ಶನಿವಾರ, ಸೆಪ್ಟೆಂಬರ್ 20, 2025

ಕೀಟ ಜಗತ್ತು - ಬ್ಲಿಸ್ಬರ್ ಬೀಟಲ್


ಗೋಪೀನಾಥಂ ಹಳ್ಳಿಯಲ್ಲಿ ಸುತ್ತಾಡುತ್ತಾ ವೀರಪ್ಪನ್ ಪೂಜಿಸುತ್ತಿದ್ದ ಎನ್ನಲಾದ ಮುನೀಶ್ವರ ಸ್ವಾಮಿಯ ವಿಗ್ರಹದ ಬಳಿ ಬಂದು ಫೋಟೋ ತೆಗೆಯುತ್ತಿದ್ದೆ.ಅದು ಒಂದು ಪುಟ್ಟ ಗುಡ್ಡದ ಮೇಲಿತ್ತು.ಎದುರಿಗೆ ಗೋಪೀನಾಥಂ ಕೆರೆ, ಮತ್ತು ಹಸಿರು ಪ್ರಕೃತಿ ಸೌಂದರ್ಯ ಅವರ್ಣನೀಯವಾಗಿತ್ತು! ಸುತ್ತಮುತಲೂ ಗಿಡಗಳ ಮೇಲೆ ಅನೇಕ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು! ಆಗ ಒಂದು ಬಣ್ಣಬಣ್ಣದ ಕೀಟ ಮನಸೆಳೆಯಿತು! ಕೆಂಪು ಮತ್ತು ಕಪ್ಪು ಪಟ್ಟಿಗಳ ಆ ಸುಂದರ ಕೀಟ ಗಿಡದ ಎಲೆಯನ್ನು ಮೆಲ್ಲನೆ ಮೆಲ್ಲುತ್ತಿತ್ತು! ಅದೇ ಬ್ಲಿಸ್ಟರ್ ಬೀಟಲ್! ಕನ್ನಡದಲ್ಲಿ ಬೊಬ್ಬೆಯ ಜೀರುಂಡೆ ಎಂದು ಅನುವಾದಿಸಬಹುದು.ನೋಡಲು ಇದು ಎಷ್ಟು ಸುಂದರವೋ ಅಷ್ಟೇ ಭಯಂಕರವಾಗಿರುತ್ತದೆ ಇದು! ಇದರ ಸಹವಾಸಕ್ಕೆ ಹೋದರೆ ಅಥವಾ ಕಿರುಕುಳ ಕೊಟ್ಟರೆ ಇದು ಕ್ಯಾಂಥರಡಿನ್ ಎಂಬ ದ್ರವವನ್ನು ಉತ್ಪತ್ತಿ ಮಾಡುತ್ತದೆ! ಆಗ ದ್ರವ ಚರ್ಮದ ಮೇಲೆ ಬಿದ್ದರೆ ಅಪಾರ ನೋವಿನ ಬೊಬ್ಬೆಗಳಾಗುತ್ತವೆ! ಆದ್ದರಿಂದಲೇ ಇದಕ್ಕೆ ಬ್ಲಿಸ್ಟರ್ ಬೀಟಲ್ ಎಂಬ ಹೆಸರು ಬಂದಿದೆ! ಇದು ತನ್ನ ರಕ್ಷಣೆಗಾಗಿ ರೂಪಿಸಿಕೊಂಡಿರುವ ವಿಧಾನ.ಇದು ಕೆಂಪು ಮತ್ತು ಕಪ್ಪು ಪಟ್ಟಿಗಳ ಪ್ರಕಾಶಮಾನವಾದ ಬಣ್ಣಗಳನ್ನು ಹೊಂದಿರುವುದೂ ಈ ಕಾರಣಕ್ಕಾಗಿಯೇ! ಪ್ರಕಾಶಮಾನವಾದ ಬಣ್ಣಗಳು, ವಿಷಕಾರಿಯಾದ ಇಲ್ಲವೇ ನೋವುಂಟುಮಾಡುವ ದ್ರವಗಳು, ಮುಳ್ಳುಗಳು, ಕೆಟ್ಟ ರುಚಿ ಮತ್ತು ವಾಸನೆ, ಇವುಗಳ ಮೂಲಕ ಕೆಲವು ಪ್ರಾಣಿಗಳು ತಾವು ಬೇಟೆಯಾಡಲು ಹಾಗೂ ತಿನ್ನಲು ಸೂಕ್ತವಲ್ಲ ಎಂದು ತೋರಿಸುತ್ತವೆ! ಇದನ್ನು ಅಪೋಸೆಮ್ಯಾಟಿಸಂ ಎನ್ನುತ್ತಾರೆ.
     ಈ ಬ್ಲಿಸ್ಟರ್ ಬೀಟಲ್ ಗಳು ಮೆಲೋಯ್ಡೇ ಎಂಬ ಕುಟುಂಬಕ್ಕೆ ಸೇರುತ್ತವೆ.ಪ್ರಪಂಚದಾದ್ಯಂತ ಸುಮಾರು ಏಳೂವರೆ ಸಾವಿರ ಪ್ರಭೇದಗಳಿವೆಯೆಂದು ತಿಳಿದುಬಂದಿದೆ. ಈ ಚಿತ್ರದಲ್ಲಿ ಕಾಣುತ್ತಿರುವ ಬ್ಲಿಸ್ಟರ್ ಬೀಟಲ್ ನ ವೈಜ್ಞಾನಿಕ ಹೆಸರು, ಹೈಕ್ಲಿಯಸ್ ಪಸ್ಟುಲೇಟಸ್. ಇದು, ಭಾರತ, ಚೀನಾ, ಜಾವಾ, ಶ್ರೀಲಂಕಾಗಳಲ್ಲಿ ಕಂಡುಬರುತ್ತದೆ. ಹೈಕ್ಲಿಯಸ್ ಎಂಬ ಗುಂಪಿನಲ್ಲಿ ಸುಮಾರು ನಾನ್ನೂರು ಪ್ರಭೇದಗಳಿವೆಯೆಂದು ತಿಳಿದುಬಂದಿದೆ. ಇವು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಕಂಡುಬರುತ್ತವೆ.
     ಈ ಬ್ಲಿಸ್ಟರ್ ಬೀಟಲ್ ಗಳನ್ನು ಹೈಪರ್ ಮೆಟಮಾರ್ಫಿಕ್ ಎಂದು ವರ್ಣಿಸಲಾಗುತ್ತದೆ.ಅಂದರೆ ಇವು ಮರಿಗಳಾಗಿರುವಾಗ ಹಲವು ಹಂತಗಳಲ್ಲಿ ಸಾಗಿಹೋಗುತ್ತವೆ ಎಂದು ಅರ್ಥ.ಮೊದಲ ಹಂತದಲ್ಲಿ ಇವು ಚಲಿಸುವಂತಿದ್ದು ಇವನ್ನು ಟ್ರೈಯಂಗುಲಿನ್ ಲಾರ್ವೆಗಳೆಂದು ಕರೆಯುತ್ತಾರೆ.ಇದರ ಅರ್ಥ, ಮೂರು ಪಂಜುಗಳುಳ್ಳ ಮರಿಗಳು ಎಂದು.ಇವು ಏಫಿಡ್ ಅಥವಾ ಸಸ್ಯ ತಿಗಣೆ ಮೊದಲಾದ ಇತರ ಪುಟ್ಟ ಕೀಟಗಳನ್ನು ತಿನ್ನುತ್ತವೆ ಅಥವಾ ಕುದುರೆಹುಳುಗಳ ಮೊಟ್ಟೆಗಳನ್ನು ತಿನ್ನುತ್ತವೆ.ಅತಿಥಿ ಕೀಟ ಸಿಕ್ಕಾಗ ಅದರ ದೇಹದ ಮೇಲೆ ಅಥವಾ ಒಳಗೆ ನೆಲೆಸಿ ತನ್ನ ಕಾಲುಗಳನ್ನು ಕಳಚಿ ಎರಡನೆಯ ಹಂತಕ್ಕೆ ಹೋಗುತ್ತವೆ.ಆಗ ಇವು ಆ ಕೀಟಗಳನ್ನು ಅಥವಾ ಅವುಗಳ ಆಹಾರವನ್ನು ತಿನ್ನುತ್ತವೆ. ಹೀಗೆ ಇವು ಆಂಶಿಕ ಪರಾವಲಂಬಿಗಳಾಗಿ ಬದುಕುತ್ತವೆ.ಇಂಥ ಆಂಶಿಕ ಪರಾವಲಂಬಿಗಳನ್ನು ಕ್ಲೆಪ್ಟೋಪ್ಯಾರಾಸೈಟ್, ಅಂದರೆ ಕಳ್ಳ ಪರಾವಲಂಬಿಗಳೆನ್ನುತ್ತಾರೆ.ಅನಂತರ ಗೂಡು ಅಥವಾ ಪ್ಯೂಪ ಕಟ್ಟಿಕೊಂಡು ವಯಸ್ಕ ಕೀಟವಾಗಿ ಹೊರಬರುತ್ತವೆ.ವಯಸ್ಕ ಕೀಟಗಳು ವಿವಿಧ ಗಿಡಗಳ ಎಲೆ ಅಥವಾ ಹೂವುಗಳನ್ನು ಸೇವಿಸುತ್ತವೆ.ಹೀಗೆ ಮರಿಗಳು ಸಸ್ಯಗಳನ್ನು ನಾಶ ಮಾಡುವ ಕೀಟಗಳನ್ನು ತಿಂದು ನಮಗೆ ಉಪಕಾರಿಗಳಾದರೆ, ವಯಸ್ಕ ಕೀಟಗಳು ಹೂವುಗಳನ್ನು ತಿಂದು ತೊಂದರೆಯುಂಟುಮಾಡುತ್ತವೆ.
       ಆಗಲೇ ಹೇಳಿದಂತೆ ಈ ಬ್ಲಿಸ್ಟರ್ ಬೀಟಲ್ ಗಳು ಕ್ಯಾಂಥರಡಿನ್ ಎಂಬ ದ್ರವವನ್ನು ತನ್ನ ರಕ್ಷಣೆಗಾಗಿ ಉತ್ಪತ್ತಿ ಮಾಡುತ್ತದೆ.ಈ ದ್ರವವನ್ನು ನರೂಲಿಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಸ್ಪ್ಯಾನಿಶ್ ಫ್ಲೈ ಎಂದು ಹೆಸರಾದ ಒಂದು ವಿಶೇಷ ಪ್ರಭೇದ ಹಾಗೂ ಇತರ ಕೆಲವು ಪ್ರಭೇದಗಳಿಂದ ಈ ದ್ರವವನ್ನು ಸಂಗ್ರಹಿಸಲಾಗುತ್ತದೆ.
      ಈ ಬ್ಲಿಸ್ಟರ್ ಬೀಟಲ್ ಗಳಲ್ಲಿ ಅತ್ಯಂತ ದೊಡ್ಡ ಗುಂಪಾದ ಎಪಿಕಾಟದಲ್ಲಿ ಅನೇಕ ಪ್ರಭೇದಗಳಿದ್ದು ಅವು ಕುದುರೆಗಳಿಗೆ ವಿಷಕಾರಿಯಾಗಿವೆ! ಅಲ್ಫಾಲ್ಫಾ ಎಂಬ ಹುಲ್ಲನ್ನು ಸೇವಿಸುವಾಗ ಕುದುರೆಗಳು ಒಂದಿಷ್ಟು ಈ ಬ್ಲಿಸ್ಟರ್ ಬೀಟಲ್ ಗಳನ್ನು ಸೇವಿಸಿಬಿಟ್ಟರೆ ಜೀವಕ್ಕೇ ಅಪಾಯವಾಗಬಹುದು! ಬ್ಲಿಸ್ಟರ್ ಬೀಟಲ್ ಗಳು ಈ ಅಲ್ಫಾಲ್ಫಾ ಹುಲ್ಲಿಗೆ ಮತ್ತು ಕಳೆಗಳಿಗೆ ಹೂ ಬಿಡುವಾಗ ಆಕರ್ಷಿತವಾಗುತ್ತವೆ! ಪಶ್ಚಿಮ ಅಮೇರಿಕಾದಲ್ಲಿ ಹೊಸ ಬಗೆಯ ಕೊಯ್ಲಿನ ರೀತಿ, ಬೀಟಲ್ ಗಳನ್ನು ಜಜ್ಜಿ ಕ್ಯಾಂಥರಡಿನ್ ಬಿಡುಗಡೆಯಾಗಲು ಅನುವು ಮಾಡಿಕೊಟ್ಟು ಈ ಸಮಸ್ಯೆಗೆ ಕಾರಣವಾಗುತ್ತದೆ. ಕಳೆಗಳನ್ನು ಕಡಿಮೆ ಮಾಡುವುದು ಹಾಗೂ ಹೂ ಬಿಡುವ ಮೊದಲು ಅಥವಾ ಅನಂತರ ಕೊಯ್ಲು ಮಾಡುವುದರಿಂದ ಬೀಟಲ್ ಗಳನ್ನು ಕಡಿಮೆಗೊಳಿಸಬಹುದು.ಹುಲ್ಲನ್ನು ಜಜ್ಜದಂಥ ಸಲಕರಣೆಗಳನ್ನು ಬಳಸುವುದರಿಂದಲೂ ಅದನ್ನು ಗುಡ್ಡೆ ಮಾಡುವ ಮೊದಲು ಬೀಟಲ್ ಗಳು ತಪ್ಪಿಸಿಕೊಳ್ಳುವಂತಾಗಿ ಈ ಸಮಸ್ಯೆಯನ್ನು ನೀಗಬಹುದು.
      ಹೀಗೆ ಬ್ಲಿಸ್ಟರ್ ಬೀಟಲ್ ಗಳದು ಒಂದು ಕೌತುಕಮಯ ಕೀಟಜಗತ್ತು.
       
      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ