ಶನಿವಾರ, ಫೆಬ್ರವರಿ 21, 2026

ಪೌರಾಣಿಕ ಸ್ವಾರಸ್ಯಗಳು - ತನ್ನ ಶವವನ್ನೇ ತಾನು ತಿನ್ನುತ್ತಿದ್ದ ಶ್ವೇತ ರಾಜನ ಕಥೆ

ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು! 
    ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
      ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು! 
    ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆತ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು! 
     ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
     ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ! 
      ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!" 
        ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
       ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು! 
     ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
      ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.
     

ಶನಿವಾರ, ಫೆಬ್ರವರಿ 7, 2026

ಅದ್ಭುತ ರಾಮಾಯಣ

     ಅದ್ಭುತ ರಾಮಾಯಣ, ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಾಗಿದೆ. ಸಂಸ್ಕೃತದಲ್ಲಿ ಮೂಲ ವಾಲ್ಮೀಕಿ ರಾಮಾಯಣವಲ್ಲದೇ ಅದ್ಭುತ, ಆನಂದ, ಮತ್ತು ಅಧ್ಯಾತ್ಮ ರಾಮಾಯಣಗಳೆಂಬ ಮೂರು ಬೇರೆಯ ರಾಮಾಯಣಗಳಿವೆ. ಇವೂ ಕೂಡ ವಾಲ್ಮೀಕಿ ಮಹರ್ಷಿಗಳೇ ರಚಿಸಿದರೆಂಬ ಪ್ರತೀತಿಯಿದ್ದು ಅವುಗಳಲ್ಲೂ ಹಾಗೆಯೇ ಹೇಳಲಾಗಿದೆ. ಆದರೆ ಮೂಲ ವಾಲ್ಮೀಕಿ ರಾಮಾಯಣಕ್ಕಿಂತ ಇವು ಬಹಳ ವಿಭಿನ್ನವಾಗಿದ್ದು ಹಲವಾರು ವಿಚಿತ್ರ ಹಾಗೂ ಸ್ವಾರಸ್ಯಕರ ಕಥೆಗಳನ್ನೊಳಗೊಂಡಿವೆ. ಅಲ್ಲದೇ ಅನೇಕ ಆಧ್ಯಾತ್ಮಿಕ ವಿಚಾರಗಳೂ ಇವುಗಳಲ್ಲಿವೆ. ಇವುಗಳಲ್ಲಿ ಶ್ರೀರಾಮನನ್ನು ಮುಖ್ಯವಾಗಿ ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದು ಭಗವಂತನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಶ್ರೀರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಲಾಗಿದ್ದರೂ ಬಹುತೇಕ ಮಾನವನೆಂಬ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಹಾಗಾಗಿ ವಾಲ್ಮೀಕಿ ರಾಮಾಯಣದಲ್ಲಿ ರಸಪೋಷಣೆ ಹೆಚ್ಚಾಗಿದೆ. ಈ ರಾಮಾಯಣಗಳನ್ನು ಇತರರು ಯಾರೋ ರಚಿಸಿ ವಾಲ್ಮೀಕಿಗಳ ಹೆಸರಿನಲ್ಲಿ ಪ್ರಚುರಪಡಿಸಿರಬೇಕು. ಮಹಾನ್ ಸಂಸ್ಕೃತ ವಿದ್ವಾಂಸರಾದ ವಿ.ರಾಘವನ್ ಅವರು ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳನ್ನು ಕುರಿತು ಆಂಗ್ಲ ಭಾಷೆಯಲ್ಲಿ ಒಂದು ಸೊಗಸಾದ ಚಿಕ್ಕ ಗ್ರಂಥವನ್ನು ಬರೆದಿದ್ದಾರೆ.
    ಈ ಮೂರು ವಿಭಿನ್ನ ಸಂಸ್ಕೃತ ರಾಮಾಯಣಗಳಲ್ಲಿ ಅದ್ಭುತ ರಾಮಾಯಣ ಅತ್ಯಂತ ಚಿಕ್ಕದಾಗಿದ್ದು ಕೇವಲ ಇಪ್ಪತ್ತೇಳು ಸರ್ಗಗಳನ್ನು ಹೊಂದಿದೆ. ಸರಳವಾದ ಸಂಸ್ಕೃತದಲ್ಲಿ ರಚಿತವಾಗಿರುವ ಈ ರಾಮಾಯಣದಲ್ಲಿ ಮೂಲ ರಾಮಾಯಣದ ಕಥೆ ಬಹಳ ಸಂಕ್ಷಿಪ್ತವಾಗಿ ಬಂದಿದೆ. ಇತರ ವಿಚಾರಗಳೇ ಹೆಚ್ಚಾಗಿವೆ. ಮೊದಲಿಗೆ, ವಾಲ್ಮೀಕಿ ಮಹರ್ಷಿ ಮತ್ತು ಅವರ ಶಿಷ್ಯ ಭರದ್ವಾಜರ ಸಂವಾದ ಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲೂ ಇವರಿಬ್ಬರೂ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಭಾರದ್ವಾಜರು, ವಾಲ್ಮೀಕಿ ಮಹರ್ಷಿಗಳು ಶತಕೋಟಿ ಶ್ಲೋಕಗಳನ್ನುಳ್ಳ ರಾಮಾಯಣವನ್ನು ರಚಿಸಿರುವರೆಂದೂ ಅದು ಬ್ರಹ್ಮಲೋಕದಲ್ಲಿ ಪ್ರಸಿದ್ಧವಾಗಿರುವುದೆಂದೂ ಅದರಲ್ಲಿರುವ ಗುಪ್ತ ವಿಚಾರಗಳನ್ನು ಹೇಳಬೇಕೆಂದು ಕೇಳುತ್ತಾರೆ. ಆಗ ಸಂತೋಷಗೊಂಡ ವಾಲ್ಮೀಕಿಗಳು, ಸೀತಾರಾಮರು ಮೂಲತಃ ಪ್ರಕೃತಿ, ಪುರುಷರೆಂದು ಆಧ್ಯಾತ್ಮಿಕವಾಗಿ ಆರಂಭಿಸಿ ಈ ಅದ್ಭುತ ರಾಮಾಯಣವನ್ನು ಹೇಳುತ್ತಾರೆ ‌
     ಇಲ್ಲಿ ವಿಷ್ಣು, ಲಕ್ಷ್ಮಿಯರು ನಾರದರ ಶಾಪದಿಂದ ರಾಮ,ಸೀತೆಯರಾಗಿ ಹುಟ್ಟಿದರೆಂಬ ಸ್ವಾರಸ್ಯಕರ ಕಥೆಯಿದೆ.‌ ನಾರದ ಮತ್ತು ಪರ್ವತ ಋಷಿಗಳು ಅಂಬರೀಷ ರಾಜನ ಮಗಳಾದ ಶ್ರೀಮತಿಯನ್ನು ಮದುವೆಯಾಗಬಯಸಿ ವಿಷ್ಣುವಿನ ಮೂಲಕ ಪರಸ್ಪರರ ಮುಖಗಳನ್ನು ಕಪಿಮುಖಗಳಂತೆ ಮಾಡಿಸಲು, ಶ್ರೀಮತಿಯು ಅವರನ್ನು ಬಿಟ್ಟು ಸ್ವಯಂವರಕ್ಕೆ ಆಗಮಿಸಿದ ವಿಷ್ಣುವನ್ನೇ ಮದುವೆಯಾಗುತ್ತಾಳೆ! ಇದರಿಂದ ಕುಪಿತಗೊಂಡ ಅವರಿಬ್ಬರೂ ವಿಷ್ಣುವಿಗೆ ಮನುಷ್ಯನಾಗಿ ಹುಟ್ಟುವಂತೆ ಶಪಿಸುತ್ತಾರೆ! ಇದೇ ವಿಷ್ಣುವು ರಾಮನಾಗಿ ಅವತರಿಸಲು ಕಾರಣ. ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ. ಅಂತೆಯೇ ಲಕ್ಷ್ಮಿಯ ದಾಸಿಯರು ಒಂದು ಸಮಾರಂಭದಲ್ಲಿ ನಾರದರನ್ನು ಓಡಿಸಿ ತುಂಬುರುವನ್ನು ಸನ್ಮಾನಿಸಲು ಅವರು ಕುಪಿತರಾಗಿ ಲಕ್ಷ್ಮಿಗೆ ರಾಕ್ಷಸ ಗರ್ಭದಲ್ಲಿ ಜನಿಸುವಂತೆ ಶಪಿಸುತ್ತಾರೆ! ಹಾಗಾಗಿ ಲಕ್ಷ್ಮಿಯು ಸ್ವಾರಸ್ಯಕರ ತಿರುವುಗಳಿಂದ ರಾವಣನ ಪತ್ನಿ ಮಂದೋದರಿಯ ಉದರದಲ್ಲಿ ಜನಿಸುತ್ತಾಳೆ! ಸೀತೆಯು ರಾವಣನ ಮಗಳೆಂಬ ಜನಜನಿತ ಕಥೆಗೆ ಇಲ್ಲಿದೆ ಮೂಲ. ತುಂಬುರುವನ್ನು ಸನ್ಮಾನಿಸಲು ಅವನು ಸಂಗೀತಜ್ಞನಾದುದೇ ಕಾರಣವೆಂದು ತಿಳಿದ ನಾರದರು ಗಾನಬಂಧು ಎಂಬ ಗೂಬೆಯಿಂದ ಬಹಳ ಕಷ್ಟಪಟ್ಟು ಸಂಗೀತ ಕಲಿಯುತ್ತಾರೆ. ಇದೊಂದು ಬಹಳ ಸ್ವಾರಸ್ಯಕರ ಕಥೆ! ಇದೇ ಸಂದರ್ಭದಲ್ಲಿ ಹರಿಭಕ್ತ ಹರಿಮಿತ್ರನ ಕಥೆಯೂ ಬರುತ್ತದೆ ‌
          ಇಲ್ಲಿ ಶ್ರೀರಾಮನು ಹನುಮಂತನಿಗೆ ತನ್ನ ನಾರಾಯಣ ಸ್ವರೂಪವನ್ನು ತೋರಿಸಿ ಜ್ಞಾನೋಪದೇಶ ಮಾಡುವ ಒಂದು ವಿಶೇಷ ಅಧ್ಯಾಯವಿದೆ.
         ಅನಂತರ ಬರುವುದೇ ಅದ್ಭುತ ರಾಮಾಯಣದ ಮುಖ್ಯ ಕಥೆ. ಋಷಿಮುನಿಗಳು ಅಯೋಧ್ಯೆಗೆ ಬಂದು ಶ್ರೀ ರಾಮನನ್ನು ರಾವಣನನ್ನು ಕೊಂದುದಕ್ಕಾಗಿ ಪ್ರಶಂಸಿಸಲು, ಸೀತೆಯು ನಕ್ಕು ದಶಮುಖ ರಾವಣನ ಅಣ್ಣನಾದ ಸಹಸ್ರಮುಖ ರಾವಣನು ಪುಷ್ಕರ ದ್ವೀಪವನ್ನು ಆಳುತ್ತಿರುವನೆಂದೂ ಅವನನ್ನು ಕೊಂದರೆ ಅದು ನಿಜವಾದ ಸಾಹಸವೆಂದೂ ಹೇಳಲು ರಾಮನು ವಾನರ, ರಾಕ್ಷಸ ಸೈನ್ಯಗಳೊಂದಿಗೆ ಪುಷ್ಕರ ದ್ವೀಪಕ್ಕೆ ಹೋಗಿ ಮುತ್ತಿಗೆ ಹಾಕಿ ಸಹಸ್ರಮುಖ ರಾವಣನೊಂದಿಗೆ ಯುದ್ಧ ಮಾಡಲು, ಅವನು ವಾನರ, ರಾಕ್ಷಸ ಸೈನ್ಯಗಳನ್ನು ತನ್ನ ಬಾಣಗಳಿಂದ ಅವರವರ ರಾಜ್ಯಗಳಿಗೇ ದೂಡಿ, ರಾಮನನ್ನೂ ಮೂರ್ಛೆಗೊಳಿಸಿಬಿಡುತ್ತಾನೆ! ಆಗ ಸೀತೆಯು ಮಹಾಕಾಳಿಯಾಗಿ ಸಹಸ್ರಮುಖ ರಾವಣನನ್ನು ಕೊಲ್ಲುತ್ತಾಳೆ! ಅನಂತರ ರಾಮನು ಎಚ್ಚೆತ್ತು ಸೀತೆಯನ್ನು ಸಹಸ್ರನಾಮ ಸ್ತೋತ್ರದಿಂದ ಸ್ತುತಿಸುತ್ತಾನೆ! ಅನಂತರ ಅವರು ಅಯೋಧ್ಯೆಗೆ ಹಿಂದಿರುಗುತ್ತಾರೆ.
        ಹೀಗೆ ಅದ್ಭುತ ಕಥೆಗಳನ್ನೊಳಗೊಂಡ ಅದ್ಭುತ ರಾಮಾಯಣ, ಸೀತಾಪರವಾದ ರಾಮಾಯಣ. ನಮ್ಮಲ್ಲಿ ಪರಸಸ್ತುವನ್ನು ಪ್ರಕೃತಿ ಮತ್ತು ಪುರುಷ, ಎರಡೂ ರೂಪಗಳಲ್ಲಿ ಆರಾಧಿಸುವ ಕ್ರಮವಿದೆ. ನಾರಾಯಣ ಪುರುಷನಾದರೆ ಲಕ್ಷ್ಮಿಯು ಪ್ರಕೃತಿ. ಶಿವನು ಪುರುಷನಾದರೆ ಪಾರ್ವತಿ ಶಕ್ತಿ. ಹೀಗೆ ಪುರುಷ, ಪ್ರಕೃತಿ, ಎರಡೂ ರೂಪಗಳಿಗೂ ಆರಾಧನೆಯಿದೆ. ವಿಷ್ಣುಪರವಾದ ಭಾಗವತ ಪುರಾಣವಿರುವಂತೆಯೇ ದೇವಿಯ ಪರವಾದ ದೇವೀಭಾಗವತ ಪುರಾಣವೂ ಇದೆ. ಶಕ್ತಿಯ ಆರಾಧನೆ ಮೊದಲಿನಿಂದಲೂ ನಮ್ಮಲ್ಲಿ ಇದೆ. ಶಾಕ್ತೇಯರ ಪಂಥವೇ ಇದೆ. ಶಾಕ್ತಪರವಾದ ತಂತ್ರಗಳೂ ಇವೆ. ಅದ್ಭುತ ರಾಮಾಯಣ ಪ್ರಾಯಶಃ ಶಕ್ತಿ ಪೂಜೆಯ ಉಚ್ಛ್ರಾಯ ಕಾಲದಲ್ಲಿ ರಚಿತವಾಗಿರಬಹುದು. ಹಾಗಾಗಿ ಇಲ್ಲಿ ಸೀತೆ ಆದಿಶಕ್ತಿ ಮಹಾಕಾಳಿಯಾಗಿ ವಿಜೃಂಭಿಸುವ ಕಥೆಯಿದೆ. 
      ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ವಿಭಿನ್ನ ರಾಮಾಯಣ. ಎಲ್ಲರೂ ತಿಳಿದಿರಬೇಕಾದುದಾಗಿದೆ. ಇದನ್ನೇ ಹಿಂದೆ ಕನ್ನಡದ ಮಹಾಕವಿ ಮುದ್ದಣನು ಹಳೆಗನ್ನಡದಲ್ಲಿ ರಚಿಸಿದ್ದ.  ನಾನು ಇದನ್ನು ಸಂಸ್ಕೃತದಿಂದ ಹೊಸಗನ್ನಡದಲ್ಲಿ ಅನುವಾದಿಸಿದ್ದೇನೆ. ಇದಕ್ಕೆ ನಾನು ವಾರಾಣಸಿಯ ಚೌಖಂಬ ಪ್ರಕಾಶನದ ಹಿಂದೀ ಅನುವಾದಸಹಿತವಾದ ಮೂಲ ಗ್ರಂಥವನ್ನು ಬಳಸಿಕೊಂಡಿದ್ದೇನೆ.
      

ಶುಕ್ರವಾರ, ಫೆಬ್ರವರಿ 6, 2026

ಕೆರೆಯುವಂತೆ ಮಾಡುವ ಅರ್ಟಿಕೇರಿಯ

ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರಚೋದನಾತ್ಮಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಇವರಲ್ಲಿ IgE ಎಂಬ ಆಂಟಿಬಾಡಿಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವು ರಕ್ತದಲ್ಲಿರುವ ಬೇಸೋಫಿಲ್ ಗಳೆಂಬ ಬಿಳಿರಕ್ತಕಣಗಳನ್ನೂ ಚರ್ಮ, ಶ್ವಾಸಾಂಗಗಳು, ಜೀರ್ಣಾಂಗಗಳು, ಮೊದಲಾದ ಅಂಗಾಂಗಗಳಲ್ಲಿರುವ ಮಾಸ್ಟ್ ಸೆಲ್ ಗಳೆಂಬ ಜೀವಕೋಶಗಳನ್ನೂ ಬಡಿದು ಅವುಗಳಿಂದ ಹಿಸ್ಟಮಿನ್, ಲ್ಯುಕೋಟ್ರಿನ್ ಮೊದಲಾದ ರಾಸಾಯನಿಕಗಳು ಬಿಡುಗಡೆಯಾಗಿ ರಕ್ತನಾಳಗಳನ್ನು ಹಿಗ್ಗಿಸುತ್ತವೆ ಹಾಗೂ ನರಗಳನ್ನು ಪ್ರಚೋದಿಸುತ್ತವೆ. ಇದರಿಂದ ರಕ್ತ ಹೆಚ್ಚಾಗಿ ಹರಿದು, ಅದರಲ್ಲಿನ ನೀರಿನಂಶ ಹೊರಚೆಲ್ಲಿ ಕೆಂಪು ಬಣ್ಣ, ಹಾಗೂ ಊತಗಳಾಗುತ್ತವೆ. ನರಗಳ ಪ್ರಚೋದನೆಯಿಂದ ಕೆಂಪು ಬಣ್ಣ ಸುತ್ತಲೂ ಹರಡಿ, ಬಹಳ ತುರಿಕೆಯುಂಟಾಗುತ್ತದೆ. ಈ ಖಾತೆಗಳಿಗೆ ವೀಲ್ ಗಳೆಂದು ಕರೆಯುತ್ತಾರೆ.‌ಕನ್ನಡದಲ್ಲಿ ಇವನ್ನು ಗಂಧೆಗಳು ಅಥವಾ ದದ್ದುಗಳು ಎನ್ನುತ್ತಾರೆ. ಈ ಗಂಧೆಗಳು ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ನಾಲ್ಕು ಗಂಟೆಗಳೊಳಗೆ ಹೊರಟುಹೋಗುತ್ತವೆ. ಅನಂತರ ಮತ್ತೆ ಮತ್ತೆ ಬರುತ್ತಿರುತ್ತವೆ.
     ಈ ಅರ್ಟಿಕೇರಿಯಾಗೆ ಕಾರಣವಾಗುವ ಪ್ರಚೋದನಾತ್ಮಕ ವಸ್ತುಗಳು ಹಲವಾರಿರುತ್ತವೆ. ಅವು ಆಹಾರ ಪದಾರ್ಥಗಳಿರಬಹುದು ( ಸಾಮಾನ್ಯವಾಗಿ ಮೊಟ್ಟೆ, ಮೀನು, ಬೀಜಗಳು ಇತ್ಯಾದಿ), ಉಸಿರಿನಲ್ಲಿ ತೆಗೆದುಕೊಳ್ಳುವಂಥವು ( ಧೂಳು, ಮನೆ ಧೂಳಿನಲ್ಲಿರುವ ನುಸಿ ಎಂಬ ಕೀಟ, ಹೂವಿನ ಪರಾಗ, ಅನಿಲಗಳು ಇತ್ಯಾದಿ), ಔಷಧಿಗಳು, ಮೊದಲಾದವು. ಕೀಟಗಳ ಕಚ್ಚುವಿಕೆ, ಕರುಳಿನಲ್ಲಿ ವಾಸಿಸುವ ಜಂತು ಹುಳು, ಕೊಕ್ಕೆ ಹುಳು, ಮೊದಲಾದ ಹುಳುಗಳು, ಸೋಂಕು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮುಂತಾದವುಗಳೂ ಅಲರ್ಜಿಯನ್ನು ಪ್ರಚೋದಿಸುತ್ತವೆ. ಇವಲ್ಲದೇ, ಚರ್ಮದ ಸ್ಪರ್ಶಕ್ಕೆ ಬರುವ ಕೂದಲ ಬಣ್ಣ, ಸೌಂದರ್ಯ ವರ್ಧಕಗಳು, ಅಂಗರಾಗ ದ್ರವ್ಯಗಳು, ಪ್ರಾಣಿಗಳ ಕೂದಲು ಮತ್ತು ಹೊಟ್ಟು, ಇವೆಲ್ಲವೂ ಸ್ಥಳೀಯವಾಗಿ ಅರ್ಟಿಕೇರಿಯ ಉಂಟುಮಾಡುತ್ತವೆ. ಇವಲ್ಲದೇ ಭೌತಿಕ ಅಂಶಗಳಾದ ಚಳಿ, ಸೆಖೆ, ಬಿಸಿಲು, ನೀರು, ಮೈ ಮೇಲಿನ ಒತ್ತಡ, ಶ್ರಮ ಮತ್ತು ವ್ಯಾಯಾಮ, ಇವೂ ಕೂಡ ಕೆಲವೊಮ್ಮೆ ಅರ್ಟಿಕೇರಿಯಾವನ್ನು ಪ್ರಚೋದಿಸಬಹುದು. ಕೆಲವರಿಗೆ ವ್ಯಾಯಾಮ, ಶ್ರಮಗಳಾದಾಗ ಹಾಗೂ ಅತಿ ಖಾರ ಪದಾರ್ಥಗಳನ್ನು ಸೇವಿಸಿದಾಗ ಮೈಯಲ್ಲಿ ಬಿಸಿಯೇರಿ ನರಗಳ ತುದಿಗಳಿಂದ ಒಸರುವ ಅಸಿಟೈಲ್ ಕೋಲೀನ್ ದ್ರವ ಹೆಚ್ಚಿ ಅದೂ ಇದನ್ನು ಪ್ರಚೋದಿಸುತ್ತದೆ. ಇದನ್ನು ಕೋಲಿನರ್ಜಿಕ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಕೆಲವರಿಗೆ ಆಟೋ ಆಂಟಿಬಾಡಿಗಳು ಉತ್ಪತ್ತಿಯಾಗಿ ಇವು ಅವರ IgE ಆಂಟಿಬಾಡಿಗಳನ್ನೂ ಮಾಸ್ಟ್ ಸೆಲ್ ಗಳನ್ನೂ ಬೇಸೋಫಿಲ್ ಗಳನ್ನೂ ಪ್ರಚೋದಿಸಿ ಅರ್ಟಿಕೇರಿಯ ಉಂಟಾಗುತ್ತದೆ. ಇದನ್ನು ಆಟೋ ಇಮ್ಯೂನ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಮಾಸ್ಟ್ ಸೆಲ್ ಗಳು ತುಂಬಾ ಹೆಚ್ಚಾಗಿ ಅರ್ಟಿಕೇರಿಯ ಉಂಟಾಗುತ್ತದೆ. ಈ ಬಗೆಯಲ್ಲಿ ಗಂಧೆಗಳು ಹೋದ ಬಳಿಕ ಬಣ್ಣದ ಕಲೆಗಳು ಉಳಿಯುತ್ತವೆ. ಇದನ್ನು ಅರ್ಟಿಕೇರಿಯ ಪಿಗ್ಮೆಂಟೋಸ ಎನ್ನುತ್ತಾರೆ. ಹೀಗೆ ಅರ್ಟಿಕೇರಿಯ ಹಲವು ಕಾರಣಾಂಶಗಳಿಂದ ಆಗುತ್ತದೆ.
    ಅರ್ಟಿಕೇರಿಯಾವನ್ನು ತೀವ್ರ ( ಅಕ್ಯೂಟ್) ಮತ್ತು ದೀರ್ಘಕಾಲದ ( ಕ್ರಾನಿಕ್) ಎಂದು ವಿಂಗಡಿಸಲಾಗುತ್ತದೆ. ಅರ್ಟಿಕೇರಿಯ ಆರಂಭವಾಗಿ ಆರು ವಾರಗಳ ಒಳಗಿದ್ದರೆ ಅದನ್ನು ತೀವ್ರ ಎನ್ನಲಾಗುತ್ತದೆ, ಹಾಗೂ ಆರು ವಾರಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ದೀರ್ಘ ಕಾಲದ್ದೆನ್ನಲಾಗುತ್ತದೆ. ತೀವ್ರ ಅರ್ಟಿಕೇರಿಯದಲ್ಲಿ ಕಾರಣ ಸುಲಭವಾಗಿ ತಿಳಿಯುತ್ತದೆ ಹಾಗೂ ಅದು ಚಿಕಿತ್ಸೆಗೆ ಬೇಗನೆ ಸ್ಪಂದಿಸುತ್ತದೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕಾರಣ ತಿಳಿಯುವುದು ಬಹಳ ಕಷ್ಟ ಹಾಗೂ ಅದು ಚಿಕಿತ್ಸೆಗೆ ಸ್ಪಂದಿಸುವುದು ಬಹಳ ನಿಧಾನ.‌ ಎಷ್ಟೋ ದೀರ್ಘಾವಧಿಯ ಅರ್ಟಿಕೇರಿಯಾಗಳಲ್ಲಿ ಕಾರಣವೇ ಪತ್ತೆಯಾಗುವುದಿಲ್ಲ.
     ಅರ್ಟಿಕೇರಿಯವನ್ನು ಹೋಗಲಾಡಿಸಲು ಹಾಗೂ ಅದು ಬಾರದಂತೆ ನಿವಾರಿಸಲು, ಪ್ರಚೋದನಾತ್ಮಕ ಅಂಶಗಳನ್ನು ಗುರುತಿಸಿ ಅವುಗಳಿಂದ ದೂರವಿರುವುದು ಬಹಳ ಮುಖ್ಯ. ವೈದ್ಯರು ರೋಗಿಯ ಸುದೀರ್ಘ ಚರಿತ್ರೆಯನ್ನು ತೆಗೆದುಕೊಂಡು ಅವನಿಗೆ ಪ್ರಚೋದನಾತ್ಮಕ ಅಂಶಗಳು ಯಾವುವಿರಬಹುದೆಂದು ತಿಳಿಯಲು ಸಹಾಯ ಮಾಡುತ್ತಾರೆ. ಅರ್ಟಿಕೇರಿಯ ಲಕ್ಷಣಗಳನ್ನು ಹೋಗಲಾಡಿಸಲು ಆಂಟಿಹಿಸ್ಟಮಿನ್ ಔಷಧಿಗಳನ್ನು ನೀಡಲಾಗುತ್ತದೆ. ಇವು ಹಿಸ್ಟಮಿನ್ ಅನ್ನು ವಿರೋಧಿಸಿ ಗಂಧೆಗಳನ್ನೂ ಕೆರೆತವನ್ನೂ ಹೋಗಲಾಡಿಸುತ್ತವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ಎರಡು ಬಗೆಯ ಆಂಟಿಹಿಸ್ಟಮಿನ್ ಮಾತ್ರೆಗಳನ್ನು ದೀರ್ಘಕಾಲ ಸೇವಿಸಬೇಕಾಗುತ್ತದೆ. ನಿದ್ರೆ ಬರಿಸುವ, ಬಾಯಿ ಒಣಗಿಸುವ, ಮೊದಲಾದ ಕೆಲವು ಅಡ್ಡಪರಿಣಾಮಗಳನ್ನು ಬಿಟ್ಟರೆ ಇವು ಬಹುತೇಕ ಸುರಕ್ಷಿತ. ಆದರೆ ಇವುಗಳನ್ನು ವೈದ್ಯರ ನಿರ್ದೇಶನದಂತೆ ಬಳಸಬೇಕು. ತೀವ್ರವಾದ ಅರ್ಟಿಕೇರಿಯಾಗೆ ಕೆಲವೊಮ್ಮೆ ಸ್ಟಿರಾಯ್ಡ್ ಮಾತ್ರೆ ಅಥವಾ ಚುಚ್ಚುಮದ್ದು ಬೇಕಾಗಬಹುದು. ಇದನ್ನೂ ವೈದ್ಯರ ನಿರ್ದೇಶನದಂತೆ ತೆಗೆದುಕೊಳ್ಳಬೇಕು. ಅರ್ಟಿಕೇರಿಯಾದ ನವೆಯನ್ನು ಹೋಗಲಾಡಿಸುವಲ್ಲಿ ಕ್ಯಾಲಮಿನ್, ಆಲೋ ವೀರಾ, ತೇವಾಂಶ ಹೆಚ್ಚಿಸುವ ದ್ರಾವಣಗಳು ಸಹಾಯ ಮಾಡುತ್ತವೆ. ಜಂತು ಹುಳು ಮೊದಲಾದ ಹುಳುಗಳ ಬಾಧೆಗೆ ಹುಳು ನಿರೋಧಕ ಔಷಧಿ ನೀಡಲಾಗುತ್ತದೆ.
     ದೀರ್ಘಕಾಲದ ಅರ್ಟಿಕೇರಿಯದಲ್ಲಿ ಕೆಲವಾರು ರಕ್ತ ಪರೀಕ್ಷೆಗಳನ್ನು ಮಾಡಿ ಕಾರಣವನ್ನು ತಿಳಿಯಲು ಪ್ರಯತ್ನಿಸಿ ಚಿಕಿತ್ಸೆ ಮಾಡಲಾಗುತ್ತದೆ. ಆಟೋ ಇಮ್ಯೂನ್ ಅರ್ಟಿಕೇರಿಯದಲ್ಲಿ ವ್ಯಕ್ತಿಯ ರಕ್ತವನ್ನು ತೆಗೆದುಕೊಂಡು ಸೆಂಟ್ರಿಫ್ಯೂಜ್ ಯಂತ್ರದಿಂದ ನೀರಿನಂಶವಾದ ಪ್ಲಾಸ್ಮಾವನ್ನು ಬೇರ್ಪಡಿಸಿ ಅವನಿಗೇ ಚುಚ್ಚುಮದ್ದು ನೀಡಲಾಗುತ್ತದೆ. ಹೀಗೆ ಅರ್ಟಿಕೇರಿಯಾಗೆ ಅನೇಕ ಬಗೆಯ ಚಿಕಿತ್ಸೆಗಳಿವೆ. ದೀರ್ಘಕಾಲದ ಅರ್ಟಿಕೇರಿಯದಲ್ಲಿ ವ್ಯಕ್ತಿಗೆ ಮಾನಸಿಕವಾಗಿ ಕಷ್ಟವಾಗಬಹುದು ಹಾಗೂ ಕೆಲಸ ಮಾಡಲು, ಸುಖವಾಗಿ ಜೀವನ ನಡೆಸಲು ಕಷ್ಟವಾಗಬಹುದು. ಆದರೆ ಭರವಸೆ ಕಳೆದುಕೊಳ್ಳದೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮನಸ್ಸನ್ನು ಹಲವಾರು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನವೆಯನ್ನು ಮರೆಯಲು ಪ್ರಯತ್ನಿಸಿದರೆ ಸುಧಾರಣೆ ಕಂಡುಬಂದು ಬೇಗನೆ ಗುಣವಾಗುತ್ತದೆ. 
                                    ಡಾ.ಬಿ.ಆರ್.ಸುಹಾಸ್