ಗುರುವಾರ, ಸೆಪ್ಟೆಂಬರ್ 25, 2025

ನನ್ನಿಷ್ಟದ ಭೈರಪ್ಪ


ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ನಿರ್ಗಮನ ದು:ಖ ತಂದಿದೆ. ಕರ್ನಾಟಕದ ಜನರೆಲ್ಲರಿಗೂ ಇದು ದು:ಖದ ಸಂದರ್ಭ. ಆದರೆ ಇದು ಅನಿವಾರ್ಯ. ಎಲ್ಲರ ಜೀವನದಲ್ಲೂ ಇಂಥ ಒಂದು ದಿನ ಬಂದೇ ಬರುತ್ತದೆ! ಯಾರೂ ತಪ್ಪಿಸಲಿಕ್ಕಾಗುವುದಿಲ್ಲ. ಆದರೆ ಹುಟ್ಟಿದಾರಭ್ಯ ಸಾಯುವವರೆಗಿನ ಜೀವನ ನಮಗೆ ಕೊಟ್ಟ ಒಂದು ದೊಡ್ಡ ಬಹುಮಾನವೇ ಆಗಿರುತ್ತದೆ. ಅದರಲ್ಲೂ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿರುವ, ಅರಿವಿನೊಂದಿಗೆ ಎಲ್ಲವನ್ನೂ ಅನುಭವಿಸಲು ಸಾಧ್ಯವಿರುವ, ನಮ್ಮ ಛಾಪನ್ನು ಜನಸೇವೆ, ಪರೋಪಕಾರ, ವಿಶೇಷ ಕೊಡುಗೆಗಳ ಮೂಲಕ ಉಳಿಸಲು ಸಾಧ್ಯವಿರುವ ಮಾನವ ಜನ್ಮ ಸಿಕ್ಕಿದಾಗ ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಭೈರಪ್ಪನವರು ಹಾಗೆ ಬದುಕಿದವರು. ಅವರ ಜೀವನ ಸುಲಭವಾಗಿರಲಿಲ್ಲ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ಸಾಕಷ್ಟು ಓದಿ, ಜೀವನಾಸಕ್ತಿ ಬೆಳೆಸಿಕೊಂಡು, ಸಾಹಿತ್ಯ, ಸಂಗೀತ, ಪ್ರವಾಸಗಳಲ್ಲಿ ಜೀವನವನ್ನು ಚೆನ್ನಾಗಿ ಅನುಭವಿಸಿದರು! ತುಂಬು ಜೀವನ ನಡೆಸಿ ನಿರ್ಗಮಿಸಿದರು. ಭೈರಪ್ಪನವರ ಹಾಗೆ ಬದುಕಬೇಕು ಎಂದು ಹೇಳುವಂಥ ಮಾದರಿ ವ್ಯಕ್ತಿಯಾದರು. ಅವರಿಗೆ ನಮನಗಳು.
      ನಾನು ಓದುವುದರಲ್ಲಿ ಬಹಳ ಆಸಕ್ತನಾದರೂ ಕಾದಂಬರಿಗಳನ್ನು, ಅದರಲ್ಲೂ ಸಾಮಾಜಿಕ ಕಾದಂಬರಿಗಳನ್ನು ಓದುವುದು ಬಹಳ ಕಡಿಮೆ. ಸಂಸ್ಕೃತ ಸಾಹಿತ್ಯ, ಪುರಾಣ, ಅಧ್ಯಾತ್ಮ, ವಿಜ್ಞಾನ, ಪ್ರಾಣಿ ಪ್ರಪಂಚ , ವೈದ್ಯಕೀಯ, ಪ್ರವಾಸ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಜಾನಪದ ಕಥೆಗಳು, ಇವೇ ನನ್ನ ಬಹುತೇಕ ಇಷ್ಟದ ವಿಷಯಗಳು. ಆದರೆ ಭೈರಪ್ಪನವರ ಒಂದಷ್ಟು ಕಾದಂಬರಿಗಳನ್ನು ಓದಿ ಇಷ್ಟಪಟ್ಟಿದ್ದೇನೆ. ಮುಖ್ಯವಾಗಿ ನನ್ನನ್ನು ಬಹಳವಾಗಿ ಸೆಳೆದದ್ದು ಅವರ ಆವರಣ ಕಾದಂಬರಿ. ಅದರಿಂದಲೇ ನನಗೆ ಅವರ ಮೇಲಿನ ಅಭಿಮಾನ ಹೆಚ್ಚಾಯಿತು. ಅದಕ್ಕೆ ಮೊದಲು ತಬ್ಬಲಿ ನೀನಾದೆ ಮಗನೆ ಓದಿದ್ದೆ, ಹಾಗೂ ಆ ಚಲನಚಿತ್ರವನ್ನೂ ನೋಡಿದ್ದೆ. ಅದು ಬಹಳ ಚೆನ್ನಾಗಿ ಓದಿಸಿಕೊಂಡು ಹೋಗಿತತಲ್ಲದೇ ಗೋವುಗಳನ್ನು ಕೇವಲ ಹಾಲು ಕೊಡುವ ಯಂತ್ರಗಳಂತೆ ಬಳಸಿಕೋಳ್ಳುವ ಇಂದಿನ ಜನರ ಬಗ್ಗೆ ಆಶ್ಚರ್ಯ, ದು:ಖಗಳಾಗಿದ್ದವು. ಭೈರಪ್ಪನವರ ಕಾದಂಬರಿಗಳಲ್ಲಿ ಈ ಒಂದು ಸಂಘರ್ಷ ಇರುತ್ತದೆ.‌ ಹಿಂದೆ ಜನರು ಇದ್ದ ರೀತಿ ಮತ್ತು ಆ ರೀತಿ ಬದಲಾದಾಗ ಆಗುವ ಸಂಘರ್ಷ. ಇದನ್ನು ಅವರು ರಸವತ್ತಾಗಿ ನಿರೂಪಿಸುತ್ತಾರೆ. ಉದಾಹರಣೆಗೆ ವಂಶವೃಕ್ಷದಲ್ಲಿ ವಿಧವೆಯರು ಪುನಃ ಮದುವೆಯಾಗದ ಹಿಂದಿನ ಕಾಲದ ರೀತಿ ಮತ್ತು ಮರುಮದುವೆಯಾಗುವ ಇಂದಿನ ಕಾಲಘಟ್ಟದಲ್ಲಿ ಆಗುವ ಸಂಘರ್ಷ, ಅಂತೆಯೇ ಯಾನದಲ್ಲಿ ವಿವಾಹಿತ ಕಾಮ ಮತ್ತು ಸ್ವಚ್ಛಂದ ಕಾಮದ ನಡುವಿನ ಸಂಘರ್ಷ, ಈ ರೀತಿಯ ಚಿತ್ರಣಗಳು ಕಾಣುತ್ತವೆ. ತಬ್ಬಲಿ ನೀನಾದೆ ಮಗನೆ ಕಾದಂಬರಿಯಲ್ಲೂ ಗೋವನ್ನು ದೇವರೆಂದು ನೋಡುವ ಹಿಂದಿನ ರೀತಿ ಮತ್ತು ಅದು ಕೇವಲ ಮಾಂಸ, ಹಾಲುಗಳನ್ನು ಕೊಡುವ ಒಂದು ಪ್ರಾಣಿಯಂತೆ ಕಾಣುವ ಇಂದಿನ ರೀತಿ, ಹೀಗೆ.‌
      ದಿನಪತ್ರಿಕೆಯಲ್ಲಿ ಆವರಣ ಕಾದಂಬರಿಯ ವಿಮರ್ಶೆ ನೋಡಿ ಅದನ್ನು ಓದಬೇಕೆನಿಸಿತು. ಐತಿಹಾಸಿಕ ವಿಷಯವಾದ್ದರಿಂದ ಅದನ್ನು ಓದಲೇಬೇಕೆಂದು ತೆಗೆದುಕೊಂಡೆ. ಇದರಲ್ಲಿ ಔರಂಗಜೇಬನ ಕ್ರೌರ್ಯ ಆಡಳಿತ, ಹಿಂದೂ ದೇವಾಲಯಗಳ ನಾಶ, ಅವನ ಹಿಂದೂ ಅಸಹಿಷ್ಣುತೆ, ಇವೆಲ್ಲವೂ ಒಂದು ಕಡೆ ಇದ್ದರೆ ಇವನ್ನು ಅನ್ವೇಷಿಸಿ ಕಾದಂಬರಿ ಬರೆಯುವ ಲಕ್ಷಿಯ ಪಾತ್ರ ಇನ್ನೊಂದು ಕಡೆ ಇದೆ. ಈ ಲಕ್ಷ್ಮಿ ಒಬ್ಬ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಮದುವೆಯಾದಾಗ ಅವಳ ತಂದೆ ಬೇಡ, ಆ ಮತ ಇಂದಿಗೂ ಬದಲಾಗಿಲ್ಲ ಎಂದು ಹೇಳುವುದು ಅವಳಿಗೆ ತಟ್ಟುವುದಿಲ್ಲ. ಅವಳು ಮದುವೆಯಾಗಿ ಇಸ್ಲಾಂ ಗೆ ಪರಿವರ್ತನೆ ಹೊಂದಿ ರಜಿಯಾ ಎಂದು ಹೆಸರು ಬದಲಿಸಿಕೊಳ್ಳುತ್ತಾಳೆ. ಆಮೇಲೆ ಅವಳ ಗಂಡನೊಂದಿಗೆ ಹಂಪೆಯ ನಾಶದ ಬಗ್ಗೆ ಚಿತ್ರ ಮಾಡಲು ಹೊರಟಾಗ ಅವನು ನೈಜ ಇತಿಹಾಸವನ್ನು ತಿರುಚಿ ಶೈವ, ವೈಷ್ಣವ ಕಾದಾಟದಿಂದ ಹಂಪೆ ನಾಶವಾಯಿತು ಎಂದು ಹೇಳಿದಾಗ ಅವಳಿಗೆ ಅದು ಇಷ್ಟವಾಗುವುದಿಲ್ಲ. ಎಲ್ಲಾ ದಾಖಲೆಗಳು ಮುಸ್ಲಿಂ ದಾಳಿಕೋರರೇ ಹಂಪೆಯನ್ನು ನಾಶಮಾಡಿದರೆಂದು ತೋರಿಸುವ ಸತ್ಯವನ್ನು ಬಲಿಕೊಡಲು ಅವಳು ಒಪ್ಪುವುದಿಲ್ಲ. ಒಂದು ಕೃತಿಯನ್ನು, ಅದರಲ್ಲೂ ಐತಿಹಾಸಿಕ ಕೃತಿಯನ್ನು ಬರೆಯುವಾಗ, ಕೃತಿಕಾರನ ನಿಷ್ಠೆ ಸೌಂದರ್ಯಕ್ಕೋ ಸತ್ಯಕ್ಕೋ ಎಂಬ ಸಂಘರ್ಷ ಎದುರಾದಾಗ ಸತ್ಯಕ್ಕೇ ಎಂಬ ತಮ್ಮ ನಿಲುವನ್ನು ಭೈರಪ್ಪನವರು ಲಕ್ಷ್ಮಿಯ ಪಾತ್ರದ ಮೂಲಕ ತೋರಿಸುತ್ತಾರೆ. ಅನಂತರ, ತಂದೆಯ ಶ್ರಾದ್ಧಕ್ಕೆ ಬಂದ ಲಕ್ಷ್ಮಿ, ಅವರ ಗ್ರಂಥ ಭಂಡಾರವನ್ನು ಅವಲೋಕಿಸುತ್ತಾ ಅಲ್ಲಿರುವ ಬಹುತೇಕ ಇತಿಹಾಸದ ಪುಸ್ತಕಗಳಲ್ಲಿ ಮುಳುಗಿ ಹೋಗಿ ತಂದೆಯು ಏಕೆ ಇಸ್ಲಾಂ ಇಂದಿಗೂ ಬದಲಾಗಿಲ್ಲ ಎನ್ನುತ್ತಿದ್ದರು ಎಂದು ಅರಿಯುತ್ತಾಳೆ. ಅವುಗಳ ಆಧಾರದಲ್ಲಿ ತಾನೇ ಒಂದು ಕಾದಂಬರಿಯನ್ನು ಬರೆಯುತ್ತಾಳೆ. ಔರಂಗಜೇಬನ ಆಡಳಿತ, ಅವನು ತನ್ನ ಅಣ್ಣಂದಿರಾದ ದಾರ,ಶೂಜ, ಮುರಾದರನ್ನು ಕೊಂದು ತಂದೆ ಷಾಜಹಾನನನ್ನು ಸೆರೆಯಲ್ಲಿಟ್ಟು ತಾನೇ ಮೊಗಲ್ ಸಿಂಹಾಸನ ಏರಿದ್ದು, ಕಾಶಿ ವಿಶ್ವನಾಥ ದೇವಾಲಯ ಮೊದಲಾದ ದೇವಾಲಯಗಳನ್ನು ನಾಶ ಮಾಡಿದ್ದು, ಮತ್ತು ಅಂದಿನ ದಿನಗಳಲ್ಲಿ ಸೆರೆಸಿಕ್ಕ ರಜಪೂತ ಯುವಕರ ಜನನೇಂದ್ರಿಯ ಛೇದ ಮಾಡಿ ಅವರನ್ನು ಹಿಜಿಡಾಗಳನ್ನಾಗಿಸುತ್ತಿದ್ದ ವಿಷಯದ ಆಧಾರದಲ್ಲಿ ಒಬ್ಬ ಕಾಲ್ಪನಿಕ ರಜಪೂತ ರಾಜಕುಮಾರನಿಗೆ ಹಾಗಾಗುವಂತೆಯೂ ಅವನಿಗೆ ಹಾಜಿ ಹಮ್ದುಲ್ಲ ಎಂಬುವರು ಔರಂಗಜೇಬನ ಇಸ್ಲಾಂ ಧೋರಣೆ, ದೇವಾಲಯ ನಾಶ ಇತ್ಯಾದಿಗಳ ಇತಿಹಾಸವನ್ನು ಹೇಳುವಂತೆಯೂ ಚಿತ್ರಿಸುತ್ತಾಳೆ.  ಅಲ್ಲಿಯೇ ಲೈಂಗಿಕ ಗುಲಾಮಿಯಾಗಿರುವ ತನ್ನ ಹೆಂಡತಿಯನ್ನೂ ಕಂಡು ಆ ರಜಪೂತ ದು:ಖಗೊಂಡು ಕೊನೆಗೆ ಶಿವಾಜಿ ಮಹಾರಾಜ ಮೊಗಲರ ವಿರುದ್ಧ ಹೋರಾಡುತ್ತಿರುವ ವಿಷಯ ಬಂದು, ಅವನು ತನ್ನ ಹೆಂಡತಿಯೊಂದಿಗೆ ಹೇಗೋ ಬಿಡುಗಡೆ ಹೊಂದುತ್ತಾನೆ. ಈ ಪುಸ್ತಕ ಬರೆದಾಗ ಪ್ರೊ.ಶಾಸ್ತ್ರಿ ಎಂಬ ಅವಳ ಗುರುವೇ ಅದನ್ನು ಬ್ಯಾನ್ ಮಾಡಿಸುತ್ತಾನೆ! ಕೊನೆಗೆ ಅವಳ ಮುಸ್ಲಿಂ ಗಂಡನೇ ಅವಳ ಸಹಾಯಕ್ಕೆ ಬಂದು ಅವಳು ಬರೆಯಲು ಬಳಸಿರುವ ಮೂಲ ಕೃತಿಗಳ ಪಟ್ಟಿ ತಯಾರಿಸಲು ಹೇಳುತ್ತಾನೆ. ನನ್ನ ಕೃತಿಯನ್ನು ಮುಟ್ಟುಗೋಲು ಹಾಕಿದರೂ ಮೂಲ ಕೃತಿಗಳನ್ನು ಮುಟ್ಟುಗೋಲು ಹಾಕಲು ಸಾಧ್ಯವೇ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಅವಳು ಆಗ ಪಟ್ಟಿಯನ್ನು ತಯಾರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಆ ಪಟ್ಟಿ ಎಂಬತ್ತೈದು ಕೃತಿಗಳ ಒಂದು ದೊಡ್ಡ ಪಟ್ಟಿ! 
     ಈ ಕಾದಂಬರಿಯ ಸ್ವಾರಸ್ಯವೆಂದರೆ ಕಾದಂಬರಿಯೊಳಗೆ ಒಂದು ಕಾದಂಬರಿಯಿರುವುದು. ಅಂತೆಯೇ ಭೈರಪ್ಪನವರು ಅಂದಿನ ಇಸ್ಲಾಂ ರಾಜರ ಆಡಳಿತದ ಘೋರ ಸತ್ಯಗಳನ್ನು ನಿರ್ಭಯವಾಗಿ ಹೇಳಿದ್ದಾರೆ. ಮೂಲ ಇಸ್ಲಾಂ ಚರಿತ್ರಕಾರರೇ ಯಾವುದೇ ಮುಲಾಜಿಲ್ಲದೆ ಅವರ ಸತ್ಯಗಳನ್ನು ಹೇಳಿರುವಾಗ, ಸ್ವತಂತ್ರ ಭಾರತದ ಇತಿಹಾಸಕಾರರು ಆ ಸತ್ಯಗಳನ್ನು ಮುಚ್ಚಿಹಾಕುತ್ತಿದ್ದಾರೆ! ಕೆಲವೊಮ್ಮೆ ಇತಿಹಾಸಕಾರರಿಗೇ ಇದು ನಿಜವೇ ಎಂಬ ಭ್ರಮೆಯಾವರಿಸುತ್ತದೆ! ಸತ್ಯವನ್ನು ಹಾಗೆಯೇ ಹೇಳಿದರೆ ಎಲ್ಲಿ ಸಮಾಜದ ಸ್ವಾಸ್ಥ್ಯ ಕೆಡುತ್ತದೋ ಎಂದು ತಿರುಚುತ್ತಿದ್ದಾರೆ! ಇದೇ ಆವರಣ ಅಥವಾ ಮರೆಮಾಚುವುದು! ಇದನ್ನು ಶಾಸ್ತ್ರಿ ಅವರ ಪಾತ್ರದ ಮೂಲಕ ಭೈರಪ್ಪನವರು ಬಹಳ ಚೆನ್ನಾಗಿ ತೋರಿಸಿದ್ದಾರೆ! ಭೈರಪ್ಪನವರೇ ಎನ್ ಸಿ ಈ ಆರ್ ಟಿ ಯಲ್ಲಿದ್ದಾಗ ಇಂದಿರಾಗಾಂಧಿ ಅವರ ಕಾಲದಲ್ಲಿ ಒಂದು ಸಮಿತಿ ಮಾಡಿ ಇತಿಹಾಸದ ಈ ಸತ್ಯಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕು ಎಂದು ಹೊರಟಾಗ ಭೈರಪ್ಪನವರು ವಿರೋಧಿಸಿ ಈಗ ತೆಗೆದರೂ ಮುಂದೆ ಜನರಿಗೆ ಗೊತ್ತಾಗಿ ಇನ್ನೂ ತೊಂದರೆಯಾಗುತ್ತದೆ, ಹಾಗಾಗಿ ಸತ್ಯವನ್ನು ಮುಚ್ಚಿಡದೇ ಯಾವ ರೀತಿ ಆಡಳಿತ ಇದ್ದರೆ ಅವನತಿ, ಯಾವ ರೀತಿ ಇದ್ದರೆ ಉದ್ಧಾರ ಎಂದು ಹೇಳುವ ಮೂಲಕ ಇತಿಹಾಸವನ್ನು ತೆಗೆದುಕೊಳ್ಳಬೇಕು ಎಂದು ಹೇಳಲು, ಅವರನ್ನು ಆ ಸಮಿತಿಯಿಂದ ತೆಗೆದು ಒಬ್ಬ ಮಾರ್ಕ್ಸ್ ವಾದಿಯನ್ನು ಹಾಕಿಕೊಂಡರು. ಪರಿಣಾಮವಾಗಿ ನಮ್ಮ ಪಠ್ಯಪುಸ್ತಕಗಳ ಇತಿಹಾಸ ಬದಲಾಗಿ ಮೊಗಲರು ಮಹಾನ್ ರಾಜರೆಂದು ತೋರಿಸಿದರು.ಭೈರಪ್ಪನವರು ತಮ್ಮ ಅನುಭವಗಳನ್ನೇ ಐತಿಹಾಸಿಕ ವಿಷಯದೊಂದಿಗೆ ಸೇರಿಸಿ ಆವರಣ ಕಾದಂಬರಿಯಾಗಿ ಬರೆದರು.
      ಇತಿಹಾಸದ ಉದ್ದೇಶವೇನು ಎಂಬುದು ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. ಹಿಂದೆಂದೋ ನಡೆದಿರುವುದನ್ನು ಈಗೇಕೆ ಪುನರ್ವಾಚಿಸುವುದು ಎಂದೇ ಬಹುತೇಕರ ನಿಲುವು.‌ ಭೈರಪ್ಪನವರು ಇತಿಹಾಸದ ಉದ್ದೇಶವನ್ನು ಬಹಳ ಚೆನ್ನಾಗಿ ಹೇಳುತ್ತಾರೆ.‌ ಇತಿಹಾಸದಿಂದ ತೆಗೆದುಕೊಳ್ಳುವುದು ಹಾಗೂ ಸ್ಫೂರ್ತಿ ಪಡೆಯುವುದು ಹೇಗೋ ಹಾಗೆಯೇ ಬಿಡಿಸಿಕೊಳ್ಳಲೂ ಬೇಕು, ಅದೇ ಇತಿಹಾಸದ ಉದ್ದೇಶ ಎಂದು ಅವರು ಹೇಳುತ್ತಾರೆ.  ಇತಿಹಾಸದ ವ್ಯಕ್ತಿಗಳು ಮಾಡಿರುವ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳಿಗೆ ಇಂದಿನ ಜನರು ಜವಾಬ್ದಾರರಲ್ಲ.ಹಾಗಾಗಿ ಇತಿಹಾಸದ ಅಧ್ಯಯನದಿಂದ ಇಂದಿನ ಮುಸ್ಲಿಮರನ್ನು ದ್ವೇಷಿಸಬಾರದು ಹಾಗೂ ಹಿಂದೂ ರಾಜರು ಮಾಡಿರುವ ಉನ್ನತ ಕಾರ್ಯಗಳಿಂದ ನಾವೇ ಅವರ ವಾರಸುದಾರರೆಂದು ಬೀಗಲೂಬಾರದು. ಆದರೆ ಅವರು ಮಾಡಿರುವ ಒಳ್ಳೆಯ ಕೆಲಸಗಳಿಂದ ಸ್ಫೂರ್ತಿ ಪಡೆಯಬೇಕು ಹಾಗೂ ಅವರು ಮಾಡಿರುವ ಕೆಟ್ಟ ಕೆಲಸಗಳಿಂದ ಬಿಡಿಸಿಕೊಳ್ಳಬೇಕು. ಇಲ್ಲವಾದರೆ ಅವು ಮತ್ತೆ ಮತ್ತೆ ಮರುಕಳಿಸುತ್ತವೆ. ಇಸ್ಲಾಂ ಆಡಳಿತದ ವಿಚಾರಕ್ಕೆ ಬಂದರೆ, ಅದರ ಮತಾಂಧತೆಯಿಂದ ಬಿಡಿಸಿಕೊಳ್ಳಬೇಕು. ಇಲ್ಲವಾದರೆ ಕೇರಳದ ಮೋಪ್ಲಾ ದಂಗೆ, ಕಾಶ್ಮೀರದ ಪಂಡಿತರ ಕಗ್ಗೊಲೆ, ಮೊದಲಾದ ಮತಾಂಧ ಘಟನೆಗಳು ಈಗಾಗಲೇ ನಡೆದಿರುವಂತೆ ಮತ್ತೆ ಮತ್ತೆ ಮರುಕಳಿಸುತ್ತವೆ! 
      ಇನ್ನೊಂದು ವಿಷಯವೆಂದರೆ, ಮುಸ್ಲಿಂ ರಾಜರು ಇಷ್ಟೊಂದು ದೇವಾಲಯಗಳನ್ನು ನಾಶ ಮಾಡಿದ್ದು, ಪುರುಷರನ್ನೂ ಸ್ತ್ರೀಯರನ್ನೂ ಅಪಹರಿಸಿ ಗುಲಾಮರನ್ನಾಗಿಸಿದ್ದು ಇವೆಲ್ಲವನ್ನೂ ಹೇಳಿದಾಗ, ಎಷ್ಟೋ ಜನರು, ಅಷ್ಟೇ ಏಕೆ ವಿದ್ವಾಂಸರು, ಪಂಡಿತರು, ಕೊನೆಗೆ ಇತಿಹಾಸಕಾರರೂ ಕೇಳುವ ಪ್ರಶ್ನೆ, " ಹಿಂದೂಗಳು ಹಾಗೆಲ್ಲಾ ಮಾಡಲಿಲ್ಲವೇ?" ಎಂಬುದು! ಹಿಂದೂಗಳು ಹಾಗೆಲ್ಲಾ ಮಾಡಿದ್ದಾರೆಂಬುದಕ್ಕೆ ಎಲ್ಲೂ ಉಲ್ಲೇಖಗಳು ಸಿಗುವುದಿಲ್ಲ. ಎಲ್ಲೋ ಒಂದಿಷ್ಟು ಶೈವ, ವೈಷ್ಣವ ಕಲಹ, ವೈದಿಕ, ಜೈನ, ಬೌದ್ಧರ ಕಲಹಗಳ‌ ಉಲ್ಲೇಖಗಳು ಬಹಳ ಕಡಿಮೆ ಸಿಗುತ್ತವೆ. ಹಾಗಾಗಿ ಇತಿಹಾಸದ ವಿಷಯಗಳನ್ನು ಸುಮ್ಮನೆ ಹಾರಿಕೆಯ ಮಾತುಗಳಾಗಿ ಹೇಳಬಾರದು. ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಹೇಳಬೇಕು. ಇದು ಭೈರಪ್ಪನವರಿಂದ ಕಲಿಯುವ ಒಂದು ದೊಡ್ಡ ಪಾಠ. ಅವರು ನಮ್ಮಲ್ಲಿ ಇದ್ದ ಇನ್ನೊಂದು ಸೊಗಸಾದ ವಿಷಯವನ್ನು ಹೇಳುತ್ತಾರೆ. ಯುದ್ಧ ಮಾಡುವವರಲ್ಲಿ ಮೂರು ರೀತಿಯವರನ್ನು ಕಾಳಿದಾಸನು ರಘುವಂಶದಲ್ಲಿ ಗುರುತಿಸುತ್ತಾನೆ. ಅವರೆಂದರೆ, ಧರ್ಮವಿಜಯಿ, ಲೋಭವಿಜಯಿ, ಮತ್ತು ಅಸುರವಿಜಯಿ. ಧರ್ಮವಿಜಯಿಯಾದವನು ಇನ್ನೊಬ್ಬ ರಾಜನ ಮೇಲೆ ಯುದ್ದ ಸಾರಿದರೂ ಅದು ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಮಾಡಿ, ಆ ಯುದ್ಧದಲ್ಲಿ ಸೋತ ಇನ್ನೊಬ್ಬ ರಾಜನನ್ನೇ ಅವನ ಸಿಂಹಾಸನದ ಮೇಲೆ ಪುನಃ ಪ್ರತಿಷ್ಠಾಪಿಸಿ, ಅವನಿಂದ ಕೇವಲ ಕಪ್ಪ ಕಾಣಿಕೆಗಳನ್ನು ಪಡೆಯುತ್ತಾ ತನ್ನ ಸಾಮಂತನನ್ನಾಗಿ ಮಾಡಿಕೊಳ್ಳುತ್ತಾನೆ. ಲೋಭವಿಜಯಿ ಸೋತ ರಾಜನ ಬೊಕ್ಕಸವನ್ನು ಲೂಟಿ ಮಾಡಿ ಆ ರಾಜನನ್ನು ಮಾತ್ರ ಉಳಿಸುತ್ತಾನೆ. ಇನ್ನು ಅಸುರವಿಜಯಿ ಆ ಸೋತ ರಾಜನನ್ನೂ ಕೊಂದು, ಅವನ ಬೊಕ್ಕಸವನ್ನು ಲೂಟಿ ಮಾಡಿ, ಸ್ತ್ರೀಯರನ್ನು ಅಪಹರಿಸಿ, ಆ ರಾಜ್ಯದ ದೇವಾಲಯ ಇತ್ಯಾದಿಗಳನ್ನು ನಾಶಮಾಡಿ, ಅವನ ರಾಜ್ಯದಲ್ಲಿ ತನ್ನ ಒಬ್ಬ ವ್ಯಕ್ತಿಯನ್ನು ಕೂರಿಸಿ ತನ್ನ ಮತ, ಭಾಷೆ, ಎಲ್ಲವನ್ನೂ ಹೇರುತ್ತಾನೆ! ಇಸ್ಲಾಂ ದಾಳಿಕೋರರು ಈ ರೀತಿಯ ಅಸುರವಿಜಯಿಗಳಾಗಿದ್ದರು. ಇದನ್ನು ನಮ್ಮ ಶಾಸ್ತ್ರಗಳು ಎಂದೂ ಬೆಂಬಲಿಸಿರಲಿಲ್ಲ. ನಮ್ಮ ಯುದ್ಧಗಳಲ್ಲಿ ಅನೇಕ ನೀತಿ, ನಿಯಮಗಳಿದ್ದವು. ಹಾಗಾಗಿ ಹಿಂದೂ ರಾಜರು ಒಬ್ಬರ ಮೇಲೊಬ್ಬರು ಯುದ್ಧ ಮಾಡಿದರೂ ಆತ ಯುದ್ಧಗಳು ಜನಸಾಮಾನ್ಯರ ಮೇಲೆ ಯಾವುದೇ ದುಷ್ಪರಿಣಾಮ ಉಂಟು ಮಾಡಿರಲಿಲ್ಲ ಹಾಗೂ ನಮ್ಮ ಸಂಸ್ಕೃತಿಯ‌ ಭಾಗಗಳಾದ ದೇವಾಲಯ, ಮೊದಲಾದ ಸ್ಮಾರಕಗಳ ನಾಶವೂ ಆಗಿರಲಿಲ್ಲ. ಹಾಗೆ ನೋಡಿದರೆ ಹಿಂದೂಗಳು ಇಸ್ಲಾಂ ಗೆ ಸಂಬಂಧಿಸಿದ ಯಾವುದೇ ಸ್ಮಾರಕಗಳನ್ನು ನಾಶ ಮಾಡಿಲ್ಲ. 
     ಈ ಅನೇಕ ವಿಚಾರಗಳು ಆವರಣ ಕಾದಂಬರಿಯಿಂದ ಸ್ಪಷ್ಟವಾಗಿ ಈ ದಾರಿಯಲ್ಲಿ ಇತರ ಐತಿಹಾಸಿಕ ಘಟ್ಟಗಳನ್ನು ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಒಂದು ಕೃತಿಯನ್ನು ರಚಿಸುವಾಗ ಅದನ್ನು ಸುಂದರಗೊಳಿಸಲು ಸತ್ಯವನ್ನು ಕೈಬಿಡಬಾರದೆಂಬ ಭೈರಪ್ಪನವರ ನಿಲುವು ಬಹಳ ಇಷ್ಟವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ