ಗುರುವಾರ, ಏಪ್ರಿಲ್ 2, 2026

ಸುಂದರೀಶತಕ -೧೫

ಸಂಸ್ಕೃತ ಮೂಲ 

ವಯಸಾ ಕುಂಭಕೃತಾಸ್ಯಾ: ಪರಿಭ್ರಮತ್ಕಾಂತಿಮಂಡಲಚ್ಛಲತ: /
ಅಭ್ರಮಿ ಕಿಮುರಸಿ ಚಕ್ರಂ ಕುಚಕುಂಭಂ ಕರ್ತುಕಾಮೇನ //

ಕನ್ನಡ ಅನುವಾದ 

    ' ಈ ಸುಂದರಿಯ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸಲು ಇವಳ ವಕ್ಷಸ್ಥಳದಲ್ಲಿ ಪರಿಭ್ರಮಿಸುವ ಕಾಂತಿಮಂಡಲವೆಂಬ ನೆಪದಲ್ಲಿ ಚಕ್ರವನ್ನು ತಿರುಗಿಸಿದನೇ?'
     ಇಲ್ಲಿ ಕವಿಯು ಸುಂದರಿಯ ಯೌವನವನ್ನು ಕುಂಬಾರನಿಗೆ ಹೋಲಿಸಿದ್ದಾನೆ! ಅವಳ ದುಂಡುಕುಚಗಳನ್ನು ಅವನು ನಿರ್ಮಿಸುವ ಕುಂಭಗಳಿಗೆ ಹೋಲಿಸಿದ್ದಾನೆ! ಈ ಕುಚಕುಂಭಗಳನ್ನು ನಿರ್ಮಿಸಲು ಚಕ್ರವನ್ನು ತಿರುಗಿಸಬೇಕಲ್ಲವೇ? ಆ ಚಕ್ರವೇ ಅವಳ ವಕ್ಷಸ್ಥಳದಲ್ಲಿ ರಾರಾಜಿಸುತ್ತಿರುವ ಕಾಂತಿಮಂಡಲ! ಹೀಗೆ ಯೌವನವೆಂಬ ಕುಂಬಾರನು ಕುಚಗಳೆಂಬ ಕುಂಭಗಳನ್ನು ನಿರ್ಮಿಸುವ ಆಸೆಯಿಂದ ಅವಳ ವಕ್ಷಸ್ಥಳದಲ್ಲಿ ಕಾಂತಿಮಂಡಲವೆಂಬ ಚಕ್ರವನ್ನು ತಿರುಗಿಸಿದನೇ ಎನ್ನುತ್ತಾ ಕವಿಯು, ಯೌವನದಲ್ಲಿ ಹೆಣ್ಣಿನಲ್ಲಿ ಉದಯಿಸುತ್ತಿರುವ ಸುಂದರ ಕುಚಕುಂಭಗಳನ್ನು ವರ್ಣಿಸುತ್ತಾನೆ.

ಸುಂದರೀಶತಕ -೧೪

ಸಂಸ್ಕೃತ ಮೂಲ 

ವಕ್ಷಸಿ ಸುಮುಖಿ ಭವತ್ಯಾ ಮನೋಹರಂ ಕಾಂತಿಮಂಡಲಂ ಜಯತಿ /
ಭ್ರಾಮಿತಮಭಿನವವಯಸಾ ಕಾಭನೃಪಾದೇಶಚಕ್ರಮಿವ //

ಕನ್ನಡ ಅನುವಾದ 
      ' ಎಲೈ ಸುಮುಖಿ! ನಿನ್ನ ವಕ್ಷಸ್ಥಳದಲ್ಲಿ ಮನೋಹರವಾದ ಕಾಂತಿಮಂಡಲವು ವಿಜಯಶಾಲಿಯಾಗುತ್ತದೆ! ಅದು, ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ!' 
     ಹೆಣ್ಣಿನ ಸೌಂದರ್ಯಕ್ಕೆ ಬಹು ಮುಖ್ಯವಾದ ಅಂಗಗಳೆಂದರೆ ಕುಚಗಳು! ಆ ತುಂಬುಕುಚಗಳ ಕಾರಣದಿಂದ ವಕ್ಷಸ್ಥಳದಲ್ಲಿ ಉಂಟಾಗಿರುವ ಮನೋಹರವಾದ ಕಾಂತಿಮಂಡಲವು ಕಾಮದೇವನೆಂಬ ರಾಜನು ತನ್ನ ಯೌವನಾವಸ್ಥೆಯಲ್ಲಿ ಮಾಡಿದ ಆಜ್ಞಾಚಕ್ರದಂತಿದೆ ಎಂದು ಕವಿಯು ಹೆಣ್ಣಿನ ವಕ್ಷಸ್ಥಳವನ್ನು ಉತ್ಪ್ರೇಕ್ಷಿಸುತ್ತಾ ವರ್ಣಿಸುತ್ತಾನೆ.

ಸುಂದರೀಶಚಕ -೧೩

ಸಂಸ್ಕೃತ ಮೂಲ 

ಸುತನೋರಿಯತ್ಪ್ರದೇಶೇ ತಿಷ್ಠತು ನವರೋಮರಾಜಿಭುಜಗೀತೀ /
ತ್ರಿವಲಿಸತ್ಯರೇಖಾ ವಯ:ಫಣಿಗ್ರಾಹಿಣಾಕಾರಿ //

ಕನ್ನಡ ಅನುವಾದ 
     ' ಈ ಸುಂದರಿಯ ನವರೋಮರಾಜಿ ಎಂಬ ಸರ್ಪಿಣಿಯು ಇಲ್ಲೇ ಇರಲಿ ಎಂದು ಯೌವನವೆಂಬ ಹಾವಾಡಿಗನು ತ್ರಿವಳಿಗಳೆಂಬ ಮೂರು ಸತ್ಯರೇಖೆಗಳನ್ನು ಗೀಚಿದ್ದಾನೆ!'
     ಇಲ್ಲಿ ಕವಿಯು ಸುಂದರ ಹೆಣ್ಣಿನ ನವರೋಮರಾಜಿಯನ್ನು ( ರೋಮಾವಲಿ ಅಥವಾ ರೋಮರಾಜಿ, ಹೆಣ್ಣಿನ ನಾಭಿಯ ಮೇಲಿನ ತೆಳುಗೂದಲಿನ ಸಾಲು) ಒಂದು ಸರ್ಪಿಣಿಗೆ ಹೋಲಿಸಿದ್ದಾನೆ. ಹಾವಾಡಿಗನು ಹೇಗೆ ಸರ್ಪವು ಎಲ್ಲೂ ಹೋಗದಂತೆ ಅದನ್ನು ಮಂತ್ರಗಳಿಂದ ಬಂಧಿಸುವನೋ, ಹಾಗೆಯೇ ಅವಳ ಯೌವನವೆಂಬ ಹಾವಾಡಿಗನು, ಅವಳ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಸತ್ಯಗೆರೆಗಳನ್ನು ( ಎಲ್ಲೂ ಹೋಗದಂತೆ ಮಾಡುವ ಗೆರೆಗಳು) ರೋಮಾವಲಿಯೆಂಬ ಸರ್ಪಿಣಿಯು ಎಲ್ಲೂ ಹೋಗದಂತೆ ಎಳೆದಿದ್ದಾನೆ ಎಂದು ಉತ್ಪ್ರೇಕ್ಷಿಸುತ್ತಾ ಸುಂದರಿಯ ರೋಮಾವಲಿ, ತ್ರಿವಳಿಗಳು ಹಾಗೂ ಯೌವನವನ್ನು ಪ್ರಶಂಶಿಸಿದ್ದಾನೆ.

ಬುಧವಾರ, ಏಪ್ರಿಲ್ 1, 2026

ಸುಂದರೀಶತಕ -೧೨

ಸಂಸ್ಕೃತ ಮೂಲ 

ಸ್ಮರರವಿಪುರ:ಸರೀಕೃತಯೌವನಮಾಯಾತಮಭಿಮುಖಂ ಸುತನೋ: /
ಆಲಕ್ಷ್ಯತೇ ಯಥೇಷಾ ರೋಮಾಲಿಚ್ಛದ್ಮತಶ್ಛಾಯಾ //

ಕನ್ನಡ ಅನುವಾದ 
     ' ಈ ಸುಂದರ ತನುವಿನ ಸುಂದರಿಯ ಶರೀರಕ್ಕೆ ಸ್ಮರನೆಂಬ ಸೂರ್ಯನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಅದರ ನೆರಳೇ ರೋಮಾವಲಿಯ ರೂಪದಲ್ಲಿ ಕಾಣುತ್ತಿದೆ!' 
    ಕವಿಯು ಇಲ್ಲಿ ಹೆಣ್ಣಿನ ರೋಮಾವಲಿಯನ್ನು ಕುರಿತು ಇನ್ನೊಂದು ಪದ್ಯವನ್ನು ರಚಿಸಿದ್ದಾನೆ. ಸುಂದರಿಯ ರೋಮಾವಲಿ, ಅವಳ ಯೌವನದ ನೆರಳು ಎಂದು ಸ್ವಾರಸ್ಯವಾಗಿ ಹೇಳುತ್ತಾನೆ. ಹಾಗೆ ನೆರಳು ಬೀಳಬೇಕಾದರೆ ಸೂರ್ಯನಿರಬೇಕಲ್ಲವೇ? ಆ ಸೂರ್ಯನೇ ಸ್ಮರ ಅಥವಾ ಮನ್ಮಥ! ಸೂರ್ಯನೆಂಬ ಮನ್ಮಥನನ್ನು ಮುಂದಿಟ್ಟುಕೊಂಡು ಯೌವನವು ಆಗಮಿಸಲು, ಆ ಯೌವನದ ನೆರಳು ಬಿದ್ದು ರೋಮಾವಲಿಯಂತೆ ಕಾಣುತ್ತಿದೆ ಎನ್ನುತ್ತಾನೆ ಕವಿ!