ಭಾರತವು ಪುಣ್ಯಭೂಮಿ ಎಂದು ಹೆಸರಾಗಿದೆ. ಹಾಗಾಗಿಯೇ ಭಾರತದ ಪ್ರವಾಸೀ ತಾಣಗಳಲ್ಲಿ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳು ಪ್ರಧಾನವಾಗಿವೆ. ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳಿವೆ. ಅವುಗಳಲ್ಲಿ ಈಗ ನಾನು ಹೇಳಹೊರಟಿರುವ ಬಿಷ್ಣುಪುರದ ಅದ್ಭುತ ದೇವಾಲಯಗಳ ಗುಂಪೂ ಒಂದು.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ ಸುಮಾರು 150 ಕಿ.ಮೀ.ಗಳಷ್ಟು ದೂರದಲ್ಲಿರುವ ಬಿಷ್ಣುಪುರ ( ವಿಷ್ಣುಪುರ) ಬಾಂಕುರ ಜಿಲ್ಲೆಯಲ್ಲಿನ ಪುಟ್ಟ ಊರಾಗಿದ್ದು, ಕಲಾತ್ಮಕವಾದ ಟೆರ್ರಕೋಟ ಅಥವಾ ಮಣ್ಣಿನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಂಥ ಅದ್ಭುತ ದೇವಾಲಯಗಳನ್ನು ಇನ್ನೆಲ್ಲೂ ಕಾಣಲಾಗದು! ಎತ್ತರವಾಗಿಯೂ ಭವ್ಯವಾಗಿಯೂ ಇರುವ ಈ ದೇವಾಲಯಗಳು ತಮ್ಮ ವಿಶಿಷ್ಟ ಕೆತ್ತನೆಗಳಿಂದ ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ! ಕೋಲ್ಕತಾಗೆ ಹೋದಾಗ ಈ ಸ್ಥಳವನ್ನು ತಪ್ಪದೇ ನೋಡಬೇಕು.
ಈಗ ಒಂದು ಸಾಧಾರಣ ಹಳ್ಳಿಯಂತೆ ಕಾಣುವ ಬಿಷ್ಣುಪುರ, ಹಿಂದೆ, ಕ್ರಿ.ಶ. 997 ರ ಕಾಲದಲ್ಲಿ ಮಲ್ಲ ರಾಜರ ಸಾಮ್ರಾಜ್ಯವಾಗಿ ವಿಜೃಂಭಿಸಿತ್ತು! ಆದಿಮಲ್ಲನಿಂದ ಸ್ಥಾಪಿತವಾದ ಮಲ್ಲ ಸಾಮ್ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ರಾಜರು ಆಳಿದರು. ಮೊದಲಿಗೆ ಈ ಮಲ್ಲ ಸಾಮ್ರಾಜ್ಯಕ್ಕೆ ಪ್ರದ್ಯುಮ್ನಪುರ ಎಂಬ ಸ್ಥಳ ರಾಜಧಾನಿಯಾಗಿತ್ತು. ಮುನ್ನೂರು ವರ್ಷಗಳ ನಂತರ ಆಳ್ವಿಕೆಗೆ ಬಂದ ಜಗತ್ ಮಲ್ಲನೆಂಬ ರಾಜನು ಇಲ್ಲಿನ ಕಾಡಿನಲ್ಲಿ ಬೇಟೆಯಾಡುವಾಗ, ತನ್ನ ಹದ್ದುವನ್ನು ಒಂದು ಕೊಕ್ಕರೆಯು ಸೋಲಿಸಿ ಓಡಿಸುವುದನ್ನು ಕಂಡು ವಿಸ್ಮಯಗೊಂಡು, ಈ ಸ್ಥಳದಲ್ಲಿ ಏನೋ ವಿಶೇಷ ಶಕ್ತಿಯಿರಬೇಕೆಂದು ಭಾವಿಸಿ ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿದನು. ಆಗಲೇ ಆದಂಥ ಮೃಣ್ಮಯೀದೇವಿಯ ( ದುರ್ಗೆಯ) ಆಜ್ಞೆಯಂತೆ, ಮಣ್ಣಿನಲ್ಲಿ ಹುದುಗಿದ್ದ ಅವಳ ವಿಗ್ರಹವನ್ನು ಅಗೆದು ತೆಗೆಸಿ ಅದರೊಂದಿಗೆ ಅವಳ ದೇವಾಲಯವನ್ನು ನಿರ್ಮಿಸಿದನು ಎಂದು ಐತಿಹ್ಯಗಳು ಹೇಳುತ್ತವೆ. ಹೀಗೆ ಮೃಣ್ಮಯೀದೇವಿಯ ಭಕ್ತರಾಗಿದ್ದ ಮಲ್ಲರು, ಬೀರ್ ಹಂಬೀರ್ ರಾಜನಿಂದ ವೈಷ್ಣವರಾಗಿ ಸೊಗಸಾದ ಅನೇಕ ಕೃಷ್ಣ ಮಂದಿರಗಳನ್ನು ನಿರ್ಮಿಸಿದರು. ಇವನ ಕಾಲದಲ್ಲಿ ಮೊಘಲರಿಗೂ ಪಠಾಣರಿಗೂ ಯುದ್ಧವಾಗಿ, ಇವನು ಮೊಘಲರ ಪರವಾಗಿ ನಿಂತು ಪಠಾಣರ ನಾಯಕ ದಾವೂದ್ ಖಾನನನ್ನು ಸೋಲಿಸಲು, ಅಕ್ಬರನು ಇವನ ಶೌರ್ಯಕ್ಕೆ ಮೆಚ್ಚಿ ಇವನಿಗೆ ಬೀರ್ ( ವೀರ) ಎಂಬ ಬಿರುದನ್ನಿತ್ತನೆಂದು ಹೇಳುತ್ತಾರೆ. ದಾವೂದ್ ಖಾನನನ್ನು ಸೋಲಿಸಿದರೂ ಅವನನ್ನು ಕೊಲ್ಲದೇ ಬಿಟ್ಟುದಕ್ಕಾಗಿ ಅವನೇ ಇವನಿಗೆ ಈ ಬಿರುದು ಕೊಟ್ಟನೆಂದೂ ಹೇಳುತ್ತಾರೆ. ಇವನು ವೈಷ್ಣವನಾದುದಕ್ಕೆ ಒಂದು ಕಥೆಯಿದೆ. ಒಮ್ಮೆ, ಚೈತನ್ಯ ಪರಂಪರೆಯ ಜೀವಗೋಸ್ವಾಮಿಗಳು, ಹರಿಭಕ್ತಿವಿಲಾಸ, ಚೈತನ್ಯ ಚರಿತಾಮೃತ, ಉಜ್ವಲ ನೀಲಮಣಿ, ಭಕ್ತಿರಸಾಮೃತಸಿಂಧು, ಲಲಿತಮಾಧವ, ವಿದಗ್ಧ ಮಾಧವ, ಮೊದಲಾದ ಇಪ್ಪತ್ತೊಂದು ಅಪರೂಪದ ಭಕ್ತಿಸಾಹಿತ್ಯ ಕೃತಿಗಳನ್ನು ಗೌರಮಠಕ್ಕೆ ಶ್ರೀನಿವಾಸಾಚಾರ್ಯರ ಮೂಲಕ ಕಳಿಸಿದರು. ಅವರು ಅವನ್ನು ಪೆಟ್ಟಿಗೆಗಳ ಮೂಲಕ ಸಾಗಿಸುತ್ತಾ ರಾತ್ರಿ ಒಂದು ಕಡೆ ವಿಶ್ರಾಂತಿ ಪಡೆಯುತ್ತಿದ್ದಾಗ, ರಾಜನ ಸೈನಿಕರು ಅವನ್ನು ಹಣದ ಪೆಟ್ಟಿಗೆಗಳೆಂದು ತಪ್ಪು ತಿಳಿದು ವಶಪಡಿಸಿಕೊಂಡು ಹೋದರು! ರಾಜನು ಅವನ್ನು ತೆಗೆಸಿ, ಪುಸ್ತಕಗಳನ್ನು ಕಂಡು ಆಶ್ಚರ್ಯಗೊಂಡು ಪಂಡಿತರಿಂದ ಅವನ್ನು ಓದಿಸಿ ವಿವರಣೆ ಪಡೆಯತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಾಚಾರ್ಯರು, ಆ ಪಂಡಿತರು ತಪ್ಪು ವಿವರಣೆ ಕೊಡುತ್ತಿದ್ದುದನ್ನು ಕೇಳಿ ದುಃಖಗೊಂಡು ಕಿವಿ ಮುಚ್ಚಿಕೊಂಡರು! ಆಗ ರಾಜನು ಅವರನ್ನು ವಿಚಾರಿಸಲು, ಅವರು ಸರಿಯಾದ ವಿವರಣೆಗಳನ್ನು ಕೊಟ್ಟರು. ಇದರಿಂದ ರಾಜನ ಮನ ಕರಗಿ ಅವನು ಕೂಡಲೇ ಶ್ರೀನಿವಾಸಾಚಾರ್ಯರ ಶಿಷ್ಯನಾಗಿ ವೈಷ್ಣವನಾದನು. ಅವರಿಗೆ ಅವನು ಮದುವೆಯನ್ನೂ ಮಾಡಿಸಿ ಅಲ್ಲಿಯೇ ವಸತಿಯನ್ನು ಕಲ್ಪಿಸಿಕೊಟ್ಟನು. ಅಲ್ಲಿಂದ ಮುಂದೆ ಬಿಷ್ಣುಪುರವು ಒಂದು ವೈಷ್ಣವಧಾಮವಾಯಿತು! ಮೃಣ್ಮಯೀದೇವಿಯ ಪೂಜೆ ಮುಂದುವರೆದರೂ ಅನೇಕ ಕೃಷ್ಣ ದೇಗುಲಗಳ ನಿರ್ಮಾಣವಾಯಿತು! ಬೀರ್ ಹಂಬೀರನು ರಾಸಮಂಚ ಎಂಬ ಮಂದಿರವನ್ನು ಶ್ರೀಕೃಷ್ಣನ ರಾಸಲೀಲೆಯನ್ನು ಆಚರಿಸಲೆಂದು ನಿರ್ಮಿಸಿ, ಶ್ಯಾಮಬಂಧ್, ಜಮುನಾಬಂಧ್, ರಾಧಾಕುಂಡ, ಕಾಲಿಂದೀ ಘಾಟ್, ಮೊದಲಾದ ಅನೇಕ ಕೆರೆಗಳನ್ನು ನಿರ್ಮಿಸಿದನು. ಅವನಿಗೆ ಒಬ್ಬ ನವಾಬನು ದೇವ್ ಎಂಬ ಬಿರುದನ್ನೂ ಕೊಟ್ಟನು. ಅವನ ನಂತರ ಬಂದ ಮಲ್ಲರಾಜರು ಅನೇಕ ಕೃಷ್ಣ ದೇಗುಲಗಳನ್ನು ನಿರ್ಮಿಸಿದರು. ಈಗ ಅಂಥ ಕೆಲವು ಸುಂದರ ದೇವಾಲಯಗಳ ಪರಿಚಯ ಮಾಡಿಕೊಳ್ಳೋಣ.
ರಾಸಮಂಚ
ಈ ಮಂದಿರವನ್ನು ನೋಡುವುದರೊಂದಿಗೆ ಬಿಷ್ಣುಪುರದ ಪ್ರವಾಸವನ್ನು ಆರಂಭಿಸುವುದು ಒಳ್ಳೆಯದು. ಏಕೆಂದರೆ ಎಲ್ಲಾ ದೇವಾಲಯಗಳನ್ನು ನೋಡಲು ನಮಗೆ ಪ್ರವೇಶ ಚೀಟಿ ದೊರೆಯುವುದು ಇಲ್ಲಿಯೇ. ಹಾಗೆಯೇ ಇಲ್ಲಿ ಮಾರ್ಗದರ್ಶಿಗಳು ಅಥವಾ ಗೈಡ್ ಗಳು ಸಿಗುತ್ತಾರೆ. ದೇವಾಲಯಗಳ ವಿವರಣೆ ಪಡೆಯಲು ನಮಗೆ ಮಾರ್ಗದರ್ಶಿ ಅತ್ಯವಶ್ಯಕ. ಒಂದೊಂದು ದೇವಾಲಯವೂ ದೂರವಿರುವುದರಿಂದ, ಮಾರ್ಗದರ್ಶಿಯನ್ನೂ ನಮ್ಮ ಖಾಸಗಿ ವಾಹನದಲ್ಲಿ ಜೊತೆಗೆ ಕರೆದೊಯ್ಯುವುದು ಒಳ್ಳೆಯದು.
ಮಲ್ಲ ಸಾಮ್ರಾಜ್ಯದ ಕೀರ್ತಿ, ವೈಭವಗಳನ್ನು ಸಾರಿ ಹೇಳುವ ರಾಸಮಂಚ ಎಂಬ ಈ ಬೃಹತ್ ಮಂದಿರವನ್ನು ಬೀರ್ ಹಂಬೀರನು ಕ್ರಿ.ಶ.1587 ರಲ್ಲಿ ನಿರ್ಮಿಸಿದನು.
ಮೂರು ಅಂಗಣಗಳನ್ನುಳ್ಳ ಚೌಕಾಕಾರದ ಮಂದಿರ, ಅದರ ಮೇಲೆ ಮೊಘಲ್ ಶೈಲಿಯ ಕಮಾನುಗಳು, ಮತ್ತು ಅವುಗಳ ಮೇಲೆ ತ್ರಿಕೋಣಾಕೃತಿಯ ಗೋಪುರ, ಹೀಗೆ ಮೂರು ಅಂತಸ್ತುಗಳ ವಿಶಿಷ್ಟ ರಚನೆಯ ಈ ಕಟ್ಟಡ, ಲ್ಯಾಟರೈಟ್ ( ಕೆಂಪು ಜೇಡಿಮಣ್ಣಿನ) ತಳದ ಮೇಲೆ ನಿಂತಿದ್ದು, ಒಂದೊಂದು ಬದಿಯಲ್ಲೂ ಹತ್ತು ದ್ವಾರಗಳನ್ನು ಹೊಂದಿದೆ. ಇವು ಬಂಗಾಳಿ ಶೈಲಿಯ ಛಾವಣಿಗಳನ್ನೂ ಸೊಗಸಾದ ಭಾರವಾದ ಕಂಬಗಳನ್ನೂ ಹೊಂದಿವೆ. ಈ ರಾಸಮಂಚವು ರಾಸೋತ್ಸವವನ್ನು ಆಚರಿಸುವ ಮಂದಿರವಾಗಿದ್ದು, ಆ ಉತ್ಸವದ ಸಮಯದಲ್ಲಿ ಇತರ ಎಲ್ಲಾ ದೇವಾಲಯಗಳ ವಿಗ್ರಹಗಳನ್ನು ತಂದು ಇಲ್ಲಿರಿಸುತ್ತಿದ್ದರು.
ಶ್ಯಾಮರಾಯ್ ಮಂದಿರ
ಅತ್ಯಂತ ಸೊಗಸಾದ ಟೆರ್ರಕೋಟ ಶಿಲ್ಪಕಲೆಯನ್ನು ಹೊಂದಿರುವ ಈ ಬೃಹತ್ ಮಂದಿರವನ್ನು ಕ್ರಿ.ಶ. 1643 ರಲ್ಲಿ ಮಲ್ಲರಾಜ ರಘುನಾಥ ಸಿಂಘನು ನಿರ್ಮಿಸಿದನು. ಬಂಗಾಳೀ ಶೈಲಿಯ ಕಮಾನಿನ ಛಾವಣಿ ಮತ್ತು ಮೇಲೆ ಐದು ಶಿಖರಗಳನ್ನು ಹೊಂದಿರುವ ಈ ದೇವಾಲಯ, ಪಂಚರತ್ನ ಮಾದರಿಯ ದೇವಾಲಯಗಳಿಗೆ ಅತ್ಯುತ್ತಮ ಉದಾಹರಣೆ. ಈ ಮಂದಿರದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಮತ್ತು ಕೃಷ್ಣಲೀಲೆಗಳಿಗೆ ಸಂಬಂಧಿಸಿದ ಸುಂದರ ಕೆತ್ತನೆಗಳಿವೆ. ಅಂತೆಯೇ ಜಿಂಕೆ, ಆನೆ, ಗಂಡಭೇರುಂಡ,ಮೊದಲಾದ ಪ್ರಾಣಿಪಕ್ಷಿಗಳ ಹಾಗೂ ಸುಂದರ ವಿನ್ಯಾಸಗಳ ಕೆತ್ತನೆಗಳಿವೆ. ಆದರೆ ಮಂದಿರದಲ್ಲಿ ವಿಗ್ರಹವಿಲ್ಲದಿರುವುದರಿಂದ ಪೂಜೆಯಿಲ್ಲ.
ಜೋರ್ ಬಂಗ್ಲ ಮಂದಿರ
ಕ್ರಿ.ಶ. 1655 ರಲ್ಲಿ ರಘುನಾಥ ಸಿಂಘ ರಾಜನು ನಿರ್ಮಿಸಿದ ಈ ಅದ್ಭುತ ಮಂದಿರವು ಎರಡು ಬಂಗಾಳೀ ಗುಡಿಸಲುಗಳ ಮಾದರಿಯಲ್ಲಿದ್ದು, ಅವುಗಳ ಜಾರುವ ಛಾವಣಿಗಳನ್ನು ಒಟ್ಟಿಗೆ ಸೇರಿಸಿ, ಮೇಲೆ ಒಂದು ಶಿಖರವಿರುವಂತೆ ನಿರ್ಮಿಸಲಾಗಿದೆ! ಗೋಡೆಗಳ ಮೇಲಿನ ಶ್ರೀಕೃಷ್ಣನ ರಾಸಲೀಲೆ ಹಾಗೂ ದಶಾವತಾರ, ರಾಮಾಯಣ, ಮಹಾಭಾರತಗಳ ಅದ್ಭುತ ಕೆತ್ತನೆಗಳು ಮನಸೆಳೆಯುತ್ತವೆ! ಇಲ್ಲಿಯೂ ವಿಗ್ರಹ ಮತ್ತು ಪೂಜೆಗಳಿಲ್ಲ.
ರಾಧಾಶ್ಯಾಮ ಮಂದಿರ
ಕ್ರಿ.ಶ. 1758 ರಲ್ಲಿ ರಾಜಾ ಚೈತನ್ಯ ಸಿಂಘನು ನಿರ್ಮಿಸಿದ ಈ ಲ್ಯಾಟರೈಟ್ ( ಕೆಂಪು ಜೇಡಿಮಣ್ಣು); ಮಂದಿರವು, ಒಂದು ಏಕರತ್ನ, ಅಂದರೆ ಒಂದೇ ಶಿಖರವುಳ್ಳ ಮಂದಿರವಾಗಿದ್ದು, ಎತ್ತರದ ಗೋಡೆಗಳುಳ್ಳ ವಿಶಾಲ ಆವರಣದಲ್ಲಿದೆ. ರಾಜಾ ಚೈತನ್ಯ ಸಿಂಘನ ಕಾಲದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಅವನ ಮೇಲೆ ಆರ್ಥಿಕ ಒತ್ತಡವನ್ನು ತಂದಿತ್ತು! ಆದರೂ ಅವನು ಮನೆತನದ ಸಂಪ್ರದಾಯವಾದ ದೇವಾಲಯ ನಿರ್ಮಾಣವನ್ನು ಬಿಡಲಿಲ್ಲ. ಅವನ ಅಚ್ಚಳಿಯದ ಪ್ರಯತ್ನದ ಫಲವೇ ಈ ಅದ್ಭುತ ಮಂದಿರ! ಇಲ್ಲಿನ ಕೃಷ್ಣಲೀಲೆಯ ಸುಂದರ ಭಿತ್ತಿ ಕೆತ್ತನೆಗಳೊಂದಿಗೆ ಗರ್ಭಗುಡಿಯಲ್ಲಿ ಶ್ರೀ ರಾಧಾಕೃಷ್ಣರ ಸುಂದರ ವಿಗ್ರಹಗಳಿದ್ದು ನಿತ್ಯ ಪೂಜೆ ನಡೆಯುತ್ತದೆ.
ಮದನಮೋಹನ ಮಂದಿರ
ಕ್ರಿ.ಶ. 1694 ರಲ್ಲಿ ದುರ್ಜನ ಸಿಂಘ್ ರಾಜನು ನಿರ್ಮಿಸಿದ ಈ ಮಂದಿರ, ಕಮಾನಿನ ಆಕೃತಿಯ ಬಾಂಗ್ಲಾ ಛಾವಣಿಯ ಮೇಲೆ ಒಂದೇ ಶಿಖರವನ್ನು ಹೊಂದಿದ್ದು, ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಲಾಗಿರುವ, ಈ ಮಾದರಿಯ ಅತ್ಯದ್ಭುತ ಮಂದಿರವಾಗಿದೆ. ಗೋಡೆಗಳ ಮೇಲೆ ಕೃಷ್ಣಲೀಲೆ, ದಶಾವತಾರ, ಮೊದಲಾದ ಸುಂದರ ಕೆತ್ತನೆಗಳಿದ್ದು, ಗರ್ಭಗುಡಿಯಲ್ಲಿ ಶ್ರೀ ರಾಧಾಮನೋಹರರ ಸುಂದರ ವಿಗ್ರಹಗಳಿವೆ. ಈಗಲೂ ಇಲ್ಲಿ ನಿತ್ಯ ಪೂಜೆ ನಡೆಯುವುದಾಗಿದ್ದು, ರಾಸೋತ್ಸವ, ಮತ್ತು ದೋಲಾಯಾತ್ರೆ ( ಹೋಳಿ) ಗಳು ಇಲ್ಲಿ ನಡೆಯುವ ಆಕರ್ಷಕ ಉತ್ಸವಗಳಾಗಿವೆ! ಇಲ್ಲಿನ ಅರ್ಚಾವಿಗ್ರಹವಾದ ಮದನಮೋಹನನ ಬಗ್ಗೆ ಒಂದು ಕಥೆ ಹೇಳುತ್ತಾರೆ. ಗೋಪಾಲಸಿಂಘನೆಂಬ ರಾಜನು ಬಿಷ್ಣುಪುರವನ್ನು ಆಳುತ್ತಿದ್ದಾಗ, ಮರಾಠಾ ಲೂಟಿಕೋರರು ದಾಳಿ ಮಾಡಲು, ಅವನು ಎದುರಿಸಲಾಗದೇ ಮದನಮೋಹನ ದೇವರಿಗೆ ಶರಣಾದನಂತೆ. ಆಗ ಮದನಮೋಹನನು ನೀಲಿ ವಸ್ತ್ರವನ್ನು ಧರಿಸಿದ ಒಬ್ಬ ಯುವಕನ ರೂಪದಲ್ಲಿ ಬಂದು, ದಲ್ ಮದಲ್ ಎಂಬ ಫಿರಂಗಿಯನ್ನು ಸಿಡಿಸಿ ಅನೇಕ ಲೂಟಿಕೋರರನ್ನು ಕೊಂದು ಬಿಷ್ಣುಪುರವನ್ನು ರಕ್ಷಿಸಿದುದನ್ನು ಅನೇಕರು ನೋಡಿದರಂತೆ!
ಈ ದೇವಾಲಯ, ದೊಡ್ಡ ಗೋಡೆಗಳ ವಿಶಾಲ ಆವರಣದಲ್ಲಿದ್ದು, ಇಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಪಾಕಶಾಲಾ ಕಟ್ಟಡವೂ ಇದೆ.
ಇತರ ಮಂದಿರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು
ಬಿಷ್ಣುಪುರದಲ್ಲಿ ಈ ಮಂದಿರಗಳಲ್ಲದೇ, ಲಾಲ್ ಜಿ ಮಂದಿರ, ಮದನಗೋಪಾಲ ಮಂದಿರ, ನಂದಲಾಲ್ ಮಂದಿರ, ಕೃಷ್ಣ ಬಲರಾಮ ಮಂದಿರ, ಮೃಣ್ಮಯೀದೇವಿಯ ಮಂದಿರ, ಛಿನ್ನಮಸ್ತಾದೇವಿಯ ಮಂದಿರ, ಮೊದಲಾದ ಅನೇಕ ಮಂದಿರಗಳಿವೆ. ಇವಲ್ಲದೇ, ದಲ್ ಮದಲ್ ಫಿರಂಗಿ, ಕೋಟೆಯ ಹೆಬ್ಬಾಗಿಲು, ಗುಮ್ ಗಢ ಎಂಬ ಅಪರಾಧಿಗಳ ಶಿಕ್ಷಾಸ್ಥಾನ, ಕಲ್ಲಿನ ರಥ, ವಸ್ತುಸಂಗ್ರಹಾಲಯ, ರಘುನಾಥ ಸಿಂಘನು ನಿರ್ಮಿಸಿದ ಲಾಲ್ ಬಂಧ್ ಕೆರೆ, ಮೊದಲಾದ ಅನೇಕ ಪ್ರೇಕ್ಷಣೀಯ ತಾಣಗಳಿವೆ ಇಲ್ಲಿ. ಇಲ್ಲಿ ಲಾಲ್ ಬಂಧ್ ಕೆರೆಯ ಬಗೆಗಿನ ಒಂದು ಕಥೆಯನ್ನು ಹೇಳಲೇ ಬೇಕು. ರಘುನಾಥ ಸಿಂಘನು ದೆಹಲಿಯಿಂದ ಬಹಾದುರ್ ಖಾನ್ ಎಂಬ ಸಂಗೀತಗಾರನನ್ನು ಇಲ್ಲಿಗೆ ಕರೆತಂದು ಹಿಂದೂಸ್ತಾನಿ ಘರಾನಾ ಸಂಗೀತವನ್ನು ಇಲ್ಲಿ ಪರಿಚಯಿಸಿದಾಗ, ಅವನೊಂದಿಗೆ ಬಂದ ಪರ್ಷಿಯಾ ನರ್ತಕಿ ಲಾಲ್ ಬಾಯಿಗೂ ಇವನಿಗೂ ಪ್ರೇಮವಾಗಿ, ಅವಳಿಗಾಗಿ ಲಾಲ್ ಬಂಧ್ ಕೆರೆಯನ್ನು ಇವನು ನಿರ್ಮಿಸಿದನೆಂದು ಹೇಳುತ್ತಾರೆ. ಆದರೆ ಅವರ ಪ್ರೇಮವನ್ನು ಸಹಿಸದ ಅವನ ರಾಣಿ ಚಂದ್ರಪ್ರಭೆಯು ಅವನನ್ನೂ ಲಾಲ್ ಬಾಯಿಯನ್ನೂ ಈ ಕೆರೆಯಲ್ಲಿ ದೋಣಿವಿಹಾರ ಮಾಡಿಸುತ್ತಾ ಕೆರೆಯಲ್ಲಿ ಮುಳುಗಿಸಿ ಕೊಂದು, ಅನಂತರ ತಾನೂ ಸಹಗಮನ ಮಾಡಿದಳೆಂಬ ಒಂದು ರೋಚಕ ಕಥೆಯಿದೆ. ಇನ್ನೊಂದು ಕಥೆಯ ಪ್ರಕಾರ, ಜನರು ಲಾಲ್ ಬಾಯಿ ಮತ್ತು ಅವಳಿಗೆ ರಾಜನಿಂದ ಹುಟ್ಟಿದ ಮಗುವನ್ನು ದೋಣಿಗೆ ಕಟ್ಟಿ ಮುಳುಗಿಸಿದರೆಂದು ಹೇಳುತ್ತಾರೆ. ಈ ಕೆರೆ ಭೂತಾವೇಶಿತವಾಗಿದೆಯೆಂದೂ ಅಮಾವಾಸ್ಯೆಯ ರಾತ್ರಿ ಇಲ್ಲಿ ಬಂದರೆ ಒಂದು ಹೆಣ್ಣಿನ ಆರ್ತನಾದ ಕೇಳುವುದೆಂದೂ ಇಲ್ಲಿನ ಜನರು ಹೇಳುತ್ತಾರೆ.
ಬಿಷ್ಣುಪುರ ಘರಾನಾ ಇಂದಿಗೂ ಪ್ರಸಿದ್ಧವಾಗಿದೆ.
ಇತರ ಆಕರ್ಷಣೆಗಳು
ಬಿಷ್ಣುಪುರವು ಹಲವಾರು ಕರಕುಶಲ ಕಲೆಗಳಿಗೆ ಪ್ರಸಿದ್ಧವಾಗಿದೆ. ಕೃಷ್ಣಲೀಲೆ ಹಾಗೂ ಪೌರಾಣಿಕ ಚಿತ್ರಗಳ ಅಂಚುಗಳಿರುವ ಬಾಲುಚಾರಿ ಎಂಬ ಬಗೆಯ ಸೀರೆ ಇಲ್ಲಿನ ಒಂದು ಮುಖ್ಯ ಕೊಡುಗೆಯಾಗಿದೆ. ಅಂತೆಯೇ ಇದು ಟೆರ್ರಕೋಟಾ ತಾಣವಾಗಿದ್ದು, ಅದ್ಭುತವಾದ ಟೆರ್ರಕೋಟ ಕಲಾತ್ಮಕ ವಸ್ತುಗಳು ಇಲ್ಲಿ ಸುಲಭ ಬೆಲೆಗೆ ದೊರೆಯುತ್ತವೆ. ಟೆರ್ರಕೋಟ ಶಂಖಗಳೂ ಇಲ್ಲಿನ ಒಂದು ಆಕರ್ಷಣೆ. ಹಿತ್ತಾಳೆಯ ಪಾತ್ರೆಗಳೂ ಕಲಾತ್ಮಕ ವಸ್ತುಗಳೂ ಇಲ್ಲಿನ ಇನ್ನೊಂದು ಆಕರ್ಷಣೆ. ಅಂತೆಯೇ ದಶಾವತಾರ ಕಾರ್ಡ್ ಗಳು ಹಾಗೂ ಒಡಿಶಾದ ಪಟಚಿತ್ರಗಳು ಇಲ್ಲಿನ ಇನ್ನಿತರ ಪ್ರಮುಖ ಆಕರ್ಷಣೆಗಳು. ಪರ್ಷಿಯಾ ಮೂಲದ ಗಂಜೀಫಾ ಚಿತ್ರಕಲೆಯ ಕಾರ್ಡ್ ಗಳ ಕ್ರೀಡೆ ಭಾರತದ ಹಲವೆಡೆಗಳಲ್ಲಿ ಬೆಳೆದು ಪ್ರಸಿದ್ಧವಾಗಿದ್ದು, ಚಿತ್ರಕಲೆಗೂ ಕ್ರೀಡೆಗೂ ತನ್ನದೇ ಆದ ಕಾಣ್ಕೆ ಕೊಟ್ಟಿದೆ. ಬಿಷ್ಣುಪುರದಲ್ಲೂ ಮಲ್ಲರಾಜರು ದಶಾವತಾರದ ಕಾರ್ಡ್ ಗಳ ಆಟ ಆಡುತ್ತಿದ್ದು ಈಗಲೂ ಇದು ಉಳಿದುಬಂದಿದೆ. ಫೌಜ್ ದಾರ್ ವಂಶದವರು ಪರಂಪರೆಯಿಂದ ಈ ಗಂಜೀಫಾ ಕಾರ್ಡ್ ಗಳನ್ನು ರಚಿಸುತ್ತಿದ್ದು, ಈಗ ಶೀತಲ್ ಫೌಜ್ ದಾರ್ ಎಂಬ ಕಲಾವಿದರು ಇದನ್ನು ಮಾಡುತ್ತಿದ್ದಾರೆ. ಮಾರ್ಗದರ್ಶಿಯೊಂದಿಗೆ ನಾನು ಅವರ ಕಫೇರಿಗೆ ಹೋಗಿ ಅವರನ್ನು ಮಾತನಾಡಿಸಿ ದಶಾವತಾರ ಕಾರ್ಡ್ ಗಳನ್ನು ಖರೀದಿಸಿದೆ. ವಿಷ್ಣುವಿನ ದಶಾವತಾರದ ಚಿತ್ರಗಳಿರುವ ಈ ಕಾರ್ಡ್ ಗಳನ್ನು ಬಟ್ಟೆಯನ್ನು ಬೇಲದ ಹಣ್ಣಿನ ರಸದಿಂದ ಗಟ್ಟಿಗೊಳಿಸಿ, ಸಸ್ಯವರ್ಣಗಳಿಂದ ಚಿತ್ರಗಳನ್ನು ರಚಿಸಿ ಮಾಡಲಾಗುತ್ತದೆ. ಇವನ್ನು ನಾವು ಕ್ರೀಡೆ ಇಲ್ಲವೇ ಸಂಗ್ರಹಕ್ಕಾಗಿ ಖರೀದಿಸಬಹುದು. ಇಲ್ಲಿ ನಾವು ನಮ್ಮಲ್ಲೂ ಇರುವ ಗಂಜೀಫಾ ರಘುಪತಿ ಭಟ್ ಎಂಬ ಗಂಜೀಫಾ ಕಲಾವಿದರನ್ನು ಸ್ಮರಿಸಬಹುದು. ಅವರ ಬಗ್ಗೆ ನಾನು ಶೀತಲ್ ಫೌಜ್ ದಾರ್ ಅವರ ಬಳಿ ಹೇಳಿದಾಗ ಅವರು ತಮಗೆ ಗೊತ್ತೆಂದರು.
ಬಿಷ್ಣುಪುರದಲ್ಲಿ ಉಳಿದುಕೊಳ್ಳಲು ಕೆಲವು ಹೋಟೆಲ್ ಗಳಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಒಂದೆರಡು ದಿನಗಳು ಇಲ್ಲಿರಬಹುದು, ಇಲ್ಲವೇ ಕೋಲ್ಕತಾದಿಂದ ಖಾಸಗಿ ವಾಹನದಲ್ಲಿ ಬೆಳಿಗ್ಗೆ ಬೇಗನೆ ಹೊರಟು, ಸಾಕಷ್ಟು ನೋಡಿ, ರಾತ್ರಿಯ ಹೊತ್ತಿಗೆ ಹಿಂದಿರುಗಬಹುದು. ಬಿಷ್ಣುಪುರಕ್ಕೆ ಹೋಗುವ ದಾರಿಯಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶಾರದಾದೇವಿಯರ ಜನ್ಮಸ್ಥಳಗಳಾದ ಕಾಮಾರ್ಪುಕೂರ್, ಜಯರಾಂಬಾಟಿಗಳನ್ನೂ ನೋಡಬಹುದು. ಊಟ, ತಿಂಡಿಗಳು ಅಷ್ಟಾಗಿ ದೊರೆಯದಿರುವುದರಿಂದ, ಕೋಲ್ಕತಾದಿಂದಲೇ ಏನಾದರೂ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.