ಸೋಮವಾರ, ಡಿಸೆಂಬರ್ 29, 2025

ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯ

   

ಭಾರತವು ದೇವಾಲಯಗಳ ನಾಡು. ಭಾರತೀಯರ ಧರ್ಮ, ಸಂಸ್ಕೃತಿಗಳ ಅಭಿವ್ಯಕ್ತತೆ ದೇವಾಲಯಗಳ ಮೂಲಕ ಆಗುತ್ತಾ ಬಂದಿದೆ. ಇವುಗಳೊಂದಿಗೆ, ದೇವಾಲಯಗಳ ಮೂಲಕ, ಕಲೆಯೂ ಸೊಗಸಾಗಿ ಬೆಳೆದುಬಂದಿದೆ. ಹಲವಾರು ಪಂಥಗಳು ತಮ್ಮ ವಿಭಿನ್ನ, ವಿಶಿಷ್ಟ, ತತ್ವ, ಸಂಸ್ಕೃತಿಗಳನ್ನು ದೇವಾಲಯಗಳ ಮೂಲಕ ವ್ಯಕ್ತಪಡಿಸಿವೆ. ಶಿವ, ವಿಷ್ಣು, ಗಣೇಶ, ಆಂಜನೇಯ, ದುರ್ಗೆ, ಲಕ್ಷ್ಮಿ, ಮೊದಲಾದ ದೇವಿ,ದೇವಿಯರ ದೇವಾಲಯಗಳಿರುವಂತೆಯೇ ಕೋಟಿ ಚೆನ್ನಯ, ಭೂತರಾಜ, ಅಣ್ಣಪ್ಪ, ಮೊದಲಾದ ಭೂತ ಅಥವಾ ದೈವಸ್ಥಾನಗಳೂ ಇವೆ. ಅಂತೆಯೇ ತಾಂತ್ರಿಕ ಪಂಥದವರ ದೇವಾಲಯಗಳೂ ಹಲವಾರಿವೆ. ಈ ಸಾಲಿಞಲ್ಲೇ ಯೋಗಿನೀ ದೇವಾಲಯಗಳೆಂಬ ವಿಶಿಷ್ಟ ದೇವಾಲಯಗಳೂ ಸೇರುತ್ತವೆ. ಇಂಥ ಒಂದು ಚೌಷಟ್ ಯೋಗಿನೀ ದೇವಾಲಯವನ್ನು ಮಧ್ಯಪ್ರದೇಶದ ಜಬಲ್ ಪುರದ ಪ್ರವಾಸದ ವೇಳೆ ನೋಡುವ ಅವಕಾಶ ನನಗಾಯಿತು.
ಜಬಲ್ ಪುರ್ ನಗರದಿಂದ ಸುಮಾರು ಇಪ್ಪತ್ತೆರಡು ಕಿ.ಮೀ. ದೂರದಲ್ಲಿರುವ ಭೇಡಾಘಾಟ್ ನ ಬಳಿ ಈ ದೇವಾಲಯವಿದೆ. ನರ್ಮದಾ ಮತ್ತು ಬಾಣಗಂಗಾ ನದಿಗಳ ಸಂಗಮಸ್ಥಾನವಾದ ಭೇಡಾಘಾಟ್ ಒಂದು ಅದ್ಭುತ ತಾಣ. ಮೈನವಿರೇಳಿಸುವ ಅಮೃತಶಿಲೆಯ ಬೃಹತ್ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿ, ಹಾಗೂ ಇದು ನಿರ್ಮಿಸಿರುವ ಧುವಾಂಧರ್ ಜಲಪಾತ ನೋಡಲು ಅತ್ಯಂತ ರಮಣೀಯ! ಅನೇಕ ಶತಮಾನಗಳ ಕಾಲ, ಭೇಡಾಘಾಟ್ ಗ್ರಾಮ ಒಂದು ತಾಂತ್ರಿಕ ಪೀಠವಾಗಿದ್ದು, ಮೂಲತಃ ಇದರ ಹೆಸರು ಭೈರವ ಘಾಟ್ ಆಗಿತ್ತೆಂದು ಹೇಳುತ್ತಾರೆ. ಕೆಲವರು ಭೇಡಾ ಎಂದರೆ ಸಂಗಮವೆಂದೂ ಹೇಳುತ್ತಾರೆ. ಇಲ್ಲಿ ಶಿವನನ್ನು ಮೆಚ್ಚಿಸಲು ಭೃಗು ಮಹರ್ಷಿಗಳು ಆತ್ಮಾರ್ಪಣೆ ಮಾಡಿಕೊಂಡರೆಂದು ಹೇಳುತ್ತಾರೆ. ಜಬಲ್ ಪುರ್ ಎಂಬ ಹೆಸರು ಬರಲು ಒಂದು ಐತಿಹ್ಯವಿದೆ. ನರ್ಮದಾ ನದಿಯ ದಂಡೆಯ ಮೇಲೆ ತಪಸ್ಸು ಮಾಡಿದ ಜಾಬಾಲಿ ಮಹರ್ಷಿಗಳಿಂದ ಜಾಬಾಲಿಪುರವೆಂಬ ಹೆಸರು ಬಂದು, ಅನಂತರ ಅದು ಜಬಲ್ ಪುರ್ ಆಯಿತಂತೆ. ಹಾಗಾಗಿ ಜಬಲ್ ಪುರ್, ಋಷಿಮುನಿಗಳ ತಪೋಭೂಮಿ.
ಚೌಷಟ್ ಯೋಗಿನೀ ದೇವಾಲಯ, ಒಂದು ಬೆಟ್ಟದ ಮೇಲಿದ್ದು, ಪ್ರಕೃತಿ ಸೌಂದರ್ಯದ ಮಧ್ಯೆ ಮೆಟ್ಟಿಲುಗಳನ್ನು ಹತ್ತುತ್ತಾ ತಲುಪಬೇಕು. 


ಈ ದೇವಾಲಯ ಒಂದು ರೀತಿಯ ಬಯಲು ದೇವಾಲಯವಾಗಿದ್ದು ಗೋಳಾಕೃತಿಯಲ್ಲಿದೆ, ಹಾಗೂ ಎಂಬತ್ತೊಂದು ಪ್ರತ್ಯೇಕ ಪ್ರತ್ಯೇಕ ಕೋಣೆಗಳನ್ನು ಹೊಂದಿದೆ. ಮುಖ್ಯವಾಗಿ ಒಂದು ಗೋಳಾಕೃತಿಯ ಗೋಡೆಯಿದ್ದು, ನಿಯಮಿತ ಅಂತರಗಳಲ್ಲಿ ಕಂಬಗಳನ್ನು ನಿರ್ಮಿಸಿ ಎಂಬತ್ತೊಂದು ಕೋಣೆಗಳನ್ನು ಕಟ್ಟಲಾಗಿದೆ. ಪ್ರತಿ ಕೋಣೆಯಲ್ಲೂ ಅತ್ಯಂತ ಸುಂದರವಾದ, ಕೆಂಪು ಮರಳುಗಲ್ಲಿನಲ್ಲಿ ಕೆತ್ತಿದ ದೇವಿಯರ ಮೂರ್ತಿಗಳಿವೆ. ಸುಂದರವಾದ ಅಂಗಸೌಷ್ಠವದಿಂದ ಕೂಡಿದ್ದು, ಆಭರಣಗಳಿಂದ ಭೂಷಿತವಾಗಿ ಕುಳಿತ ಭಂಗಿಯಲ್ಲಿರುವ ಈ ದೇವಿಯರ ವಿಗ್ರಹಗಳಲ್ಲಿ, ಅರವತ್ತು ನಾಲ್ಕು ಯೋಗಿನಿಯರದ್ದಾದರೆ, ಮಿಕ್ಕವು, ಸಪ್ತಮಾತೃಕೆಯರ ಹಾಗೂ ಇತರ ದೇವತೆಗಳದ್ದಾಗಿವೆ. ಒಂದು ಗಣೇಶನ ಮೂರ್ತಿಯೂ ಇದೆ. ಚೌಷಟ್ ಎಂದರೆ ಅರವತ್ತು ನಾಲ್ಕು ಎಂದು ಅರ್ಥ. ಆದರೆ ಇಲ್ಲಿ ಎಂಬತ್ತೊಂದು ವಿಗ್ರಹಗಳಿವೆ. ವಿಗ್ರಹಗಳ ಸುತ್ತಲಿನ ಅಲಂಕಾರ ಬಹಳ ಶ್ರೀಮಂತವಾಗಿದ್ದು ಅನೇಕ ತಾಂತ್ರಿಕ ಚಿಹ್ನೆಗಳಿಂದ ಕೂಡಿವೆ.‌ ಪೀಠಗಳಲ್ಲಿ ಪ್ರಾಣಿಗಳ ಕೆತ್ತನೆಗಳೂ ಇವೆ. ಕೆಲವು ವಿಗ್ರಹಗಳು ನರ್ತಿಸುವ ಭಂಗಿಯಲ್ಲೂ ಇವೆ. ಆದರೆ ದುರದೃಷ್ಟಕರ ವಿಚಾರವೆಂದರೆ, ಬಹುತೇಕ ವಿಗ್ರಹಗಳು ಮುಸ್ಲಿಂ ದಾಳಿಕೋರರಿಂದ ದಾಳಿಗೊಳಗಾಗಿ ಮುರಿದು ಹಾಳಾಗಿವೆ. ಈ ದೇವಾಲಯವನ್ನು ಹತ್ತನೆಯ ಶತಮಾನದಲ್ಲಿ ಕಳಚೂರಿಗಳ ರಾಜನಾದ ಮೊದಲನೆಯ ಯುವರಾಜದೇವನು ನಿರ್ಮಿಸಿದನೆಂದು ತಿಳಿದುಬಂದಿದೆ.‌ ಹಾಗಾಗಿ ಇದು ಕಳಚೂರಿಗಳ ಕಲೆಯನ್ನು ತೋರಿಸುತ್ತದೆ. ಈ ದೇವಾಲಯ ಗೋಳಾಕೃತಿಯಲ್ಲಿರುವುದರಿಂದ ಇದನ್ನು ಗೋಳಕೀಮಠವೆಂದು ಕರೆಯಲಾಗಿದೆ. ಇದು ಶೈವ ತಾಂತ್ರಿಕ ಪಂಥಕ್ಕೆ ಸೇರಿದ್ದು, ಶ್ರೀಚಕ್ರ ಪೂಜೆ, ಮೊದಲಾದ ತಾಂತ್ರಿಕ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತಿತ್ತೆಂದು ಹೇಳಲಾಗಿದೆ.


 
ಈ ಚಕ್ರಾಕಾರದ ಮಂದಿರದ ಆವರಣದಲ್ಲಿ ಗೌರೀಶಂಕರ ದೇವಾಲಯವೆಂಬ ಇನ್ನೊಂದು ಕಲಾತ್ಮಕ ದೇವಾಲಯವಿದೆ. ಇದನ್ನು ಅಲ್ಹಣದೇವಿಯೆಂಬ ಕಳಚೂರಿ ರಾಣಿಯು ಕಟ್ಟಿಸಿದ್ದೆಂದೂ ಅನಂತರದ್ದೆಂದೂ ತಿಳಿದುಬಂದಿದೆ. ಈ ದೇವಾಲಯವು ನಾಗರಶೈಲಿಯ ಶಿಖರವನ್ನು ಹೊಂದಿದ್ದು, ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಗರ್ಭಗುಡಿಯ ಹೊರಗೆ ಬೇರೆ ಬೇರೆ ಗಾತ್ರದ ಶಿವಲಿಂಗಗಳೂ ಒಂದು ಗಂಟೆಯೂ ಇದೆ. ಗರ್ಭಗೃಹದಲ್ಲಿ ತ್ರಿಶೂಲಧಾರಿ ಶಿವ ಮತ್ತು ಕನ್ನಡಿ ಹಿಡಿದಿರುವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹಗಳಿವೆ. ಇವಲ್ಲದೆ, ಗಣೇಶ, ಷಣ್ಮುಖ, ಲಕ್ಷ್ಮೀನಾರಾಯಣರು ತಮ್ಮ ವಾಹನಗಳ ಮೇಲೆ ಕುಳಿತಿರುವ ವಿಗ್ರಹಗಳೂ ಇಲ್ಲಿವೆ. ಈ ದೇವಾಲಯ ನಾಶಗೊಂಡಿಲ್ಲ. ಹಾಗಾಗಿ ಇಲ್ಲಿ ಈಗಲೂ ಪೂಜೆಯಿದೆ. ಆದರೆ ಮುರಿದಿರುವ ಯೋಗಿನೀ ವಿಗ್ರಹಗಳಿಗೆ ಪೂಜೆಯಿಲ್ಲ.

 
ದೇವಾಲಯಗಳಿರುವ ಬೆಟ್ಟದ ಮೇಲೆ ಬೀಸುವ ತಂಗಾಳಿ ಹಾಗೂ ಹಸಿರು ಪ್ರಕೃತಿ ಆಹ್ಲಾದವುಂಟುಮಾಡುತ್ತವೆ. ಅಂತೆಯೇ ಇಲ್ಲಿಂದ, ಅಮೃತಶಿಲೆಯ ಬಂಡೆಗಳ ಮಧ್ಯೆ ಹರಿಯುವ ನರ್ಮದಾ ನದಿಯ ನೋಟ ಮನೋಹರವಾಗಿ ರುತ್ತದೆ! ಇಲ್ಲಿ ಕುಳಿತುಕೊಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಕಲ್ಲುಬೆಂಚುಗಳನ್ನೂ ಹಾಕಲಾಗಿದೆ.‌ಸ್ಥಳೀಯರು ಹೇಳುವಂತೆ, ಇಲ್ಲಿ ಒಂದು ಸುರಂಗಮಾರ್ಗವಿದ್ದು, ಅದು ಜಬಲ್ಪುರವನ್ನಾಳುತ್ತಿದ್ದ ಗೊಂಡರ ರಾಣಿ ದುರ್ಗಾವತಿಯ ಅರಮನೆಗೆ ಸೇರಿಕೊಳ್ಳುವುದಂತೆ! ಈಗ ಈ ಇಡೀ ತಾಣ, ಭಾರತೀಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ.

 

ಯೋಗಿನಿಯರು ಮತ್ತು ಯೋಗಿನೀ ದೇವಾಲಯಗಳು
ಯೋಗಿನಿಯರು ಒಟ್ಟು ಅರವತ್ತು ನಾಲ್ಕು ಇದ್ದು, ಇವರು ತಂತ್ರಕ್ಕೆ ಸಂಬಂಧಿಸಿದ ಸ್ತ್ರೀ ದೇವತೆಗಳು. ಇವರನ್ನು ಉಪಾಸಿಸುವ ತಂತ್ರ ಸಾಧಕರಿಗೆ ಇವರು ನೆರವಾಗುತ್ತಾರೆ ಎಂದು ಹೇಳಲಾಗುತ್ತದೆ. ಯೋಗಿನಿಯರ ಉಪಾಸನೆ ಮಾಡುವವರದು ಒಂದು ಪಂಥವಾಗಿದ್ದು, ಇದು, ಪ್ರಾಯಶಃ ತಂತ್ರ ಪದ್ಧತಿ ಎಲ್ಲೆಡೆ ಹರಡಿದ್ದಾಗ ನಾಥ ಸಂಪ್ರದಾಯದ ಯೋಗಿ ಮತ್ಸ್ಯೇಂದ್ರನಾಥರಿಂದ ಆರಂಭವಾಗಿರಬಹುದೆಂದು ಹೇಳಲಾಗಿದೆ. ಇದನ್ನು ಯೋಗಿನೀ ಕೌಲಸಂಪ್ರದಾಯವೆಂದು ಕರೆಯಲಾಗಿತ್ತು. ಮತ್ಸ್ಯೇಂದ್ರನಾಥರು ಈಗ ದೇವಾಲಯವಿರುವ ಸ್ಥಳದಲ್ಲಿ ಅರವತ್ತು ನಾಲ್ಕು ಯೋಗಿನಿಯರನ್ನು ಒಮ್ಮೆಲೇ ಆಹ್ವಾನಿಸಿದ್ದರೆಂಬ ಕಥೆಯಿದೆ. ಯೋಗಿನಿಯರ ವಿವರಣೆಗಳಿರುವ ಏಕೈಕ ಸಂಸ್ಕೃತ ಗ್ರಂಥವೆಂದರೆ ಮಹಾಕೌಲಜ್ಞಾನನಿರ್ಣಯ. ಕೆಲವು ಕಥೆಗಳ ಪ್ರಕಾರ, ಈ ಯೋಗಿನಿಯರು ದುರ್ಗಾದೇವಿಯ ವಿಸ್ತರಣೆಗಳು ಹಾಗೂ ಸಹಾಯಕರಾಗಿದ್ದು ರಾಕ್ಷಸರೊಂದಿಗಿನ ಅವಳ ಯುದ್ಧದಲ್ಲಿ ಸಹಾಯ ಮಾಡುತ್ತಾರೆ. ಅವರು ಯೋಗೇಶ್ವರಿಯು ಸೇರಿದಂತೆ ಅಷ್ಟಮಾತೃಕೆಯರ ವಿಸ್ತರಣೆಯರೆಂದೂ ಹೇಳುತ್ತಾರೆ. ಕೆಲವು ಯೋಗಿನಿಯರಿಗೆ ಸ್ತ್ರೀ ದೇಹ ಹಾಗೂ ಪ್ರಾಣಿಯ ಮುಖವೂ ಇರುತ್ತದೆ! ಭಾರತದಲ್ಲಿ ಒಡಿಶಾದ ಹೀರಾಪುರ, ರಾಣೀಪುರ, ಝರಿಯಲ್, ಮಧ್ಯಪ್ರದೇಶದ ಭೇಡಾಘಾಟ್, ಖಜುರಾಹೋ, ದುಧಾಯ್, ಮಿತಾವ್ಲಿ ಶಾಡೋಲ್, ಬಾದೋ, ನರೇಶಾರ್, ಲೋಖಾರಿ, ರಿಖಿಯಾರ್, ದೆಹಲಿಯ ಯೋಗಿನೀಪುರ, ಉತ್ತರ ಪ್ರದೇಶದ ವಾರಾಣಸೀ, ಅಸ್ಸಾಂನ ಗೌಹಾತಿ, ನೇಪಾಳದ ಕಠ್ಮಂಡು, ಮೊದಲಾದ ಹಲವೆಡೆಗಳಲ್ಲಿ ಈ ಯೋಗಿನೀ ದೇವಾಲಯಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ ಕೆಲವು ದುಸ್ಥಿತಿಯಲ್ಲಿವೆ. ಕೆಲವು ದೇವಾಲಯಗಳಲ್ಲಿ ಅರವತ್ತು ನಾಲ್ಕು ಯೋಗಿನಿಯರಿರದೇ, ನಲವತ್ತೆರಡು, ಅರವತ್ತೇಳು, ಅರವತ್ತೈದು, ಹಾಗೂ ಈಗ ನೋಡಿದಂತೆ ಎಂಬತ್ತೊಂದು ಯೋಗಿನಿಯರ ವಿಗ್ರಹಗಳಿವೆ.
ಯೋಗಿನಿಯರ ಹಾಗೂ ಯೋಗಿನೀ ದೇವಾಲಯಗಳ ಬಗ್ಗೆ ತಿಳಿಯಲು ನಿದ್ಯಾ ದೆಹೇಜಾ ಅವರ ' ಯೋಗಿನೀ ಕಲ್ಟ್ ಅಂಡ್ ಟೆಂಪಲ್ಸ್ ಹಾಗೂ ಸ್ಟೆಲ್ಲಾ ಡ್ಯುಪಿಸ್ ಅವರ ' ದಿ ಯೋಗಿನೀ ಟೆಂಪಲ್ಸ್ ಆಫ್ ಇಂಡಿಯಾ ' ಮೊದಲಾದ ಪುಸ್ತಕಗಳು ಸಹಾಯಕಾರಿ.
ಒಟ್ಟಿನಲ್ಲಿ ಜಬಲ್ ಪುರದ ಚೌಷಟ್ ಯೋಗಿನೀ ದೇವಾಲಯದ ಭೇಟಿ, ಯೋಗಿನಿಯರೆಂಬ ವಿಸ್ಮಯಕರ ದೇವತೆಗಳ ಹಾಗೂ ಅವರ ದೇವಾಲಯಗಳ ಬಗ್ಗೆ ಕುತೂಹಲ ಮೂಡಿಸುತ್ತದೆ. ಪ್ರವಾಸ ಮಾಡುವಾಗ ಇಂಥ ಅನೇಕ ವಿಚಾರಗಳು ತಿಳಿದುಬರುತ್ತವೆ.



ಚಿತ್ರಲೇಖನ: ಡಾ.ಬಿ.ಆರ್.ಸುಹಾಸ್
ಬೆಂಗಳೂರು 

ಶನಿವಾರ, ಡಿಸೆಂಬರ್ 13, 2025

ಜೀವಜಗತ್ತಿನ ವಿಸ್ಮಯ - ದ್ವಿವರ್ಣ ಮಲಬಾರ್ ಕಪ್ಪೆ


ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದಾಗ, ಸಂಜೆ ಭೋಜನ ಗೃಹವಾದ ಗೋಲ್ಘರ್ ನಲ್ಲಿ ಉಪಾಹಾರ ಸೇವಿಸಿ ಹೊರಬಂದಾಗ ಕಾಲಿಗೆ ಏನೋ ತಾಗಿದಂತಾಗಿ ಮುಂದೆ ಜಿಗಿದಂತಾಯಿತು! ಅದೇನೆಂದು ಸ್ವಲ್ಪ ಹುಡುಕಿ ನೋಡಿದಾಗ, ಒಂದು ವಿಭಿನ್ನ ಕಪ್ಪೆ ಕಾಣಿಸಿತು! ಕೂಡಲೇ ಅದರ ಫೋಟೋ ಹಿಡಿದು ಅನಂತರ ಅಲ್ಲಿನ ಪರಿಸರವಾದಿಗೆ ತೋರಿಸಿದಾಗ ಅವರು ಅದು ಬೈಕಲರ್ಡ್ ಮಲಬಾರ್ ಫ್ರಾಗ್, ಅಂದರೆ ದ್ವಿವರ್ಣ ಮಲಬಾರ್ ಕಪ್ಪೆ ಎಂದರು. ಹೆಸರೇ ಹೇಳುವಂತೆ, ಇದು ಎರಡು ಬಣ್ಣಗಳ ಛಾಯೆಗಳುಳ್ಳ ಕಪ್ಪೆ. ದೇಹದ ಮೇಲಿನ ಅಥವಾ ಬೆನ್ನಿನ ಭಾಗ ತಿಳಿ ಬೂದು, ಹಳದಿ, ಅಥವಾ ಕಂದು ಬಣ್ಣವಿದ್ದರೆ, ಕೆಳಭಾಗ, ಕಡು ಕಂದು ಅಥವಾ ಕಪ್ಪು ಬಣ್ಣವಿರುತ್ತದೆ. ಬೆನ್ನಿನ ಮೇಲೆ ಕಪ್ಪು ಚುಕ್ಕೆಗಳಿದ್ದು, ಎಲೆಗಳ ಬಣ್ಣದೊಂದಿಗೆ ಹೊಂದಿಕೊಂಡು ಅದು ಇರುವುದನ್ನು ಮರೆಮಾಚುತ್ತದೆ. ಬದಿಗಳಲ್ಲಿ ಕೆಂಪು ಪಟ್ಟಿಗಳಿದ್ದು , ಅದು ವಿಷಕಾರಿ ಕಪ್ಪೆ ಎಂದು ಬೇಟೆಗಾರ ಪ್ರಾಣಿಗಳಿಗೆ ಎಚ್ಚರಿಸುತ್ತದೆ! ಈ ಎರಡು ಬಣ್ಣಗಳ ಛಾಯೆಗಳು ಒಂದಕ್ಕೊಂದು ಬಹಳ ವ್ಯತಿರಿಕ್ತವಾಗಿರುವುದರಿಂದ ಇದನ್ನು ದ್ವಿವರ್ಣ ಕಪ್ಪೆ ಎನ್ನುತ್ತಾರೆ. ಇದು ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಕಪ್ಪೆಯಾಗಿದೆ. ಹೆಣ್ಣು ಕಪ್ಪೆ ಸಾವಿರಾರು ಮೊಟ್ಟೆಗಳನ್ನಿಡುತ್ತದೆ ಹಾಗೂ ಅವುಗಳನ್ನು ಕಾಪಾಡಲು ಗಂಡು ಕಪ್ಪೆ ನೊರೆಯ ಗೂಡನ್ನು ಕಟ್ಟುತ್ತದೆ. ಮರಿಗಳಾದ ಟ್ಯಾಡ್ಪೋಲ್ ಅಥವಾ ಗೊದಮೊಟ್ಟೆಗಳು ದೊಡ್ಡ ಆಕಾರ ಹೊಂದಿದ್ದು, ಆಲಿವ್ ಹಸಿರು ಬಣ್ಣ ಹೊಂದಿರುತ್ತವೆ. ಇವು ದೊಡ್ಡ ಗುಂಪುಗಳಲ್ಲಿ ನಿಧಾನವಾಗಿ ಹರಿಯುವ ನದಿಯಲ್ಲಿ ಚಲಿಸುತ್ತವೆ. ವಿಶೇಷವೆಂದರೆ ಅವು ವಯಸ್ಕ ಹಂತ ತಲುಪಿ ನೀರಿನಿಂದ ಹೊರಬರುತ್ತಿದ್ದಂತೆ ಗುಂಪು ಗುಂಪಾಗಿ ಬೇರೆಡೆಗೆ ವಲಸೆ ಹೋಗುತ್ತವೆ! ಇದು, ದೊಡ್ಡ ಕಪ್ಪೆಗಳು ತಮ್ಮನ್ನು ತಿನ್ನುವುದರಿಂದ ತಪ್ಪಿಸಿಕೊಳ್ಳಲು, ಹಾಗೂ ಹೊಸ ನೆಲದ ಪ್ರದೇಶ ಮತ್ತು ಆಹಾರ ಹುಡುಕಿಕೊಂಡು ಬೆಳೆಯಲು ಮಾಡುವ ಕಾರ್ಯವಾಗಿರುತ್ತದೆ. ಈ ಕಪ್ಪೆಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಬೇಟೆಗಾರ ಪ್ರಾಣಿಗಳು ಇವನ್ನು ಆಕ್ರಮಿಸಿದರೆ ಇವು ಅವುಗಳಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸುತ್ತವೆ.

ಸೋಮವಾರ, ಡಿಸೆಂಬರ್ 1, 2025

ಜೀವಜಗತ್ತಿನ ವಿಸ್ಮಯ - ನಪುಂಸಕನಾಗುವ ಸಂನ್ಯಾಸಿ ಮಲಬಾರ್ ಜೇಡ

   ಇತ್ತೀಚೆಗೆ ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ಉಣಿಸುವುದು, ಅವುಗಳನ್ನು ಮುಟ್ಟಿ ಅವುಗಳ ದೊಡ್ಡ ದಂತಗಳನ್ನು ಹಿಡಿದುಕೊಳ್ಳುವುದು, ಮೊದಲಾದ ಗಜಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಲ್ಲದೇ ಸುತ್ತಲಿನ ಕಾಡಿನಲ್ಲಿ ಸಫಾರಿ ಹೋಗುವುದು, ಹಾಗೂ ನಮ್ಮ ವಸತಿಯಲ್ಲಿನ ಉಪವನದಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ವಿಸ್ಮಯಗಳನ್ನು ಆನಂದಿಸುವುದೂ ಶಿಬಿರದ ಚಟುವಟಿಕೆಗಳಾಗಿರುತ್ತವೆ. ವಿಶೇಷವಾಗಿ ಬೆಳಗಿನ ನಡಿಗೆಯ ಸಮಯದಲ್ಲಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಹಾಗೂ ಪರಿಸರವಾದಿ ಅವುಗಳ ಪರಿಚಯ, ವಿವರಣೆ ಕೊಡುತ್ತಿದ್ದರು. ಅನಂತರ, ಭೋಜನಗೃಹವಾದ ಗೋಲ್ಘರ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿ ಹೊರಬರುತ್ತಿದ್ದಂತೆ, ಹೊರಗೆ ಬಲೆ ಹೆಣೆದಿದ್ದ ಒಂದು ದೊಡ್ಡ ಜೇಡ ನನ್ನನ್ನು ಆಕರ್ಷಿಸಿತು! ಅದು ಯಾವ ಜೇಡವೆಂದು ಸಿಬ್ಬಂದಿಯನ್ನು ಕೇಳಿದಾಗ ಅವರು ಅದು ಮಲಬಾರ್ ಜೇಡ ಎಂದು ಹೇಳುತ್ತಾ ಅದು ಹೆಣ್ಣು ಜೇಡವೆಂದೂ ಸ್ವಲ್ಪ ದೂರದಲ್ಲೇ ಇದ್ದ ಗಂಡು ಜೇಡವನ್ನೂ ತೋರಿಸಿದರು. ನನ್ನ ಕ್ಯಾಮೆರಾ ಜೂಮ್ ಮಾಡಿ ಬಹಳ ಕಷ್ಟದಿಂದ ಫೋಕಸ್ ಮಾಡಿ ಎರಡನ್ನೂ ಫೋಟೋಗಳಲ್ಲಿ ಸೆರೆಹಿಡಿದೆ. ಫೋಟೋಗಳಲ್ಲಿ ಅವುಗಳ ದೈಹಿಕ ವಿವರಗಳನ್ನು ನೋಡಿದಾಗ ಆಶ್ಚರ್ಯ, ಸಂತೋಷಗಳಾದವು!
        ಮಲಬಾರ್ ಜೇಡದ ವೈಜ್ಞಾನಿಕ ಹೆಸರು ನೆಫಿಲೆಂಗಿಸ್ ಮಲಬಾರೆನ್ಸಿಸ್ ( Nephilengys malabarensis). ನೆಫಿಲಿಡೇ ಕುಟುಂಬಕ್ಕೆ ಸೇರಿರುವ, ನೆಫಿಲೆಂಗಿಸ್ ಕುಲದ ಒಂದು ಪ್ರಭೇದವಿದು. ದಕ್ಷಿಣ ಭಾರತದ ಮಲಬಾರ್ ಕರಾವಳಿ ತೀರದಲ್ಲಿ ಮೊದಲ ಬಾರಿ ಇದನ್ನು ಪತ್ತೆ ಮಾಡಿದ್ದರಿಂದ ಇದಕ್ಕೆ ಮಲಬಾರೆನ್ಸಿಸ್ ಎಂದು ಹೆಸರಿಸಲಾಯಿತು. ಹಾಗಾಗಿ ಇದನ್ನು ಮಲಬಾರ್ ಜೇಡ ಎಂದು ಕರೆಯುತ್ತಾರೆ. ಇದೊಂದು ದೊಡ್ಡ ಆರ್ಬ್ ವೀವರ್ ಜೇಡ, ಅಂದರೆ ಚಕ್ರಾಕಾರದ ದೊಡ್ಡ ಬಲೆ ಹೆಣೆಯುವ ಜೇಡವಾಗಿದೆ. ಎಲ್ಲಾ ಜೇಡಗಳಂತೆ ಇವುಗಳಲ್ಲೂ ಹೆಣ್ಣು ಗಂಡಿಗಿಂತ ಬಹಳ ದೊಡ್ಡದಾಗಿರುತ್ತದೆ. ಹೆಣ್ಣು ಜೇಡ, ಸುಮಾರು 10.4 ರಿಂದ 18.6 ಮಿ.ಮೀ. ಗಳಷ್ಟು ಉದ್ದವಿದ್ದರೆ ಗಂಡು ಜೇಡ ಕೇವಲ 5 ರಿಂದ 5.9 ಮಿ.ಮೀ. ಗಳಷ್ಟು ಉದ್ದವಿರುತ್ತದೆ. ಹೆಣ್ಣಿನ ದೇಹದ ಮೇಲ್ಭಾಗ ಅಥವಾ ಸೆಫಲೋಥೊರಾಕ್ಸ್ ( ತಲೆ ಮತ್ತು ಎದೆಯ ಸಂಯುಕ್ತ ಭಾಗ) ಕಡು ಕೆಂಪು, ಕಂದು ಬಣ್ಣಗಳಿಂದ ಕೂಡಿದ್ದರೆ ಇದರ ತಳಭಾಗ ಅಥವಾ ಸ್ಟೆರ್ನಂ, ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆಯ ಭಾಗ ಬಿಳಿಯಾಗಿದ್ದು ಕಂದು ಚುಕ್ಕೆಗಳಿಂದ ಕೂಡಿದ್ದು, ಇದರ ತಳಭಾಗ, ಕಂದು ಬಣ್ಣವಿದ್ದು ದೊಡ್ಡ ಕಿತ್ತಳೆ ಮಚ್ಚೆಗಳಿರುತ್ಚವೆ. ಹೊಟ್ಟೆಯ ಬಣ್ಣ, ಬೂದು,ಕಪ್ಪು, ಮೊದಲಾದ ಛಾಯೆಗಳಿಂದಲೂ ಕೂಡಿರುತ್ತದೆ. ಇದರ ಕಾಲುಗಳು ಹಳದಿ ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಗಂಡು ಜೇಡದ ಮೇಲ್ಭಾಗ ಕಿತ್ತಳೆ ಬಣ್ಣದಿಂದಲೂ ಹೊಟ್ಟೆಯ ಭಾಗ ಕಂದು ಬಣ್ಣದಿಂದಲೂ ಕೂಡಿದ್ದು, ಇದರ ಮೇಲೆ ತಿಳಿ ಮಚ್ಚೆಗಳೂ ತಳದಲ್ಲಿ ಹಳದಿ ಮಚ್ಚೆಗಳೂ ಇರುತ್ತವೆ.ಕಾಲುಗಳು ಬೂದು, ಮತ್ತು ಕಪ್ಪು ಪಟ್ಟಿಗಳಿಂದ ಕೂಡಿರುತ್ತದೆ. ಆಗಲೇ ಹೇಳಿದಂತೆ ಗಂಡು ಹೆಣ್ಣಿಗಿಂತ ಬಹಳ ಚಿಕ್ಕದಾಗಿರುತ್ತದೆ. 
       ಮಲಬಾರ್ ಜೇಡವು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಹಾಗೂ ಪೂರ್ವ ಏಷ್ಯಾಗಳಲ್ಲಿ ಕಂಡುಬರುವುದಾಗಿದ್ದು, ನಮ್ಮ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. ಆದರೆ ಇದು ಮಳೆಕಾಡುಗಳಲ್ಲಿ ಕಡಿಮೆಯಿದ್ದು, ಮಾನವ ವಸತಿಗಳ ಬಳಿ ಹೆಚ್ಚಾಗಿ ಕಂಡುಬರುತ್ತದೆ.
       ಈ ಮಲಬಾರ್ ಜೇಡಗಳು ಮುಖ್ಯವಾಗಿ ಪತಂಗ , ನೊಣ, ಜೀರುಂಡೆ, ಮೊದಲಾದ ಕೀಟಗಳನ್ನೂ ಅವುಗಳ ಮರಿಗಳನ್ನೂ ತಿನ್ನುತ್ತವೆ. ಕೆಲವೊಮ್ಮೆ ಹಲ್ಲಿಯಂಥ ದೊಡ್ಡ ಪ್ರಾಣಿಗಳನ್ನೂ ತಿನ್ನುತ್ತವೆ. ವಿಚಿತ್ರವೆಂದರೆ ಕೆಲವೊಮ್ಮೆ ಈ ಜೇಡಗಳು ಮರಿಗಳಾಗಿರುವಾಗ ತಮಗಿಂತ ಸಣ್ಣ ಒಡಹುಟ್ಟಿದವರನ್ನೇ ತಿಂದುಬಿಡುತ್ತವೆ! ಎಲ್ಲಾ ಜೇಡಗಳಂತೆ ಇವು ಬೇಟೆಗೆ ವಿಷವನ್ನು ಚುಚ್ಚಿ ಲಕ್ವವಾಗುವಂತೆ ಮಾಡಿ, ಅನಂತರ ಜೀರ್ಣಗೊಳಿಸುವ ರಸಗಳನ್ನು ಸುರಿದು ಬೇಟೆಯ ಒಳಭಾಗಗಳನ್ನು ಒಂದು ರಸವನ್ನಾಗಿಸಿ ಅದನ್ನು ಹೀರುತ್ತವೆ. ಏಕೆಂದರೆ ಜೇಡಗಳಿಗೆ ಅಗಿಯಲಾಗುವುದಿಲ್ಲ.
    ಒಂದು ಸ್ವಾರಸ್ಯವೆಂದರೆ, ಈ ಮಲಬಾರ್ ಜೇಡವು ನಿಶಾಚರಿಯಾಗಿದ್ದು, ಹಗಲಿನಲ್ಲಿ ತನ್ನ ಬಲೆಯಲ್ಲೇ ನಾಳದ ಆಕಾರದ ಒಂದು ಭಾಗ ಮಾಡಿ ಅದರಲ್ಲಿ ಅಡಗಿಕೊಳ್ಳುತ್ತದೆ. ಇದರಿಂದ ಅದು ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಇದನ್ನು ಏಷ್ಯಾದ ಸಂನ್ಯಾಸಿ ಜೇಡ ( Asian hermit spider) ಎಂದು ಕರೆಯುತ್ತಾರೆ. ಗಂಡು ಜೇಡ ಬಲೆ ಹೆಣೆಯದೇ ಹೆಣ್ಣಿನ ಬಲೆಯಲ್ಲೇ ವಾಸ ಮಾಡುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗಂಡುಗಳು ಒಂದು ಹೆಣ್ಣಿನ ಬಲೆಯಲ್ಲಿರಬಹುದು. 
     ಎಲ್ಲಾ ಜೇಡಗಳಲ್ಲಿರುವಂತೆ, ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು, ಹೆಣ್ಣುಗಳ ಸಂಭೋಗದ ಸಮಯದಲ್ಲಿ ಅಥವಾ ಸಂಭೋಗದ ನಂತರ, ಮಲಬಾರ್ ಜೇಡಗಳಲ್ಲೂ ಹೆಣ್ಣು ಜೇಡ ಗಂಡನ್ನು ಭಕ್ಷಿಸಿಬಿಡುತ್ತದೆ! ಇದು ತನಗೆ ಬೇಕಾದ ಪುಷ್ಟಿ ಮತ್ತು ಶಕ್ತಿಗಾಗಿ ಹೀಗೆ ಮಾಡುತ್ತದೆ. ಹೆಣ್ಣಿನ ಈ ಕ್ರೂರ ವರ್ತನೆಯಿಂದ ತಪ್ಪಿಸಿಕೊಳ್ಳಲು ಗಂಡು ಒಂದು ಉಪಾಯ ಮಾಡುತ್ತದೆ. ಗಂಡು ಜೇಡಗಳಲ್ಲಿ ಬಾಯ ಬಳಿಯಿರುವ ಪಾಲ್ಪ್ ಗಳೆಂಬ ಕಾಲಿನ ಆಕೃತಿಗಳ ತುದಿಗಳಲ್ಲಿ ಪಾಲ್ಟಲ್ ಬಲ್ಬ್ ( Palpal bulbs ) ಗಳೆಂಬ ದುಂಡಾದ ಆಕೃತಿಗಳಿರುತ್ತವೆ. ಇವೇ ಗಂಡಿನ ಜನನಾಂಗಗಳು. ಹೆಣ್ಣಿನ ಹೊಟ್ಟೆಯ ತಳಭಾಗದಲ್ಲಿರುವ ಎಪಿಗೈನಂ ಎಂಬ ಗಟ್ಟಿಯಾದ ಅಂಗವೇ ಅದರ ಹೊರ ಜನನಾಂಗ. ಈಗ ಗಂಡು ಮಾಡುವ ಉಪಾಯವೇನೆಂದರೆ, ಅದು ಹೆಣ್ಣಿನೊಂದಿಗೆ ಸಂಭೋಗಿಸುವಾಗ, ತನ್ನ ಬಾಯಿಯ ಬಳಿಯಿರುವ ಆ ಪಾಲ್ಪಲ್ ಬಲ್ಬ್ ( Palpal bulbs) ಗಳೆಂಬ ಜನನಾಂಗಗಳನ್ನು ಕತ್ತರಿಸಿಕೊಂಡು ಹೆಣ್ಣಿನ ಹೊರ ಜನನಾಂಗದ ದ್ವಾರದಲ್ಲೇ ಬಿಟ್ಟು ತಪ್ಪಿಸಿಕೊಳ್ಳುತ್ತದೆ! ಸ್ವಾರಸ್ಯವೆಂದರೆ, ಹಾಗೆ ಕತ್ತರಿಸಿದ ಬಳಿಕವೂ ಗಂಡಿನ ಆ ಜನನಾಂಗಗಳು ಹೆಣ್ಣಿನ ಜನನಾಂಗದಲ್ಲಿ ವೀರ್ಯಾಣುಗಳನ್ನು ನೀಡುತ್ತಿರುತ್ತದೆ! ಆ ವೀರ್ಯಾಣುಗಳನ್ನು ಹೆಣ್ಣು ತನ್ನ ಒಳಗಿನ ಜನನಾಂಗ ಭಾಗಗಳಾದ ಸ್ಪರ್ಮಥೀಕಾಗಳಲ್ಲಿ ಸಂಗ್ರಹಿಸಿಕೊಳ್ಳುತ್ತದೆ! ಇನ್ನೊಂದು ಸ್ವಾರಸ್ಯವೆಂದರೆ, ಗಂಡಿನ ಜನನಾಂಗಗಳಾದ ಆ ಪಾಲ್ಪಲ್ ಬಲ್ಬ್ ಗಳು ಹೆಣ್ಣಿನ ಜನನಾಂಗದ ದ್ವಾರದಲ್ಲಿ ತಡೆಯುವ ಗೂಟಗಳಂತಾಗಿ ಇತರ ಗಂಡು ಜೇಡಗಳು ಸಂಭೋಗಿಸುವುದನ್ನು ತಪ್ಪಿಸುತ್ತದೆ! ಹೀಗೆ ಮಾಡುವುದರಿಂದ ತನ್ನದೇ ವಂಶವಾಹಿಗಳು ಉಳಿಯಬೇಕೆಂಬ ಪ್ರಾಕೃತಿಕ ಸ್ವಾರ್ಥವನ್ನು ನಡೆಸುತ್ತದೆ! 
     ಹೀಗೆ ಗಂಡು ಮಲಬಾರ್ ಜೇಡ ತನ್ನ ಜನನಾಂಗಗಳನ್ನು ತ್ಯಾಗ ಮಾಡುವ ವಿಶಿಷ್ಟ ವರ್ತನೆ ತೋರುವುದರಿಂದ ಇದನ್ನು ನಪುಂಸಕ ಜೇಡ ( Eunuch spider) ಎಂದು ಕರೆಯುತ್ತಾರೆ. ಇನ್ನೊಂದು ಸ್ವಾರಸ್ಯವೆಂದರೆ, ಈ ರೀತಿ ಜನನಾಂಗಗಳನ್ನು ತ್ಯಜಿಸಿದ ಬಳಿಕ, ಗಂಡು ಜೇಡಗಳು ತೂಕ ಕಳೆದುಕೊಂಡು, ಹೆಚ್ಚು ವೇಗಶಾಲಿಗಳೂ ಆಕ್ರಮಣಶಾಲಿಗಳೂ ಆಗುತ್ತವೆ. ಆಗ ಅವು ಇತರ ಗಂಡು ಜೇಡಗಳೊಂದಿಗೆ ಸಮರ್ಥವಾಗಿ ಯುದ್ಧ ಮಾಡಿ ತನ್ನದೇ ಆದ ಪಿತೃತ್ವವನ್ನು ಸ್ಥಾಪಿಸಿಕೊಳ್ಳುತ್ತದೆ! 
      ಹೀಗೆ ಮಲಬಾರ್ ಜೇಡ, ವಿಸ್ಮಯಗಳ ಆಗರವಾಗಿದೆ! ನಾವು ಪ್ರಕೃತಿಯಲ್ಲಿ ನೋಡುವ ಸಣ್ಣ ಸಣ್ಣ ವಿಷಯಗಳಲ್ಲೂ ಅದೆಷ್ಟು ಕೌತುಕಗಳು ತುಂಬಿರುತ್ತವೆಯೆಂದು ತಿಳಿದಾಗ ಆಶ್ಚರ್ಯವಾಗುತ್ತದೆ! 
                                   
                                   

ಭಾನುವಾರ, ನವೆಂಬರ್ 30, 2025

ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳು

ಚರ್ಮದ ಹಲವಾರು ಕಾಯಿಲೆಗಳಲ್ಲಿ ಸೋಂಕು ರೋಗಗಳೂ ಒಂದು. ಸೋಂಕು ರೋಗಗಳು ರೋಗಾಣುಗಳೆಂಬ ಸಣ್ಣ ಸಣ್ಣ ಜೀವಿಗಳಿಂದ ಉಂಟಾಗುವುದರಿಂದ ಇವು ಒಬ್ಬರಿಂದೊಬ್ಬರಿಗೆ ಸ್ಪರ್ಶದ ಮೂಲಕ ಪ್ರಸಾರವಾಗಿ ರೋಗಗಳು ಹರಡುತ್ತವೆ. ಹಾಗಾಗಿ ಇವನ್ನು ಅಂಟುರೋಗಗಳೆಂದೂ ಕರೆಯುತ್ತಾರೆ. ಇತರ ಅಂಗಾಂಗಗಳಿಗೆ ಉಂಟಾಗುವಂತೆ, ಚರ್ಮಕ್ಕೂ ಬ್ಯಾಕ್ಟೀರಿಯಾ, ವೈರಸ್, ಫಂಗಸ್, ಮತ್ತು ಪ್ಯಾರಾಸೈಟ್ ಅಥವಾ ಪರಾವಲಂಬಿಗಳಿಂದ ಸೋಂಕು ರೋಗಗಳು ಉಂಟಾಗುತ್ತವೆ. ಈಗ ಚರ್ಮಕ್ಕೆ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
      ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳಿಗೆ ಪಯೋಡರ್ಮ( Pyoderma ) ಎನ್ನುತ್ತಾರೆ. ಗ್ರೀಕ್ ಪದಗಳಾದ ಪಯೋ ಎಂದರೆ ಪಸ್ ಅಥವಾ ಕೀವು ಮತ್ತು ಡರ್ಮ ಎಂದರೆ ಚರ್ಮ. ಬ್ಯಾಕ್ಟೀರಿಯಾ ರೋಗಗಳಲ್ಲಿ ಚರ್ಮದಲ್ಲಿ ಕೀವು ಉಂಟಾಗುವುದರಿಂದ ಈ ಹೆಸರು ಬಂದಿದೆ. ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ರಕ್ತದಲ್ಲಿನ ಬಿಳಿ ರಕ್ತಕಣಗಳು ಅವುಗಳನ್ನು ಕೊಂದು ತಾವೂ ಸಾಯುತ್ತವೆ. ಸತ್ತ ಬ್ಯಾಕ್ಟೀರಿಯಾಗಳು ಮತ್ತು ಬಿಳಿ ರಕ್ತಕಣಗಳ ಮಿಶ್ರಿತ ಗಟ್ಟಿಯಾದ ಹಳದಿ ದ್ರವವೇ ಕೀವು. ಈ ಪಯೋಡರ್ಮದಲ್ಲಿ ಪ್ರಾಥಮಿಕ ಪಯೋಡರ್ಮ ( Primary Pyoderma) ಮತ್ತು ದ್ವಿತೀಯ ಪಯೋಡರ್ಮ ( Secondary Pyoderma) ಎಂಬ ಎರಡು ಮುಖ್ಯ ವಿಧಗಳಿವೆ. ಪ್ರಾಥಮಿಕ ಪಯೋಡರ್ಮ, ಯಾವುದೇ ಪೂರ್ವ ಕಾರಣವಿಲ್ಲದೆ ಚರ್ಮದ ಮೇಲೆ ನೇರವಾಗಿ ಆಗುತ್ತದೆ. ಇದರಲ್ಲಿ ಅನೇಕ ರೋಗಿಗಳಿವೆ. 

೧. ಇಂಪೆಟಿಗೋ ( Impetigo) 
          ಇದು ಚಿಕ್ಕ ಮಕ್ಕಳಲ್ಲಿ ಬರುವ ಸಾಮಾನ್ಯ ತೊಂದರೆ. ಇದು ಹೆಚ್ಚಾಗಿ ಸಟಫೈಲೋಕಾಕಸ್ ಇಲ್ಲವೇ ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಇದರಲ್ಲಿ ಬುಲ್ಲಸ್ ( Bullous) ಮತ್ತು ನಾನ್ ಬುಲ್ಲಸ್ ( Nonbullous) ಎಂಬ ಬಗೆಗಳಿವೆ. ಬುಲ್ಲಸ್ ಬಗೆಯಲ್ಲಿ ಬುಲ್ಲಗಳೆಂಬ ದೊಡ್ಡ ನೀರ್ಗುಳ್ಳೆಗಳಾಗುತ್ತವೆ ಹಾಗೂ ಅವು ಒಡೆದು ಚರ್ಮ ಕಿತ್ತು ಬರುತ್ತದೆ ಹಾಗೂ ನೋಯುತ್ತದೆ. ಇದು ಕಂಕುಳು, ತೊಡೆ ಸಂದಿ,ಬೆರಳುಗಳ ಮಧ್ಯೆ, ಸ್ತನಗಳ ಕೆಳಗೆ, ಹಾಗೂ ಪೃಷ್ಠಗಳಲ್ಲಾಗುತ್ತದೆ. ನವಜಾತ ಶಿಶುಗಳಲ್ಲಿ, ಪುಟ್ಟ ಮಕ್ಕಳಲ್ಲಿ, ಹಾಗೂ ರೋಗನಿರೋಧಕಶಕ್ತಿ ಬಹಳ ಕಡಿಮೆಯಿರುವ ಮತ್ತು ಮೂತ್ರಪಿಂಡ ವೈಫಲ್ಯವಿರುವ ವಯಸ್ಕರಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡರೆ ವಿಸ್ತಾರವಾದ ಚರ್ಮ ಪ್ರದೇಶಗಳು ಕಿತ್ತು ಬರುತ್ತವೆ. ಇದನ್ನು ಸ್ಟಫೈಲೋಕಾಕಲ್ ಸ್ಕಾಲ್ಡೆಡ್ ಸ್ಕಿನ್ ಸಿಂಡ್ರೋಮ್ ( Staphylococcal Scalded Skin Syndrome) ಎನ್ನುತ್ತಾರೆ. ಇದೂ ಸೇರಿದಂತೆ ಬುಲ್ಲಸ್ ಇಂಪೆಟಿಗೋ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
      ನಾನ್ ಬುಲ್ಲಸ್ ಇಂಪೆಟಿಗೋ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇದರಲ್ಲಿ ಮೊದಲು ಸಣ್ಣ ನೀರ್ಗುಳ್ಳೆಗಳೂ ಕೀವ್ಗುಳ್ಳೆಗಳೂ ಆಗಿ ಅವು ಬೇಗನೆ ಒಡೆದು ಹಳದಿ, ಜೇನು ಬಣ್ಣದ ಹೆಕ್ಕಳೆಗಳಾಗುತ್ತವೆ. ಇದು ಹೆಚ್ಚಾಗಿ ಮೂಗು ಮತ್ತು ಬಾಯ ಬಳಿ, ಹಾಗೂ ಕೈಕಾಲುಗಳಲ್ಲಿ ಉಂಟಾಗುತ್ತದೆ. ನೋವು ಮತ್ತು ತುರಿಕೆಗಳಿರುತ್ತವೆ. ಇದು ಬಹಳ ಬೇಗನೆ ಅಂಟುವ ರೋಗ.

ಫಾಲಿಕ್ಯುಲೈಟಿಸ್ ( Folliculitis) 
     ರೋಮಕೂಪದ ( Hair Follicle) ಮೇಲ್ಭಾಗದಲ್ಲಿ ಸ್ಟಫೈಲೋಕಾಕಸ್ ಬ್ಯಾಕ್ಟೀರಿಯಾ ಸೋಂಕಾದರೆ ಈ ತೊಂದರೆಯಾಗುತ್ತದೆ. ನೋಡಲು ಕೂದಲಿನ ಸಂಬಂಧದಲ್ಲಿ ಸಣ್ಣ ಸಣ್ಣ ಕೀವ್ಗುಳ್ಳೆಗಳಾಗುತ್ತವೆ ಮತ್ತು ನಾಯಿ, ಇವು ನೋಯುತ್ತವೆ. ಗಂಡಸರು ಗಡ್ಡ ಬೋಳಿಸುವಾಗ ರೋಮಕೂಪಗಳಿಗೆ ಗಾಯವಾಗಿ ಈ ಸೋಂಕಾಗಬಹುದು. ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆ, ಮೊದಲಾದ ಕಾರಣಗಳಿಂದ ಇದು ದೀರ್ಘಾವಧಿಯವರೆಗೆ ಮತ್ತೆ ಮತ್ತೆ ಆಗುತ್ತಿರಬಹುದು.

ಫರಂಕಲ್ ( Furuncle)
    ಸಾಮಾನ್ಯವಾಗಿ ಬಾಯಿಲ್ ಅಥವಾ ಬಿಸಿಗುಳ್ಳೆ ಎಂದು ಕರೆಯಲಾಗುವ ಇದು, ರೋಮಕೂಪದ ಪೂರ್ಣ ಸೋಂಕಾಗಿರುತ್ತದೆ. ನೋಡಲು ಇದು ಕೂದಲ ಸಂಬಂಧದಲ್ಲಿ ಕೆಂಪು ಗುಳ್ಳೆಯಾಗಿ, ಕ್ರಮೇಣ ಕೀವಿನಿಂದ ತುಂಬಿ ದಪ್ಪವಾಗುತ್ತದೆ ಹಾಗೂ ಬಹಳ ನೋಯುತ್ತದೆ. ಅದು ಒಡೆದು ಕೀವು ಹೊರಸೂಸಬಹುದು. ಇದೂ ಕೂಡ ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದುವಿಕೆಯಿದ್ದರೆ, ಊಟ,ನಿದ್ರೆಗಳು ಕಡಿಮೆಯಾದರೆ, ಒತ್ತಡ ಹೆಚ್ಚಾದರೆ ಮತ್ತೆ ಮತ್ತೆ ಆಗುತ್ತಿರಬಹುದು. 

ಕಾರ್ಬಂಕಲ್ ( Carbuncle)
     ಹಲವಾರು ರೋಮಕೂಪಗಳು ಒಟ್ಟಿಗೆ ಸೋಂಕಿಗೀಡಾದಾಗ ಈ ತೊಂದರೆಯಾಗುತ್ತದೆ. ಒಂದು ದೊಡ್ಡ ಊತ ಉಂಟಾಗಿ ಕೀವು ಸೂಸುವ ಹಲವಾರು ರಂಧ್ರಗಳಾಗುತ್ತವೆ. ಸಾಮಾನ್ಯವಾಗಿ ಈ ತೊಂದರೆಯು ಮಧುಮೇಹ, ಕ್ಯಾನ್ಸರ್, ಏಡ್ಸ್ ರೋಗಿಗಳಿಗೆ ಹಾಗೂ ಆಹಾರ ಕೊರತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಆಗುತ್ತದೆ. ಮುಖ್ಯವಾಗಿ ರೋಗನಿರೋಧಕ ಶಕ್ತಿ ಬಹಳ ಕುಂದಿದವರಿಗೆ ಇದು ಆಗುತ್ತದೆ. ಇದು ಸಾಮಾನ್ಯವಾಗಿ ಕುತ್ತಿಗೆ,ಬೆನ್ನುಗಳಲ್ಲಿ ಕಂಡುಬರುತ್ತದೆ ಹಾಗೂ ನೋಡಲು ಕಲ್ಲಿದ್ದಲಿನಂತಿರುತ್ತದೆ. ಕಾರ್ಬಂಕಲ್ ಪದದ ಅರ್ಥ ಕಲ್ಲಿದ್ದಲು ಎಂದು. 

ಹೈಡ್ರಡಿನೈಟಿಸ್ ಸಪ್ಪುರಟಿವ ( Hydradenitis suppurativa)
      ಕೆಲವರಲ್ಲಿ, ಬೊಜ್ಜು, ಅನುವಂಶಿಕ ಕಾರಣಗಳು, ಹಾರ್ಮೋನ್ ವ್ಯತ್ಯಾಸಗಳು, ಮೊದಲಾದ ಕಾರಣಗಳಿಂದ ಕಂಕುಳು ಮೊದಲಾದ ಚರ್ಮ, ಚರ್ಮ ಸಂಯೋಗ ಪ್ರದೇಶಗಳಲ್ಲಿ ರೋಮಕೂಪಗಳು ನಿರೋಧಿಸಲ್ಪಟ್ಟು, ಕೀವು ಸೂಸುವ ಹಲವು ಗುಳ್ಳೃಗಳು ಮತ್ತೆ ಮತ್ತೆ ಆಗುತ್ತಾ ವಾಸಿಯಾದಂತೆ ಒರಟು ಕಲೆಗಳಾಗುತ್ತವೆ. ಇದನ್ನು ಹೈಡ್ರಡಿನೈಟಿಸ್ ಸಪ್ಪುರಟಿವ ಎನ್ನುತ್ತಾರೆ. ಇದು ಹೆಚ್ಚಾಗಿ ಬೊಜ್ಜುಳ್ಳ ಹೆಂಗಸರಲ್ಲಿ ಆಗುತ್ತದೆ. 

ಕುರ ಅಥವಾ ಆಬ್ಸೆಸ್ ( Abscess) 
     ಕೆಲವೊಮ್ಮೆ, ಮಧುಮೇಹ, ರೋಗನಿರೋಧಕ ಶಕ್ತಿ ಕುಂದುವಿಕೆ, ಕ್ಯಾನ್ಸರ್ ಚಿಕಿತ್ಸೆ, ಅಶುಚಿತ್ವ, ಮೊದಲಾದ ಕಾರಣಗಳಿಂದ ಬ್ಯಾಕ್ಟೀರಿಯಾ ಸೋಂಕು, ವಾಸಿಯಾಗದೇ ಕುರವಾಗಬಹುದು. ಕುರವೆಂದರೆ ಕೀವು ತುಂಬಿದ ಒಂದು ಊತ. ಇದಕ್ಕೆ ಸೂಜಿಯಿಂದ ಚುಚ್ಚಿ ಕೀವನ್ನು ತೆಗೆಯಬೇಕು. 
       
ಎರಿಸಿಪಿಲಸ್ ( Erysipelas) ಮತ್ತು ಸೆಲ್ಯುಲೈಟಿಸ್ ( Cellulitis)
       ಎರಿಸಿಪಿಲಸ್ ಚರ್ಮದ ಮೇಲ್ಪದರಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು, ನಿರ್ದಿಷ್ಟ ಅಂಚುಗಳ ಕೆಂಪು ಊತ ಹಾಗೂ ನೋವುಂಟಾಗುತ್ತದೆ. ಸೆಲ್ಯುಲೃಟಿಸ್ ಚರ್ಮದ ಒಳಭಾಗ ಮತ್ತು ಅಡಿಭಾಗಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು ಅನಿರ್ದಿಷ್ಟ ಅಂಚುಗಳ ನಸುಗೆಂಪು ಊತವಾಗಿ ನೋವಾಗುತ್ತದೆ. ಇದು ಚಿಕಿತ್ಸೆ ಮಾಡದಿದ್ದರೆ ಹರಡಿಕೊಂಡು ಹೋಗುತ್ತದೆ. 

ದ್ವಿತೀಯ ಪಯೋಡರ್ಮ 
     ಚರ್ಮಕ್ಕೆ ಕಜ್ಜಿ, ಇಸುಬು, ಮೊದಲಾಗಿ ಬೇರೆ ಯಾವುದಾದರೂ ತೊಂದರೆಯಿದ್ದು ಅವುಗಳ ತುರಿಕೆಯಿಂದ ಗಾಯಗಳಾಗಿ ಇಲ್ಲವೇ ಏಟು ಬಿದ್ದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಸೋಂಕಾದರೆ ಅದನ್ನು ದ್ವಿತೀಯ ಪಯೋಡರ್ಮ ಎನ್ನುತ್ತಾರೆ. 

ಚಿಕಿತ್ಸೆ ಮತ್ತು ನಿವಾರಣೆ 
    ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳಿಗೆ ಮುಖ್ಯ ಚಿಕಿತ್ಸೆ ಎಂದರೆ ಆಂಟಿಬಯೋಟಿಕ್ ಗಳು ಅಥವಾ ಜೀವನಿರೋಧಕ ಔಷಧಿಗಳು.‌ ಅಮಾಕ್ಸಿಸಿಲಿನ್, ಸೆಫಲೋಸ್ಪೋರಿನ್, ಮೊದಲಾದ ಇವು ಬಾಯಿಂದ ಸೇವಿಸುವ ಮಾತ್ರೆ, ಸಿರಪ್ ಗಳಾಗಿ ಹಾಗೂ ಚರ್ಮಕ್ಕೆ ಸವರುವ ಫ್ಯುಸಿಡಿಕ್ ಆಮ್ಲ, ಮ್ಯುಪಿರೋಸಿನ್ ಮೊದಲಾದ ಮುಲಾಮುಗಳ ರೂಪದಲ್ಲಿ ದೊರೆಯುತ್ತವೆ. ಇವನ್ನು ಚರ್ಮವೈದ್ಯರ ನಿರ್ದೇಶನದಲ್ಲಿ ಬಳಸಬೇಕು. ಜ್ವರವಿದ್ದರೆ ಪ್ಯಾರಾಸಿಟಮಾಲ್ ಹಾಗೂ ನೋವಿದ್ದರೆ ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ. ಫರಂಕಲ್ ಗಳಿಗೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯ ಶಾಖ ಕೊಡಬಹುದು. ಕೆಲವೊಮ್ಮೆ ಫರಂಕಲ್ ಮತ್ತು ಕುರಗಳಲ್ಲಿ ಸೂಜಿಯಿಂದ ಸಣ್ಣ ಛೇದನ ಮಾಡಿ ಕೀವನ್ನು ಹರಿಬಿಟ್ಟು ಪಟ್ಟಿ ಹಾಕುವ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಅಂತೆಯೇ ಸೆಲ್ಯುಲೈಟಿಸ್ ಮತ್ತು ಹೈಡ್ರಡಿನೈಟಿಸ್ ಸಪ್ಪುರಟಿವ ಔಷಧಿಗಳಿಂದ ಗುಣವಾಗದಿದ್ದರೆ ಇದೇ ರೀತಿಯ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಫರಂಕಲ್ ಗಳು ಪದೇ ಪದೇ ಆಗುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಜೀವಸತ್ವಗಳ ಔಷಧಿಗಳು ಬೇಕಾಗುತ್ತವೆ. ಹೈಡ್ರಡಿನೈಟಿಸ್ ಸಪ್ಪುರಟಿವ ಪದೇ ಪದೇ ಆಗುತ್ತಿದ್ದರೆ ಹಾಗೂ ಗುಣವಾಗದೇ ತೀವ್ರವಾಗಿದ್ದರೆ, ದೋಷಿತ ಚರ್ಮವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ. ಇದಕ್ಕೆ ಕೀವ್ಗುಳ್ಳೆಗಳನ್ನು ಸುಡುವ ಹಾಗೂ ಕೂದಲುಗಳನ್ನು ನಾಶಮಾಡುವ ಲೇಸರ್ ಚಿಕಿತ್ಸೆಯೂ ಇದೆ.
      ಬ್ಯಾಕ್ಟೀರಿಯಾಗಳ ಸೋಂಕುಗಳನ್ನು ತಡೆಗಟ್ಟಲು ಶುಚಿತ್ವ ಬಹಳ ಮುಖ್ಯ. ನಿತ್ಯ ಸ್ನಾನ, ಹಾಗೂ ಒಗೆದ ಬಟ್ಟೆಗಳನ್ನು ಧರಿಸುವುದು ಮುಖ್ಯ. ಒಳ್ಳೆಯ ಆಹಾರ ಸೇವನೆ, ನಿದ್ರೆ, ಮತ್ತು ವ್ಯಾಯಾಮಗಳಿಂದ ರೋಗನಿರೋಧಕ ಶಕ್ತಿ ಚೆನ್ನಾಗಿದ್ದು ಇವು ಉಂಟಾಗುವುದಿಲ್ಲ, ಹಾಗೂ ಒಮ್ಮೊಮ್ಮೆ ಉಂಟಾದರೂ ಬೇಗನೆ ವಾಸಿಯಾಗುತ್ತವೆ. ಮಧುಮೇಹ ಇರುವವರು ಚರ್ಮದ ವಿಷಯದಲ್ಲಿ ಎಚ್ಚರವಾಗಿರಬೇಕು. ಗಾಯಗಳಾಗದಂತೆ ನೋಡಿಕೊಳ್ಳಬೇಕು. ಗಾಯಗಳಾದರೆ ಆಂಟಿಬಯೋಟಿಕ್ ಮುಲಾಮುಗಳನ್ನು ಅವುಗಳಿಗೆ ಸವರಬೇಕು. ಕಜ್ಜಿ, ಇಸುಬು, ಮೊದಲಾದ ತುರಿಕೆಯ ರೋಗಗಳನ್ನು ಬೇಗ ವಾಸಿಮಾಡಿಕೊಳ್ಳಬೇಕು. ಯಾರಿಗಾದರೂ ಈ ಸೋಂಕು ರೋಗಗಳಿದ್ದರೆ ಅವು ಅಂಟುವ ಕಾರಣದಿಂದ ಇತರರಿಗೆ ಹರಡುವುದನ್ನು ತಪ್ಪಿಸಲು ಬೇಗನೆ ಚಿಕಿತ್ಸೆ ಪಡೆಯಬೇಕು. ಹೀಗೆ ಚರ್ಮದ ಸೋಂಕು ರೋಗಗಳು ಬರದಂತೆ ನಿವಾರಿಸಬಹುದು.

ಜೀವಜಗತ್ತಿನ ವಿಸ್ಮಯ - ಪೇಪರ್ ಕಣಜದ ಗೂಡು

ಈ ಚಿತ್ರದಲ್ಲಿ ಕಾಣುತ್ತಿರುವ ಗೂಡು ಪೇಪರ್ ವ್ಯಾಸ್ಪ್ ಎಂಬ ಕಣಜದ ಗೂಡು. ಇದು ನೋಡಲು ಸಿಕ್ಕಿದ್ದು ನಮ್ಮ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಡಿಯಲ್ಲಿ ಬರುವ ದುಬಾರೆ ಆನೆ ಶಿಬಿರದಲ್ಲಿ. ಕಣಜಗಳು ಈ ಗೂಡನ್ನು ತೊರೆದು ಹೋಗಿ ಅದು ಕೆಳಗೆ ಬಿದ್ದಿರಲು, ಸಿಬ್ಬಂದಿಯವರು ಅದನ್ನು ತೆಗೆದು ಒಂದು ಮರದ ಕೊಂಬೆಗೆ ತೂಗಿಹಾಕಿದ್ದಾರೆ. ವಾಸ್ತವವಾಗಿ ಇಲ್ಲಿ ಖಾಲಿ ಕೋಶಗಳನ್ನುಳ್ಳ ಪದರಗಳಂತೆ ಕಾಣುವ ಆಕೃತಿಗಳು ಮರದ ಕೊಂಬೆಯ ತುದಿಯವರೆಗೂ ಹೋಗಿ ಇವುಗಳ ಮೇಲೆ ಪೇಪರ್ ಅಥವಾ ಕಾಗದದಂಥ ಪದರ ಆವರಿಸಿರುತ್ತದೆ. ಪೇಪರ್ ಕಣಜಗಳು ನಾರುಗಳನ್ನು ಸತ್ತ ಮರ ಅಥವಾ ಸಸ್ಯಗಳ ಕಾಂಡಗಳಿಂದ ಸಂಗ್ರಹಿಸಿ ತಮ್ಮ ಲಾಲಾರಸದೊಂದಿಗೆ ಬೆರೆಸಿ ಬೂದು ಅಥವಾ ಕಂದು ಬಣ್ಣದ ಕಾಗದದಂಥ ವಸ್ತುವನ್ನು ಮಾಡಿ ಅದರಿಂದ ಗೂಡು ಕಟ್ಟುತ್ತವೆ. ಗೂಡಿನಲ್ಲಿ ಹಲವಾರು ಕೋಶಗಳಿದ್ದು ಇವುಗಳಲ್ಲಿ ತಮ್ಮ ಮರಿಗಳನ್ನು ಬೆಳೆಸುತ್ತವೆ. ಈ ಗೂಡನ್ನು ಅವು ಪೆಟಿಯೋಲ್ ಎಂಬ ಸಣ್ಣ ತೊಟ್ಟಿನ ಮೂಲಕ ಮರದ ಕೊಂಬೆಗೆ ಸೇರಿಸಿರುತ್ತವೆ. ಕಣಜಗಳು ಒಂದು ಇರುವೆ ವಿರೋಧಕ ರಾಸಾಯನಿಕವನ್ನು ಉತ್ಪತ್ತಿ ಮಾಡಿ ಅದನ್ನು ಪೆಟಿಯೋಲ್ ನ ಬುಡದ ಸುತ್ತ ಸವರುತ್ತವೆ. ಇರುವೆಗಳಿಂದ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ರಕ್ಷಿಸಲು ಅವು ಹೀಗೆ ಮಾಡುತ್ತವೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೋಶಗಳಿರುವ ಗೂಡಿನ ಒಳಭಾಗ. ಇದರ ಮೇಲೆ ಕಾಗದದಂಥ ಆವರಣವಿರುತ್ತದೆ. ಈ ಪೇಪರ್ ಕಣಜಗಳಲ್ಲಿ ಸುಮಾರು ಮುನ್ನೂರು ಪ್ರಭೇದಗಳಿವೆ.
                                   
                                  

ಸೋಮವಾರ, ಅಕ್ಟೋಬರ್ 6, 2025

ಪ್ರಕೃತಿ ವಿಸ್ಮಯ - ಸುಂದರ ಹೂವಿನ ವಿಷಸಸ್ಯ


ದುಬಾರೆ ಕಾಡು ಪ್ರದೇಶದಲ್ಲಿ ಕಂಡ ಈ ಸುಂದರ ಹೂವಿನ ಗಿಡದ ಹೆಸರು ಗ್ಲೋರಿಯೋಸಾ ಸುಪರ್ಬ! ಇದನ್ನು ಗ್ಲೋರಿ ಲಿಲ್ಲಿ, ಫೈರ್ ಲಿಲ್ಲಿ , ಫ್ಲೇಮ್ ಲಿಲ್ಲಿ, ಗ್ಲೋರಿಯೋಸಾ ಲಿಲ್ಲಿ, ಟೈಗರ್ ಕ್ಲಾ, ಕ್ಲೈಂಬಿಂಗ್ ಲಿಲ್ಲಿ, ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ಬೆಂಕಿಯ ಜ್ವಾಲೆಗಳಂತೆ ಕೆಂಪು, ಹಳದಿ ಬಣ್ಣಗಳ ಅಲೆಗಳಂಥ ದಳಗಳನ್ನುಳ್ಳ ಇದರ ಹೂವು ನೋಡಲು ಬಹಳ ಆಕರ್ಷಕ! ಈ ಗಿಡ, ರೈಜೋಮ್ ಎಂಬ ಮಾರ್ಪಾಟಾದ ಮಾಂಸಲ ಕಾಂಡದಿಂದ ಬೆಳೆಯುವ ಒಂದು ಹತ್ತುವ ಬಳ್ಳಿ. ಇದರ ಎಲೆಗಳ ತುದಿಗಳಲ್ಲಿ ಟೆಂಡ್ರಿಲ್ ಗಳೆಂಬ ರಚನೆಗಳಿದ್ದು ಅವುಗಳ ಸಹಾಯದಿಂದ ಸನಿಹದ ಮರಗಳನ್ನು ಹತ್ತುತ್ತಾ ಬೆಳೆಯುತ್ತದೆ. ಇದರ ಹೂವು ನೋಡಲು ಎಷ್ಟು ಆಕರ್ಷಕವೋ ಇದು ಅಷ್ಟೇ ವಿಷಕಾರಿಯಾಗಿದೆ! ಈ ಗಿಡದ ಹೂವು, ಎಲೆ, ಬಳ್ಳಿ, ಮತ್ತು ಮುಖ್ಯವಾಗಿ ರೈಜೋಮ್, ಹೀಗೆ ಪ್ರತಿಯೊಂದು ಭಾಗವೂ ವಿಷಮಯ! ಕಾಲ್ಚಿಕೇಸೀ ಎಂಬ ಕುಟುಂಬಕ್ಕೆ ಸೇರುವ ಇದು ಕಾಲ್ಚಿಸೀನ್ ಎಂಬ ವಿಷಯುಕ್ತ ಆಲ್ಕಲಾಯ್ಡ್ ರಾಸಾಯನಿಕವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊಂದಿರುತ್ತದೆ. ಇದರೊಂದಿಗೆ ಗ್ಲೋರಿಯೋಸೀನ್ ಎಂಬ ಇನ್ನೊಂದು ಆಲ್ಕಲಾಯ್ಡ್ ಅನ್ನೂ ಹೊಂದಿರುತ್ತದೆ. ಇದನ್ನು ಸೇವಿಸಿದ ಮನುಷ್ಯರಿಗಾಗಲೀ ಪ್ರಾಣಿಗಳಿಗಾಗಲೀ ಇದು ಮಾರಣಾಂತಿಕವಾಗಬಹುದು! ಇದನ್ನು ಸೇವಿಸಿದ ಕೆಲವು ಗಂಟೆಗಳಲ್ಲಿ ಹೊಟ್ಟೆ ತೊಳಸುವಿಕೆ, ವಾಂತಿ, ಹೊಟ್ಟೆ ನೋವು, ರಕ್ತಭೇದಿ, ಗಂಟಲು ಉರಿ, ಬಾಯ ಸುತ್ತ ಮರಗಟ್ಟುವಿಕೆ, ಉಸಿರಾಟ ಕ್ಷೀಣಿಸುವಿಕೆ, ರಕ್ತದೊತ್ತಡ ಇಳಿಮುಖವಾಗುವುದು, ರಕ್ತ ಮೂತ್ರ, ಮಾನಸಿಕ ಅಸ್ವಸ್ಥತೆ, ಅಪಸ್ಮಾರ, ಕೋಮಾ, ಮೊದಲಾದ ಲಕ್ಷಣಗಳುಂಟಾಗುತ್ತವೆ! ಬದುಕುಳಿದವರಲ್ಲಿ ಕೂದಲುದುರುವಿಕೆ, ಚರ್ಮದ ಇಸುಬು, ಹಾಗೂ ಸ್ತ್ರೀಯರಲ್ಲಿ ದೀರ್ಘಕಾಲ ಮುಟ್ಟಿನಲ್ಲಿ ರಕ್ತಸ್ರಾವವಾಗುತ್ತವೆ! ಈ ಗಿಡದ ಭಾಗಗಳನ್ನು ಮುಟ್ಟಿದರೂ ಚರ್ಮದ ಉರಿ, ಮತ್ತು ಚರ್ಮದ ಕೀಳುವಿಕೆಗಳಾಗುತ್ತವೆ! ಕೆಲವು ದುಷ್ಕರ್ಮಿಗಳು ಇದನ್ನು ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಕೊಲ್ಲಲು ಬಳಸುತ್ತಾರೆ! ಕೆಲವರು ಆತ್ಮಹತ್ಯೆಗೂ ಬಳಸುವುದುಂಟು! ಕೆಲವೊಮ್ಮೆ ಇದರ ಮಾಂಸಲ ರೈಜೋಮ್ ಅನ್ನು ಸುವರ್ಣ ಗೆಡ್ಡೆ ಅಥವಾ ಸಿಹಿ ಗೆಣಸೆಂದು ತಪ್ಪು ತಿಳಿದು ತಿಂದು ವಿಷಪ್ರಾಶನಕ್ಕೊಳಗಾಗಬಹುದು! ನೈಜೀರಿಯಾದಲ್ಲಿ ಇದನ್ನು ಬಾಣದ ವಿಷವಾಗಿ ಬಳಸಲಾಗುತ್ತದೆ! ಇದು ಹೀಗೆ ವಿಷಕಾರಿಯಾದರೂ ಇದನ್ನು ಬಹಳ ಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಗೌಟ್ ಎಂಬ ಸಂಧಿವಾತ, ಮೂಲವ್ಯಾಧಿ, ಹಾವು ಕಚ್ಚುವಿಕೆ, ಕ್ಯಾನ್ಸರ್, ಗಾಯಗಳು, ಕುಷ್ಠರೋಗ, ಮೊದಲಾದ ಹಲವಾರು ಕಾಯಿಲೆ, ಸಮಸ್ಯೆಗಳಲ್ಲಿ ಔಷಧಿಯಾಗಿ ಬಳಸಲಾಗುತ್ತಿದೆ. ಇದರಿಂದ ಗೌಟ್ ಎಂಬ ಸಂಧಿವಾತಕ್ಕೆ ಔಷಧಿಯಾಗಿರುವ ಕಾಲ್ಚಿಸೀನ್ ರಾಸಾಯನಿಕವನ್ನು ತೆಗೆಯಲಾಗುತ್ತದೆ. ಹಾಗಾಗಿ ಇದು ಬಹಳ ಲಾಭದಾಯಕ ಗಿಡವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ ಇದನ್ನು ಮಾಯಾಪುಷ್ಪವೆಂದು ಭಾವಿಸಲಾಗಿ ಧಾರ್ಮಿಕ ಕ್ರಿಯೆಗಳಲ್ಲಿ ಬಳಸಲಾಗುತ್ತದೆ! ಸ್ವಾರಸ್ಯವೆಂದರೆ ಇದು ಕಾರ್ತಿಕಮಾಸದಲ್ಲಿ ಬೆಳೆಯುವುದರಿಂದ ತಮಿಳುನಾಡಿನಲ್ಲಿ ಇದನ್ನು ಕಾರ್ತಿಗೈಪೂ ಎನ್ನುತ್ತಾರೆ ಹಾಗೂ ಅಲ್ಲಿ ಇದು ರಾಜ್ಯಪುಷ್ಪವಾಗಿದೆ! ಅಂತೆಯೇ ಇದು ಜಿಂಬಾಬ್ವೇನ ರಾಷ್ಟ್ರೀಯ ಪುಷ್ಪವಾಗಿದೆ! 

ಸೋಮವಾರ, ಸೆಪ್ಟೆಂಬರ್ 29, 2025

ಸ್ಟ್ರಾಬೆರಿ ಸೇವಿಸಿ ಮಹಾಬಲೇಶ್ವರ ದರ್ಶಿಸಿ

      ಪಶ್ಚಿಮ ಘಟ್ಟಗಳ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಸಾಲು, ಅವುಗಳ ಮಧ್ಯೆ ಒಂದು ನದಿಯ ಕಣಿವೆ, ಮೈಯನ್ನು ಮೆಲ್ಲನೆ ತೀಡುವ ತಂಗಾಳಿ, ಕೆಲವು ಪ್ರಾಚೀನ ದೇವಾಲಯಗಳು,  ಮಹಾನ್ ನದಿಯೊಂದರ ಉಗಮಸ್ಥಳ, ಸಂಜೆಯ ಹೊಂಬಣ್ಣದ ಸೂರ್ಯಾಸ್ತದ ವೈಭವ, ಇವೆಲ್ಲವುಗಳೊಂದಿಗೆ ಇಲ್ಲಿಗೆ ಹೋಗುವ ದಾರಿಯುದ್ದಕ್ಕೂ  ಕೆಂಪಾದ ರಸಭರಿತ ಸ್ಟ್ರಾಬೆರಿ ಹಣ್ಣುಗಳ ಸವಿ, ಇಂಥ ಪ್ರವಾಸ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಮ್ಮ ಭಾರತದಲ್ಲಿ ಇಂಥ ಸ್ಥಳಗಳು ಹಲವಾರಿವೆ ನಿಜ! ಆದರೆ ಈಗ ನಾನು ಹೇಳಲು ಹೊರಟಿರುವ ಸ್ಥಳ,  ಸ್ಟ್ರಾಬೆರಿ ಹಣ್ಣುಗಳ ರಸಾಸ್ವಾದ ಇರುವ ಮಹಾರಾಷ್ಟ್ರದ ಮಹಾಬಲೇಶ್ವರ! ಮಹಾಬಲೇಶ್ವರ, ಮಹಾರಾಷ್ಟ್ರದ ನೋಡಲೇಬೇಕಾದ ಒಂದು ಸುಂದರ ಗಿರಿಧಾಮ! ಇಲ್ಲಿ ಕೃಷ್ಣಾ, ಕೊಯ್ನಾ, ವೇನ್ನಾ, ಸಾವಿತ್ರೀ, ಮತ್ತು ಗಾಯತ್ರೀ ಎಂಬ ಐದು ನದಿಗಳು ಉಗಮವಾಗುತ್ತವೆ! ಹಿಂದೂಗಳಾದ ನಮಗೆ ಇದೊಂದು ಯಾತ್ರಾ ಸ್ಥಳವಾದರೆ, ಬ್ರಿಟಿಷರು ಇದನ್ನು ಒಂದು ಗಿರಿಧಾಮವಾಗಿ ಅಭಿವೃದ್ಧಿಪಡಿಸಿ, ಬಾಂಬೆ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಇದು ಮರಾಠರ ವಶದಲ್ಲಿದ್ದು, ಶಿವಾಜಿ ಮಹಾರಾಜನು ಮಹಾಬಲೇಶ್ವರದ ಬಳಿಯ ಜಾವಳಿಯನ್ನು  ಆಳುತ್ತಿದ್ದ  ಆದಿಲ್ ಶಾಹಿ ಸುಲ್ತಾನರ ಸರದಾರ ಚಂದ್ರರಾವ್ ಮೋರೆಯನ್ನು  ಕೊಂದು ಪ್ರತಾಪಗಢ ಗಿರಿ ದುರ್ಗವನ್ನು ನಿರ್ಮಿಸಿದ್ದನು. ಹಾಗಾಗಿ ಮಹಾಬಲೇಶ್ವರ ಒಂದು ಮಹತ್ವದ ಸುಂದರ ಸ್ಥಳವಾಗಿದ್ದು ಎಂದಾದರೂ ಯಾವುದಾದರೂ ಕಾರಣಕ್ಕೆ ಪುಣೆಗೆ ಹೋದರೆ ಈ ಸ್ಥಳಕ್ಕೆ ಹೋಗದಿರಬಾರದು. 
      ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಪುಣೆಯಿಂದ ಸುಮಾರು 120 ಕಿಮೀ. ದೂರದಲ್ಲಿದ್ದು ಸುಮಾರು ಎರಡು ಗಂಟೆಗಳ ಪ್ರಯಾಣ ಬೇಕಾಗುತ್ತದೆ.ಇಲ್ಲಿಗೆ ಹೋಗಲು ಬಸ್ ಇದ್ದರೂ ಸ್ವಂತ ಇಲ್ಲವೇ ಬಾಡಿಗೆ ಗಾಡಿಯಲ್ಲಿ ಹೋಗುವುದು ಒಳ್ಳೆಯದು.ಪುಣೆಯಿಂದ ಪಂಚಗಣಿ - ಮಹಾಬಲೇಶ್ವರ ರಸ್ತೆಯಲ್ಲಿ ಹೋದಾಗ, ಮಹಾಬಲೇಶ್ವರಕ್ಕೂ 20 ಕಿ.ಮೀ. ಮೊದಲು, ಪಂಚಗಣಿ ಎಂಬ ಸುಂದರ ಗಿರಿಧಾಮ ಸಿಗುತ್ತದೆ.ಒಂದು ದಿನದ ಪ್ರವಾಸದಲ್ಲಿ ಇಲ್ಲಿಗೆ ಹೋಗಿಯೇ ಮಹಾಬಲೇಶ್ವರಕ್ಕೆ ಹೋಗಬಹುದು. ಈ ಎರಡೂ ಸ್ಥಳಗಳಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ.ಪಂಚಗಣಿಗೆ ಬರುತ್ತಿದ್ದಂತೆ ಎಲ್ಲೆಲ್ಲೂ ಸ್ಟ್ರಾಬೆರಿಗಳ ಮಾರಾಟ ಕಾಣುತ್ತದೆ. ಇಲ್ಲೊಂದು ಚಿಕ್ಕ, ಆಕರ್ಷಕವಾದ ಸ್ಟ್ರಾಬೆರಿ ಉದ್ಯಾನವನವೇ ಇದೆ! ಇದರ ಹೆಸರು ಮ್ಯಾಪ್ರೋ ಸ್ಟ್ರಾಬೆರಿ ಉದ್ಯಾನವನ. ಇಲ್ಲಿ ಎಲ್ಲವೂ ಸ್ಟ್ರಾಬೆರಿಮಯ! ಸ್ಟ್ರಾಬೆರಿ ಅಲಂಕೃತ ಕಾರು, ಸ್ಟ್ರಾಬೆರಿ ಹಣ್ಣು ಇರುವ ಗಾಡಿ, ಸ್ಟ್ರಾಬೆರಿ ದೇಹದ ಪಕ್ಷಿಗಳು, ಫೋಟೋ ತೆಗೆಸಿಕೊಳ್ಳಲು ಸ್ಟ್ರಾಬೆರಿ ಹಣ್ಣುಗಳ ಬೃಹತ್ ಆಕೃತಿಗಳು, ಹೀಗೆ ಆಕರ್ಷಣೆಗಳಿವೆ.ಬಗೆಬಗೆಯ ಸುಂದರ ಹೂಗಿಡಗಳು, ಪುಟ್ಟ ಜಲಪಾತ ಮತ್ತು ಕಮಲಗಳ ಹಾಗೂ ಬಣ್ಣದ ಮೀನುಗಳ ಕೊಳ, ಇವು ಸುಂದರ ನೋಟ ಒದಗಿಸುತ್ತವೆ! ಇಲ್ಲಿ ತಂಗಾಳಿ ಸವಿಯುತ್ತಾ ಉದ್ಯಾನವನ ನೋಡುತ್ತಾ ನಡೆಯುವುದು ಆಹ್ಲಾದಕರವಾಗಿರುತ್ತದೆ! ಅಂತೆಯೇ ಇಲ್ಲಿ ಕುಳಿತು ವಿಶ್ರಮಿಸಲು ಸೊಗಸಾದ ಪುಟ್ಟ ಮಂಟಪಗಳಿವೆ! ಇಲ್ಲಿನ ಅಂಗಡಿಗಳಲ್ಲಿ ಸ್ಟ್ರಾಬೆರಿ ಕ್ರಶ್, ಜ್ಯೂಸ್, ಜೆಲ್ಲಿ, ಐಸ್ಕ್ರೀಮ್, ಚಾಕೋಲೇಟ್, ಮೊದಲಾದ ತಿಂಡಿ ತಿನಿಸುಗಳೂ ಪಾನೀಯಗಳೂ ದೊರೆಯುತ್ತವೆ! ಅಲ್ಲದೇ ಸ್ಟ್ರಾಬೆರಿ ರೂಪದ ದಿಂಬುಗಳು, ಗೋಡೆಗೆ ನೇತುಹಾಕುವ ಆಕೃತಿಗಳು ಇವೆಲ್ಲವೂ ಸಿಗುತ್ತವೆ! ಈ ಉದ್ಯಾನವನದ ಎದುರಿಗೆ ಬೀದಿ ಮಾರುಕಟ್ಟೆಯಲ್ಲಿ ತಾಜಾ ಸ್ಟ್ರಾಬೆರಿ ಹಣ್ಣುಗಳು ದೊರೆಯುತ್ತವೆ! ಅಂತೆಯೇ ಸನಿಹದ ಹೊಟೇಲುಗಳಲ್ಲಿ ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಐಸ್ಕ್ರೀಮ್ ಮುಂತಾದವುಗಳು ಸಿಗುತ್ತವೆ.ಇಲ್ಲಿ  ಸನಿಹದಲ್ಲೇ ಭವಾನಿ ವ್ಯಾಕ್ಸ್ ಮ್ಯೂಸಿಯಂ ಎಂಬ ಒಂದು ಸೊಗಸಾದ ವ್ಯಾಕ್ಸ್ ಮ್ಯೂಸಿಯಂ ಕೂಡ ಇದೆ. ಜನಪ್ರಿಯ ವ್ಯಕ್ತಿಗಳ ಪ್ರತಿಕೃತಿಗಳನ್ನು ಮೇಣದಲ್ಲಿ ಮಾಡಿ ಇರಿಸಿರುವ ಸಂಗ್ರಹಾಲಯ ಇದು.
       ಮಹಾಬಲೇಶ್ವರದ ರಸ್ತೆಗಳಲ್ಲೂ ಎಲ್ಲೆಲ್ಲೂ ಸ್ಟ್ರಾಬೆರಿಗಳ ಅಂಗಡಿಗಳಿವೆ.ಹಾಗಾಗಿ ನಾವು ಯಥೇಚ್ಛವಾಗಿ ಸ್ಟ್ರಾಬೆರಿಗಳನ್ನೂ ಅವುಗಳ ಉತ್ಪನ್ನಗಳನ್ನೂ ಕೊಂಡು ಸೇವಿಸಬಹುದು! 
     ಮಹಾಬಲೇಶ್ವರದಲ್ಲಿ ನಾವು ಮುಖ್ಯವಾಗಿ ನೋಡಬೇಕಾಗಿರುವುದು ಮಹಾಬಲೇಶ್ವರ ಹಾಗೂ ಕೃಷ್ಣಾದೇವಿ ದೇವಾಲಯಗಳು ಮತ್ತು ಬೆಟ್ಟಗುಡ್ಡಗಳ ಸಾಲುಗಳಲ್ಲಿರುವ ಹಲವಾರು ಸೊಗಸಾದ ವ್ಯೂ ಪಾಯಿಂಟ್ ಅಥವಾ ವೀಕ್ಷಣಾ ಕೇಂದ್ರಗಳು.. 
   ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವಾಲಯದಿಂದಲೇ ಈ ಗಿರಿಧಾಮಕ್ಕೆ ಮಹಾಬಲೇಶ್ವರ ಎಂದು ಹೆಸರು ಬಂದಿದೆ. ಇದು ನಗರದಿಂದ ಸುಮಾರು ಆರು ಕಿ.ಮೀ. ದೂರವಿದೆ. ಇದೊಂದು ಸುಂದರ ದೇವಾಲಯವಾಗಿದ್ದು, ಇಲ್ಲಿ ಪೂಜಿಸಲ್ಪಡುವ ದೇವರು ಮಹಾಬಲೇಶ್ವರನೆಂದು ಕರೆಯಲ್ಪಡುವ ತ್ರಿಮೂರ್ತ್ಯಾತ್ಮಕ ಉದ್ಭವ ಲಿಂಗವಾಗಿದೆ. ಈ ಶಿವಲಿಂಗವು ಒಂದು ರುದ್ರಾಕ್ಷಿ ಗಾತ್ರದಷ್ಟಿದೆ. ದೇವಾಲಯದ ಹೊರಗೆ ಇದರ ಸ್ಥಳಪುರಾಣ ಮತ್ತು ಐತಿಹ್ಯಗಳ ಫಲಕವನ್ನು ಹಾಕಿದ್ದಾರೆ. ಅದರಂತೆ, ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ಕಥೆಯಿದೆ. ಪಾದ್ಮ ಕಲ್ಪದಲ್ಲಿ ಅತಿಬಲ ಮತ್ತು ಮಹಾಬಲ ಎಂಬ ಇಬ್ಬರು ದೈತ್ಯರು ಲೋಕಕಂಟಕರಾಗಿದ್ದರು. ಆಗ ಲೋಕವನ್ನು ರಕ್ಷಿಸಲು ವಿಷ್ಣುವು ಅತಿಬಲನನ್ನು ಕೊಂದನು. ಆದರೆ ಅವನಿಗೆ ಮಹಾಬಲನನ್ನು ಕೊಲ್ಲಲಾಗಲಿಲ್ಲ. ಏಕೆಂದರೆ ಮಹಾಬಲನು ತನ್ನ ಇಚ್ಛೆಯಿಂದಷ್ಟೇ ಸಾಯಬೇಕೆಂದು ವರ ಪಡೆದಿದ್ದನು. ಹಾಗಾಗಿ ದೇವತೆಗಳು ಆದಿಶಕ್ತಿಯ ಮೊರೆಹೊಕ್ಕರು. ಆದಿಶಕ್ತಿಯು ಮಹಾಬಲನನ್ನು ಆಕರ್ಷಿಸಿ ಅವನು ಯುದ್ಧವಿಮುಖನಾಗುವಂತೆ ಮಾಡಿದಳು. ಆಗ ದೇವತೆಗಳು ಅವನಿಗೆ ಶರಣಾಗಲು ಅವನು ದೇವತೆಗಳಿಗೆ ವರ ಕೊಡಲು ಮುಂದಾದನು. ಆಗ ದೇವತೆಗಳು ಅವನು ತಮ್ಮಿಂದ ಸಾಯಬೇಕೆಂದು ವರ ಬೇಡಿದರು. ಮಾತಿಗೆ ತಪ್ಪಲಾಗದ ಮಹಾಬಲನು ಒಪ್ಪಿ, ದೇವತೆಗಳು ಅವನೊಂದಿಗೆ ಸದಾ ಈ ಸ್ಥಳದಲ್ಲಿ ನೆಲೆಸಿರಬೇಕೆಂದು ನಿಬಂಧನೆ ಹಾಕಿದನು. ಹಾಗಾಗಿ, ಇಲ್ಲಿನ ಶಿವಲಿಂಗದಲ್ಲಿ ಶಿವನು ಮಹಾಬಲೇಶ್ವರನೆಂದೂ ವಿಷ್ಣುವು ಅತಿಬಲೇಶ್ವರನೆಂದೂ ಬ್ರಹ್ಮನು ಕೋಟೇಶ್ವರನೆಂದೂ ನೆಲೆಸಿದ್ದಾರೆ. ಫಲಕದ ಪ್ರಕಾರ ಈ ದೇವಾಲಯವನ್ನು ಎಂಟುನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದೂ ಲಿಂಗವು ಉದ್ಭವಲಿಂಗವೆಂದೂ ಹೇಳಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜನು ಇಲ್ಲಿ ತನ್ನ ತಾಯಿಗೆ ಸುವರ್ಣ ತುಲಾಭಾರ ಮಾಡಿಸಿದ್ದನಂತೆ! 
     ಮಹಾಬಲೇಶ್ವರ ದೇವಾಲಯದ ಎದುರಿಗೆ  ಕೃಷ್ಣಾದೇವಿ ದೇವಾಲಯ ಎಂಬ ಒಂದು ಪ್ರಾಚೀನ ದೇವಾಲಯವಿದೆ. ಇಲ್ಲಿಗೆ ಒಂದು ಸಣ್ಣ ಸುಂದರ ಕಾಡುದಾರಿಯ ಮೂಲಕ ಹೋಗಬೇಕು. ಇಲ್ಲಿ ಕೃಷ್ಣಾ ನದಿಯ ಉಗಮವಾಗುತ್ತದೆ. ಉಗಮಸ್ಥಾನದಲ್ಲಿ ಒಂದು ಶಿವಲಿಂಗವನ್ನು ಸ್ಥಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿಂದ ಹರಿದು ಬರುವ ನದಿ ಮುಂದೆ ಒಂದು ಕಲ್ಲಿನ ಗೋವಿನ ಮೂರ್ತಿಯ ಬಾಯಿಂದ ಬರುತ್ತಾ ಒಂದು ಕೊಳದಲ್ಲಿ ತುಂಬಿಕೊಳ್ಳುತ್ತದೆ. ಈ ನೀರು ಬಹಳ ತಂಪಾಗಿಯೂ ಸಿಹಿಯಾಗಿಯೂ ತಿಳಿಯಾಗಿಯೂ ಇದೆ! ಇದೊಂದು ಬಹಳ ಹಳೆಯ ಕಲ್ಲಿನ ಕಟ್ಟಡದ ದೇವಾಲಯವಾಗಿದ್ದು ನೋಡಲು ವಿಸ್ಮಯವಾಗುತ್ತದೆ! ದೇವಾಲಯದ ಎದುರಿಗೆ ಬೆಟ್ಟ ಗುಡ್ಡಗಳ ನಡುವಿನ ಕೃಷ್ಣಾ ನದಿ ಕಣಿವೆಯ ಮೈ ನವಿರೇಳಿಸುವ ಅದ್ಭುತ ದೃಶ್ಯ ಕಾಣುತ್ತದೆ! 
       ಕೃಷ್ಣಾ ದೇವಿ ದೇವಾಲಯದ ಬಳಿ ಒಂದು ಸ್ಟ್ರಾಬೆರಿ ಹಣ್ಣುಗಳ ತೋಟವಿದೆ. ಇಲ್ಲಿ ನಾವು ಸ್ಟ್ರಾಬೆರಿ ಗಿಡಗಳು, ಹಣ್ಣುಗಳ ವಿವಿಧ ಹಂತಗಳನ್ನು ನೋಡಿ ಸ್ಟ್ರಾಬೆರಿ ಹಣ್ಣುಗಳನ್ನು ಸವಿಯಬಹುದು.
     ಮಹಾಬಲೇಶ್ವರ ಗಿರಿಧಾಮದಲ್ಲಿ ಅನೇಕ ವ್ಯೂ ಪಾಯಿಂಟ್ ಗಳು ಅಥವಾ ವೀಕ್ಷಣಾ ಕೇಂದ್ರಗಳು ಇವೆ. ಈ ವ್ಯೂ ಪಾಯಿಂಟ್ ಗಳು ಮಾರುಕಟ್ಟೆಯಿಂದ ಸುಮಾರು ಹದಿನಾರು ಕಿ.ಮೀ. ದೂರದಲ್ಲಿದೆ. ಬೆಟ್ಟ ಗುಡ್ಡಗಳ ಅತ್ಯಂತ ರಮಣೀಯವಾದ ವಿಶಾಲವಾದ ಈ ಪ್ರದೇಶದಲ್ಲಿ, ಕೇಟ್ಸ್ ವ್ಯೂ ಪಾಯಿಂಟ್, ಇಕೋ ಪಾಯಿಂಟ್, ಎಲಿಫೆಂಟ್ ಹಾಗೂ ನೀಡಲ್ ಹೋಲ್ ವ್ಯೂ ಪಾಯಿಂಟ್, ಆರ್ಥರ್ ಸೀಟ್ ಕಾಂಪ್ಲೆಕ್ಸ್. ಮೊದಲಾದ ಅನೇಕ. ಸುಂದರ ವ್ಯೂ ಪಾಯಿಂಟ್ ಗಳಿವೆ. ಇಲ್ಲಿ ಹಲವಾರು ತಿಂಡಿ, ತಿನಿಸುಗಳೂ ಲಭ್ಯವಿದ್ದು, ಕುದುರೆ ಹಾಗೂ ಒಂಟಿ ಸವಾರಿಗಳೂ ಇವೆ.
     ಕೇಟ್ಸ್  ವ್ಯೂ ಪಾಯಿಂಟ್ ಗೆ ಬ್ರಿಟಿಷ್ ಗವರ್ನರ್ ಆಗಿದ್ದ ಜಾನ್ ಮಲ್ ಕಮ್ ನ ಮಗಳು ಕೇಟ್ ಳ ಹೆಸರಿಟ್ಟಿದ್ದಾರೆ. ಶಿವಾಜಿ ಮಹಾರಾಜರ ಕಾಲದಲ್ಲಿ ಇದಕ್ಕೆ ನಾಕೆ ಖಿಂಡ್ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಒಂದು ಟೆಲಿಸ್ಕೋಪ್ ಮೂಲಕ ನಾವು ಕೃಷ್ಣಾ ನದಿ ಕಣಿವೆ, ಧೋಮ್ ಮತ್ತು ಬಾಲ್ಕವಾಡಿ ಅಣೆಕಟ್ಟುಗಳು, ವಿದ್ಯುದಾಗರಗಳು, ಟೆಂಟ್ ಗಳು, ಕಮಲ ಗಢ ಕೋಟಿ, ಒಂದು ದೇವಾಲಯ ಹಾಗೂ ಶಾಲೆ, ಇವೆಲ್ಲವನ್ನೂ ನೋಡಬಹುದು. ಈ ವ್ಯೂ ಪಾಯಿಂಟ್ ಗೆ ನೇರವಾಗಿ ಎಲಿಫೆಂಟ್ ಮತ್ತು ನೀಡಲ್ ಹೋಲ್ ಪಾಯಿಂಟ್ ಕಾಣುತ್ತದೆ. ಬೆಟ್ಟದ ಆಕೃತಿ ಆನೆಯ ತಲೆಯಂತಿರುವುದರಿದ ಹಾಗೂ ಅದರಲ್ಲಿ ಸೂಜಿಯ ಕಣ್ಣಿನಂಥ ರಂಧ್ರವಿರುವೂದರಿಂದ ಈ ಹೆಸರುಗಳನ್ನು ಇಡಲಾಗಿದೆ.ಈ ಪಾಯಿಂಟ್ ನ ಬಳಿ ಮಂಕಿ ಫಾಲ್ಸ್ ಎಂಬ ಪುಟ್ಟ ಜಲಪಾತ ಇದೆ. ಇದೊಂದು ನೀರಿನ ಬುಗ್ಗೆಯಂತಿರುವುದರಿಂದ ಇದನ್ನು ವಲ್ಚರ್ಸ್ ಸ್ಪ್ರಿಂಗ್ ಎಂದೂ ಕರೆಯುತ್ತಾರೆ.
       ಕೇಟ್ಸ್ ಪಾಯಿಂಟ್ ಬಳಿಯೇ ಒಂದು ಕಡೆ ಜೋರಾಗಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಇದನ್ನು ಇಕೋ ಪಾಯಿಂಟ್ ಎನ್ನುತ್ತಾರೆ.
ಆರ್ಥರ್ ಸೀಟ್ ಕಾಂಪ್ಲೆಕ್ಸ್ ಹಲವು ವೀಕ್ಷಣಾ ಕೇಂದ್ರಗಳ ಸಂಕೀರ್ಣವಾಗಿದ್ದು ಇದನ್ನು ವ್ಯೂ ಪಾಯಿಂಟ್ ಗಳ ರಾಣಿ ಎಂದು ಕರೆಯುತ್ತಾರೆ! ಇದರಲ್ಲಿ ಇಕೋ ಪಾಯಿಂಟ್, ಮಲ್ ಕಮ್ ಪಾಯಿಂಟ್, ಟೈಗರ್ ಸ್ಪ್ರಿಂಗ್ ಪಾಯಿಂಟ್, ಹಾಗೂ ಆರ್ಥರ್ ಸೀಟ್ ಪಾಯಿಂಟ್ ಎಂಬ ನಾಲ್ಕು ವ್ಯೂ ಪಾಯಿಂಟ್ ಗಳಿವೆ. ಇಕೋ ಪಾಯಿಂಟ್ ನಲ್ಲಿ ಕೂಗಿದರೆ ಪ್ರತಿಧ್ವನಿ ಬರುತ್ತದೆ. ಮಲ್ ಕಮ್ ಪಾಯಿಂಟ್ ನಿಂದ ಆರ್ಥರ್ ಸೀಟ್ ಪಾಯಿಂಟ್, ತೋರಣಗಢ ಕೋಟಿ, ಪ್ರತಾಪಗಢ ಕೋಟಿ, ಸಾವಿತ್ರಿ ನದಿ ಕಣಿವೆ, ಇವುಗಳನ್ನು ನೋಡಬಹುದು. ಟೈಗರ್ ಸ್ಪ್ರಿಂಗ್ ಪಾಯಿಂಟ್ ನಲ್ಲಿ ಒಂದು ನೀರಿನ ಬುಗ್ಗೆಯಿದ್ದು ಇಲ್ಲಿ ನೀರು ಕುಡಿಯಲು ಹುಲಿ ಬರುತ್ತಿತ್ತಂತೆ! ಹಾಗಾಗಿ ಇದಕ್ಕೆ ಈ ಹೆಸರಿಟ್ಟಿದ್ದಾರೆ. ಕೊನೆಯದಾದ ಆರ್ಥರ್ ಸೀಟ್ ಪಾಯಿಂಟ್ ನಲ್ಲಿ ಆರ್ಥರ್ ಎಂಬ ಬ್ರಿಟಿಷರನು ಕುಳಿತುಕೊಂಡು ಸಾವಿತ್ರೀ ನದಿಯನ್ನು ನೋಡುತ್ತಿದ್ದನಂತೆ. ಹಿಂದೊಮ್ಮೆ ಅವನು ತನ್ನ ಪತ್ನಿ ಮತ್ತು ಮಗಳಿನೊಂದಿಗೆ ಸಾವಿತ್ರೀ ನದಿಯ ಮೇಲೆ ದೋಣಿಯಲ್ಲಿ ಮಹಾಬಲೇಶ್ವರಕ್ಕೆ ಬರುತ್ತಿದ್ದಾಗ, ಅವನ ಪತ್ನಿ ಮತ್ತು ಮಗಳು ನದಿಯಲ್ಲಿ ಮುಳುಗಿ ಸತ್ತುಹೋಗಿದ್ದರು! ಅದನ್ನೇ ನೆನೆಯುತ್ತಾ ಅವನು ಇಲ್ಲಿ ಕುಳಿತು ಸಾವಿತ್ರೀ ನದಿಯನ್ನು ನೋಡುತ್ತಿದ್ದುದರಿಂದ ಅವನ ಹೆಸರನ್ನಿಟ್ಟಿದ್ದಾರೆ. ಇಲ್ಲಿ ಸೂರ್ಯಾಸ್ತ ನೋಡಲು ಅದ್ಭುತವಾಗಿರುತ್ತದೆ! ಮುಳುಗುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು ಬೆಟ್ಟಗುಡ್ಡಗಳ ಸಾಲಿನ ಮೇಲೆ ಬಿದ್ದಾಗ, ಅದು ಮರಗಳ ಕಪ್ಪು ಛಾಯೆಗಳ ತೋರಣಗಳೊಂದಿಗೆ ಕೂಡಿರುವ ಯಾವುದೋ ಅಲೌಕಿಕ ಲೋಕದಂತೆ ಕಾಣುತ್ತದೆ! 
       ವಿಶೇಷವೆಂದರೆ ಈ ಎಲ್ಲ ವ್ಯೂ ಪಾಯಿಂಟ್ ಗಳಲ್ಲೂ ಅವುಗಳ ಹೆಸರು ಮತ್ತು ವೈಶಿಷ್ಟ್ಯಗಳನ್ನುಳ್ಳ ಫಲಕಗಳನ್ನು ಹಾಕಿದ್ದಾರೆ. 
      ಮಹಾಬಲೇಶ್ವರದಲ್ಲಿ ನಾವು ಇವಲ್ಲದೇ ದೋಣಿವಿಹಾರವಿರುವ ವೇನ್ನಾ ಕೆರೆ, ಇಲ್ಲಿ ಉಗಮವಾಗುವ ಐದು ನದಿಗಳು ಸೇರುವ ಪಂಚಗಂಗಾ ದೇವಾಲಯ, ಶಿವಾಜಿ ಮಹಾರಾಜನು ನಿರ್ಮಿಸಿದ ಐತಿಹಾಸಿಕ ಪ್ರತಾಪ ಗಢ ಕೋಟಿ, ಅದ್ಭುತವಾದ ಲಿಂಗಮಾಲಾ ಜಲಪಾತ, ಮೊದಲಾದ ಇತರ ಸ್ಥಳಗಳನ್ನು ನೋಡಬಹುದು. ಮಹಾಬಲೇಶ್ವರಕ್ಕೆ ಎಲ್ಲಾ ಸಮಯದಲ್ಲೂ ಹೋಗಬಹುದಾದರೂ ನವೆಂಬರ್ ಇಂದ ಫೆಬ್ರವರಿ ವರೆಗಿನ ಚಳಿಗಾಲದ ಅವಧಿಯಲ್ಲಿ ಹೋದರೆ ಚೆನ್ನಾಗಿರುತ್ತದೆ. ಆಗ ಸ್ಟ್ರಾಬೆರಿ ಹಣ್ಣುಗಳ ಕಾಲವೂ ಆಗಿರುತ್ತದೆ.‌