರ್ಗಧಾಮಕ್ಕೆ ಬಂದ ಕೂಡಲೇ ಒಂದು ಸುಂದರವಾದ ಕಾವೇರಿ ಮಾತೆಯ ವಿಗ್ರಹವನ್ನು ಕಾಣುತ್ತೇವೆ. ಎದುರಿಗೆ ಕಲಾಧಾಮ ಎಂಬ ಕೊಡಗಿನ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಿದೆ.‌ ಇಲ್ಲಿ ನಮಗೆ ಇಷ್ಟವಾದ ಕರಕುಶಲ ವಸ್ತುಗಳನ್ನು ಕೊಳ್ಳಬಹುದು. ಕಾವೇರಿ ಮಾತೆಗೆ ನಮಿಸಿ ನಾವು ಮುಂದೆ ನಡೆದರೆ, ಒಣ ಹಣ್ಣುಗಳು, ಗೃಹನಿರ್ಮಿತ ಚಾಕೋಲೇಟ್ ಗಳು, ಕೊಡಗಿನ ಕಾಫಿ ಪುಡಿ, ಜೇನುತುಪ್ಪ, ಮಸಾಲೆ ಪದಾರ್ಥಗಳು ದೊರೆಯುವ ದೊಡ್ಡ ಬೆಟ್ಟಗೇರಿ ಗ್ರಾಮ ಅರಣ್ಯ ಸಮಿತಿಯ ಸೊಗಸಾದ ಅಂಗಡಿಯಿದೆ. ಇಲ್ಲಿಯೂ ಸಾಕಷ್ಟು ಖರೀದಿ ಮಾಡಬಹುದು. ಅಂತೆಯೇ ಇಲ್ಲೊಂದು ಉಪಾಹಾರ ಮಂದಿರವೂ ಇದೆ. ದೋಣಿ ವಿಹಾರಕ್ಕೆ ದಾರಿ ತೋರುವ ಫಲಕ ಕೂಡ ಕಾಣುತ್ತದೆ. ಆದರೆ ಈಗ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ದೋಣಿ ವಿಹಾರ ನಿಲ್ಲಿಸಲಾಗಿದೆ.
      ಮುಂದೆ ಹೋದಂತೆ ನಮಗೆ ಎಲ್ಲೆಲ್ಲೂ ಹಸಿರು ಹುಲ್ಲು, ಬಿದಿರು ಮೆಳೆಗಳು, ತೇಗ ಮತ್ತು ಶ್ರೀಗಂಧದ ವೃಕ್ಷಗಳಿಂದ ಕೂಡಿರುವ ಸುಂದರ ಉಪವನ ಸ್ವಾಗತಿಸುತ್ತದೆ! ನಡೆಯಲು ನಮಗೆ ಸೊಗಸಾದ ಕಲ್ಲುದಾರಿಯಿದೆ. ಅಲ್ಲಲ್ಲಿ ಮರಗಳ ಕಾಂಡಗಳ  ಮೇಲೆ ಮಾಡಿರುವ ಹುಲಿ, ಮೊಸಳೆ, ಹಾವು, ಮೊದಲಾದ ಬಣ್ಣದ ಚಿತ್ರಕಲಾಕೃತಿಗಳು ಮನಸೆಳೆಯುತ್ತವೆ! ಮುಂದೆ ಹೋದಂತೆ, ಇಲ್ಲಿ ನಾವು ಮುಖ್ಯವಾಗಿ ನೋಡಬೇಕಿರುವ ಪಕ್ಷಿಧಾಮ, ಜಿಂಕೆವನ, ಮತ್ತು ನದಿಗೆ ದಾರಿ ತೋರುವ ಫಲಕ ಕಾಣುತ್ತದೆ. ಈ ದಾರಿಯಲ್ಲಿ ಒಂದಷ್ಟು ದೂರ ನಡೆಯಬೇಕು. ಸುಂದರವಾದ ಅಲಂಕೃತ ದ್ವಾರವೂ ಜಿಂಕೆಯ ಮುಖಗಳಿರುವ ದ್ವಾರವೂ ನಮ್ಮನ್ನು ಮುಂದೆ ಸ್ವಾಗತಿಸುತ್ತವೆ! ಮುಂದೆ ಕೊಡಗಿನ ಬುಡಕಟ್ಟು ಜನರ  ಜೀವನಶೈಲಿಯನ್ನು ತೋರಿಸುವ ಅನೇಕ ಶಿಲ್ಪಾಕೃತಿಗಳ ಒಂದು ಸುಂದರ ಚಿತ್ರಣ ಇದೆ. ಅಂತೆಯೇ ಉಮ್ಮತ್ - ಆಟ್ ಎಂಬ ಕೊಡಗಿನ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಸುಂದರ ಚಿತ್ರಣವಿದೆ. ನಸುಗೆಂಪು ಬಣ್ಣದ ಸೀರೆಗಳನ್ನು ಕೊಡಗಿನ ಶೈಲಿಯಲ್ಲಿ ಉಟ್ಟು ನರ್ತಿಸುತ್ತಿರುವ ಸುಂದರ ಸ್ತ್ರೀ ಪ್ರತಿಮೆಗಳ ಒಕ್ಕೂಟ ಬಹಳವಾಗಿ ಮನಸೆಳೆಯುತ್ತದೆ! ಇನ್ನೊಂದು ಸ್ವಾರಸ್ಯಕರ ಶಿಲ್ಪ ಚಿತ್ರಣವೆಂದರೆ, ಕೊಡಗಿನ ಗೌಡ ಜನಾಂಗದವರ ಸಾಂಪ್ರದಾಯಿಕ ನೃತ್ಯವಾದ ಕೋಲಾಟ! ಕೊಡಗಿನ ಶೈಲಿಯ ವಸ್ತ್ರಗಳನ್ನು ಧರಿಸಿ ಕೋಲಾಟವಾಡುತ್ತಿರುವ ಪುರುಷರ ಬೊಂಬೆಗಳ ಒಕ್ಕೂಟ ಮನಸೆಳೆಯುತ್ತದೆ! 
      ಎಲ್ಲೆಲ್ಲೂ ಸಿಕಾಡ ಕೀಟಗಳ ಜುಂಯ್ ಜುಂಯ್ ಶಬ್ದಗಳೂ ಪಕ್ಷಿಗಳ ಇಂಪಾದ ಕಲರವಗಳೂ ಕಿವಿತುಂಬುತ್ತವೆ! ಇದು ನಮಗೆ ಅರಣ್ಯ ಪರಿಸರದ ಭಾವ ತರುತ್ತದೆ! ನೆಮ್ಮದಿಯಿಂದ ಕುಳಿತುಕೊಂಡು ಪ್ರಕೃತಿಯನ್ನು ಆಸ್ವಾದಿಸಲು ಇಲ್ಲಿ ಚಿತ್ತಾರವಾದ ಅನೇಕ ಸುಂದರ ಮಂಟಪಗಳಿವೆ! ಅಂತೆಯೇ ಇಲ್ಲಿ ಎತ್ತರ ಹತ್ತಲು ಮರದ ಮೇಲಿನ ಮನೆಗಳೂ ಇವೆ! ಮರದ ಮೆಟ್ಟಿಲುಗಳನ್ನು ಹತ್ತಿ ಈ ಟ್ರೀ ಟಾಪ್ ಮನೆಗೆ ಹೋಗಿ ಫೋಟೋ ತೆಗೆಸಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ! ಪ್ರೇಮಿಗಳಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಈ ತಾಣ ಅಮಿತಾನಂದ ಕೊಡುತ್ತದೆ! 
         ಮುಂದೆ ಹೋದಂತೆ ನಮಗೆ ಪಕ್ಷಿಧಾಮ ಅಥವಾ ಬರ್ಡ್ ಪಾರ್ಕ್ ಸಿಗುತ್ತದೆ. ಇದು ಕಾವೇರಿ ನಿಸರ್ಗಧಾಮದ ಒಂದು ಮುಖ್ಯ ಆಕರ್ಷಣೆ. ಒಂದು ಪುಟ್ಟ ಶುಲ್ಕದೊಂದಿಗೆ ಗುಹಾದ್ವಾರದಂಥ ದ್ವಾರವನ್ನು ಪ್ರವೇಶಿಸಿ ಈ ಪಕ್ಷಿಧಾಮದೊಳಗೆ ಬಂದರೆ ಬಣ್ಣ ಬಣ್ಣದ ವಿದೇಶಿ ಪಕ್ಷಿಗಳ ಕಲರವಗಳು ನಮ್ಮನ್ನು ಸ್ವಾಗತಿಸುತ್ತವೆ! ಇಲ್ಲಿ ಉದ್ದ ಬಾಲದ ಅಮೇರಿಕಾದ ನೀಲಿ, ಹಳದಿ, ಕೆಂಪು ಬಣ್ಣಗಳ ಸುಂದರ ಮಕಾವ್ ಗಿಣಿಗಳು, ಹಸಿರು ಅಮೆಜಾನ್ ಗಿಣಿ, ಹಳದಿ ಕೆಂಪು ಬಣ್ಣಗಳ ಸನ್ ಕಾನ್ಯೂರ್ ಗಳೆಂಬ ಗಿಣಿ ಜಾತಿಯ ಸುಂದರ ಪಕ್ಷಿಗಳು, ಲಾರಿಕೀಟ್ ಗಳೆಂಬ ಬಣ್ಣದ ಗಿಣಿ ಜಾತಿಯ ಪಕ್ಷಿಗಳು,  ಉಷ್ಟ್ರಪಕ್ಷಿಗಳು, ಟರ್ಕಿ ಪಕ್ಷಿಗಳು, ಗೋಲ್ಡನ್ ಫೆಸೆಂಟ್, ಸಿಲ್ವರ್ ಫೆಸೆಂಟ್, ಮೊದಲಾದ ಕೋಳಿ ಜಾತಿಯ ಸುಂದರ ಪಕ್ಷಿಗಳು ಇಲ್ಲಿವೆ! ಅಂತೆಯೇ ಇಲ್ಲಿ ಇಗ್ವಾನ ಎಂಬ ಒಂದು ದೈತ್ಯ ಹಲ್ಲಿಯೂ ಇದೆ! ವಿವಿಧ ಪುಟ್ಟ ಶುಲ್ಕಗಳೊಂದಿಗೆ ನಾವು ಮಕಾವ್ ಗಿಣಿಗಳನ್ನು ಕೈಮೇಲೆ, ಹೆಗಲ ಮೇಲೆ ಕೂರಿಸಿಕೊಂಡು ಫೋಟೋ, ವಿಡಿಯೋ ತೆಗೆಸಿಕೊಳ್ಳಬಹುದು! ಕೈಗಳಲ್ಲಿ ಕಾಳುಗಳನ್ನು ಹಾಕಿಸಿಕೊಂಡು ನಿಂತರೆ, ಅನೇಕ ಸನ್ ಕಾನ್ಯೂರ್ ಪಕ್ಷಿಗಳು ಒಟ್ಟಾಗಿ ಬಂದು ನಮ್ಮ ಕೈಗಳ ಮೇಲೆ ಕುಳಿತು ಕಾಳು ತಿನ್ನುತ್ತವೆ! ಇದು ರೋಮಾಂಚನ ನೀಡುತ್ತದೆ! ಉದ್ದ ಹಿಡಿಯ ಬಟ್ಟಲಿನಲ್ಲಿ ಉಷ್ಟ್ರಪಕ್ಷಿಗಳಿಗೆ ತಿನಿಸು ನೀಡಿದಾಗ ಅವು ಜೋರಾಗಿ ಕುಟ್ಟಿ ಕುಟ್ಟಿ ತಿನ್ನುವುದು ಭಯಮಿಶ್ರಿತ ರೋಮಾಂಚನವುಂಟುಮಾಡುತ್ತದೆ! ಇಗ್ವಾನ ದೈತ್ಯ ಹಲ್ಲಿಯನ್ನು ಕೈಗಳಲ್ಲಿ ಹಿಡಿದುಕೊಳ್ಳುವುದು ಒಂದು ವಿಶೇಷ ಅನುಭವ! 
      ಮುಂದೆ ನಮಗೆ ಸಿಗುವುದು ಜಿಂಕೆವನ. ಇಲ್ಲಿ ಅನೇಕ ಚುಕ್ಕಿ ಜಿಂಕೆಗಳು ಅಥವಾ ಸ್ಪಾಟೆಡ್ ಡೀರ್ ಗಳಿವೆ. ಇವನ್ನು ಚೀತಲ್ ಗಳೆಂದು ಕರೆಯುತ್ತಾರೆ. ಕಂದು ಬಣ್ಣದ ಮೈಮೇಲೆ ಚುಕ್ಕೆಗಳಿದ್ದು ಇವು ಬಹಳ ಸುಂದರವಾಗಿರುತ್ತವೆ! ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಜಿಂಕೆಗಳಿಗೆ ಕೊಂಬುಗಳು ಮೂಡಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ! ಈ ಕೊಂಬುಗಳಿಂದ ಎರಡು ಗಂಡು ಜಿಂಕೆಗಳು ಹೆಣ್ಣಿಗಾಗಿ ಯುದ್ಧ ಮಾಡುತ್ತವೆ! ಇಲ್ಲಿ ನಾವು ಕೊಂಬುಗಳುಳ್ಳ ಗಂಡು ಜಿಂಕೆಗಳು, ಹೆಣ್ಣು ಜಿಂಕೆಗಳು ಮರಿಗಳು, ಎಲ್ಲವನ್ನೂ ನೋಡಿ ಅವುಗಳ ವರ್ತನೆಯಿಂದ ಆನಂದಿಸಬಹುದು! 
         ಇಲ್ಲಿ ತಾತ್ಕಾಲಿಕವಾಗಿ ದೋಣಿ ವಿಹಾರ ನಿಲ್ಲಿಸಿರುವಂತೆ, ಜಿಪ್ ಲೈನ್, ರೋಪ್ ವೇ, ಮೊದಲಾದ ಸಾಹಸ ಕ್ರೀಡೆಗಳೂ ಇದ್ದು , ಅವನ್ನು ಕಾರಣಾಂತರಗಳಿಂದ ನಿಲ್ಲಿಸಲಾಗಿದೆ. 
       ಕಾವೇರಿ ನಿಸರ್ಗಧಾಮ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ವರೆ ಗಂಟೆಯವರೆಗೆ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.‌ ಇಲ್ಲಿ ಉಳಿದುಕೊಳ್ಳಲು ಸುಂದರವಾದ ಕೊಠಡಿಗಳೂ ಇವೆ. ಇವುಗಳಿಗೆ ಅರಣ್ಯ ಇಲಾಖೆಯ ಮೂಲಕ ಮೊದಲೇ ನಿಗದಿಪಡಿಸಿಕೊಳ್ಳಬೇಕು. ನಿಸರ್ಗಧಾಮದ ಹೊರಗೆ ಗಾಡಿ ನಿಲುಗಡೆಯ ವ್ಯವಸ್ಥೆ ಇದೆ. ಅಂತೆಯೇ ಅನೇಕ ತಿಂಡಿ ತಿನಿಸುಗಳ ಅಂಗಡಿಗಳೂ ಹೋಟೆಲ್ ಗಳೂ ಇವೆ.‌ ಒಂದು ತಂಪಾದ ಸಂಜೆಯನ್ನು ಕಳೆಯಲು ಇದೊಂದು ಸೊಗಸಾದ ತಾಣ.ಇಲ್ಲಿಗೆ ಹೋದಾಗ ಹತ್ತಿರದಲ್ಲೇ ಇರುವ ದುಬಾರೆ ಆನೆ ಶಿಬಿರ ಹಾಗೂ ಸುಂದರವಾದ ಟಿಬೆಟ್  ಬೌದ್ಧ ಸ್ವರ್ಣ ದೇವಾಲಯವನ್ನು ವೀಕ್ಷಿಸಬಹುದು.
                                        ಡಾ.ಬಿ.ಆರ್.ಸುಹಾಸ್
                                         ಬೆಂಗಳೂರು 
      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ