ಸೋಮವಾರ, ಸೆಪ್ಟೆಂಬರ್ 29, 2025

ಸ್ಟ್ರಾಬೆರಿ ಸೇವಿಸಿ ಮಹಾಬಲೇಶ್ವರ ದರ್ಶಿಸಿ

      ಪಶ್ಚಿಮ ಘಟ್ಟಗಳ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಸಾಲು, ಅವುಗಳ ಮಧ್ಯೆ ಒಂದು ನದಿಯ ಕಣಿವೆ, ಮೈಯನ್ನು ಮೆಲ್ಲನೆ ತೀಡುವ ತಂಗಾಳಿ, ಕೆಲವು ಪ್ರಾಚೀನ ದೇವಾಲಯಗಳು,  ಮಹಾನ್ ನದಿಯೊಂದರ ಉಗಮಸ್ಥಳ, ಸಂಜೆಯ ಹೊಂಬಣ್ಣದ ಸೂರ್ಯಾಸ್ತದ ವೈಭವ, ಇವೆಲ್ಲವುಗಳೊಂದಿಗೆ ಇಲ್ಲಿಗೆ ಹೋಗುವ ದಾರಿಯುದ್ದಕ್ಕೂ  ಕೆಂಪಾದ ರಸಭರಿತ ಸ್ಟ್ರಾಬೆರಿ ಹಣ್ಣುಗಳ ಸವಿ, ಇಂಥ ಪ್ರವಾಸ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮ್ಮ ಭಾರತದಲ್ಲಿ ಇಂಥ ಸ್ಥಳಗಳು ಹಲವಾರಿವೆ ನಿಜ! ಆದರೆ ಈಗ ನಾನು ಹೇಳಲು ಹೊರಟಿರುವ ಸ್ಥಳ,  ಸ್ಟ್ರಾಬೆರಿ ಹಣ್ಣುಗಳ ರಸಾಸ್ವಾದ ಇರುವ ಮಹಾರಾಷ್ಟ್ರದ ಮಹಾಬಲೇಶ್ವರ! ಮಹಾಬಲೇಶ್ವರ, ಮಹಾರಾಷ್ಟ್ರದ ನೋಡಲೇಬೇಕಾದ ಒಂದು ಸುಂದರ ಗಿರಿಧಾಮ! ಇಲ್ಲಿ ಕೃಷ್ಣಾ, ಕೊಯ್ನಾ, ವೇನ್ನಾ, ಸಾವಿತ್ರೀ, ಮತ್ತು ಗಾಯತ್ರೀ ಎಂಬ ಐದು ನದಿಗಳು ಉಗಮವಾಗುತ್ತವೆ! ಹಿಂದೂಗಳಾದ ನಮಗೆ ಇದೊಂದು ಯಾತ್ರಾ ಸ್ಥಳವಾದರೆ, ಬ್ರಿಟಿಷರು ಇದನ್ನು ಒಂದು ಗಿರಿಧಾಮವಾಗಿ ಅಭಿವೃದ್ಧಿಪಡಿಸಿ, ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಇದು ಮರಾಠರ ವಶದಲ್ಲಿದ್ದು, ಶಿವಾಜಿ ಮಹಾರಾಜನು ಮಹಾಬಲೇಶ್ವರದ ಬಳಿಯ ಜಾವಳಿಯನ್ನು  ಆಳುತ್ತಿದ್ದ  ಆದಿಲ್ ಶಾಹಿ ಸುಲ್ತಾನರ ಸರದಾರ ಚಂದ್ರರಾವ್ ಮೋರೆಯನ್ನು  ಕೊಂದು ಪ್ರತಾಪಗಢ ಗಿರಿ ದುರ್ಗವನ್ನು ನಿರ್ಮಿಸಿದ್ದನು. ಹಾಗಾಗಿ ಮಹಾಬಲೇಶ್ವರ ಒಂದು ಮಹತ್ವದ ಸುಂದರ ಸ್ಥಳವಾಗಿದ್ದು ಎಂದಾದರೂ ಯಾವುದಾದರೂ ಕಾರಣಕ್ಕೆ ಪುಣೆಗೆ ಹೋದರೆ ಈ ಸ್ಥಳಕ್ಕೆ ಹೋಗದಿರಬಾರದು. 
      ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಪುಣೆಯಿಂದ ಸುಮಾರು 120 ಕಿಮೀ. ದೂರದಲ್ಲಿದ್ದು ಸುಮಾರು ಎರಡು ಗಂಟೆಗಳ ಪ್ರಯಾಣ ಬೇಕಾಗುತ್ತದೆ.ಇಲ್ಲಿಗೆ ಹೋಗಲು ಬಸ್ ಇದ್ದರೂ ಸ್ವಂತ ಇಲ್ಲವೇ ಬಾಡಿಗೆ ಗಾಡಿಯಲ್ಲಿ ಹೋಗುವುದು ಒಳ್ಳೆಯದು.ಪುಣೆಯಿಂದ ಪಂಚಗಣಿ - ಮಹಾಬಲೇಶ್ವರ ರಸ್ತೆಯಲ್ಲಿ ಹೋದಾಗ, ಮಹಾಬಲೇಶ್ವರಕ್ಕೂ 20 ಕಿ.ಮೀ. ಮೊದಲು, ಪಂಚಗಣಿ ಎಂಬ ಸುಂದರ ಗಿರಿಧಾಮ ಸಿಗುತ್ತದೆ.ಒಂದು ದಿನದ ಪ್ರವಾಸದಲ್ಲಿ ಇಲ್ಲಿಗೆ ಹೋಗಿಯೇ ಮಹಾಬಲೇಶ್ವರಕ್ಕೆ ಹೋಗಬಹುದು. ಈ ಎರಡೂ ಸ್ಥಳಗಳಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ.ಪಂಚಗಣಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ಸ್ಟ್ರಾಬೆರಿಗಳ ಮಾರಾಟ ಕಾಣುತ್ತದೆ. ಇಲ್ಲೊಂದು ಚಿಕ್ಕ, ಆಕರ್ಷಕವಾದ ಸ್ಟ್ರಾಬೆರಿ ಉದ್ಯಾನವನವೇ ಇದೆ! ಇದರ ಹೆಸರು ಮ್ಯಾಪ್ರೋ ಸ್ಟ್ರಾಬೆರಿ ಉದ್ಯಾನವನ. ಇಲ್ಲಿ ಎಲ್ಲವೂ ಸ್ಟ್ರಾಬೆರಿಮಯ! ಸ್ಟ್ರಾಬೆರಿ ಅಲಂಕೃತ ಕಾರು, ಸ್ಟ್ರಾಬೆರಿ ಹಣ್ಣು ಇರುವ ಗಾಡಿ, ಸ್ಟ್ರಾಬೆರಿ ದೇಹದ ಪಕ್ಷಿಗಳು, ಫೋಟೋ ತೆಗೆಸಿಕೊಳ್ಳಲು ಸ್ಟ್ರಾಬೆರಿ ಹಣ್ಣುಗಳ ಬೃಹತ್ ಆಕೃತಿಗಳು, ಹೀಗೆ ಆಕರ್ಷಣೆಗಳಿವೆ.ಬಗೆಬಗೆಯ ಸುಂದರ ಹೂಗಿಡಗಳು, ಪುಟ್ಟ ಜಲಪಾತ ಮತ್ತು ಕಮಲಗಳ ಹಾಗೂ ಬಣ್ಣದ ಮೀನುಗಳ ಕೊಳ, ಇವು ಸುಂದರ ನೋಟ ಒದಗಿಸುತ್ತವೆ! ಇಲ್ಲಿ ತಂಗಾಳಿ ಸವಿಯುತ್ತಾ ಉದ್ಯಾನವನ ನೋಡುತ್ತಾ ನಡೆಯುವುದು ಆಹ್ಲಾದಕರವಾಗಿರುತ್ತದೆ! ಅಂತೆಯೇ ಇಲ್ಲಿ ಕುಳಿತು ವಿಶ್ರಮಿಸಲು ಸೊಗಸಾದ ಪುಟ್ಟ ಮಂಟಪಗಳಿವೆ! ಇಲ್ಲಿನ ಅಂಗಡಿಗಳಲ್ಲಿ ಸ್ಟ್ರಾಬೆರಿ ಕ್ರಶ್, ಜ್ಯೂಸ್, ಜೆಲ್ಲಿ, ಐಸ್ಕ್ರೀಮ್, ಚಾಕೋಲೇಟ್, ಮೊದಲಾದ ತಿಂಡಿ ತಿನಿಸುಗಳೂ ಪಾನೀಯಗಳೂ ದೊರೆಯುತ್ತವೆ! ಅಲ್ಲದೇ ಸ್ಟ್ರಾಬೆರಿ ರೂಪದ ದಿಂಬುಗಳು, ಗೋಡೆಗೆ ನೇತುಹಾಕುವ ಆಕೃತಿಗಳು ಇವೆಲ್ಲವೂ ಸಿಗುತ್ತವೆ! ಈ ಉದ್ಯಾನವನದ ಎದುರಿಗೆ ಬೀದಿ ಮಾರುಕಟ್ಟೆಯಲ್ಲಿ ತಾಜಾ ಸ್ಟ್ರಾಬೆರಿ ಹಣ್ಣುಗಳು ದೊರೆಯುತ್ತವೆ! ಅಂತೆಯೇ ಸನಿಹದ ಹೊಟೇಲುಗಳಲ್ಲಿ ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಐಸ್ಕ್ರೀಮ್ ಮುಂತಾದವುಗಳು ಸಿಗುತ್ತವೆ.ಇಲ್ಲಿ  ಸನಿಹದಲ್ಲೇ ಭವಾನಿ ವ್ಯಾಕ್ಸ್ ಮ್ಯೂಸಿಯಂ ಎಂಬ ಒಂದು ಸೊಗಸಾದ ವ್ಯಾಕ್ಸ್ ಮ್ಯೂಸಿಯಂ ಕೂಡ ಇದೆ. ಜನಪ್ರಿಯ ವ್ಯಕ್ತಿಗಳ ಪ್ರತಿಕೃತಿಗಳನ್ನು ಮೇಣದಲ್ಲಿ ಮಾಡಿ ಇರಿಸಿರುವ ಸಂಗ್ರಹಾಲಯ ಇದು.
       ಮಹಾಬಲೇಶ್ವರದ ರಸ್ತೆಗಳಲ್ಲೂ ಎಲ್ಲೆಲ್ಲೂ ಸ್ಟ್ರಾಬೆರಿಗಳ ಅಂಗಡಿಗಳಿವೆ.ಹಾಗಾಗಿ ನಾವು ಯಥೇಚ್ಛವಾಗಿ ಸ್ಟ್ರಾಬೆರಿಗಳನ್ನೂ ಅವುಗಳ ಉತ್ಪನ್ನಗಳನ್ನೂ ಕೊಂಡು ಸೇವಿಸಬಹುದು! 
     ಮಹಾಬಲೇಶ್ವರದಲ್ಲಿ ನಾವು ಮುಖ್ಯವಾಗಿ ನೋಡಬೇಕಾಗಿರುವುದು ಮಹಾಬಲೇಶ್ವರ ಹಾಗೂ ಕೃಷ್ಣಾದೇವಿ ದೇವಾಲಯಗಳು ಮತ್ತು ಬೆಟ್ಟಗುಡ್ಡಗಳ ಸಾಲುಗಳಲ್ಲಿರುವ ಹಲವಾರು ಸೊಗಸಾದ ವ್ಯೂ ಪಾಯಿಂಟ್ ಅಥವಾ ವೀಕ್ಷಣಾ ಕೇಂದ್ರಗಳು.. 
   ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವಾಲಯದಿಂದಲೇ ಈ ಗಿರಿಧಾಮಕ್ಕೆ ಮಹಾಬಲೇಶ್ವರ ಎಂದು ಹೆಸರು ಬಂದಿದೆ. ಇದು ನಗರದಿಂದ ಸುಮಾರು ಆರು ಕಿ.ಮೀ. ದೂರವಿದೆ. ಇದೊಂದು ಸುಂದರ ದೇವಾಲಯವಾಗಿದ್ದು, ಇಲ್ಲಿ ಪೂಜಿಸಲ್ಪಡುವ ದೇವರು ಮಹಾಬಲೇಶ್ವರನೆಂದು ಕರೆಯಲ್ಪಡುವ ತ್ರಿಮೂರ್ತ್ಯಾತ್ಮಕ ಉದ್ಭವ ಲಿಂಗವಾಗಿದೆ. ಈ ಶಿವಲಿಂಗವು ಒಂದು ರುದ್ರಾಕ್ಷಿ ಗಾತ್ರದಷ್ಟಿದೆ. ದೇವಾಲಯದ ಹೊರಗೆ ಇದರ ಸ್ಥಳಪುರಾಣ ಮತ್ತು ಐತಿಹ್ಯಗಳ ಫಲಕವನ್ನು ಹಾಕಿದ್ದಾರೆ. ಅದರಂತೆ, ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ಕಥೆಯಿದೆ. ಪಾದ್ಮ ಕಲ್ಪದಲ್ಲಿ ಅತಿಬಲ ಮತ್ತು ಮಹಾಬಲ ಎಂಬ ಇಬ್ಬರು ದೈತ್ಯರು ಲೋಕಕಂಟಕರಾಗಿದ್ದರು. ಆಗ ಲೋಕವನ್ನು ರಕ್ಷಿಸಲು ವಿಷ್ಣುವು ಅತಿಬಲನನ್ನು ಕೊಂದನು. ಆದರೆ ಅವನಿಗೆ ಮಹಾಬಲನನ್ನು ಕೊಲ್ಲಲಾಗಲಿಲ್ಲ. ಏಕೆಂದರೆ ಮಹಾಬಲನು ತನ್ನ ಇಚ್ಛೆಯಿಂದಷ್ಟೇ ಸಾಯಬೇಕೆಂದು ವರ ಪಡೆದಿದ್ದನು. ಹಾಗಾಗಿ ದೇವತೆಗಳು ಆದಿಶಕ್ತಿಯ ಮೊರೆಹೊಕ್ಕರು. ಆದಿಶಕ್ತಿಯು ಮಹಾಬಲನನ್ನು ಆಕರ್ಷಿಸಿ ಅವನು ಯುದ್ಧವಿಮುಖನಾಗುವಂತೆ ಮಾಡಿದಳು. ಆಗ ದೇವತೆಗಳು ಅವನಿಗೆ ಶರಣಾಗಲು ಅವನು ದೇವತೆಗಳಿಗೆ ವರ ಕೊಡಲು ಮುಂದಾದನು. ಆಗ ದೇವತೆಗಳು ಅವನು ತಮ್ಮಿಂದ ಸಾಯಬೇಕೆಂದು ವರ ಬೇಡಿದರು. ಮಾತಿಗೆ ತಪ್ಪಲಾಗದ ಮಹಾಬಲನು ಒಪ್ಪಿ, ದೇವತೆಗಳು ಅವನೊಂದಿಗೆ ಸದಾ ಈ ಸ್ಥಳದಲ್ಲಿ ನೆಲೆಸಿರಬೇಕೆಂದು ನಿಬಂಧನೆ ಹಾಕಿದನು. ಹಾಗಾಗಿ, ಇಲ್ಲಿನ ಶಿವಲಿಂಗದಲ್ಲಿ ಶಿವನು ಮಹಾಬಲೇಶ್ವರನೆಂದೂ ವಿಷ್ಣುವು ಅತಿಬಲೇಶ್ವರನೆಂದೂ ಬ್ರಹ್ಮನು ಕೋಟೇಶ್ವರನೆಂದೂ ನೆಲೆಸಿದ್ದಾರೆ. ಫಲಕದ ಪ್ರಕಾರ ಈ ದೇವಾಲಯವನ್ನು ಎಂಟುನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದೂ ಲಿಂಗವು ಉದ್ಭವಲಿಂಗವೆಂದೂ ಹೇಳಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜನು ಇಲ್ಲಿ ತನ್ನ ತಾಯಿಗೆ ಸುವರ್ಣ ತುಲಾಭಾರ ಮಾಡಿಸಿದ್ದನಂತೆ! 
     ಮಹಾಬಲೇಶ್ವರ ದೇವಾಲಯದ ಎದುರಿಗೆ  ಕೃಷ್ಣಾದೇವಿ ದೇವಾಲಯ ಎಂಬ ಒಂದು ಪ್ರಾಚೀನ ದೇವಾಲಯವಿದೆ. ಇಲ್ಲಿಗೆ ಒಂದು ಸಣ್ಣ ಸುಂದರ ಕಾಡುದಾರಿಯ ಮೂಲಕ ಹೋಗಬೇಕು. ಇಲ್ಲಿ ಕೃಷ್ಣಾ ನದಿಯ ಉಗಮವಾಗುತ್ತದೆ. ಉಗಮಸ್ಥಾನದಲ್ಲಿ ಒಂದು ಶಿವಲಿಂಗವನ್ನು ಸ್ಥಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿಂದ ಹರಿದು ಬರುವ ನದಿ ಮುಂದೆ ಒಂದು ಕಲ್ಲಿನ ಗೋವಿನ ಮೂರ್ತಿಯ ಬಾಯಿಂದ ಬರುತ್ತಾ ಒಂದು ಕೊಳದಲ್ಲಿ ತುಂಬಿಕೊಳ್ಳುತ್ತದೆ. ಈ ನೀರು ಬಹಳ ತಂಪಾಗಿಯೂ ಸಿಹಿಯಾಗಿಯೂ ತಿಳಿಯಾಗಿಯೂ ಇದೆ! ಇದೊಂದು ಬಹಳ ಹಳೆಯ ಕಲ್ಲಿನ ಕಟ್ಟಡದ ದೇವಾಲಯವಾಗಿದ್ದು ನೋಡಲು ವಿಸ್ಮಯವಾಗುತ್ತದೆ! ದೇವಾಲಯದ ಎದುರಿಗೆ ಬೆಟ್ಟ ಗುಡ್ಡಗಳ ನಡುವಿನ ಕೃಷ್ಣಾ ನದಿ ಕಣಿವೆಯ ಮೈ ನವಿರೇಳಿಸುವ ಅದ್ಭುತ ದೃಶ್ಯ ಕಾಣುತ್ತದೆ! 
       ಕೃಷ್ಣಾ ದೇವಿ ದೇವಾಲಯದ ಬಳಿ ಒಂದು ಸ್ಟ್ರಾಬೆರಿ ಹಣ್ಣುಗಳ ತೋಟವಿದೆ. ಇಲ್ಲಿ ನಾವು ಸ್ಟ್ರಾಬೆರಿ ಗಿಡಗಳು, ಹಣ್ಣುಗಳ ವಿವಿಧ ಹಂತಗಳನ್ನು ನೋಡಿ ಸ್ಟ್ರಾಬೆರಿ ಹಣ್ಣುಗಳನ್ನು ಸವಿಯಬಹುದು.
     ಮಹಾಬಲೇಶ್ವರ ಗಿರಿಧಾಮದಲ್ಲಿ ಅನೇಕ ವ್ಯೂ ಪಾಯಿಂಟ್ ಗಳು ಅಥವಾ ವೀಕ್ಷಣಾ ಕೇಂದ್ರಗಳು ಇವೆ. ಈ ವ್ಯೂ ಪಾಯಿಂಟ್ ಗಳು ಮಾರುಕಟ್ಟೆಯಿಂದ ಸುಮಾರು ಹದಿನಾರು ಕಿ.ಮೀ. ದೂರದಲ್ಲಿದೆ. ಬೆಟ್ಟ ಗುಡ್ಡಗಳ ಅತ್ಯಂತ ರಮಣೀಯವಾದ ವಿಶಾಲವಾದ ಈ ಪ್ರದೇಶದಲ್ಲಿ, ಕೇಟ್ಸ್ ವ್ಯೂ ಪಾಯಿಂಟ್, ಇಕೋ ಪಾಯಿಂಟ್, ಎಲಿಫೆಂಟ್ ಹಾಗೂ ನೀಡಲ್ ಹೋಲ್ ವ್ಯೂ ಪಾಯಿಂಟ್, ಆರ್ಥರ್ ಸೀಟ್ ಕಾಂಪ್ಲೆಕ್ಸ್. ಮೊದಲಾದ ಅನೇಕ. ಸುಂದರ ವ್ಯೂ ಪಾಯಿಂಟ್ ಗಳಿವೆ. ಇಲ್ಲಿ ಹಲವಾರು ತಿಂಡಿ, ತಿನಿಸುಗಳೂ ಲಭ್ಯವಿದ್ದು, ಕುದುರೆ ಹಾಗೂ ಒಂಟಿ ಸವಾರಿಗಳೂ ಇವೆ.
     ಕೇಟ್ಸ್  ವ್ಯೂ ಪಾಯಿಂಟ್ ಗೆ ಬ್ರಿಟಿಷ್ ಗವರ್ನರ್ ಆಗಿದ್ದ ಜಾನ್ ಮಲ್ ಕಮ್ ನ ಮಗಳು ಕೇಟ್ ಳ ಹೆಸರಿಟ್ಟಿದ್ದಾರೆ. ಶಿವಾಜಿ ಮಹಾರಾಜರ ಕಾಲದಲ್ಲಿ ಇದಕ್ಕೆ ನಾಕೆ ಖಿಂಡ್ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಒಂದು ಟೆಲಿಸ್ಕೋಪ್ ಮೂಲಕ ನಾವು ಕೃಷ್ಣಾ ನದಿ ಕಣಿವೆ, ಧೋಮ್ ಮತ್ತು ಬಾಲ್ಕವಾಡಿ ಅಣೆಕಟ್ಟುಗಳು, ವಿದ್ಯುದಾಗರಗಳು, ಟೆಂಟ್ ಗಳು, ಕಮಲ ಗಢ ಕೋಟಿ, ಒಂದು ದೇವಾಲಯ ಹಾಗೂ ಶಾಲೆ, ಇವೆಲ್ಲವನ್ನೂ ನೋಡಬಹುದು. ಈ ವ್ಯೂ ಪಾಯಿಂಟ್ ಗೆ ನೇರವಾಗಿ ಎಲಿಫೆಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಕಾಣುತ್ತದೆ. ಬೆಟ್ಟದ ಆಕೃತಿ ಆನೆಯ ತಲೆಯಂತಿರುವುದರಿದ ಹಾಗೂ ಅದರಲ್ಲಿ ಸೂಜಿಯ ಕಣ್ಣಿನಂಥ ರಂಧ್ರವಿರುವೂದರಿಂದ ಈ ಹೆಸರುಗಳನ್ನು ಇಡಲಾಗಿದೆ.ಈ ಪಾಯಿಂಟ್ ನ ಬಳಿ ಮಂಕಿ ಫಾಲ್ಸ್ ಎಂಬ ಪುಟ್ಟ ಜಲಪಾತ ಇದೆ. ಇದೊಂದು ನೀರಿನ ಬುಗ್ಗೆಯಂತಿರುವುದರಿಂದ ಇದನ್ನು ವಲ್ಚರ್ಸ್ ಸ್ಪ್ರಿಂಗ್ ಎಂದೂ ಕರೆಯುತ್ತಾರೆ.
       ಕೇಟ್ಸ್ ಪಾಯಿಂಟ್ ಬಳಿಯೇ ಒಂದು ಕಡೆ ಜೋರಾಗಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಇದನ್ನು ಇಕೋ ಪಾಯಿಂಟ್ ಎನ್ನುತ್ತಾರೆ.
ಆರ್ಥರ್ ಸೀಟ್ ಕಾಂಪ್ಲೆಕ್ಸ್ ಹಲವು ವೀಕ್ಷಣಾ ಕೇಂದ್ರಗಳ ಸಂಕೀರ್ಣವಾಗಿದ್ದು ಇದನ್ನು ವ್ಯೂ ಪಾಯಿಂಟ್ ಗಳ ರಾಣಿ ಎಂದು ಕರೆಯುತ್ತಾರೆ! ಇದರಲ್ಲಿ ಇಕೋ ಪಾಯಿಂಟ್, ಮಲ್ ಕಮ್ ಪಾಯಿಂಟ್, ಟೈಗರ್ ಸ್ಪ್ರಿಂಗ್ ಪಾಯಿಂಟ್, ಹಾಗೂ ಆರ್ಥರ್ ಸೀಟ್ ಪಾಯಿಂಟ್ ಎಂಬ ನಾಲ್ಕು ವ್ಯೂ ಪಾಯಿಂಟ್ ಗಳಿವೆ. ಇಕೋ ಪಾಯಿಂಟ್ ನಲ್ಲಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಮಲ್ ಕಮ್ ಪಾಯಿಂಟ್ ನಿಂದ ಆರ್ಥರ್ ಸೀಟ್ ಪಾಯಿಂಟ್, ತೋರಣಗಢ ಕೋಟಿ, ಪ್ರತಾಪಗಢ ಕೋಟಿ, ಸಾವಿತ್ರಿ ನದಿ ಕಣಿವೆ, ಇವುಗಳನ್ನು ನೋಡಬಹುದು. ಟೈಗರ್ ಸ್ಪ್ರಿಂಗ್ ಪಾಯಿಂಟ್ ನಲ್ಲಿ ಒಂದು ನೀರಿನ ಬುಗ್ಗೆಯಿದ್ದು ಇಲ್ಲಿ ನೀರು ಕುಡಿಯಲು ಹುಲಿ ಬರುತ್ತಿತ್ತಂತೆ! ಹಾಗಾಗಿ ಇದಕ್ಕೆ ಈ ಹೆಸರಿಟ್ಟಿದ್ದಾರೆ. ಕೊನೆಯದಾದ ಆರ್ಥರ್ ಸೀಟ್ ಪಾಯಿಂಟ್ ನಲ್ಲಿ ಆರ್ಥರ್ ಎಂಬ ಬ್ರಿಟಿಷರನು ಕುಳಿತುಕೊಂಡು ಸಾವಿತ್ರೀ ನದಿಯನ್ನು ನೋಡುತ್ತಿದ್ದನಂತೆ. ಹಿಂದೊಮ್ಮೆ ಅವನು ತನ್ನ ಪತ್ನಿ ಮತ್ತು ಮಗಳಿನೊಂದಿಗೆ ಸಾವಿತ್ರೀ ನದಿಯ ಮೇಲೆ ದೋಣಿಯಲ್ಲಿ ಮಹಾಬಲೇಶ್ವರಕ್ಕೆ ಬರುತ್ತಿದ್ದಾಗ, ಅವನ ಪತ್ನಿ ಮತ್ತು ಮಗಳು ನದಿಯಲ್ಲಿ ಮುಳುಗಿ ಸತ್ತುಹೋಗಿದ್ದರು! ಅದನ್ನೇ ನೆನೆಯುತ್ತಾ ಅವನು ಇಲ್ಲಿ ಕುಳಿತು ಸಾವಿತ್ರೀ ನದಿಯನ್ನು ನೋಡುತ್ತಿದ್ದುದರಿಂದ ಅವನ ಹೆಸರನ್ನಿಟ್ಟಿದ್ದಾರೆ. ಇಲ್ಲಿ ಸೂರ್ಯಾಸ್ತ ನೋಡಲು ಅದ್ಭುತವಾಗಿರುತ್ತದೆ! ಮುಳುಗುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು ಬೆಟ್ಟಗುಡ್ಡಗಳ ಸಾಲಿನ ಮೇಲೆ ಬಿದ್ದಾಗ, ಅದು ಮರಗಳ ಕಪ್ಪು ಛಾಯೆಗಳ ತೋರಣಗಳೊಂದಿಗೆ ಕೂಡಿರುವ ಯಾವುದೋ ಅಲೌಕಿಕ ಲೋಕದಂತೆ ಕಾಣುತ್ತದೆ! 
       ವಿಶೇಷವೆಂದರೆ ಈ ಎಲ್ಲ ವ್ಯೂ ಪಾಯಿಂಟ್ ಗಳಲ್ಲೂ ಅವುಗಳ ಹೆಸರು ಮತ್ತು ವೈಶಿಷ್ಟ್ಯಗಳನ್ನುಳ್ಳ ಫಲಕಗಳನ್ನು ಹಾಕಿದ್ದಾರೆ. 
      ಮಹಾಬಲೇಶ್ವರದಲ್ಲಿ ನಾವು ಇವಲ್ಲದೇ ದೋಣಿವಿಹಾರವಿರುವ ವೇನ್ನಾ ಕೆರೆ, ಇಲ್ಲಿ ಉಗಮವಾಗುವ ಐದು ನದಿಗಳು ಸೇರುವ ಪಂಚಗಂಗಾ ದೇವಾಲಯ, ಶಿವಾಜಿ ಮಹಾರಾಜನು ನಿರ್ಮಿಸಿದ ಐತಿಹಾಸಿಕ ಪ್ರತಾಪ ಗಢ ಕೋಟಿ, ಅದ್ಭುತವಾದ ಲಿಂಗಮಾಲಾ ಜಲಪಾತ, ಮೊದಲಾದ ಇತರ ಸ್ಥಳಗಳನ್ನು ನೋಡಬಹುದು. ಮಹಾಬಲೇಶ್ವರಕ್ಕೆ ಎಲ್ಲಾ ಸಮಯದಲ್ಲೂ ಹೋಗಬಹುದಾದರೂ ನವೆಂಬರ್ ಇಂದ ಫೆಬ್ರವರಿ ವರೆಗಿನ ಚಳಿಗಾಲದ ಅವಧಿಯಲ್ಲಿ ಹೋದರೆ ಚೆನ್ನಾಗಿರುತ್ತದೆ. ಆಗ ಸ್ಟ್ರಾಬೆರಿ ಹಣ್ಣುಗಳ ಕಾಲವೂ ಆಗಿರುತ್ತದೆ.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ