ಶನಿವಾರ, ಸೆಪ್ಟೆಂಬರ್ 20, 2025

ಬಂಗು ಬೇಡ ಇದರ ಹಂಗು

ಚರ್ಮ ಎಂದಕೂಡಲೇ ನಮಗೆ ಸೌಂದರ್ಯದ ಭಾವವುಂಟಾಗುತ್ತದೆ. ಸೌಂದರ್ಯ ಚರ್ಮದಾಳಕ್ಕಿದೆ ಎಂಬ ಮಾತೂ ಇದೆ. ಅದರಲ್ಲೂ ಸ್ತ್ರೀಯರಲ್ಲಿ ಸೌಂದರ್ಯಪ್ರಜ್ಞೆ ಹೆಚ್ಚು. ಪುರುಷರು ಕೂಡ ಸ್ತ್ರೀಯರು ಸುಂದರವಾಗಿರುವುದನ್ನು ಬಯಸುತ್ತಾರೆ. ಹಾಗಾಗಿ, ಚರ್ಮ ವೈದ್ಯರ ಬಳಿಗೆ ಬರುವವರಲ್ಲಿ ರೋಗಗಳಿಲ್ಲದಿದ್ದರೂ ಸೌಂದರ್ಯ ಸಮಸ್ಯೆಗಳಿರುತ್ತವೆ. ಅಂಥ ಸಮಸ್ಯೆಗಳಲ್ಲಿ ಬಂಗು ಅಥವಾ ಮೆಲಾಸ್ಮ ( Melasma) ಬಹಳ ಸಾಮಾನ್ಯವಾದುದು. ಇದು ಸ್ತ್ರೀಯರಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಕೆಲವೊಮ್ಮೆ ಪುರುಷರಲ್ಲೂ ಉಂಟಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಉಂಟಾದಾಗ ಇದನ್ನು ಕ್ಲೊಯಾಸ್ಮ ( Chloasma) ಎಂದು ಕರೆಯುತ್ತಾರೆ. 
       ಮೆಲಾಸ್ಮ ಅಥವಾ ಬಂಗು ಎಂದರೆ ಬೇರೇನಿಲ್ಲ. ನಮ್ಮ ಚರ್ಮಕ್ಕೆ ಬಣ್ಣ ಕೊಡುವ ಮೆಲನಿನ್ ದ್ರವ ಅಥವಾ ಅದನ್ನು ಉತ್ಪತ್ತಿ ಮಾಡುವ ಮೆಲನೋಸೈಟ್ ಕೋಶಗಳು ಹೆಚ್ಚಾಗಿರುತ್ತವೆ. ಇದು ಒಂದು ವಿನ್ಯಾಸದಲ್ಲಿ ಆದಾಗ ಬಂಗು ಎನ್ನುತ್ತಾರೆ. ಸಾಮಾನ್ಯವಾಗಿ ಇದು ಮುಖದಲ್ಲಿ ಆಗುತ್ತದೆ. ಅಪರೂಪವಾಗಿ ಮುಂದೋಳುಗಳಲ್ಲಾಗಬಹುದು. ಬಂಗಿನಲ್ಲಿ ಚರ್ಮದ ಬಣ್ಣ ಹೆಚ್ಚಾಗಿರುವುದರ ಜೊತೆಗೆ ರಕ್ತಸಂಚಾರ ಕೂಡ  ಹೆಚ್ಚಾಗುತ್ತದೆ. ಇದರೊಂದಿಗೆ ಕೊಬ್ಬಿನ ಉತ್ಪತ್ತಿಯಲ್ಲಿ ಏರುಪೇರಾಗಿ ಚರ್ಮ ತೆಳ್ಳಗಾಗಿರುತ್ತದೆ.

ಬಂಗಿನ ಬಗೆಗಳು 
     ಬಂಗಿನಲ್ಲಿ ಕಂದು ಬಣ್ಣದ ಮಚ್ಚೆಗಳಾಗುತ್ತವೆ. ಇವುಗಳಲ್ಲಿ ನವೆ ಅಥವಾ ಬೇರಾವುದೇ ಲಕಷಣಗಳಿರುವುದಿಲ್ಲ. ಬಂಗನ್ನು ಮೂರು ರೀತಿಗಳಲ್ಲಿ ವಿಂಗಡಿಸುತ್ತಾರೆ. ಒಂದು, ಮಧ್ಯಮುಖ ಅಥವಾ ಸೆಂಟ್ರೋಫೇಷಿಯಲ್ ( Centrofacial) ಬಗೆ. ಇದರಲ್ಲಿ ಕಂದು ಬಣ್ಣದ ಮಚ್ಚೆಗಳು ಹಣೆ, ಮೂಗು, ಮೇಲ್ತುಟಿಯ ಭಾಗ, ಕೆನ್ನೆಗಳು, ಮತ್ತು ಗಲ್ಲದಲ್ಲಿ ಆಗುತ್ತವೆ. ಎರಡನೆಯ ಬಗೆ ಮಾಲಾರ್ ( Malar) ಬಗೆ. ಇದರಲ್ಲಿ ಕಂದು ಮಚ್ಚೆಗಳು ಕೆನ್ನೆಗಳು ಮತ್ತು ಮೂಗಿನ ಮೇಲಾಗುತ್ತವೆ. ಮೂರನೆಯದು ಮ್ಯಾಂಡಿಬುಲಾರ್ ( Mandibular) ಬಗೆ. ಇದರಲ್ಲಿ ದವಡೆಗಳ‌ ಭಾಗಗಳಲ್ಲಿ ಮಚ್ಚೆಗಳಾಗುತ್ತವೆ. 
      ಬಂಗಿನಲ್ಲಿ ಮೆಲನಿನ್ ದ್ರವದ ಹೆಚ್ಚಳ ಎಷ್ಟು ಆಳಕ್ಕಿದೆ ಎಂಬುದರ ಆಧಾರದಲ್ಲಿ ಅದನ್ನು ಎಪಿಡರ್ಮಲ್ ( ಚರ್ಮದ ಮೇಲ್ಪದರದ), ಡರ್ಮಲ್ ( ಚರ್ಮದ ಒಳಪದರದ), ಹಾಗೂ ಮಿಕ್ಸೆಡ್ ಅಥವಾ ಮಿಶ್ರ ಬಗೆಗಳೆಂದೂ ವಿಂಗಡಿಸಬಹುದು.

ಬಂಗಿಗೆ ಕಾರಣಗಳು 

      ಬಂಗು ಏಕೆ ಉಂಟಾಗುತ್ತದೆ? ಇದಕ್ಕೆ ಒಂದು ನಿರ್ದಿಷ್ಟ ಕಾರಣ ಎಂದಿಲ್ಲ. ಅನುವಂಶಿಕ ಕಾರಣಗಳು, ಹಾರ್ಮೋನುಗಳ  ವ್ಯತ್ಯಾಸ, ಗರ್ಭನಿರೋಧಕ ಮಾತ್ರೆಗಳ ಸೇವನೆ, ಗರ್ಭಿಣಿಯಾದ ಸಂದರ್ಭ, ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳ ಪ್ರಚೋದನೆ, ಮೊದಲಾದ ಕಾರಣಗಳಿರುತ್ತವೆ. ಹೆಣ್ಣು ಗರ್ಭಿಣಿಯಾದಾಗ ಎಸ್ಟ್ರೋಜನ್, ಪ್ರೊಜೆಸ್ಟರಾನ್ ಎಂಬ ಗರ್ಭಕ್ಕೆ ಸಂಬಂಧಿಸಿದ ಹಾರ್ಮೋನುಗಳು ಹಾಗೂ ಮೆಲನೋಸೈಟ್ ಕೋಶಗಳನ್ನು ಪ್ರಚೋದಿಸುವ ಮೆಲನೋಸೈಟ್ ಸ್ಟಿಮುಲೇಟಿಂಗ್ ಹಾರ್ಮೋನ್, ಇವು ಹೆಚ್ಚಾಗಿ ಮೆಲನೋಸೈಟ್ ಗಳನ್ನು ಪ್ರಚೋದಿಸುತ್ತವೆ. ಅದರಿಂದ ಮೆಲನಿನ್ ಹೆಚ್ಚು ಉತ್ಪತ್ತಿಯಾಗಿ ಬಂಗು ಉಂಟಾಗುತ್ತದೆ. ಗರ್ಭನಿರೋಧಕ ಮಾತ್ರೆಗಳಲ್ಲೂ ಈ ಹಾರ್ಮೋನ್ ಗಳಿರುವುದರಿಂದ ಅವುಗಳ ಸೇವನೆಯಿಂದಲೂ ಬಂಗು ಉಂಟಾಗಬಹುದು. ಆದರೆ ಎಲ್ಲರಲ್ಲೂ ಹೀಗಾಗುವುದಿಲ್ಲ. ಅನುವಂಶಿಕ ಪ್ರವೃತ್ತಿ ಇರುವವರಲ್ಲಿ ಮುಖ್ಯವಾಗಿ ಆಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಬಂಗು ಇದ್ದರೆ ಅದು ಆಗುವ ಸಾಧ್ಯತೆ ಹೆಚ್ಚು. ಬಂಗು ಒಮ್ಮೆ ಬಂದರೆ, ಅದನ್ನು ಚಿಕಿತ್ಸೆ ಮಾಡಿ ನಿವಾರಿಸಿದರೂ ಬಿಸಿಲಿನ ಕಿರಣಗಳು ಬಿದ್ದಾಗ ಬಣ್ಣದ ಕೋಶಗಳು ಪುನಃ ಪ್ರಚೋದನೆಗೊಂಡು ಬಂಗು ಮರುಕಳಿಸಬಹುದು. ಕೆಲವರು ಈ ಬಂಗು ಕಷ್ಟ ಕಾಲಕ್ಕೆ ಬಂದಿತು, ಅದು ಕಷ್ಟಗಳ ಮುನ್ಸೂಚನೆ ಎಂದು ಹೆದರುತ್ತಾರೆ. ಹಾಗೆ ಹೆದರುವ ಅಗತ್ಯವಿಲ್ಲ. ಇದರಿಂದ ಬೇರಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬಂಗು ಆಗುವುದರಿಂದ ಮುಖದ ಸೌಂದರ್ಯ ಕುಂದಿ ಸ್ವಲ್ಪ ಖಿನ್ನತೆ ಆವರಿಸಿಕೊಳ್ಳಬಹುದು. ಆದರೆ ಯಾವುದೇ ಸಮಸ್ಯೆ ಬರುವಂತೆ ಇದೂ ಬಂದಿದೆಯೆಂದು ಅರಿತು ಖಿನ್ನರಾಗದೇ ಚಿಕಿತ್ಸೆಗೆ ಮುಂದಾಗಬೇಕು.

ಚಿಕಿತ್ಸೆ 

ಬಂಗಿನ ನಿವಾರಣೆಗೆ ಈಗ ಅನೇಕ ಯಶಸ್ವಿ ಚಿಕಿತ್ಸೆಗಳಿವೆ. ಕೋಜಿಕ್ ಆಮ್ಲ, ಹೈಡ್ರೋಕ್ವಿನೋನ್, ಆರ್ಬುಟಿನ್ ಗ್ಲೈಕೋಲಿಕ್ ಆಮ್ಲ,   ಮೊದಲಾದ ಔಷಧಗಳು ಮುಲಾಮುಗಳ ರೂಪದಲ್ಲಿ ದೊರೆಯುತ್ತವೆ. ಇವು ಮೆಲನಿನ್ ಉತ್ಪತ್ತಿಯನ್ನು ನಿರೋಧಿಸುತ್ತವೆ. ಗ್ಲೈಕೋಲಿಕ್ ಆಮ್ಲ ಮೆಲನಿನ್ ನಿರೋಧಿಸುವುದರೊಂದಿಗೆ  ಚರ್ಮದ ಮೇಲ್ಪದರವನ್ನು ನಿಧಾನವಾಗಿ ಕೀಳುವುದರ ಮೂಲಕ ಬಣ್ಣ ಹೆಚ್ಚಾಗಿರುವ ಕೋಶಗಳನ್ನು ಕಳೆದು ಹೊಸ ಚರ್ಮ ಕೋಶಗಳು ಬೆಳೆಯುವಂತೆ ಮಾಡುತ್ತದೆ. ರೆಟಿನಾಯ್ಡ್ ಕೂಡ ಹೀಗೆಯೇ ಕೆಲಸ ಮಾಡುತ್ತದೆ. ಇವುಗಳನ್ನು ಏಕವಾಗಿ ಅಥವಾ ಒಟ್ಟಾಗಿರುವ ಮುಲಾಮುಗಳಾಗಿ ಚಿಕಿತ್ಸೆಗೆ ನೀಡಲಾಗುತ್ತದೆ. ಕ್ಲಿಗ್ಮಾನ್ ಫಾರ್ಮುಲಾ ಎಂಬ ಚಿಕಿತ್ಸೆಯಲ್ಲಿ ಹೈಡ್ರೋಕ್ವಿನೋನ್, ರೆಟಿನಾಯ್ಡ್ ಹಾಗೂ ಸ್ಟೀರಾಯ್ಡ್ಗಳನ್ನು ಒಟ್ಟಾಗಿ ಬೆರೆಸಿರುವ ಮುಲಾಮನ್ನು ಬಳಸಲಾಗುತ್ತದೆ. ಇವುಗಳನ್ನು ರೋಗಿಗಳು ತಾವಾಗಿಯೇ ಉಪಯೋಗಿಸದೇ ಚರ್ಮವೈದ್ಯರ ನಿರ್ದೇಶನದಲ್ಲಿ ಉಪಯೋಗಿಸಬೇಕು. ಈ ಮುಲಾಮುಗಳಲ್ಲಿ ಕೆಲವು ಉರಿ ತರಬಹುದು. ಹಾಗೇನಾದರೂ ಆದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು. ಸ್ಟಿರಾಯ್ಡ್ ಇರುವ ಮುಲಾಮನ್ನು ಅನಿರ್ದಿಷ್ಟಾವಧಿಯವರೆಗೆ ಬಳಸಿದರೆ ಹಲವಾರು ದುಷ್ಪರಿಣಾಮಗಳು ಆಗುತ್ತವೆ. ಮುಲಾಮುಗಳಲ್ಲಿ ಏನಿರುತ್ತದೆ ಎಂದು ರೋಗಿಗಳಿಗೆ ತಿಳಿಯದಿರುವುದರಿಂದ  ಅವನ್ನು ವೈದ್ಯರ ನಿರ್ದೇಶನದಲ್ಲೇ ಬಳಸಬೇಕು. ಮುಲಾಮುಗಳು ಯಶಸ್ವಿಯಾಗದಿದ್ದರೆ ಕೆಮಿಕಲ್ ಪೀಲ್ ಚಿಕಿತ್ಸೆ ಮಾಡಬಹುದು. ಇದರಲ್ಲಿ ಗ್ಲೈಕೋಲಿಕ್ ಆಮ್ಲವನ್ನು ಹೆಚ್ಚಿನ ಅಂಶದಲ್ಲಿ ಬಂಗಿನ ಚರ್ಮದ ಮೇಲೆ ಸವರಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಲಾಗುತ್ತದೆ. ಗ್ಲೈಕೋಲಿಕ್ ಆಮ್ಲದಂತೆಯೇ ಸ್ಯಾಲಿಸಿಲಿಕ್ ಆಮ್ಲ ಮೊದಲಾದ ಇತರ ರಾಸಾಯನಿಕಗಳನ್ನೂ ಕೆಮಿಕಲ್ ಪೀಲ್ ಮಾಡಲು ಬಳಸಲಾಗುತ್ತವೆ. ಇವಲ್ಲದೇ, ಮಾತ್ರೆಯ ರೂಪದಲ್ಲಿ ಸೇವಿಸಬಹುದಾದ ಗ್ಲುಟಥೈಯೋನ್ , ಹಾಗೂ ಟ್ರಾನೆಕ್ಸಮಿಕ್ ಆಮ್ಲ  ಬಂಗಿನ ನಿವಾರಣೆಗೆ ಒಳ್ಳೆಯ ಔಷಧಗಳಾಗಿವೆ. ಇವೂ ಮೆಲನಿನ್ ಉತ್ಪತ್ತಿಯನ್ನು ನಿರೋಧಿಸುತ್ತವೆ. ಈಗ ಈ ಔಷಧಗಳನ್ನುಳ್ಳ ಸಾಬೂನುಗಳು ಹಾಗೂ ಫೇಸ್ ವಾಶ್ ಹಾಗೂ ಲಭ್ಯವಿವೆ. ಇವು ಸಮಾಧಾನಕರ ಪರಿಣಾಮಗಳನ್ನುಂಟುಮಾಡುತ್ತವೆ. ಬಂಗಿಗೆ ಲೇಸರ್ ಚಿಕಿತ್ಸೆ ಕೂಡ ಲಭ್ಯವಿದೆ. ಚಿಕಿತ್ಸೆಯಿಂದ ಬಂಗು ನಿವಾರಣೆಯಾದರೂ ಅದು ಬಿಸಿಲಿನ ಅತಿನೇರಳೆ ಕಿರಣಗಳಿಂದ ಪುನಃ ಉಂಟಾಗಬಹುದಾದ್ದರಿಂದ ಬಿಸಿಲಿನ ಅತಿನೇರಳೆ ಕಿರಣಗಳನ್ನು ತಡೆಗಟ್ಟುವ ಸನ್ ಸ್ಕ್ರೀನ್ ಮುಲಾಮು ಅಥವಾ ದ್ರಾವಣಗಳನ್ನು ಹಗಲಿನಲ್ಲಿ ನಿರಂತರವಾಗಿ ಬಳಸಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ