ಶನಿವಾರ, ಸೆಪ್ಟೆಂಬರ್ 20, 2025

ನಿಸರ್ಗವನ್ನು ಆಸ್ವಾದಿಸಿ ಪಕ್ಷಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಿ

ಮಳೆಗಾಲ ಕಳೆಯುತ್ತಿದೆ.ಪ್ರವಾಸ ಮಾಡಲು ಈಗ ಸೂಕ್ತ ಸಮಯ.ಬಿಸಿಲಿನ ಬೇಗೆ ಇಲ್ಲದೇ, ಧಾರಾಕಾರ ಮಳೆಯೂ ಇಲ್ಲದೇ, ತಿಳಿಯಾದ ತಂಪಾದ ಈ ವಾತಾವರಣದಲ್ಲಿ ಮಳೆಯ ಪ್ರಭಾವದಿಂದ ಎಲ್ಲೆಲ್ಲೂ ಹಚ್ಚ ಹಸುರಿನ ರಮ್ಯ ಪ್ರಕೃತಿ ಕೈಬೀಸಿ ಕರೆಯುತ್ತಿದೆ. ಇಂಥ ವಾತಾವರಣದಲ್ಲಿ ಪ್ರಕೃತಿ ರಮ್ಯ ತಾಣಗಳಿಗೆ ಭೇಟಿ ಇತ್ತರೆ ಮನಸ್ಸು ಮೈಗಳಿಗೆ ಹಿತವೂ ಆಹ್ಲಾದವೂ ಉಂಟಾಗುತ್ತದೆ.
     ನಡೆದು ನೋಡು ಕೊಡಗಿನ ಸೊಬಗು ಎನ್ನುತ್ತಾರೆ. ಏಕೆಂದರೆ ಕೊಡಗಿನಲ್ಲಿ ಎಲ್ಲೆಲ್ಲೂ ಪ್ರಕೃತಿ ಸೌಂದರ್ಯವೇ ತುಂಬಿರುತ್ತದೆ! ಹಾಗಾಗಿ ಇಲ್ಲಿ ಎಲ್ಲಿಗೆ ಹೋದರೂ ಕಣ್ಮನಗಳಿಗೆ ಹಸಿರು ವನರಾಜಿ, ಬೆಳಗಿನ ಚುಮು ಚುಮು ಮಂಜಿನ ತಂಪು, ಸಂಜೆಯ ಚಳಿ, ನಮಗೆ ಮುದವುಂಟುಮಾಡುತ್ತದೆ! ಕೊಡಗಿನ ಹಲವಾರು ಪ್ರೇಕ್ಷಣೀಯ ತಾಣಗಳಲ್ಲಿ ಕಾವೇರಿ ನಿಸರ್ಗಧಾಮವೂ ಒಂದು. ಕೊಡಗಿನ ಮುಖ್ಯ ನಗರವಾದ ಮಡಿಕೇರಿಯಿಂದ ಇಪ್ಪತ್ತೆಂಟು ಕಿ.ಮೀ. ದೂರವಿರುವ ಈ ತಾಣ, ಮೈಸೂರಿನಿಂದ ತೊಂಬತ್ತೈದು ಕಿ.ಮೀ. ದೂರವಿದೆ. ಕುಶಾಲನಗರದ ಸಮೀಪವಿರುವ ಇದು, ಅಲ್ಲಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ.
      ಕಾವೇರಿ ನಿಸರ್ಗಧಾಮ, ಕಾವೇರಿ ನದಿಯಲ್ಲಿನ ಒಂದು ಪುಟ್ಟ ದ್ವೀಪ. ಒಂದು ತೂಗು ಸೇತುವೆಯನ್ನು ದಾಟಿ ಈ ದ್ವೀಪವನ್ನು ತಲುಪಬೇಕು. ಒಂದು ಪುಟ್ಟ ಪ್ರವೇಶ ಶುಲ್ಕದೊಂದಿಗೆ ನಾವು ಕಾವೇರಿ ನಿಸರ್ಗಧಾಮವನ್ನ ಪ್ರವೇಶಿಸಿ ತೂಗು ಸೇತುವೆಯ‌ ಮೂಲಕ ಈ ದ್ವೀಪವನ್ನು ಸೇರಬೇಕು. ಕಾವೇರಿ ನದಿಯ ಮೇಲಿನ ಈ ತೂಗು ಸೇತುವೆಯನ್ನು ದಾಟುವುದೇ ಒಂದು ರೋಮಾಂಚನ ನೀಡುತ್ತದೆ! ತೂಗುಸೇತುವೆಯ ಮೇಲೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವುದು ಎಲ್ಲರಿಗೂ ಬಹಳ ಪ್ರಿಯ! ಕಾವೇರಿ ನಿಸರ್ಗಧಾಮಕ್ಕೆ ಬಂದ ಕೂಡಲೇ ಒಂದು ಸುಂದರವಾದ ಕಾವೇರಿ ಮಾತೆಯ ವಿಗ್ರಹವನ್ನು ಕಾಣುತ್ತೇವೆ. ಎದುರಿಗೆ ಕಲಾಧಾಮ ಎಂಬ ಕೊಡಗಿನ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಿದೆ.‌ ಇಲ್ಲಿ ನಮಗೆ ಇಷ್ಟವಾದ ಕರಕುಶಲ ವಸ್ತುಗಳನ್ನು ಕೊಳ್ಳಬಹುದು. ಕಾವೇರಿ ಮಾತೆಗೆ ನಮಿಸಿ ನಾವು ಮುಂದೆ ನಡೆದರೆ, ಒಣ ಹಣ್ಣುಗಳು, ಗೃಹನಿರ್ಮಿತ ಚಾಕೋಲೇಟ್ ಗಳು, ಕೊಡಗಿನ ಕಾಫಿ ಪುಡಿ, ಜೇನುತುಪ್ಪ, ಮಸಾಲೆ ಪದಾರ್ಥಗಳು ದೊರೆಯುವ ದೊಡ್ಡ ಬೆಟ್ಟಗೇರಿ ಗ್ರಾಮ ಅರಣ್ಯ ಸಮಿತಿಯ ಸೊಗಸಾದ ಅಂಗಡಿಯಿದೆ. ಇಲ್ಲಿಯೂ ಸಾಕಷ್ಟು ಖರೀದಿ ಮಾಡಬಹುದು. ಅಂತೆಯೇ ಇಲ್ಲೊಂದು ಉಪಾಹಾರ ಮಂದಿರವೂ ಇದೆ. ದೋಣಿ ವಿಹಾರಕ್ಕೆ ದಾರಿ ತೋರುವ ಫಲಕ ಕೂಡ ಕಾಣುತ್ತದೆ. ಆದರೆ ಈಗ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ದೋಣಿ ವಿಹಾರ ನಿಲ್ಲಿಸಲಾಗಿದೆ.
      ಮುಂದೆ ಹೋದಂತೆ ನಮಗೆ ಎಲ್ಲೆಲ್ಲೂ ಹಸಿರು ಹುಲ್ಲು, ಬಿದಿರು ಮೆಳೆಗಳು, ತೇಗ ಮತ್ತು ಶ್ರೀಗಂಧದ ವೃಕ್ಷಗಳಿಂದ ಕೂಡಿರುವ ಸುಂದರ ಉಪವನ ಸ್ವಾಗತಿಸುತ್ತದೆ! ನಡೆಯಲು ನಮಗೆ ಸೊಗಸಾದ ಕಲ್ಲುದಾರಿಯಿದೆ. ಅಲ್ಲಲ್ಲಿ ಮರಗಳ ಕಾಂಡಗಳ  ಮೇಲೆ ಮಾಡಿರುವ ಹುಲಿ, ಮೊಸಳೆ, ಹಾವು, ಮೊದಲಾದ ಬಣ್ಣದ ಚಿತ್ರಕಲಾಕೃತಿಗಳು ಮನಸೆಳೆಯುತ್ತವೆ! ಮುಂದೆ ಹೋದಂತೆ, ಇಲ್ಲಿ ನಾವು ಮುಖ್ಯವಾಗಿ ನೋಡಬೇಕಿರುವ ಪಕ್ಷಿಧಾಮ, ಜಿಂಕೆವನ, ಮತ್ತು ನದಿಗೆ ದಾರಿ ತೋರುವ ಫಲಕ ಕಾಣುತ್ತದೆ. ಈ ದಾರಿಯಲ್ಲಿ ಒಂದಷ್ಟು ದೂರ ನಡೆಯಬೇಕು. ಸುಂದರವಾದ ಅಲಂಕೃತ ದ್ವಾರವೂ ಜಿಂಕೆಯ ಮುಖಗಳಿರುವ ದ್ವಾರವೂ ನಮ್ಮನ್ನು ಮುಂದೆ ಸ್ವಾಗತಿಸುತ್ತವೆ! ಮುಂದೆ ಕೊಡಗಿನ ಬುಡಕಟ್ಟು ಜನರ  ಜೀವನಶೈಲಿಯನ್ನು ತೋರಿಸುವ ಅನೇಕ ಶಿಲ್ಪಾಕೃತಿಗಳ ಒಂದು ಸುಂದರ ಚಿತ್ರಣ ಇದೆ. ಅಂತೆಯೇ ಉಮ್ಮತ್ - ಆಟ್ ಎಂಬ ಕೊಡಗಿನ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಸುಂದರ ಚಿತ್ರಣವಿದೆ. ನಸುಗೆಂಪು ಬಣ್ಣದ ಸೀರೆಗಳನ್ನು ಕೊಡಗಿನ ಶೈಲಿಯಲ್ಲಿ ಉಟ್ಟು ನರ್ತಿಸುತ್ತಿರುವ ಸುಂದರ ಸ್ತ್ರೀ ಪ್ರತಿಮೆಗಳ ಒಕ್ಕೂಟ ಬಹಳವಾಗಿ ಮನಸೆಳೆಯುತ್ತದೆ! ಇನ್ನೊಂದು ಸ್ವಾರಸ್ಯಕರ ಶಿಲ್ಪ ಚಿತ್ರಣವೆಂದರೆ, ಕೊಡಗಿನ ಗೌಡ ಜನಾಂಗದವರ ಸಾಂಪ್ರದಾಯಿಕ ನೃತ್ಯವಾದ ಕೋಲಾಟ! ಕೊಡಗಿನ ಶೈಲಿಯ ವಸ್ತ್ರಗಳನ್ನು ಧರಿಸಿ ಕೋಲಾಟವಾಡುತ್ತಿರುವ ಪುರುಷರ ಬೊಂಬೆಗಳ ಒಕ್ಕೂಟ ಮನಸೆಳೆಯುತ್ತದೆ! 
      ಎಲ್ಲೆಲ್ಲೂ ಸಿಕಾಡ ಕೀಟಗಳ ಜುಂಯ್ ಜುಂಯ್ ಶಬ್ದಗಳೂ ಪಕ್ಷಿಗಳ ಇಂಪಾದ ಕಲರವಗಳೂ ಕಿವಿತುಂಬುತ್ತವೆ! ಇದು ನಮಗೆ ಅರಣ್ಯ ಪರಿಸರದ ಭಾವ ತರುತ್ತದೆ! ನೆಮ್ಮದಿಯಿಂದ ಕುಳಿತುಕೊಂಡು ಪ್ರಕೃತಿಯನ್ನು ಆಸ್ವಾದಿಸಲು ಇಲ್ಲಿ ಚಿತ್ತಾರವಾದ ಅನೇಕ ಸುಂದರ ಮಂಟಪಗಳಿವೆ! ಅಂತೆಯೇ ಇಲ್ಲಿ ಎತ್ತರ ಹತ್ತಲು ಮರದ ಮೇಲಿನ ಮನೆಗಳೂ ಇವೆ! ಮರದ ಮೆಟ್ಟಿಲುಗಳನ್ನು ಹತ್ತಿ ಈ ಟ್ರೀ ಟಾಪ್ ಮನೆಗೆ ಹೋಗಿ ಫೋಟೋ ತೆಗೆಸಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ! ಪ್ರೇಮಿಗಳಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಈ ತಾಣ ಅಮಿತಾನಂದ ಕೊಡುತ್ತದೆ! 
         ಮುಂದೆ ಹೋದಂತೆ ನಮಗೆ ಪಕ್ಷಿಧಾಮ ಅಥವಾ ಬರ್ಡ್ ಪಾರ್ಕ್ ಸಿಗುತ್ತದೆ. ಇದು ಕಾವೇರಿ ನಿಸರ್ಗಧಾಮದ ಒಂದು ಮುಖ್ಯ ಆಕರ್ಷಣೆ. ಒಂದು ಪುಟ್ಟ ಶುಲ್ಕದೊಂದಿಗೆ ಗುಹಾದ್ವಾರದಂಥ ದ್ವಾರವನ್ನು ಪ್ರವೇಶಿಸಿ ಈ ಪಕ್ಷಿಧಾಮದೊಳಗೆ ಬಂದರೆ ಬಣ್ಣ ಬಣ್ಣದ ವಿದೇಶಿ ಪಕ್ಷಿಗಳ ಕಲರವಗಳು ನಮ್ಮನ್ನು ಸ್ವಾಗತಿಸುತ್ತವೆ! ಇಲ್ಲಿ ಉದ್ದ ಬಾಲದ ಅಮೇರಿಕಾದ ನೀಲಿ, ಹಳದಿ, ಕೆಂಪು ಬಣ್ಣಗಳ ಸುಂದರ ಮಕಾವ್ ಗಿಣಿಗಳು, ಹಸಿರು ಅಮೆಜಾನ್ ಗಿಣಿ, ಹಳದಿ ಕೆಂಪು ಬಣ್ಣಗಳ ಸನ್ ಕಾನ್ಯೂರ್ ಗಳೆಂಬ ಗಿಣಿ ಜಾತಿಯ ಸುಂದರ ಪಕ್ಷಿಗಳು, ಲಾರಿಕೀಟ್ ಗಳೆಂಬ ಬಣ್ಣದ ಗಿಣಿ ಜಾತಿಯ ಪಕ್ಷಿಗಳು,  ಉಷ್ಟ್ರಪಕ್ಷಿಗಳು, ಟರ್ಕಿ ಪಕ್ಷಿಗಳು, ಗೋಲ್ಡನ್ ಫೆಸೆಂಟ್, ಸಿಲ್ವರ್ ಫೆಸೆಂಟ್, ಮೊದಲಾದ ಕೋಳಿ ಜಾತಿಯ ಸುಂದರ ಪಕ್ಷಿಗಳು ಇಲ್ಲಿವೆ! ಅಂತೆಯೇ ಇಲ್ಲಿ ಇಗ್ವಾನ ಎಂಬ ಒಂದು ದೈತ್ಯ ಹಲ್ಲಿಯೂ ಇದೆ! ವಿವಿಧ ಪುಟ್ಟ ಶುಲ್ಕಗಳೊಂದಿಗೆ ನಾವು ಮಕಾವ್ ಗಿಣಿಗಳನ್ನು ಕೈಮೇಲೆ, ಹೆಗಲ ಮೇಲೆ ಕೂರಿಸಿಕೊಂಡು ಫೋಟೋ, ವಿಡಿಯೋ ತೆಗೆಸಿಕೊಳ್ಳಬಹುದು! ಕೈಗಳಲ್ಲಿ ಕಾಳುಗಳನ್ನು ಹಾಕಿಸಿಕೊಂಡು ನಿಂತರೆ, ಅನೇಕ ಸನ್ ಕಾನ್ಯೂರ್ ಪಕ್ಷಿಗಳು ಒಟ್ಟಾಗಿ ಬಂದು ನಮ್ಮ ಕೈಗಳ ಮೇಲೆ ಕುಳಿತು ಕಾಳು ತಿನ್ನುತ್ತವೆ! ಇದು ರೋಮಾಂಚನ ನೀಡುತ್ತದೆ! ಉದ್ದ ಹಿಡಿಯ ಬಟ್ಟಲಿನಲ್ಲಿ ಉಷ್ಟ್ರಪಕ್ಷಿಗಳಿಗೆ ತಿನಿಸು ನೀಡಿದಾಗ ಅವು ಜೋರಾಗಿ ಕುಟ್ಟಿ ಕುಟ್ಟಿ ತಿನ್ನುವುದು ಭಯಮಿಶ್ರಿತ ರೋಮಾಂಚನವುಂಟುಮಾಡುತ್ತದೆ! ಇಗ್ವಾನ ದೈತ್ಯ ಹಲ್ಲಿಯನ್ನು ಕೈಗಳಲ್ಲಿ ಹಿಡಿದುಕೊಳ್ಳುವುದು ಒಂದು ವಿಶೇಷ ಅನುಭವ! 
      ಮುಂದೆ ನಮಗೆ ಸಿಗುವುದು ಜಿಂಕೆವನ. ಇಲ್ಲಿ ಅನೇಕ ಚುಕ್ಕಿ ಜಿಂಕೆಗಳು ಅಥವಾ ಸ್ಪಾಟೆಡ್ ಡೀರ್ ಗಳಿವೆ. ಇವನ್ನು ಚೀತಲ್ ಗಳೆಂದು ಕರೆಯುತ್ತಾರೆ. ಕಂದು ಬಣ್ಣದ ಮೈಮೇಲೆ ಚುಕ್ಕೆಗಳಿದ್ದು ಇವು ಬಹಳ ಸುಂದರವಾಗಿರುತ್ತವೆ! ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಜಿಂಕೆಗಳಿಗೆ ಕೊಂಬುಗಳು ಮೂಡಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ! ಈ ಕೊಂಬುಗಳಿಂದ ಎರಡು ಗಂಡು ಜಿಂಕೆಗಳು ಹೆಣ್ಣಿಗಾಗಿ ಯುದ್ಧ ಮಾಡುತ್ತವೆ! ಇಲ್ಲಿ ನಾವು ಕೊಂಬುಗಳುಳ್ಳ ಗಂಡು ಜಿಂಕೆಗಳು, ಹೆಣ್ಣು ಜಿಂಕೆಗಳು ಮರಿಗಳು, ಎಲ್ಲವನ್ನೂ ನೋಡಿ ಅವುಗಳ ವರ್ತನೆಯಿಂದ ಆನಂದಿಸಬಹುದು! 
         ಇಲ್ಲಿ ತಾತ್ಕಾಲಿಕವಾಗಿ ದೋಣಿ ವಿಹಾರ ನಿಲ್ಲಿಸಿರುವಂತೆ, ಜಿಪ್ ಲೈನ್, ರೋಪ್ ವೇ, ಮೊದಲಾದ ಸಾಹಸ ಕ್ರೀಡೆಗಳೂ ಇದ್ದು , ಅವನ್ನು ಕಾರಣಾಂತರಗಳಿಂದ ನಿಲ್ಲಿಸಲಾಗಿದೆ. 
       ಕಾವೇರಿ ನಿಸರ್ಗಧಾಮ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ವರೆ ಗಂಟೆಯವರೆಗೆ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.‌ ಇಲ್ಲಿ ಉಳಿದುಕೊಳ್ಳಲು ಸುಂದರವಾದ ಕೊಠಡಿಗಳೂ ಇವೆ. ಇವುಗಳಿಗೆ ಅರಣ್ಯ ಇಲಾಖೆಯ ಮೂಲಕ ಮೊದಲೇ ನಿಗದಿಪಡಿಸಿಕೊಳ್ಳಬೇಕು. ನಿಸರ್ಗಧಾಮದ ಹೊರಗೆ ಗಾಡಿ ನಿಲುಗಡೆಯ ವ್ಯವಸ್ಥೆ ಇದೆ. ಅಂತೆಯೇ ಅನೇಕ ತಿಂಡಿ ತಿನಿಸುಗಳ ಅಂಗಡಿಗಳೂ ಹೋಟೆಲ್ ಗಳೂ ಇವೆ.‌ ಒಂದು ತಂಪಾದ ಸಂಜೆಯನ್ನು ಕಳೆಯಲು ಇದೊಂದು ಸೊಗಸಾದ ತಾಣ.ಇಲ್ಲಿಗೆ ಹೋದಾಗ ಹತ್ತಿರದಲ್ಲೇ ಇರುವ ದುಬಾರೆ ಆನೆ ಶಿಬಿರ ಹಾಗೂ ಸುಂದರವಾದ ಟಿಬೆಟ್  ಬೌದ್ಧ ಸ್ವರ್ಣ ದೇವಾಲಯವನ್ನು ವೀಕ್ಷಿಸಬಹುದು.
                                        ಡಾ.ಬಿ.ಆರ್.ಸುಹಾಸ್
                                         ಬೆಂಗಳೂರು 
      

ಕೀಟ ಜಗತ್ತು -ಬಡಗಿ ದುಂಬಿ

ಈ ಚಿತ್ರದಲ್ಲಿ ಕಾಣುತ್ತಿರುವ ದೊಡ್ಡ ದುಂಬಿ ಬಡಗಿ ದುಂಬಿ, ಅಥವಾ ಕಾರ್ಪೆಂಟರ್ ಬೀ. ಈ ಬಡಗಿ ದುಂಬಿಗಳು ದೊಡ್ಡ ದೇಹವನ್ನು ಹೊಂದಿದ್ದು ಕಪ್ಪಾಗಿರುತ್ತವೆ ಅಥವಾ ಬಹುತೇಕ ಕಪ್ಪಾಗಿರುತ್ತವೆ. ಇವು ಬಂಬಲ್ ಬೀ ಎಂಬ ಸಾಮಾನ್ಯ ದುಂಬಿಯನ್ನೇ ಹೋಲುತ್ತವೆಯಾದರೂ ಇವುಗಳ ಹೊಟ್ಟೆ ಬಹಳ ಮೃದುವಾಗಿ ರೋಮರಹಿತವಾಗಿರುತ್ತವೆ. ಕೆಲವು ಪ್ರಭೇದಗಳು ಎದೆಯ ಭಾಗದಲ್ಲಿ ಬಿಳಿ ಅಥವಾ ಹಳದಿ ರೋಮಗಳುಳ್ಳ ಮಚ್ಚೆಗಳನ್ನು ಹೊಂದಿರುತ್ತವೆ. ಕೆಲವು ಪ್ರಭೇದಗಳಲ್ಲಿ ಗಂಡುಗಳು ಬಿಳಿ ಅಥವಾ ಹಳದಿ ಮುಖ ಹಾಗೂ ದೊಡ್ಡ ಸಂಯುಕ್ತ ಕಣ್ಣುಗಳನ್ನು ಹೊಂದಿರುತ್ತವೆ.ಇವುಗಳ ರೆಕ್ಕೆಗಳು ಹೊಳೆಯುತ್ತಿರುತ್ತವೆ. ಇವುಗಳಿಗೆ ಬಡಗಿ ದುಂಬಿಗಳೆಂದು ಹೆಸರು ಬರಲು ಕಾರಣವೇನೆಂದರೆ ಇವು ಗಟ್ಟಿಯಾದ, ಸತ್ತ ಅಥವಾ ಹಳೆಯ ಮರ ಇಲ್ಲವೇ ಬಿದಿರಿನಲ್ಲಿ ಬಿಲ ಕೊರೆದು ಗೂಡು ಮಾಡುತ್ತವೆ. ಈ ಗೂಡುಗಳಲ್ಲಿ ಉದ್ದವಾದ ಸುರಂಗಗಳಿರುತ್ತವೆ. ಹೆಣ್ಣು ದುಂಬಿ ಈ ಸುರಂಗಗಳ ಪ್ರತ್ಯೇಕ ಘಟಕಗಳಲ್ಲಿ ಮೊಟ್ಟೆಗಳನ್ನಿಟ್ಟು ಸ್ವಲ್ಪ ಆಹಾರ ದಾಸ್ತಾನನ್ನೂ ಇರಿಸಿ, ಗೂಡನ್ನು ತನ್ನ ಎಂಜಲು ಹಾಗೂ ಸಸ್ಯಾಂಶದಿಂದ ಮುಚ್ಚುತ್ತದೆ. ಮರಿಗಳು ಮೊಟ್ಟೆಯೊಡೆದು ಹೊರಬಂದ ಬಳಿಕ, ಆಹಾರ ಸೇವಿಸಿ ಬೆಳೆದು, ಪ್ಯೂಪಾ ಅಥವಾ ಗೂಡು ಕಟ್ಟಿಕೊಂಡು, ವಯಸ್ಕರಾದ ಬಳಿಕ ಹೊರಬರುತ್ತವೆ. ಈ ಬಡಗಿ ದುಂಬಿಗಳು, ಕಾಡುಗಳು, ಹುಲ್ಲುಗಾವಲುಗಳು, ನಗರ ಪ್ರದೇಶಗಳು, ಮೊದಲಾಗಿ ವಿವಿಧ ಕಡೆಗಳಲ್ಲಿ , ಮುಖ್ಯವಾಗಿ ಪರಾಗ ಮತ್ತು ರಸವುಳ್ಳ ಹೂವುಗಳು ಹೆಚ್ಚಾಗಿರುವಲ್ಲಿ ಕಂಡುಬರುತ್ತವೆ. ಹೆಣ್ಣು ದುಂಬಿಯು ಮಾತ್ರ ಸ್ಟಿಂಗರ್ ಅಥವಾ ಕುಟುಕುವ ಅಂಗವನ್ನು ಹೊಂದಿರುತ್ತದೆ. ಅದು ಮೊಟ್ಟೆಗಳನ್ನಿಡುವ ಓವಿಪಾಸಿಟರ್ ಅಂಗದ ಮಾರ್ಪಾಟಾಗಿದೆ. ಬಡಗಿ ದುಂಬಿಗಳು ಜೇನನ್ನು ಉತ್ಪತ್ತಿ ಮಾಡುವುದಿಲ್ಲ. ಇವು ಕೆಣಕದೇ ಕುಟುಕುವುದಿಲ್ಲ. ಈ ಬಡಗಿ ದುಂಬಿಗಳಲ್ಲಿ , ವೈಯೊಲೆಟ್ ಕಾರ್ಪೆಂಟರ್ ಬೀ, ಬ್ರಾಡ್ ಹ್ಯಾಂಡೆಡ್ ಕಾರ್ಪೆಂಟರ್ ಬೀ ಮೊದಲಾದ ಹಲವಾರು ಪ್ರಭೇದಗಳಿವೆ.

ಕೀಟ ಜಗತ್ತು - ಬ್ಲಿಸ್ಬರ್ ಬೀಟಲ್


ಗೋಪೀನಾಥಂ ಹಳ್ಳಿಯಲ್ಲಿ ಸುತ್ತಾಡುತ್ತಾ ವೀರಪ್ಪನ್ ಪೂಜಿಸುತ್ತಿದ್ದ ಎನ್ನಲಾದ ಮುನೀಶ್ವರ ಸ್ವಾಮಿಯ ವಿಗ್ರಹದ ಬಳಿ ಬಂದು ಫೋಟೋ ತೆಗೆಯುತ್ತಿದ್ದೆ.ಅದು ಒಂದು ಪುಟ್ಟ ಗುಡ್ಡದ ಮೇಲಿತ್ತು.ಎದುರಿಗೆ ಗೋಪೀನಾಥಂ ಕೆರೆ, ಮತ್ತು ಹಸಿರು ಪ್ರಕೃತಿ ಸೌಂದರ್ಯ ಅವರ್ಣನೀಯವಾಗಿತ್ತು! ಸುತ್ತಮುತಲೂ ಗಿಡಗಳ ಮೇಲೆ ಅನೇಕ ಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು! ಆಗ ಒಂದು ಬಣ್ಣಬಣ್ಣದ ಕೀಟ ಮನಸೆಳೆಯಿತು! ಕೆಂಪು ಮತ್ತು ಕಪ್ಪು ಪಟ್ಟಿಗಳ ಆ ಸುಂದರ ಕೀಟ ಗಿಡದ ಎಲೆಯನ್ನು ಮೆಲ್ಲನೆ ಮೆಲ್ಲುತ್ತಿತ್ತು! ಅದೇ ಬ್ಲಿಸ್ಟರ್ ಬೀಟಲ್! ಕನ್ನಡದಲ್ಲಿ ಬೊಬ್ಬೆಯ ಜೀರುಂಡೆ ಎಂದು ಅನುವಾದಿಸಬಹುದು.ನೋಡಲು ಇದು ಎಷ್ಟು ಸುಂದರವೋ ಅಷ್ಟೇ ಭಯಂಕರವಾಗಿರುತ್ತದೆ ಇದು! ಇದರ ಸಹವಾಸಕ್ಕೆ ಹೋದರೆ ಅಥವಾ ಕಿರುಕುಳ ಕೊಟ್ಟರೆ ಇದು ಕ್ಯಾಂಥರಡಿನ್ ಎಂಬ ದ್ರವವನ್ನು ಉತ್ಪತ್ತಿ ಮಾಡುತ್ತದೆ! ಆಗ ದ್ರವ ಚರ್ಮದ ಮೇಲೆ ಬಿದ್ದರೆ ಅಪಾರ ನೋವಿನ ಬೊಬ್ಬೆಗಳಾಗುತ್ತವೆ! ಆದ್ದರಿಂದಲೇ ಇದಕ್ಕೆ ಬ್ಲಿಸ್ಟರ್ ಬೀಟಲ್ ಎಂಬ ಹೆಸರು ಬಂದಿದೆ! ಇದು ತನ್ನ ರಕ್ಷಣೆಗಾಗಿ ರೂಪಿಸಿಕೊಂಡಿರುವ ವಿಧಾನ.ಇದು ಕೆಂಪು ಮತ್ತು ಕಪ್ಪು ಪಟ್ಟಿಗಳ ಪ್ರಕಾಶಮಾನವಾದ ಬಣ್ಣಗಳನ್ನು ಹೊಂದಿರುವುದೂ ಈ ಕಾರಣಕ್ಕಾಗಿಯೇ! ಪ್ರಕಾಶಮಾನವಾದ ಬಣ್ಣಗಳು, ವಿಷಕಾರಿಯಾದ ಇಲ್ಲವೇ ನೋವುಂಟುಮಾಡುವ ದ್ರವಗಳು, ಮುಳ್ಳುಗಳು, ಕೆಟ್ಟ ರುಚಿ ಮತ್ತು ವಾಸನೆ, ಇವುಗಳ ಮೂಲಕ ಕೆಲವು ಪ್ರಾಣಿಗಳು ತಾವು ಬೇಟೆಯಾಡಲು ಹಾಗೂ ತಿನ್ನಲು ಸೂಕ್ತವಲ್ಲ ಎಂದು ತೋರಿಸುತ್ತವೆ! ಇದನ್ನು ಅಪೋಸೆಮ್ಯಾಟಿಸಂ ಎನ್ನುತ್ತಾರೆ.
     ಈ ಬ್ಲಿಸ್ಟರ್ ಬೀಟಲ್ ಗಳು ಮೆಲೋಯ್ಡೇ ಎಂಬ ಕುಟುಂಬಕ್ಕೆ ಸೇರುತ್ತವೆ.ಪ್ರಪಂಚದಾದ್ಯಂತ ಸುಮಾರು ಏಳೂವರೆ ಸಾವಿರ ಪ್ರಭೇದಗಳಿವೆಯೆಂದು ತಿಳಿದುಬಂದಿದೆ. ಈ ಚಿತ್ರದಲ್ಲಿ ಕಾಣುತ್ತಿರುವ ಬ್ಲಿಸ್ಟರ್ ಬೀಟಲ್ ನ ವೈಜ್ಞಾನಿಕ ಹೆಸರು, ಹೈಕ್ಲಿಯಸ್ ಪಸ್ಟುಲೇಟಸ್. ಇದು, ಭಾರತ, ಚೀನಾ, ಜಾವಾ, ಶ್ರೀಲಂಕಾಗಳಲ್ಲಿ ಕಂಡುಬರುತ್ತದೆ. ಹೈಕ್ಲಿಯಸ್ ಎಂಬ ಗುಂಪಿನಲ್ಲಿ ಸುಮಾರು ನಾನ್ನೂರು ಪ್ರಭೇದಗಳಿವೆಯೆಂದು ತಿಳಿದುಬಂದಿದೆ. ಇವು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಕಂಡುಬರುತ್ತವೆ.
     ಈ ಬ್ಲಿಸ್ಟರ್ ಬೀಟಲ್ ಗಳನ್ನು ಹೈಪರ್ ಮೆಟಮಾರ್ಫಿಕ್ ಎಂದು ವರ್ಣಿಸಲಾಗುತ್ತದೆ.ಅಂದರೆ ಇವು ಮರಿಗಳಾಗಿರುವಾಗ ಹಲವು ಹಂತಗಳಲ್ಲಿ ಸಾಗಿಹೋಗುತ್ತವೆ ಎಂದು ಅರ್ಥ.ಮೊದಲ ಹಂತದಲ್ಲಿ ಇವು ಚಲಿಸುವಂತಿದ್ದು ಇವನ್ನು ಟ್ರೈಯಂಗುಲಿನ್ ಲಾರ್ವೆಗಳೆಂದು ಕರೆಯುತ್ತಾರೆ.ಇದರ ಅರ್ಥ, ಮೂರು ಪಂಜುಗಳುಳ್ಳ ಮರಿಗಳು ಎಂದು.ಇವು ಏಫಿಡ್ ಅಥವಾ ಸಸ್ಯ ತಿಗಣೆ ಮೊದಲಾದ ಇತರ ಪುಟ್ಟ ಕೀಟಗಳನ್ನು ತಿನ್ನುತ್ತವೆ ಅಥವಾ ಕುದುರೆಹುಳುಗಳ ಮೊಟ್ಟೆಗಳನ್ನು ತಿನ್ನುತ್ತವೆ.ಅತಿಥಿ ಕೀಟ ಸಿಕ್ಕಾಗ ಅದರ ದೇಹದ ಮೇಲೆ ಅಥವಾ ಒಳಗೆ ನೆಲೆಸಿ ತನ್ನ ಕಾಲುಗಳನ್ನು ಕಳಚಿ ಎರಡನೆಯ ಹಂತಕ್ಕೆ ಹೋಗುತ್ತವೆ.ಆಗ ಇವು ಆ ಕೀಟಗಳನ್ನು ಅಥವಾ ಅವುಗಳ ಆಹಾರವನ್ನು ತಿನ್ನುತ್ತವೆ. ಹೀಗೆ ಇವು ಆಂಶಿಕ ಪರಾವಲಂಬಿಗಳಾಗಿ ಬದುಕುತ್ತವೆ.ಇಂಥ ಆಂಶಿಕ ಪರಾವಲಂಬಿಗಳನ್ನು ಕ್ಲೆಪ್ಟೋಪ್ಯಾರಾಸೈಟ್, ಅಂದರೆ ಕಳ್ಳ ಪರಾವಲಂಬಿಗಳೆನ್ನುತ್ತಾರೆ.ಅನಂತರ ಗೂಡು ಅಥವಾ ಪ್ಯೂಪ ಕಟ್ಟಿಕೊಂಡು ವಯಸ್ಕ ಕೀಟವಾಗಿ ಹೊರಬರುತ್ತವೆ.ವಯಸ್ಕ ಕೀಟಗಳು ವಿವಿಧ ಗಿಡಗಳ ಎಲೆ ಅಥವಾ ಹೂವುಗಳನ್ನು ಸೇವಿಸುತ್ತವೆ.ಹೀಗೆ ಮರಿಗಳು ಸಸ್ಯಗಳನ್ನು ನಾಶ ಮಾಡುವ ಕೀಟಗಳನ್ನು ತಿಂದು ನಮಗೆ ಉಪಕಾರಿಗಳಾದರೆ, ವಯಸ್ಕ ಕೀಟಗಳು ಹೂವುಗಳನ್ನು ತಿಂದು ತೊಂದರೆಯುಂಟುಮಾಡುತ್ತವೆ.
       ಆಗಲೇ ಹೇಳಿದಂತೆ ಈ ಬ್ಲಿಸ್ಟರ್ ಬೀಟಲ್ ಗಳು ಕ್ಯಾಂಥರಡಿನ್ ಎಂಬ ದ್ರವವನ್ನು ತನ್ನ ರಕ್ಷಣೆಗಾಗಿ ಉತ್ಪತ್ತಿ ಮಾಡುತ್ತದೆ.ಈ ದ್ರವವನ್ನು ನರೂಲಿಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಸ್ಪ್ಯಾನಿಶ್ ಫ್ಲೈ ಎಂದು ಹೆಸರಾದ ಒಂದು ವಿಶೇಷ ಪ್ರಭೇದ ಹಾಗೂ ಇತರ ಕೆಲವು ಪ್ರಭೇದಗಳಿಂದ ಈ ದ್ರವವನ್ನು ಸಂಗ್ರಹಿಸಲಾಗುತ್ತದೆ.
      ಈ ಬ್ಲಿಸ್ಟರ್ ಬೀಟಲ್ ಗಳಲ್ಲಿ ಅತ್ಯಂತ ದೊಡ್ಡ ಗುಂಪಾದ ಎಪಿಕಾಟದಲ್ಲಿ ಅನೇಕ ಪ್ರಭೇದಗಳಿದ್ದು ಅವು ಕುದುರೆಗಳಿಗೆ ವಿಷಕಾರಿಯಾಗಿವೆ! ಅಲ್ಫಾಲ್ಫಾ ಎಂಬ ಹುಲ್ಲನ್ನು ಸೇವಿಸುವಾಗ ಕುದುರೆಗಳು ಒಂದಿಷ್ಟು ಈ ಬ್ಲಿಸ್ಟರ್ ಬೀಟಲ್ ಗಳನ್ನು ಸೇವಿಸಿಬಿಟ್ಟರೆ ಜೀವಕ್ಕೇ ಅಪಾಯವಾಗಬಹುದು! ಬ್ಲಿಸ್ಟರ್ ಬೀಟಲ್ ಗಳು ಈ ಅಲ್ಫಾಲ್ಫಾ ಹುಲ್ಲಿಗೆ ಮತ್ತು ಕಳೆಗಳಿಗೆ ಹೂ ಬಿಡುವಾಗ ಆಕರ್ಷಿತವಾಗುತ್ತವೆ! ಪಶ್ಚಿಮ ಅಮೇರಿಕಾದಲ್ಲಿ ಹೊಸ ಬಗೆಯ ಕೊಯ್ಲಿನ ರೀತಿ, ಬೀಟಲ್ ಗಳನ್ನು ಜಜ್ಜಿ ಕ್ಯಾಂಥರಡಿನ್ ಬಿಡುಗಡೆಯಾಗಲು ಅನುವು ಮಾಡಿಕೊಟ್ಟು ಈ ಸಮಸ್ಯೆಗೆ ಕಾರಣವಾಗುತ್ತದೆ. ಕಳೆಗಳನ್ನು ಕಡಿಮೆ ಮಾಡುವುದು ಹಾಗೂ ಹೂ ಬಿಡುವ ಮೊದಲು ಅಥವಾ ಅನಂತರ ಕೊಯ್ಲು ಮಾಡುವುದರಿಂದ ಬೀಟಲ್ ಗಳನ್ನು ಕಡಿಮೆಗೊಳಿಸಬಹುದು.ಹುಲ್ಲನ್ನು ಜಜ್ಜದಂಥ ಸಲಕರಣೆಗಳನ್ನು ಬಳಸುವುದರಿಂದಲೂ ಅದನ್ನು ಗುಡ್ಡೆ ಮಾಡುವ ಮೊದಲು ಬೀಟಲ್ ಗಳು ತಪ್ಪಿಸಿಕೊಳ್ಳುವಂತಾಗಿ ಈ ಸಮಸ್ಯೆಯನ್ನು ನೀಗಬಹುದು.
      ಹೀಗೆ ಬ್ಲಿಸ್ಟರ್ ಬೀಟಲ್ ಗಳದು ಒಂದು ಕೌತುಕಮಯ ಕೀಟಜಗತ್ತು.
       
      

ತುರಿಕೆ -ಕಾರಣ ಮತ್ತು ಪರಿಹಾರ

ಸಾಮಾನ್ಯವಾಗಿ ರೋಗಿಗಳು ವೈದ್ಯರ ಬಳಿ ಹೋಗುವುದು ಏನಾದರೂ ತೊಂದರೆಯಾದಾಗ. ಸಾಮಾನ್ಯವಾಗಿ ದೈಹಿಕ ಕಾಯಿಲೆಗಳು ಅಥವಾ ಸಮಸ್ಯೆಗಳಲ್ಲಿ ಮುಖ್ಯವಾದ ತೊಂದರೆಯೆಂದರೆ ನೋವು.ಈ ನೋವಿನ ಪರಿಹಾರಕ್ಕಾಗಿಯೇ ರೋಗಗಳು ವೈದ್ಯರ ಬಳಿಗೆ ಹೋಗುತ್ತಾರೆ.ಹಾಗೆಯೇ ಚರ್ಮದ ವಿಷಯಕ್ಕೆ ಬಂದರೆ, ಚರ್ಮರೋಗಗಳು ಮತ್ತು ಸಮಸ್ಯೆಗಳಲ್ಲಿ ಮುಖ್ಯವಾದ ತೊಂದರೆ ಅಥವಾ ಲಕ್ಷಣವೆಂದರೆ ನವೆ ಅಥವಾ ತುರಿಕೆ.ನಾವು ಕೆರೆದುಕೊಳ್ಳುವಂತೆ ಪ್ರೇರೇಪಿಸುವ ಸಂವೇದನೆಯೇ ತುರಿಕೆ.ಈ ತುರಿಕೆ ಒಂದು ಸರಳವಾದ ಸಮಸ್ಯೆಯೆನಿಸಿದರೂ ಇದರ ದುಷ್ಪರಿಣಾಮಗಳು ಬಹಳ.ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದಕ್ಕೆ ಕಷ್ಟವಾಗುವುದು, ನಿದ್ರೆಗೆ ತೊಂದರೆಯಾಗುವುದು, ಏಕಾಗ್ರತೆಗೆ ಭಂಗವಾಗುವುದು, ಕೆರೆಯುವುದರಿಂದ ಗಾಯಗಳಾಗಿ ಸೋಂಕು,ವ್ರಣಗಳಾಗುವುದು, ಕೊನೆಗೆ ದೀರ್ಘಾವಧಿ ತುರಿಕೆಯಾದರೆ ದು:ಖ, ಖಿನ್ನತೆಗಳೂ ಆಗಬಹುದು.ಹಾಗಾಗಿ ಈ ತುರಿಕೆಯನ್ನು ಬೇಗನೆ ಪರಿಹರಿಸಿಕೊಳ್ಳುವುದು ಅತ್ಯಗತ್ಯ.ಈಗ ಚರ್ಮದ ತುರಿಕೆಗೆ ಸಾಮಾನ್ಯ ಕಾರಣಗಳು ಮತ್ತು ಪರಿಹಾರಗಳನ್ನು ನೋಡೋಣ.
ಕೀಟಗಳ ಕಚ್ಚುವಿಕೆ: ತುರಿಕೆಗೆ ಬಹಳ ಸಾಮಾನ್ಯವಾದ ಕಾರಣ ಸೊಳ್ಳೆ ಮೊದಲಾದ ಕೀಟಗಳ ಕಚ್ಚುವಿಕಯೇ ಎನ್ನಬಹುದು.ಆದರೆ ಎಷ್ಟೋ ಬಾರಿ ಜನರು ಇದನ್ನು ಸುಲಭವಾಗಿ ಒಪ್ಪುವುದಿಲ್ಲ.ಕೆರೆತ ಹಾಗೂ ಕೆರೆತದಿಂದಾಗಿರುವ ಗಾಯಗಳು ಅಥವಾ ಗುಳ್ಳೆಗಳು ಬಟ್ಟೆ ಮುಚ್ಚಿರದ ತೆರೆದ ಪ್ರದೇಶಗಳು, ಅಂದರೆ ಕೈಗಳು, ಮುಖ, ಕುತ್ತಿಗೆ,ಕಾಲುಗಳು, ಇಂಥ ಕಡೆಗಳಲ್ಲಾಗಿದ್ದರೆ ಹಾಗೂ ದೂರ ದೂರ ಆಗಿದ್ದರೆ ಅದು ಕೀಟಗಳ ಕಚ್ಚುವಿಕೆ ಎಂದು ದೃಢಪಡಿಸಬಹುದು.ಸಮಸ್ಯೆ ಆರಂಭವಾದ ಸ್ವಲ್ಪ ಪೂರ್ವದಲ್ಲಿ ಅವರು ಉದ್ಯಾನವನ, ಅರಣ್ಯ ಪ್ರದೇಶ, ಮೊದಲಾದ ಕೀಟಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿಯಿತ್ತಿದ್ದರೆ ಇದರ ಸಾಧ್ಯತೆ ಹೆಚ್ಚು.ಒಣ ಚರ್ಮ ಮತ್ತು ಸೂಕ್ಷ್ಮತೆಯಿರುವವರಿಗೆ ತುರಿಕೆ ಹೆಚ್ಚಾಗಿ ಹೆಚ್ಚು ದಿನಗಳೂ ಮುಂದುವರೆಯುತ್ತದೆ.ಒಂದು ಪ್ರದೇಶದಲ್ಲಿ ಸೊಳ್ಳೆಗಳ ಪ್ರಭೇದಗಳಿಗೆ ಒಗ್ಗಿರುವವರು ಬೇರೆ ಪ್ರದೇಶ ಅಥವಾ ಊರಿಗೆ ಹೋದರೆ ಅಲ್ಲಿನ ಸೊಳ್ಳೆಗಳ ಪ್ರಭೇದಗಳ ಕಚ್ಚುವಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ ಆಗಲೂ ಈ ಸಮಸ್ಯೆಯಾಗುತ್ತದೆ.
ಕಜ್ಜಿ: ಕಜ್ಜಿ ಅಥವಾ ಸ್ಕೇಬೀಸ್ ಬಹಳ ಸಾಮಾನ್ಯವಾದ ಒಂದು ಚರ್ಮರೋಗ.ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಅತಿ ಸನಿಹವಿರುವ ಗುಂಪುವಾಸ ಮಾಡುವವರಲ್ಲಿ ಕಂಡುಬರುವ, ಅಂಟುರೋಗವಾದ ಇದು ಸಾರ್ಕೋಪ್ಟೆಸ್ ಸ್ಕೇಬೀ ಎಂಬ ಪರಾವಲಂಬಿ ಕೀಟದಿಂದ ಬರುತ್ತದೆ.ಬೆರಳುಸಂದುಗಳು, ಮೊಣಕೈ, ಕಂಕುಳು, ಹೊಕ್ಕಳು, ತೊಡೆಗಳು, ಗುಪ್ತಾಂಗಗಳಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ವಿಪರೀತವಾಗಿ ಅದರಲ್ಲೂ ರಾತ್ರಿ ಹೆಚ್ಚು ತುರಿಸುತ್ತದೆ.
ಫಂಗಸ್ ರೋಗಗಳು: ಫಂಗಸ್ ರೋಗಗಳು ಅತ್ಯಂತ ಸಾಮಾನ್ಯವಾಗಿ ಉಂಟಾಗುವ, ಒಬ್ಬರಿಂದೊಬ್ಬರಿಗೆ ಹರಡುವ ರೋಗಗಳು.ಗಜಕರ್ಣ, ಹುಳುಕಡ್ಡಿ ಎಂದೆಲ್ಲಾ ಕರೆಯಲಾಗುವ ಇವನ್ನು ಆಂಗ್ಲಭಾಷೆಯಲ್ಲಿ ಟೀನಿಯಗಳೆಂದು ಕರೆಯುತ್ತಾರೆ.ತೊಡೆಸಂದಿಯಲ್ಲಾದರೆ ಟೀನಿಯ ಕ್ರೂರಿಸ್ ( Tinea cruris), ದೇಹದ ಮೇಲಾದರೆ ಟೀನಿಯ ಕಾರ್ಪೋರಿಸ್ ( Tinea corporis), ಹೀಗೆ ದೇಹದ ವಿವಿಧ ಭಾಗಗಳಿಗೆ ತಕ್ಕಂತೆ ಕರೆಯಲಾಗುತ್ತದೆ.ಫಂಗಸ್ ಅಥವಾ ಶಿಲೀಂಧ್ರಗಳೆಂಬ ಸೂಕ್ಷ್ಮ ಜೀವಿಗಳಿಂದ ಉಂಟಾಗುವ ಇವುಗಳಲ್ಲಿ ಕೆಂಪಾದ, ಅಂಚಿನಲ್ಲಿ ಪದರಗಳಿರುವ ಮಚ್ಚೆಗಳಾಗಿ ಬಹಳ ತುರಿಸುತ್ತವೆ.ಒದ್ದೆ ವಾತಾವರಣ, ಅಶುಚಿತ್ವ ಇವು ಆಗಲು ಪ್ರೋತ್ಸಾಹಿಸುತ್ತವೆ.ನಮ್ಮ ದೇಹದಲ್ಲೇ ಇರುವ ಕ್ಯಾಂಡಿಡಾ ಎಂಬ ಫಂಗಸ್ ನಿಂದ ಗುಪ್ತಾಂಗಗಳಲ್ಲಿ ಕೆಂಪು ಮಚ್ಚೆಗಳು ಮತ್ತು ತುರಿಕೆಗಳಾಗುವ ಕ್ಯಾಂಡಿಡಿಯಾಸಿಸ್ ರೋಗವಾಗಬಹುದು.ಅಶುಚಿತ್ವ ಮತ್ತು ಒದ್ದೆ ವಾತಾವರಣಗಳಿಂದ ಈ ಫಂಗಸ್ ಹೆಚ್ಚಿ ಹೀಗಾಗುತ್ತದೆ.
ಅರ್ಟಿಕೇರಿಯ: ತುರಿಸುವ, ಅಲ್ಪ ಕಾಲಾವಧಿಯವರೆಗೂ ಇದ್ದು ಮತ್ತೆ ಮತ್ತೆ ಬರುವ ಕೆಂಪು ಗಂಧೆಗಳಿಗೆ ಅರ್ಟಿಕೇರಿಯ ಎನ್ನುತ್ತಾರೆ. ಇದು ಅಲರ್ಜಿ ಅಥವಾ ಒಗ್ಗದಿರುವಿಕೆಯಿಂದ ಆಗುತ್ತದೆ.ಅಂದರೆ, ಕೆಲವು ಪದಾರ್ಥಗಳಿಗೆ ದೇಹವು ಒಗ್ಗದೇ, IgE ಎಂಬ ಆಂಟಿಬಾಡಿಗಳು ಉತ್ಪತ್ತಿಯಾಗಿ ಅವುಗಳ ಪ್ರಚೋದನೆಯಿಂದ ಮಾಸ್ಟ್ ಸೆಲ್ ಮತ್ತು ಬೇಸೋಫಿಲ್ ಗಳೆಂಬ ಕೋಶಗಳಿಂದ ಹಿಸ್ಟಮಿನ್ ಎಂಬ ರಾಸಾಯನಿಕ ಬಿಡುಗಡೆಯಾಗಿ ರಕ್ತಸಂಚಾರ ಹೆಚ್ಚುವುದು ಹಾಗೂ ನರಗಳ ಪ್ರಚೋದನೆಯಾಗಿ ಕೆಂಪು ಗಂಧೆಗಳು ಮತ್ತು ತುರಿಕೆಯಾಗುತ್ತದೆ.ಆಹಾರ ಪದಾರ್ಥಗಳು, ಔಷಧಿಗಳು, ಹೂವುಗಳ ಪರಾಗ, ಕರುಳಿನಲ್ಲಿರುವ ಜಂತುಹುಳುಗಳು, ದೈಹಿಕ ಸೋಂಕುಗಳಿಗೆ ಕಾರಣವಾಗುವ ರೋಗಾಣುಗಳು, ಕೀಟಗಳ ಕಚ್ಚುವಿಕೆ, ಕೂದಲಿಗೆ ಬಳಸುವ ಹೇರ್ ಡೈ ಮೊದಲಾದ ಸ್ಪರ್ಶದ ವಸ್ತುಗಳು, ಮುಂತಾದವುಗಳಿಗೆ ಅಲರ್ಜಿಯಾಗಬಹುದು.ಅಂತೆಯೇ ಬಿಸಿಲು, ಚಳಿಯಂಥ ಭೌತಿಕ ಅಂಶಗಳಿಂದಲೂ ಅರ್ಟಿಕೇರಿಯ ಆಗಬಹುದು.
ಔಷಧಿಗಳ ಅಲರ್ಜಿ: ಕೆಲವು ಔಷಧಿಗಳ ಸೇವನೆಯಿಂದ ಕೆಲವರಿಗೆ ಅಲರ್ಜಿಯಾಗಿ ಕೆಂಪಾದ ಸಣ್ಣ ಗುಳ್ಳೆಗಳು ಮತ್ತು ನವೆಯುಂಟಾಗುತ್ತವೆ.ಇದು ಅರ್ಟಿಕೇರಿಯ ಅಲ್ಲದೇ ಬೇರೆ ರೀತಿ ಕಾಣಿಸಿಕೊಳ್ಳುವ ಔಷಧ ಅಲರ್ಜಿ.
ಇಸುಬು: ಇಸುಬು ಅಥವಾ ಎಗ್ಸೆಮ ತುರಿಕೆಯ ಒಂದು ಸಾಮಾನ್ಯ ಸಮಸ್ಯೆ.ಚರ್ಮದುರಿತವಾಗುವುದರಿಂದ ಈಗ ಇದನ್ನು ಡರ್ಮಟೈಟಿಸ್ ಎನ್ನುತ್ತಾರೆ.ಇದರಲ್ಲಿ ಹೊರಜನಿತ ಮತ್ತು ಒಳಜನಿತ ಎಂಬ ಎರಡು ವಿಧಗಳಿವೆ.ಹೊರಜನಿತ ಬಗೆ, ಕೆಲವು ವಸ್ತುಗಳ ಸ್ಪರ್ಶದಿಂದ ಆಗುವ ಅಲರ್ಜಿಯಿಂದ ಆಗುತ್ತದೆ.ಉದಾಹರಣೆಗೆ ಕುಂಕುಮದ ಅಲರ್ಜಿ, ಸರ,ಬಳೆ ಇತ್ಯಾದಿ ಆಭರಣಗಳ ಅಲರ್ಜಿ, ಬಟ್ಟೆ ಒಗೆಯುವ ಸಾಬೂನಿನ ಹಾಗೂ ಪಾತ್ರೆ ತೊಳೆಯುವ ಪುಡಿಯ ಅಲರ್ಜಿ ಮೊದಲಾದವು. ಇದನ್ನು ಸ್ಪರ್ಶದ ಅಲರ್ಜಿ ಅಥವಾ ಕಾಂಟ್ಯಾಕ್ಟ್ ಡರ್ಮಟೈಟಿಸ್ ಎನ್ನುತ್ತಾರೆ.ಬಿಸಿಲಿನ ಅಲರ್ಜಿಯೂ ಈ ಬಗೆಯದ್ದೇ ಆಗಿದೆ.ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳಿಂದ ಈ ಅಲರ್ಜಿ ಆಗುತ್ತದೆ.ಇದನ್ನು ಫೋಟೋಡರ್ಮಟೈಟಿಸ್ ಎನ್ನುತ್ತಾರೆ. ಅಂತೆಯೇ ಬ್ಯಾಕ್ಟೀರಿಯಾ ಮುಂತಾದ ರೋಗಾಣುಗಳಿಂದ ಸೋಂಕಾಗಿ ಇಸುಬಾಗಬಹುದು. ಒಳಜನಿತ ಬಗೆಯಲ್ಲಿ ಇಸುಬಿಗೆ ಕಾರಣವಾಗುವ ದೋಷಗಳು ವ್ಯಕ್ತಿಯಲ್ಲೇ ಇರುತ್ತವೆ.ಒಣಚರ್ಮ ಅಂಥ ಒಂದು ದೋಷ.ಒಣಚರ್ಮದಿಂದ ನವೆಯಾಗಿ ಕೆರೆದು ಇಸುಬಾಗಬಹುದು.ವೇರಿಕೋಸ್ ವೇಯ್ನ್ಸ್ ಸಮಸ್ಯೆಯಲ್ಲಿ ಕಾಲಿನ ಅಪಧಮನಿಗಳು ಉಬ್ಬಿ ರಕ್ತ ಸಂಚಾರ ನಿಧಾನವಾಗಿ ಚರ್ಮಕ್ಕೆ ಪೋಷಣೆ ಸಿಗದೇ ಇಸುಬಾಗಬಹುದು.ಬಹಳ ಹೊತ್ತು ನಿಂತು ಕೆಲಸ ಮಾಡುವುದರಿಂದ ಈ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಸಣ್ಣ ಕಾರಣಗಳಿಂದ ನವೆಯು ಆರಂಭವಾಗಿ ಮಾನಸಿಕ ಒತ್ತಡದಿಂದ ಹೆಚ್ಚು ಕೆರೆಯುತ್ತಾ ಗಟ್ಟಿಯಾದ ಗುಳ್ಳೆಗಳು ಇಲ್ಲವೇ ಮಚ್ಚೆಗಳಾಗಿ ಇನ್ನಷ್ಟು ನವೆಯಾಗುತ್ತದೆ.ನವೆ- ಕೆರೆತ-ನವೆ, ಹೀಗೊಂದು ವಿಷವರ್ತುಲದಂತಾಗುತ್ತದೆ.
ಎಟೋಪಿಕ್ ಡರ್ಮಟೈಟಿಸ್: ಇದೊಂದು ಸಾಮಾನ್ಯ ತೊಂದರೆ.ಚರ್ಮದ ಸೂಕ್ಷ್ಮತೆಯಿಂದ ಇದು ಉಂಟಾಗುತ್ತದೆ.ಎರಡು ವರ್ಷದೊಳಗಿನ ಮಕ್ಕಳಲ್ಲಿ ಮುಖ ಮತ್ತು ಕೈಕಾಲುಗಳಲ್ಲಿ ಕೆಂಪು ಮಚ್ಚೆಗಳಾದರೆ ಅನಂತರದ ವಯೋಮಾನದ ಮಕ್ಕಳಿಗೆ ಹಾಗೂ ಯುವಕರಲ್ಲಿ ತೋಳಿನ ಮತ್ತು ಕಾಲಿನ ಹಳ್ಳಗಳಲ್ಲಿ ಗಟ್ಟಿಯಾದ ತುರಿಸುವ ಮಚ್ಚೆಗಳಾಗುತ್ತವೆ.ವಯಸ್ಕರಾದಂತೆ ಇದು ನಿಧಾನವಾಗಿ ಕಡಿಮೆಯಾಗುತ್ತದೆ.ಕೆಲವೊಮ್ಮೆ ಯಾವುದೇ ಮಚ್ಚೆಗಳಿರದೇ ಬರಿದೇ ತುರಿಕೆಯಾಗುತ್ತದೆ. ಚಳಿ, ಧೂಳು,ಒಣಚರ್ಮ,ಪುಷ್ಪಗಳ ಪರಾಗ, ಮತ್ತು ಕೆಲವು ಆಹಾರ ಪದಾರ್ಥಗಳು, ಇದನ್ನು ಉದ್ರೇಕಿಸುತ್ತದೆ. 
ಸೋರಿಯಾಸಿಸ್: ರೋಗನಿರೋಧಕ ಶಕ್ತಿ ಚರ್ಮವನ್ನು ಉದ್ರೇಕಿಸಿ ಅದು ಉರಿತಕ್ಕೊಳಗಾಗುವ ಹಾಗೂ ಹೆಚ್ಚಾಗಿ ಬೆಳೆಯುವ ಒಂದು ಚರ್ಮರೋಗ ಸೋರಿಯಾಸಿಸ್.ಇದರಲ್ಲಿ ಬಿಳಿಯ ಪದರಗಳಿರುವ ಕೆಂಪಾದ ಮಚ್ಚೆಗಳು ಆಗುತ್ತವೆ.ಇವು ಸಾಮಾನ್ಯವಾಗಿ ತುರಿಸದಿದ್ದರೂ ಮಚ್ಚೆಗಳನ್ನು ಕಿತ್ತುವುದು, ಒಣಚರ್ಮ, ಕೆಲವರಲ್ಲಿ ತುರಿಕೆಯುಂಟುಮಾಡುತ್ತವೆ.ಚಳಿ, ಒಣಚರ್ಮ, ದೈಹಿಕ ಹಾಗೂ ಮಾನಸಿಕ ಒತ್ತಡಗಳು,ಧೂಮಪಾನ ಮತ್ತು ಮದ್ಯಪಾನಗಳು ಈ ರೋಗವನ್ನು ಹೆಚ್ಚಿಸುತ್ತವೆ.ಇದನ್ನು ಸಂಪೂರ್ಣ ಗುಣಪಡಿಸಲಾಗದಿದ್ದರೂ ನಿಯಂತ್ರಿಸಬಹುದು.
ಒಣಚರ್ಮ: ಕೆಲವೊಮ್ಮೆ ಯಾವುದೇ ಚರ್ಮರೋಗವಿರದಿದ್ದರೂ ಕೇವಲ ಒಣಚರ್ಮದಿಂದಲೇ ತುರಿಕೆಯಾಗುತ್ತದೆ.ಒಣಚರ್ಮದಿಂದ ಚರ್ಮದ ಸಮಗ್ರತೆಗೆ ತೊಂದರೆಯಾಗಿ ಕಿರಿಕಿರಿಯಾಗುತ್ತಾ ನವೆಯಾಗುತ್ತದೆ.ವಯಸ್ಸು ಹೆಚ್ಚಾದಂತೆ ಚರ್ಮದಲ್ಲಿ ಕೊಲ್ಯಾಜೆನ್ ಅಂಶ ಕಡಿಮೆಯಾಗಿ ಒಣಗುತ್ತಾ ತುರಿಕೆಯಾಗುತ್ತದೆ.ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಇಕ್ಥಿಯೋಸಿಸ್ ಎಂಬ ಕಾಯಿಲೆಯಿದ್ದು ಇದರಲ್ಲಿ ಸತ್ತ ಚರ್ಮ ಹೋಗದೇ ಗಟ್ಟಿಯಾಗಿ ಮೀನಿನ ಚರ್ಮದಂತೆ ಕಾಣುತ್ತದೆ.ಇದೂ ತುರಿಸುತ್ತದೆ.ವಯಸ್ಕರಾದಂತೆ ಇದು ಕಡಿಮೆಯಾಗುತ್ತದೆ.ಕೆಲವರಿಗೆ ಇದು ವೃದ್ಧಾಪ್ಯದಲ್ಲಿ ಬರುತ್ತದೆ ಹಾಗೂ ಕೆಲವು ಔಷಧಿಗಳ ಸೇವನೆಯಿಂದ ದುಷ್ಪರಿಣಾಮವಾಗಿ ಆಗುತ್ತದೆ.ಚಳಿ ಹಾಗೂ ಗಾಳಿ ಒಣಚರ್ಮವನ್ನು ಹೆಚ್ಚಿಸಿ ತುರಿಕೆಯನ್ನು ಹೆಚ್ಚಿಸುತ್ತದೆ.ಜೀವಸತ್ವ 'ಎ' ಕಡಿಮೆಯಾದರೂ ಒಣಚರ್ಮ ಉಂಟಾಗಿ ತುರಿಸುತ್ತದೆ.
ಗರ್ಭಿಣಿಯರಲ್ಲಿ ತುರಿಕೆ: ಗರ್ಭಿಣಿಯರಲ್ಲಿ ಪಿತ್ತದ ಅಂಶ ಹೆಚ್ಚಾಗಿ ಕಾಮಾಲೆ ಹಾಗೂ ನವೆ ಉಂಟಾಗಬಹುದು.ಹಾರ್ಮೋನ್ ಗಳ ವ್ಯತ್ಯಾಸದಿಂದಲೂ ತುರಿಕೆಯಾಗಬಹುದು.ಕೆಲವರಿಗೆ ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಹೊಟ್ಟೆಯಲ್ಲಿ ಗಂಧೆಗಳಂಥ ಕೆಂಪು ತುರಿಸುವ ಗುಳ್ಳೆಗಳಾಗಿ ಇತರ ಭಾಗಗಳಿಗೆ ಹರಡುತ್ತವೆ.ಕಾರಣ ಸ್ಪಷ್ಟವಿಲ್ಲದ ಇದನ್ನು pruritic urticarial papules and plaques of pregnancy ( Puppp) ಎಂದು ಕರೆಯುತ್ತಾರೆ.ಇದು ಪ್ರಸವದ ನಂತರ ನಿಧಾನವಾಗಿ ಕಡಿಮೆಯಾಗುತ್ತದೆ.ಅಪರೂಪವಾಗಿ ಪೆಂಫಿಗಾಯ್ಡ್ ಗೆಸ್ಟೇಷನಿಸ್ ಎಂಬ ರೋಗನಿರೋಧಕ ಶಕ್ತಿ ತಿರುಗಿ ಬೀಳುವ ಕಾಯಿಲೆಯಾಗಿ ತುರಿಸುವ ನೀರ್ಗುಳ್ಳೆಗಳಾಗುತ್ತವೆ.
ಆಂತರಿಕ ಕಾರಣಗಳು: ಪಿತ್ತಜನಕಾಂಗದ ಕಾಯಿಲೆ, ಮೂತ್ರಪಿಂಡಗಳ ಕಾಯಿಲೆ, ಮಧುಮೇಹ, ರಕ್ತಹೀನತೆ, ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು, ಮೊದಲಾದ ಆಂತರಿಕ ಕಾಯಿಲೆಗಳಿಂದಲೂ ತುರಿಕೆಯಾಗುತ್ತದೆ.
ಪರಿಹಾರ ಮತ್ತು ನಿವಾರಣೋಪಾಯಗಳು: ತುರಿಕೆಯಿರುವವರು ಬೇಗನೆ ಚರ್ಮರೋಗ ತಜ್ಞರನ್ನು ಭೇಟಿಯಾಗಬೇಕು.ತುರಿಕೆಗೆ ಮೂಲ ಕಾರಣ ಏನೆಂಬುದನ್ನು ಪರಿಶೀಲಿಸಿ ಅದಕ್ಕೆ ಚಿಕಿತ್ಸೆ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.ಕೆಲವೊಮ್ಮೆ ಇದನ್ನು ತಿಳಿಯಲು ರಕ್ತ ಪರೀಕ್ಷೆ ಬೇಕಾಗಬಹುದು. ಕಜ್ಜಿ ಮತ್ತು ಫಂಗಸ್ ಕಾಯಿಲೆಗಳಿಗೆ ಒಳ್ಳೆಯ ಚಿಕಿತ್ಸೆಗಳು ಲಭ್ಯವಿವೆ.ನಿತ್ಯ ಸ್ನಾನ, ಚೆನ್ನಾಗಿ ಒರೆಸಿಕೊಳ್ಳುವುದು, ನಿತ್ಯವೂ ಬೇರೆ ಬಟ್ಟೆಗಳನ್ನು ಧರಿಸುವುದು, ಬೆವರುವುದನ್ನು ಪ್ರೋತ್ಸಾಹಿಸುವ ಬಿಗಿ ಬಟ್ಟೆಗಳನ್ನು ಬೇಸಿಗೆಯಲ್ಲಿ ಧರಿಸದಿರುವುದು, ಮೊದಲಾದ ಕ್ರಿಯೆಗಳಿಂದ ಫಂಗಸ್ ರೋಗಗಳಾಗದಂತೆ ತಡೆಯಬಹುದು. ಕೀಟಗಳ ಕಚ್ಚುವಿಕೆಯನ್ನು ತಪ್ಪಿಸಲು ಸಂಜೆಯ ಬಳಿಕ ಕೈಕಾಲುಗಳನ್ನು ಪೂರ್ತಿ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು.ಅರ್ಟಿಕೇರಿಯಗೆ ಕಾರಣವಾಗುವ ಅಲರ್ಜಿಯ ಅಂಶವನ್ನು ಗುರುತಿಸಿ ದೂರ ಮಾಡಿದರೆ ಅದು ಗುಣವಾಗುತ್ತದೆ.ದೀರ್ಘಾವಧಿಯ ಅರ್ಟಿಕೇರಿಯದಲ್ಲಿ ಕೆಲವೊಮ್ಮೆ ಅದು ತಿಳಿಯದಿದ್ದಾಗ ದೀರ್ಘಕಾಲ ಆಂಟಿಹಿಸ್ಟಮೀನ್ ಮಾತ್ರೆಗಳನ್ನು ವೈದ್ಯರ ನಿರ್ದೇಶನದಲ್ಲಿ ಸೇವಿಸಿದರೆ ಇದು ಗುಣವಾಗುತ್ತದೆ.ಔಷಧಿಗಳ ಅಲರ್ಜಿಯಿದ್ದಲ್ಲಿ ಆ ಔಷಧಿಗಳನ್ನು ನಿಲ್ಲಿಸಬೇಕು.ಇಸುಬಿಗೆ ಕಾರಣವಾಗುವ ವಸ್ತುಗಳನ್ನು ದೂರ ಮಾಡಬೇಕು.ಇವು ಬಟ್ಟೆ ಸಾಬೂನು ಮತ್ತು ಪಾತ್ರೆ ಪುಡಿಯಾಗಿದ್ದರೆ ಕೈಗವುಸು ಹಾಕಿಕೊಂಡು ಅವನ್ನು ಬಳಸಬೇಕು.ಎಟೋಪಿಕ್ ಡರ್ಮಟೈಟಿಸ್, ಸೋರಿಯಾಸಿಸ್,ಒಣ ಇಸುಬುಗಳಲ್ಲಿ ತೇವಾಂಶ ಹೆಚ್ಚಿಸುವ ದ್ರಾವಣಗಳನ್ನು ಔಷಧಿಯ ಲೇಪನಗಳೊಂದಿಗೆ ಬಳಸಬೇಕು. ಒಣಚರ್ಮಕ್ಕೂ ತೇವಾಂಶ ಹೆಚ್ಚಿಸುವ ದ್ರಾವಣಗಳನ್ನು ಸವರುತ್ತಿರಬೇಕು.ಪೇಟೆಯಲ್ಲಿ ಸಿಗುವ ದ್ರಾವಣಗಳಲ್ಲದೇ ಸುಲಭವಾಗಿ ದೊರೆಯುವ ಕೊಬ್ಬರಿ ಎಣ್ಣೆಯಂಥ ದ್ರಾವಣಗಳನ್ನೂ ಬಳಸಬಹುದು.ನಿತ್ಯ ಸ್ನಾನ ಹಾಗೂ ಸ್ನಾನಕ್ಕೂ ತೇವಾಂಶ ಹೆಚ್ಚಿಸುವ ಸಾಬೂನನ್ನು ಬಳಸುವುದು ಒಣಚರ್ಮವನ್ನು ನಿವಾರಿಸುತ್ತದೆ. ಬಿಸಿಲಿನ ಅಲರ್ಜಿಯನ್ನು ತಪ್ಪಿಸಲು ಒಳ್ಳೆಯ ಸನ್ ಸ್ಕ್ರೀನ್ ಅಥವಾ ಬಿಸಿಲುನಿವಾರಕಗಳನ್ನು ಬಳಸಬೇಕು. ಸಾಮಾನ್ಯವಾಗಿ ಯಾವುದೇ ಕಾರಣದ ತುರಿಕೆಗೆ ಆಂಟಿ ಹಿಸ್ಟಮಿನ್ ಮಾತ್ರೆಗಳನ್ನು ನೀಡಲಾಗುತ್ತದೆ.ಆದರೆ ಇಷ್ಟು ಸಾಲದೇ ಮೂಲ ಕಾರಣವನ್ನು ನಿವಾರಿಸಬೇಕು.ಜೊತೆಗೆ ಕೆರೆದಷ್ಟೂ ನವೆ ಹೆಚ್ಚುವುದರಿಂದ ಕೆರೆಯುವುದನ್ನು ತಪ್ಪಿಸಿ ಮನಸ್ಸನ್ನು ಬೇರೆ ಕಡೆ ಹರಿಸಿ ತುರಿಕೆ ಮರೆಯುವಂತೆ ಮಾಡಬೇಕು.
                           ಡಾ.ಬಿ.ಆರ್.ಸುಹಾಸ್ 


ಬಂಗು ಬೇಡ ಇದರ ಹಂಗು

ಚರ್ಮ ಎಂದಕೂಡಲೇ ನಮಗೆ ಸೌಂದರ್ಯದ ಭಾವವುಂಟಾಗುತ್ತದೆ. ಸೌಂದರ್ಯ ಚರ್ಮದಾಳಕ್ಕಿದೆ ಎಂಬ ಮಾತೂ ಇದೆ. ಅದರಲ್ಲೂ ಸ್ತ್ರೀಯರಲ್ಲಿ ಸೌಂದರ್ಯಪ್ರಜ್ಞೆ ಹೆಚ್ಚು. ಪುರುಷರು ಕೂಡ ಸ್ತ್ರೀಯರು ಸುಂದರವಾಗಿರುವುದನ್ನು ಬಯಸುತ್ತಾರೆ. ಹಾಗಾಗಿ, ಚರ್ಮ ವೈದ್ಯರ ಬಳಿಗೆ ಬರುವವರಲ್ಲಿ ರೋಗಗಳಿಲ್ಲದಿದ್ದರೂ ಸೌಂದರ್ಯ ಸಮಸ್ಯೆಗಳಿರುತ್ತವೆ. ಅಂಥ ಸಮಸ್ಯೆಗಳಲ್ಲಿ ಬಂಗು ಅಥವಾ ಮೆಲಾಸ್ಮ ( Melasma) ಬಹಳ ಸಾಮಾನ್ಯವಾದುದು. ಇದು ಸ್ತ್ರೀಯರಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಕೆಲವೊಮ್ಮೆ ಪುರುಷರಲ್ಲೂ ಉಂಟಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಉಂಟಾದಾಗ ಇದನ್ನು ಕ್ಲೊಯಾಸ್ಮ ( Chloasma) ಎಂದು ಕರೆಯುತ್ತಾರೆ. 
       ಮೆಲಾಸ್ಮ ಅಥವಾ ಬಂಗು ಎಂದರೆ ಬೇರೇನಿಲ್ಲ. ನಮ್ಮ ಚರ್ಮಕ್ಕೆ ಬಣ್ಣ ಕೊಡುವ ಮೆಲನಿನ್ ದ್ರವ ಅಥವಾ ಅದನ್ನು ಉತ್ಪತ್ತಿ ಮಾಡುವ ಮೆಲನೋಸೈಟ್ ಕೋಶಗಳು ಹೆಚ್ಚಾಗಿರುತ್ತವೆ. ಇದು ಒಂದು ವಿನ್ಯಾಸದಲ್ಲಿ ಆದಾಗ ಬಂಗು ಎನ್ನುತ್ತಾರೆ. ಸಾಮಾನ್ಯವಾಗಿ ಇದು ಮುಖದಲ್ಲಿ ಆಗುತ್ತದೆ. ಅಪರೂಪವಾಗಿ ಮುಂದೋಳುಗಳಲ್ಲಾಗಬಹುದು. ಬಂಗಿನಲ್ಲಿ ಚರ್ಮದ ಬಣ್ಣ ಹೆಚ್ಚಾಗಿರುವುದರ ಜೊತೆಗೆ ರಕ್ತಸಂಚಾರ ಕೂಡ  ಹೆಚ್ಚಾಗುತ್ತದೆ. ಇದರೊಂದಿಗೆ ಕೊಬ್ಬಿನ ಉತ್ಪತ್ತಿಯಲ್ಲಿ ಏರುಪೇರಾಗಿ ಚರ್ಮ ತೆಳ್ಳಗಾಗಿರುತ್ತದೆ.

ಬಂಗಿನ ಬಗೆಗಳು 
     ಬಂಗಿನಲ್ಲಿ ಕಂದು ಬಣ್ಣದ ಮಚ್ಚೆಗಳಾಗುತ್ತವೆ. ಇವುಗಳಲ್ಲಿ ನವೆ ಅಥವಾ ಬೇರಾವುದೇ ಲಕಷಣಗಳಿರುವುದಿಲ್ಲ. ಬಂಗನ್ನು ಮೂರು ರೀತಿಗಳಲ್ಲಿ ವಿಂಗಡಿಸುತ್ತಾರೆ. ಒಂದು, ಮಧ್ಯಮುಖ ಅಥವಾ ಸೆಂಟ್ರೋಫೇಷಿಯಲ್ ( Centrofacial) ಬಗೆ. ಇದರಲ್ಲಿ ಕಂದು ಬಣ್ಣದ ಮಚ್ಚೆಗಳು ಹಣೆ, ಮೂಗು, ಮೇಲ್ತುಟಿಯ ಭಾಗ, ಕೆನ್ನೆಗಳು, ಮತ್ತು ಗಲ್ಲದಲ್ಲಿ ಆಗುತ್ತವೆ. ಎರಡನೆಯ ಬಗೆ ಮಾಲಾರ್ ( Malar) ಬಗೆ. ಇದರಲ್ಲಿ ಕಂದು ಮಚ್ಚೆಗಳು ಕೆನ್ನೆಗಳು ಮತ್ತು ಮೂಗಿನ ಮೇಲಾಗುತ್ತವೆ. ಮೂರನೆಯದು ಮ್ಯಾಂಡಿಬುಲಾರ್ ( Mandibular) ಬಗೆ. ಇದರಲ್ಲಿ ದವಡೆಗಳ‌ ಭಾಗಗಳಲ್ಲಿ ಮಚ್ಚೆಗಳಾಗುತ್ತವೆ. 
      ಬಂಗಿನಲ್ಲಿ ಮೆಲನಿನ್ ದ್ರವದ ಹೆಚ್ಚಳ ಎಷ್ಟು ಆಳಕ್ಕಿದೆ ಎಂಬುದರ ಆಧಾರದಲ್ಲಿ ಅದನ್ನು ಎಪಿಡರ್ಮಲ್ ( ಚರ್ಮದ ಮೇಲ್ಪದರದ), ಡರ್ಮಲ್ ( ಚರ್ಮದ ಒಳಪದರದ), ಹಾಗೂ ಮಿಕ್ಸೆಡ್ ಅಥವಾ ಮಿಶ್ರ ಬಗೆಗಳೆಂದೂ ವಿಂಗಡಿಸಬಹುದು.

ಬಂಗಿಗೆ ಕಾರಣಗಳು 

      ಬಂಗು ಏಕೆ ಉಂಟಾಗುತ್ತದೆ? ಇದಕ್ಕೆ ಒಂದು ನಿರ್ದಿಷ್ಟ ಕಾರಣ ಎಂದಿಲ್ಲ. ಅನುವಂಶಿಕ ಕಾರಣಗಳು, ಹಾರ್ಮೋನುಗಳ  ವ್ಯತ್ಯಾಸ, ಗರ್ಭನಿರೋಧಕ ಮಾತ್ರೆಗಳ ಸೇವನೆ, ಗರ್ಭಿಣಿಯಾದ ಸಂದರ್ಭ, ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳ ಪ್ರಚೋದನೆ, ಮೊದಲಾದ ಕಾರಣಗಳಿರುತ್ತವೆ. ಹೆಣ್ಣು ಗರ್ಭಿಣಿಯಾದಾಗ ಎಸ್ಟ್ರೋಜನ್, ಪ್ರೊಜೆಸ್ಟರಾನ್ ಎಂಬ ಗರ್ಭಕ್ಕೆ ಸಂಬಂಧಿಸಿದ ಹಾರ್ಮೋನುಗಳು ಹಾಗೂ ಮೆಲನೋಸೈಟ್ ಕೋಶಗಳನ್ನು ಪ್ರಚೋದಿಸುವ ಮೆಲನೋಸೈಟ್ ಸ್ಟಿಮುಲೇಟಿಂಗ್ ಹಾರ್ಮೋನ್, ಇವು ಹೆಚ್ಚಾಗಿ ಮೆಲನೋಸೈಟ್ ಗಳನ್ನು ಪ್ರಚೋದಿಸುತ್ತವೆ. ಅದರಿಂದ ಮೆಲನಿನ್ ಹೆಚ್ಚು ಉತ್ಪತ್ತಿಯಾಗಿ ಬಂಗು ಉಂಟಾಗುತ್ತದೆ. ಗರ್ಭನಿರೋಧಕ ಮಾತ್ರೆಗಳಲ್ಲೂ ಈ ಹಾರ್ಮೋನ್ ಗಳಿರುವುದರಿಂದ ಅವುಗಳ ಸೇವನೆಯಿಂದಲೂ ಬಂಗು ಉಂಟಾಗಬಹುದು. ಆದರೆ ಎಲ್ಲರಲ್ಲೂ ಹೀಗಾಗುವುದಿಲ್ಲ. ಅನುವಂಶಿಕ ಪ್ರವೃತ್ತಿ ಇರುವವರಲ್ಲಿ ಮುಖ್ಯವಾಗಿ ಆಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಬಂಗು ಇದ್ದರೆ ಅದು ಆಗುವ ಸಾಧ್ಯತೆ ಹೆಚ್ಚು. ಬಂಗು ಒಮ್ಮೆ ಬಂದರೆ, ಅದನ್ನು ಚಿಕಿತ್ಸೆ ಮಾಡಿ ನಿವಾರಿಸಿದರೂ ಬಿಸಿಲಿನ ಕಿರಣಗಳು ಬಿದ್ದಾಗ ಬಣ್ಣದ ಕೋಶಗಳು ಪುನಃ ಪ್ರಚೋದನೆಗೊಂಡು ಬಂಗು ಮರುಕಳಿಸಬಹುದು. ಕೆಲವರು ಈ ಬಂಗು ಕಷ್ಟ ಕಾಲಕ್ಕೆ ಬಂದಿತು, ಅದು ಕಷ್ಟಗಳ ಮುನ್ಸೂಚನೆ ಎಂದು ಹೆದರುತ್ತಾರೆ. ಹಾಗೆ ಹೆದರುವ ಅಗತ್ಯವಿಲ್ಲ. ಇದರಿಂದ ಬೇರಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬಂಗು ಆಗುವುದರಿಂದ ಮುಖದ ಸೌಂದರ್ಯ ಕುಂದಿ ಸ್ವಲ್ಪ ಖಿನ್ನತೆ ಆವರಿಸಿಕೊಳ್ಳಬಹುದು. ಆದರೆ ಯಾವುದೇ ಸಮಸ್ಯೆ ಬರುವಂತೆ ಇದೂ ಬಂದಿದೆಯೆಂದು ಅರಿತು ಖಿನ್ನರಾಗದೇ ಚಿಕಿತ್ಸೆಗೆ ಮುಂದಾಗಬೇಕು.

ಚಿಕಿತ್ಸೆ 

ಬಂಗಿನ ನಿವಾರಣೆಗೆ ಈಗ ಅನೇಕ ಯಶಸ್ವಿ ಚಿಕಿತ್ಸೆಗಳಿವೆ. ಕೋಜಿಕ್ ಆಮ್ಲ, ಹೈಡ್ರೋಕ್ವಿನೋನ್, ಆರ್ಬುಟಿನ್ ಗ್ಲೈಕೋಲಿಕ್ ಆಮ್ಲ,   ಮೊದಲಾದ ಔಷಧಗಳು ಮುಲಾಮುಗಳ ರೂಪದಲ್ಲಿ ದೊರೆಯುತ್ತವೆ. ಇವು ಮೆಲನಿನ್ ಉತ್ಪತ್ತಿಯನ್ನು ನಿರೋಧಿಸುತ್ತವೆ. ಗ್ಲೈಕೋಲಿಕ್ ಆಮ್ಲ ಮೆಲನಿನ್ ನಿರೋಧಿಸುವುದರೊಂದಿಗೆ  ಚರ್ಮದ ಮೇಲ್ಪದರವನ್ನು ನಿಧಾನವಾಗಿ ಕೀಳುವುದರ ಮೂಲಕ ಬಣ್ಣ ಹೆಚ್ಚಾಗಿರುವ ಕೋಶಗಳನ್ನು ಕಳೆದು ಹೊಸ ಚರ್ಮ ಕೋಶಗಳು ಬೆಳೆಯುವಂತೆ ಮಾಡುತ್ತದೆ. ರೆಟಿನಾಯ್ಡ್ ಕೂಡ ಹೀಗೆಯೇ ಕೆಲಸ ಮಾಡುತ್ತದೆ. ಇವುಗಳನ್ನು ಏಕವಾಗಿ ಅಥವಾ ಒಟ್ಟಾಗಿರುವ ಮುಲಾಮುಗಳಾಗಿ ಚಿಕಿತ್ಸೆಗೆ ನೀಡಲಾಗುತ್ತದೆ. ಕ್ಲಿಗ್ಮಾನ್ ಫಾರ್ಮುಲಾ ಎಂಬ ಚಿಕಿತ್ಸೆಯಲ್ಲಿ ಹೈಡ್ರೋಕ್ವಿನೋನ್, ರೆಟಿನಾಯ್ಡ್ ಹಾಗೂ ಸ್ಟೀರಾಯ್ಡ್ಗಳನ್ನು ಒಟ್ಟಾಗಿ ಬೆರೆಸಿರುವ ಮುಲಾಮನ್ನು ಬಳಸಲಾಗುತ್ತದೆ. ಇವುಗಳನ್ನು ರೋಗಿಗಳು ತಾವಾಗಿಯೇ ಉಪಯೋಗಿಸದೇ ಚರ್ಮವೈದ್ಯರ ನಿರ್ದೇಶನದಲ್ಲಿ ಉಪಯೋಗಿಸಬೇಕು. ಈ ಮುಲಾಮುಗಳಲ್ಲಿ ಕೆಲವು ಉರಿ ತರಬಹುದು. ಹಾಗೇನಾದರೂ ಆದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು. ಸ್ಟಿರಾಯ್ಡ್ ಇರುವ ಮುಲಾಮನ್ನು ಅನಿರ್ದಿಷ್ಟಾವಧಿಯವರೆಗೆ ಬಳಸಿದರೆ ಹಲವಾರು ದುಷ್ಪರಿಣಾಮಗಳು ಆಗುತ್ತವೆ. ಮುಲಾಮುಗಳಲ್ಲಿ ಏನಿರುತ್ತದೆ ಎಂದು ರೋಗಿಗಳಿಗೆ ತಿಳಿಯದಿರುವುದರಿಂದ  ಅವನ್ನು ವೈದ್ಯರ ನಿರ್ದೇಶನದಲ್ಲೇ ಬಳಸಬೇಕು. ಮುಲಾಮುಗಳು ಯಶಸ್ವಿಯಾಗದಿದ್ದರೆ ಕೆಮಿಕಲ್ ಪೀಲ್ ಚಿಕಿತ್ಸೆ ಮಾಡಬಹುದು. ಇದರಲ್ಲಿ ಗ್ಲೈಕೋಲಿಕ್ ಆಮ್ಲವನ್ನು ಹೆಚ್ಚಿನ ಅಂಶದಲ್ಲಿ ಬಂಗಿನ ಚರ್ಮದ ಮೇಲೆ ಸವರಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಲಾಗುತ್ತದೆ. ಗ್ಲೈಕೋಲಿಕ್ ಆಮ್ಲದಂತೆಯೇ ಸ್ಯಾಲಿಸಿಲಿಕ್ ಆಮ್ಲ ಮೊದಲಾದ ಇತರ ರಾಸಾಯನಿಕಗಳನ್ನೂ ಕೆಮಿಕಲ್ ಪೀಲ್ ಮಾಡಲು ಬಳಸಲಾಗುತ್ತವೆ. ಇವಲ್ಲದೇ, ಮಾತ್ರೆಯ ರೂಪದಲ್ಲಿ ಸೇವಿಸಬಹುದಾದ ಗ್ಲುಟಥೈಯೋನ್ , ಹಾಗೂ ಟ್ರಾನೆಕ್ಸಮಿಕ್ ಆಮ್ಲ  ಬಂಗಿನ ನಿವಾರಣೆಗೆ ಒಳ್ಳೆಯ ಔಷಧಗಳಾಗಿವೆ. ಇವೂ ಮೆಲನಿನ್ ಉತ್ಪತ್ತಿಯನ್ನು ನಿರೋಧಿಸುತ್ತವೆ. ಈಗ ಈ ಔಷಧಗಳನ್ನುಳ್ಳ ಸಾಬೂನುಗಳು ಹಾಗೂ ಫೇಸ್ ವಾಶ್ ಹಾಗೂ ಲಭ್ಯವಿವೆ. ಇವು ಸಮಾಧಾನಕರ ಪರಿಣಾಮಗಳನ್ನುಂಟುಮಾಡುತ್ತವೆ. ಬಂಗಿಗೆ ಲೇಸರ್ ಚಿಕಿತ್ಸೆ ಕೂಡ ಲಭ್ಯವಿದೆ. ಚಿಕಿತ್ಸೆಯಿಂದ ಬಂಗು ನಿವಾರಣೆಯಾದರೂ ಅದು ಬಿಸಿಲಿನ ಅತಿನೇರಳೆ ಕಿರಣಗಳಿಂದ ಪುನಃ ಉಂಟಾಗಬಹುದಾದ್ದರಿಂದ ಬಿಸಿಲಿನ ಅತಿನೇರಳೆ ಕಿರಣಗಳನ್ನು ತಡೆಗಟ್ಟುವ ಸನ್ ಸ್ಕ್ರೀನ್ ಮುಲಾಮು ಅಥವಾ ದ್ರಾವಣಗಳನ್ನು ಹಗಲಿನಲ್ಲಿ ನಿರಂತರವಾಗಿ ಬಳಸಬೇಕಾಗುತ್ತದೆ.

ಗುರುವಾರ, ಮೇ 29, 2025

ಬ್ರಾಕೆಟ್ ಫಂಗಸ್

ಈ ಚಿತ್ರದಲ್ಲಿ ಮರದ ಕಾಂಡಕ್ಕೆ ಎರಡೂ ಕಡೆ ಅಂಟಿಕೊಂಡು ತಟ್ಟೆಗಳಂತೆ ಹೊರಚಾಚಿಕೊಂಡರುವ ಆಕೃತಿಗಳಿವೆಯಲ್ಲವೇ? ಇವುಗಳನ್ನು ಬ್ರಾಕೆಟ್ ಫಂಗಸ್ ಅಥವಾ ಶೆಲ್ಫ್ ಫಂಗಸ್ ಗಳೆನ್ನುತ್ತಾರೆ.ಸಾಮಾನ್ಯವಾಗಿ ಇವು ಕಾಡುಗಳಲ್ಲಿ ಅಥವಾ ದಟ್ಟ ಪ್ರಕೃತಿಯಿರುವ ಉದ್ಯಾನವನಗಳಲ್ಲಿ ಕಾಣಸಿಗುತ್ತವೆ.ನನಗೆ ಇವು ಕಂಡುಬಂದದ್ದು ನಮ್ಮ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಭಾಗವೇ ಆಗಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅವರ ಭದ್ರಾ ಅಭಯಾರಣ್ಯದ ರಿವರ್ ಟರ್ನ್ ಲಾಡ್ಜ್ ನಲ್ಲಿ. ಇವನ್ನು ವೈಜ್ಞಾನಿಕವಾಗಿ ಪಾಲಿಪೋರ್ ಗಳೆಂದು ಕರೆಯುತ್ತಾರೆ.ಇವು ಬೆಸಿಡಿಯೋಮೈಸೀಟ್ ಗಳೆಂಬ ಶಿಲೀಂಧ್ರ ಅಥವಾ ಅಣಬೆ ಜಾತಿಯ ಜೀವಿಗಳು.ಇವು ಕಾಂಕ್ ಗಳೆಂಬ ದೊಡ್ಡ ಫಲವತ್ತಾದ ಆಕೃತಿಗಳನ್ನು ರೂಪಿಸುತ್ತವೆ ಹಾಗೂ ಅವುಗಳ ತಳಭಾಗದಲ್ಲಿ ರಂಧ್ರಗಳು ಅಥವಾ ಕೊಳವೆಗಳಿರುತ್ತವೆ.ಕೆಲವು ವರ್ಷಕ್ಕೊಮ್ಮೆ ಹಾಗೂ ಕೆಲವು ವರ್ಷಪೂರ್ತಿ ಈ ಆಕೃತಿಗಳನ್ನು ರೂಪಿಸುತ್ತವೆ.ಈ ಆಕೃತಿಗಳು ಮರದಂತೆ ಗಟ್ಟಿಯಾಗಿ, ಬ್ರಾಕೆಟ್ ಅಥವಾ ಆವರಣದಂತೆ, ಇಲ್ಲವೇ ಶೆಲ್ಫ್ ಅಥವಾ ತಟ್ಟೆಯಂತೆ ಇಲ್ಲವೇ ದುಂಡಾದ ಆಕಾರ ಹೊಂದಿರುತ್ತವೆ.ಹಾಗಾಗಿಯೇ ಇವುಗಳಿಗೆ ಬ್ರಾಕೆಟ್ ಅಥವಾ ಶೆಲ್ಫ್ ಫಂಗಸ್ ಎಂಬ ಹೆಸರುಗಳು ಬಂದಿವೆ. ತಳಭಾಗದಲ್ಲಿರುವ ರಂಧ್ರಗಳಲ್ಲಿ ಬೆಸಿಡಿಯೋಸ್ಪೋರ್ ಗಳೆಂಬ ಬೀಜಗಳು ಉತ್ಪತ್ತಿಯಾಗುತ್ತವೆ.ಇವು ತೇವಾಂಶ ಹೆಚ್ಚಾಗಿರುವಾಗ ಬಿಡುಗಡೆಗೊಂಡು ಸೂಕ್ತ ಸ್ಥಳಗಳಲ್ಲಿ ಬಿದ್ದಾಗ ಹೊಸ ಫಂಗಸ್ ಗಳಾಗಿ ಮೊಳೆಯುತ್ತವೆ.ಫಂಗಸ್ ಗಳಾಗುತ್ತವೆ. ಈ ಬ್ರಾಕೆಟ್ ಫಂಗಸ್ ಬದುಕಿರುವ ಹಾಗೂ ಸತ್ತಿರುವ, ಎರಡೂ ಮರಗಳ ಕಾಂಡಗಳ ಮೇಲೆ ಬೆಳೆಯುತ್ತವೆ.ಇವು ಆ ಕಾಂಡಗಳ ಮೂಲಕ ಆ ಮರಗಳ ಪೋಷಕಾಂಶಗಳನ್ನು ತೆಗೆದುಕೊಂಡು ಅವು ಕೊಳೆಯುವಂತೆ ಮಾಡುತ್ತವೆ.ಸತ್ತಿರುವ ಮರಗಳು ಕೊಳೆಯುವುದರಿಂದ ಕೆಲವು ಪೋಷಕಾಂಶಗಳು ಪ್ರಕೃತಿಗೆ ಬಿಡುಗಡೆಯಾಗಿ ಅವುಗಳ ಪುನರಾವರ್ತನೆಯನ್ನು ನೋಡಿಕೊಳ್ಳುತ್ತವೆ.ಆದರೆ ಬದುಕಿರುವ ಮರಗಳು ಕೊಳೆಯುವುದರಿಂದ ಮರಗಳಿಗೆ ಹಾನಿಯಾಗುತ್ತದೆ.ಕೆಲವು ಬ್ರಾಕೆಟ್ ಫಂಗಸ್ ಗಳು ಮಣ್ಣಿನಲ್ಲಿ ಬೆಳೆದು, ತಮ್ಮ ಮೈಕೋರೈಜಾ ಎಂಬ ಬೇರುಗಳನ್ನು ಮರಗಳ ಬೇರುಗಳೊಂದಿಗೆ ಬೆಸೆಯುತ್ತವೆ.ಆಗ ಇವು ಮರಗಳಿಗೆ ನೀರು ಮತ್ತು ಖನಿಜಗಳನ್ನು ನೀಡಿ, ಅವುಗಳಿಂದ ಸಿದ್ಧವಾದ ಆಹಾರವನ್ನು ತೆಗೆದುಕೊಳ್ಳುತ್ತವೆ.ಹೀಗೆ ಕೂಡಿ ಬಾಳುತ್ತವೆ.ಇದುವರೆಗೂ ವಿಜ್ಞಾನಿಗಳಿಗೆ ಸುಮಾರು ಒಂದು ಸಾವಿರ ಪ್ರಭೇದಗಳ ಬ್ರಾಕೆಟ್ ಫಂಗಸ್ ಗಳು ಇರುವುದು ತಿಳಿದುಬಂದಿದೆ.ಆದರೆ ಇನ್ನೂ ಹಲವಾರು ಪ್ರಭೇದಗಳು ಇರಬಹುದೆಂದು ಹೇಳುತ್ತಾರೆ. ಈ ಬ್ರಾಕೆಟ್ ಫಂಗಸ್ ಗಳನ್ನು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.ಹಾಗಾಗಿ ಇವುಗಳ ಔಷಧೀಯ ಗುಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ.
        ಕಾಡುಗಳಿಗೆ ಹೋದಾಗ ಈ ಬ್ರಾಕೆಟ್ ಫಂಗಸ್ ಗಳನ್ನು ನೋಡುವುದು ವಿಸ್ಮಯ ತರುತ್ತದೆ! 

ಮಂಗಳವಾರ, ಏಪ್ರಿಲ್ 8, 2025

ಚಿತ್ರದುರ್ಗದ ಪ್ರಕೃತಿರತ್ನ ಜೋಗಿಮಟ್ಟಿ

ಚಿತ್ರದುರ್ಗವೆಂದರೆ ಬಿಸಿಲು,ಕೋಟಿ,ಬಂಡೆಗಲ್ಲುಗಳಷ್ಟೇ ಎಂದು ಅನೇಕರು ಭಾವಿಸಿರುತ್ತಾರೆ.ಆದರೆ ಇಲ್ಲಿ ತಂಪಾದ ಒಂದು ಪುಟ್ಟ ಕಾಡಿದೆ ಎಂದು ಇನ್ನೂ ಎಷ್ಟೋ ಜನಕ್ಕೆ ಗೊತ್ತಿಲ್ಲ.ಅದುವೇ ಜೋಗಿಮಟ್ಟಿ! ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಈ ಅರಣ್ಯಕ್ಕೆ ಜೋಗಿಮಟ್ಟಿ ಎಂಬ ಹೆಸರು ಬಂದಿದೆ.ಬಿಸಿಲಿನ ಝಳದಿಂದ ಆಯಾಸವಾಗಿದ್ದರೆ ಈ ಕಾಡಿಗೆ ಹೋದ ಕೂಡಲೇ ತಂಪಾಗಿ ಊಲ್ಲಾಸ ತುಂಬಿಕೊಂಡು ಆಯಾಸ ಪರಿಹಾರವಾಗುತ್ತದೆ! ಏಕೆಂದರೆ ಇದೊಂದು ಗಿರಿಧಾಮವೂ ಹೌದು! 
     ಜೋಗಿಮಟ್ಟಿ ಅಭಯಾರಣ್ಯವು ಸುಮಾರು 100.48 ಚದರ ಕಿ.ಮೀ.ವಿಸ್ತಾರದ ಅರಣ್ಪ್ರ ಪ್ರದೇಶವನ್ನು ಹೊಂದಿದ್ದು, ಮುಖ್ಯವಾಗಿ ಹುಲ್ಲುಗಾವಲು, ಒಣ ಎಲೆಯುದುರುವ ಮತ್ತು ಕುರುಚಲು ಪೊದೆ ಕಾಡುಗಳನ್ನು ಹೊಂದಿದೆ.ಇದು ಚಿತ್ರದುರ್ಗದ ಅತ್ಯಂತ ಎತ್ತರದ ಸ್ಥಳವಾಗಿದ್ದು, 3803 ಅಡಿಗಳಷ್ಟು ಎತ್ತರವಿದೆ.ಇದು ಚಿತ್ರದುರ್ಗದ ಅತ್ಯಂತ ತಂಪಾದ ತಾಣವಾಗಿದೆ.ಇದು ಚಿತ್ರದುರ್ಗ, ಹೊಳಲ್ಕೆರೆ, ಹಾಗೂ ಹಿರಿಯೂರುಗಳನ್ನು ಆವರಿಸಿಕೋಳ್ಳುತ್ತದೆ.ಬೆಟ್ಟಗುಡ್ಡಗಳಿಂದ ಕೂಡಿರುವ ಈ ಕಾಡಿನಲ್ಲಿ ಅನೇಕ ಗಿಡಮರಗಳಿದ್ದು, ಚಿರತೆ, ಗುಳ್ಳೆನರಿ, ತೋಳ, ಕರಡಿ, ಮುಳ್ಳುಹಂದಿ, ಮೊದಲಾದ ಪ್ರಾಣಿಗಳೂ ನವಿಲೂ ಸೇರಿದಂತೆ ಅನೇಕ ಬಗೆಯ ಪಕ್ಷಿಗಳೂ ಇವೆ.ಒಂದು ಕಾಲದಲ್ಲಿ ಇಲ್ಲಿ ಹುಲಿಗಳೂ ಸಂಚರಿಸುತ್ತಿದ್ದವು ಎಂದು ಹೇಳುತ್ತಾರೆ.
        ಚಿತ್ರದುರ್ಗ ನಗರದ ದಕ್ಷಿಣಕ್ಕೆ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಈ ಸುಂದರ ಕಾಡನ್ನು ಒಣಪ್ರದೇಶದ ಊಟಿ ಎಂದೂ ಕರೆಯುತ್ತಾರೆ! ಪ್ರವಾಸಿಗರಿಗೆ ಬೆಳಿಗ್ಗೆ 6:30 ಗೆ ಈ ಗಿರಿಧಾಮದ ದ್ವಾರವನ್ನು ತೆರೆದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮುಚ್ಚಲಾಗುತ್ತದೆ. ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು.ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದು ಕಾಡಿನಲ್ಲಿ ಪಯಣಿಸುತ್ತಾ ಸ್ವಲ್ಪ ಮುಂದೆ ಹೋದರೆ ನೂರೈವತ್ತೈದು ಮೆಟ್ಟಿಲುಗಳಿರುವ ಒಂದು ಬೆಟ್ಟ ಸಿಗುತ್ತದೆ.ಈ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಇಲ್ಲಿ ತಪಸ್ಸು ಮಾಡಿದ ಜೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಗದ್ದುಗೆಯ ಮಂದಿರ ಸಿಗುತ್ತದೆ.ಮಂದಿರದ ಹೊರಗೆ ಅವರ ಪಾದಗಳ ಆಕೃತಿಯದೆ ಹಾಗೂ ಒಳಗೆ ಅವರ ವಿಗ್ರಹವಿದೆ.ಈ ಮಂದಿರದ ಎದುರಿಗೆ ಒಂದು ವೀಕ್ಷಣಾಗೋಪುರವಿದ್ದು, ಅದನ್ನೇರಿ ಮೇಲೆ ಹೋದರೆ ಮೈ ನವಿರೇಳಿಸುವ ಪ್ರಕೃತಿ ಸೌಂದರ್ಯದ ದೃಶ್ಯಾವಳಿ ಕಾಣುತ್ತದೆ! ಬೆಳಿಗ್ಗೆ ಬೇಗನೆ ಹೋದರೆ ಇಲ್ಲಿ ಮಂಜು ಕವಿದಿದ್ದು ಬಹಳ ತಂಪಾಗಿರುತ್ತದೆ! ಈ ಪ್ರಕೃತಿ ಸೌಂದರ್ಯವನ್ನು ನೋಡುತ್ತಿದ್ದರೆ ಆಹ್ಲಾದವಾಗುತ್ತದೆ! ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ಅಕ್ಕಪಕ್ಕಗಳಲ್ಲಿ ಒಳ್ಳೆಯ ಸುಭಾಷಿತ ವಾಕ್ಯಗಳ ಫಲಕಗಳನ್ನು ಹಾಕಿರುವುದನ್ನು ನೋಡಬಹುದು! ಚಿರತೆ,ಕರಡಿ, ಮುಂತಾದ ಪ್ರಾಣಿಗಳಿದ್ದರೂ ಅವು ಸುಲಭವಾಗಿ ಕಾಣಸಿಗುವುದಿಲ್ಲ.ನನ್ನ ಅದೃಷ್ಟಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ನವಿಲು ನಡೆದು ಹೋಗುತ್ತಿರುವುದು ಕಾಣಿಸಿತು! ಅಂತೆಯೇ ರೆಡ್ ವೆಂಟೆಡ್ ಬುಲ್ ಬುಲ್ ಪಕ್ಷಿ, ಬಗೆ ಬಗೆಯ ಬಣ್ಹದ ಚಿಟ್ಟೆಗಳು, ಹಾಗೂ ಕಿತ್ತಳೆ ಚಿಪ್ಪಿನ ಬಸವನಹುಳು ನೋಡಲು ಸಿಕ್ಕಿದವು! 
      ಬೆಟ್ಟವನ್ನು ಇಳಿದು ಸ್ವಲ್ಪ ಮುಂದೆ ಹೋದರೆ, ಅಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಒಂದು ಬ್ರಿಟಿಷ್ ಕಾಲದ ಪರಿವೀಕ್ಷಣಾ ಮಂದಿರವಿದೆ ಇಲ್ಲಿನ ವಾತಾವರಣ ಬಹಳ ಸುಂದರವಾಗಿ, ತಂಪಾಗಿದೆ.ಇಲ್ಲಿ ಸುಂದರ ಹೂಗಳ ಗಿಡಮರಗಳಿದ್ದು, ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಇದರಿಂದ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
      ಜೋಗಿಮಟ್ಟಿಯಲ್ಲಿ ಹಿಮವತ್ಕೇದಾರ ಎಂಬ ಸುಂದರ ಜಲಪಾತವೂ ಇದ್ದು, ಅದು ಬಂಡೆಯಲ್ಲಿ ಒಂದು ಗುಹೆಯನ್ನು ಕೊರೆದಿದೆ.ಈ ಗುಹೆಯಲ್ಲಿ ಶಿವಲಿಂಗವೇ ಮೊದಲಾದ ವಿಗ್ರಹಗಳಿವೆ.
       ಜೋಗಿಮಟ್ಟಿ ಅರಣ್ಯಪ್ರದೇಶದಲ್ಲೇ ಆಡುಮಲ್ಲೇಶ್ವರ ಮೃಗಾಲಯವೆಂಬ ಒಂದು ಪುಟ್ಟ ಮೃಗಾಲಯವಿದೆ.ಇಲ್ಲಿ ಮೃಗಾಲಯಕ್ಕೆ ಹೋಗುವ ದಾರಿಯನ್ನು ಸೂಚಿಸಲಾಗಿದೆ.ಗಿಢಮರಗಳ ಸುಂದರ ಉದ್ಯಾನವನದೊಂದಿಗೆ ಕೂಡಿರುವ ಈ ಮೃಗಾಲಯದಲ್ಲಿ ನವಿಲು, ಗುಳ್ಳೆನರಿ, ಸಿಲ್ವರ್ ಫೆಸೆಂಟ್ ಮೊದಲಾದ ಆಕರ್ಷಕ ಪಕ್ಷಿಗಳು, ಹೆಬ್ಬಾವು, ಮೊಸಳೆ, ಕರಡಿ,ಚಿರತೆ, ಹುಲಿ, ಚುಕ್ಕಿ ಜಿಂಕೆ,ಕೃಷ್ಣಮೃಗ,ನೀಲಗಾಯ್, ಮೊದಲಾದ ಪ್ರಾಣಿಗಳಿವೆ.ಇಲ್ಲಿ ಗಾಜಿನ ಮನೆಯಲ್ಲಿರಿಸಲಾಗಿರುವ ಹುಲಿ ತನ್ನ ಗಂಭೀರ ನಡಿಗೆಯಿಂದ ನಮ್ಮ ಹತ್ತಿರಕ್ಕೇ ಬರುತ್ತಾ ಆಕರ್ಷಿಸುತ್ತದೆ! 
       ಹೀಗೆ ಜೋಗಿಮಟ್ಟಿ, ಚಿತ್ರದುರ್ಗದ ಒಂದು ಸುಂದರ ಗಿರಿಧಾಮ ಹಾಗೂ ಅಭಯಾರಣ್ಯವಾಗಿದ್ದು, ಪ್ರಕೃತಿಯ ಒಂದು ಪುಟ್ಟ ರತ್ನದಂತೆ ಹೆಚ್ಚು ಜನರಿಗೆ ತಿಳಿದಿಲ್ಲದ ತಾಣವಾಗಿದೆ.ಚಿತ್ರದುರ್ಗಕ್ಕೆ ಬಂದಾಗ ಇದು ನೋಡಲೇ ಬೇಕಾದ ತಾಣವಾಗಿದೆ.